Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ಕಾಟೇರ’ ವೇದಿಕೆಯಲ್ಲಿ ರೈತರ ಪರ ದನಿ ಎತ್ತಿದ ದರ್ಶನ್

Darshan Kaatera: ದರ್ಶನ್ ನಟನೆಯ ‘ಕಾಟೇರ’ ಸಿನಿಮಾದ ಅದ್ಧೂರಿ ಕಾರ್ಯಕ್ರಮ ಮಂಡ್ಯದಲ್ಲಿ ನಡೆಯಿತು. ಕಾರ್ಯಕ್ರಮದಲ್ಲಿ ಮಾತನಾಡಿದ ನಟ ದರ್ಶನ್, ರೈತರ ಪರವಾಗಿ ಮಾತನಾಡಿದರು.

‘ಕಾಟೇರ’ ವೇದಿಕೆಯಲ್ಲಿ ರೈತರ ಪರ ದನಿ ಎತ್ತಿದ ದರ್ಶನ್
Follow us
ಮಂಜುನಾಥ ಸಿ.
|

Updated on: Dec 23, 2023 | 11:51 PM

ನಟ ದರ್ಶನ್ (Darshan) ತಾವು ಸಿನಿಮಾ ನಟ ಆಗಿರುವ ಜೊತೆಗೆ ತಾವೊಬ್ಬ ರೈತ ಎಂದೂ ಸಹ ಹೇಳಿಕೊಳ್ಳುತ್ತಾರೆ. ಬಿಜೆಪಿ ಸರ್ಕಾರವಿದ್ಧಾಗ ಕೃಷಿ ಇಲಾಖೆಯ ರಾಯಭಾರಿಯೂ ಆಗಿದ್ದರು. ಸ್ವತಃ ಜಮೀನು, ಫಾರಂ ಹೌಸ್​ಗಳನ್ನು ಹೊಂದಿರುವ ದರ್ಶನ್, ಕೃಷಿ ಕಾಯಕಗಳಲ್ಲಿ ಆಗಾಗ್ಗೆ ನೇರವಾಗಿ ತೊಡಗಿಕೊಳ್ಳುತ್ತಾರೆ. ಹೈನುಗಾರಿಕೆಯಲ್ಲಿಯೂ ಸಕ್ರಿಯರಾಗಿದ್ದಾರೆ. ರೈತರ ಬಗ್ಗೆ ಅಪಾರ ಕಾಳಜಿ ಹೊಂದಿರುವ ನಟ ದರ್ಶನ್, ತಮ್ಮ ಸಿನಿಮಾಗಳಲ್ಲಿ ರೈತರ ಪರ ಸಂದೇಶಗಳನ್ನು ಕೊಡುವ ಪ್ರಯತ್ನ ಮಾಡುತ್ತಲೇ ಬಂದಿದ್ದಾರೆ. ಇದೀಗ ದರ್ಶನ್ ನಟನೆಯ ‘ಕಾಟೇರ’ ಸಿನಿಮಾ ಬಿಡುಗಡೆಗೆ ತಯಾರಾಗಿದ್ದು, ಸಿನಿಮಾದ ಹಾಡು ಬಿಡುಗಡೆ ಕಾರ್ಯಕ್ರಮವನ್ನು ಮಂಡ್ಯದಲ್ಲಿ ಆಯೋಜಿಸಲಾಗಿತ್ತು. ಸಿನಿಮಾ ಕಾರ್ಯಕ್ರಮದ ವೇದಿಕೆಯಲ್ಲಿ ನಿಂತು ರೈತರ ಪರವಾಗಿ ಮಾತನಾಡಿದರು ದರ್ಶನ್.

ಇಂದು (ಡಿಸೆಂಬರ್ 23) ರೈತರ ದಿನವಾಗಿದ್ದು, ‘ಕಾಟೇರ’ ಸಿನಿಮಾದಲ್ಲಿರುವ ರೈತರ ಪರವಾದ ಹಾಡನ್ನು ಇಂದು ಬಿಡುಗಡೆ ಮಾಡಲಾಯ್ತು. ಹಸಿರು ಶಾಲು ತೊಟ್ಟುಕೊಂಡೇ ವೇದಿಕೆಗೆ ಬಂದ ನಟ ದರ್ಶನ್, ಕಾರ್ಯಕ್ರಮಕ್ಕೆ ಬಂದು ಹಾಡು ಬಿಡುಗಡೆ ಮಾಡಿಕೊಟ್ಟ ಸಂಸದೆ ಸುಮಲತಾ ಹಾಗೂ ಇತರೆ ಕೆಲವು ಗಣ್ಯರಿಗೆ ಧನ್ಯವಾದಗಳನ್ನು ಅರ್ಪಿಸಿದರು. ಬಳಿಕ, ‘ಕಾಟೇರ’ ಸಿನಿಮಾಕ್ಕೆ ಇಡೀಯ ಚಿತ್ರತಂಡ ಶ್ರಮ ಹಾಕಿದೆ. ಈಗಲೇ ಹೇಳಿಬಿಡುತ್ತೇನೆ ‘ಕಾಟೇರ’ ಸಿನಿಮಾ ಆಡಂಭರದ ಸಿನಿಮಾ ಅಲ್ಲ, ಸಂದೇಶ ಇರುವ ಸಿನಿಮಾ’’ ಎಂದರು.

ಇದನ್ನೂ ಓದಿ:ಮಂಡ್ಯದಲ್ಲಿ ‘ಕಾಟೇರ’ ಅಬ್ಬರ, ದರ್ಶನ್ ನೋಡಲು ಜನಸಾಗರ: ಕಾರ್ಯಕ್ರಮದ ಲೈವ್ ಇಲ್ಲಿ ನೋಡಿ

ರೈತರ ಕಡೆಗೆ ಮಾತು ಹೊರಳಿಸಿದ ನಟ ದರ್ಶನ್, ‘‘ಹಸಿರು ಶಾಲಿನ ಶಕ್ತಿಯ ಅರಿವಿದೆ, ದಯವಿಟ್ಟು ರೈತರನ್ನು ಅಯ್ಯೋ ಅನ್ನಿಸಬೇಡಿ. ಅವರನ್ನು ನೋಡಿ ಅಯ್ಯೋ ಅನ್ನಲೂ ಬೇಡಿ, ರೈತರಿಗೆ ಸಿಂಪತಿ ಬೇಕಾಗಿಲ್ಲ, ಅವರು ಬೆಳೆದ ಬೆಲೆಗೆ ನ್ಯಾಯವಾದ ಬೆಲೆ ಕೊಟ್ಟು ಬಿಡಿ ಸಾಕು’ ಎಂದರು. ಜೊತೆಗೆ ರೈತರಿಗೂ ಸಲಹೆ ನೀಡಿದ ನಟ ದರ್ಶನ್, ‘‘ರೈತರು ದಯವಿಟ್ಟು ನಿಮ್ಮ ಬಳಿ ಎಷ್ಟೇ ಭೂಮಿ ಇರಲಿ, ಅದನ್ನು ಮಾರಿಕೊಳ್ಳುವ ಕೆಲಸ ಮಾಡಬೇಡಿ, ಒಳ್ಳೆ ರೇಟು ಕೊಡುತ್ತಾರೆ ಎಂದು ಮಾರಿಕೊಂಡರೆ ಅಕ್ಕಿ ಬೆಳೆಯಲು ಮಾತ್ರವಲ್ಲ ಗೆಡ್ಡೆ-ಗೆಣಸು ಬೆಳೆಯಲು ಸಹ ಸಹ ಜಾಗ ಇರಲ್ಲ. ದಯವಿಟ್ಟು ರೈತನಿಗೆ ಗೌರವ ಕೊಡಿ. ಅವನನ್ನು ಕಡೆಗಣಿಸುವುದು ಬೇಡ. ನೀವು ನ್ಯಾಯವಾದ ಬೆಲೆ ಕೊಟ್ಟರೆ ಪ್ರತಿಯೊಬ್ಬ ರೈತನ ಮನೆಯಲ್ಲಿಯೂ ಒಂದೊಂದು ಚಾಪರ್ ಇರುತ್ತೆ. ರಸ್ತೆಯಲ್ಲಿ ಮಾತ್ರವಲ್ಲ ಗಾಳಿಯಲ್ಲೇ ಓಡಾಡುತ್ತಾನೆ’’ ಎಂದರು.

ಮತ್ತೆ ಸಿನಿಮಾ ಕಡೆಗೆ ಮಾತು ಹೊರಳಿಸಿ ‘‘ನೀವೆಲ್ಲ ಬೆಂಬಲಿಸುತ್ತಲೇ ಬರುತ್ತಿದ್ದೀರಿ. ಈಗ 56 ಸಿನಿಮಾ ಆಗಿದೆ. 47 ವರ್ಷ ವಯಸ್ಸಾಯ್ತು. ನಮ್ಮ ಸಮಯ ಮುಗಿಯುತ್ತಾ ಬಂದಂತಿದೆ. ಎಷ್ಟು ದಿನ ಆಗುತ್ತದೆಯೋ ಅಷ್ಟು ದಿನ ಸಿನಿಮಾ ಮಾಡುತ್ತೀನಿ, ನಿಮ್ಮೆಲ್ಲರನ್ನೂ ರಂಜಿಸುವ ಕೆಲಸ ಮಾಡುತ್ತೀನಿ. ಆದರೆ ಮಾಡುವುದು ಅಪ್ಪಟ ಕನ್ನಡ ಸಿನಿಮಾ ಮಾತ್ರ. ಪ್ಯಾನ್ ಇಂಡಿಯಾ ಎಲ್ಲ ಬೇಡ, ಕನ್ನಡ ಸಿನಿಮಾ ಮಾಡಿಕೊಂಡು ಚೆನ್ನಾಗಿದ್ದೀನಿ ಹೀಗೆಯೇ ಇರ್ತೀನಿ. ಲೂನಾ ದಲ್ಲಿ ಓಡಾಡ್ತಿದ್ದೆ, ಲ್ಯಾಂಬರ್ಗಿನಿಯಲ್ಲಿ ಕರ್ಕೊಂಡು ಬಂದು ಕೂರಿಸಿದ್ದಾರೆ. ಎಲ್ಲಿ ವರೆಗೆ ಆಗುತ್ತೋ ಸಿನಿಮಾ ಮಾಡ್ತೀನಿ, ನನ್ನ ಸಿನಿಮಾಗಳಲ್ಲಿ ಕನ್ನಡಿಗರಿಗೆ ಅವಕಾಶ ಕೊಡ್ತೀನಿ. ಈಗ ಮಾಲಾಶ್ರೀ ಪುತ್ರಿಯನ್ನು ಕರೆತಂದಿದ್ದೀವಿ. ಕನ್ನಡ ಸಿನಿಮಾ ನಟರಿಗೆ ಬೆಂಬಲಿಸಿ, ಇಲ್ಲಿಗೆ ಹೊಸ ಹೀರೋಗಳು ಇದ್ದಾರೆ, ಅವರನ್ನು ಬೆಂಬಲಿಸಿ ಎಂದರು.

ಕೊನೆಯದಾಗಿ, ‘‘ಮಂಡ್ಯದ ಜನರಿಗೆ ಒಂದೇ ಮಾತು, ಇದನ್ನು ಯಾರೂ ರಾಜಕೀಯವಾಗಿ ತೆಗೆದುಕೊಳ್ಳಬೇಡಿ ಕೋಪ ಮಾಡ್ಕೊಳಲ್ಲ, ಬೇಜಾರಿಲ್ಲ, ನೊಂದುಕೊಳ್ಳಲ್ಲ’’ ಎಂದು ತಮ್ಮದೇ ಶೈಲಿಯಲ್ಲಿ ಹೇಳಿ ಮಾತು ಮುಗಿಸಿದರು ದರ್ಶನ್. ಜೊತೆಗೆ ವೇದಿಕೆ ಮೇಲೆ ಪ್ರದರ್ಶನ ನೀಡಿದ ಎಲ್ಲ ನಟ-ನಟಿಯರಿಗೂ ಧನ್ಯವಾದಗಳನ್ನು ಹೇಳಿದರು.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ