ನ್ಯಾಯಾಲಯದಲ್ಲಿ ದರ್ಶನ್ ರಕ್ತ ಚರಿತ್ರೆ ಬಿಚ್ಚಿಟ್ಟ ಎಸ್​ಪಿಪಿ ಪ್ರಸನ್ನ ಕುಮಾರ್

ದರ್ಶನ್ ಹಾಗೂ ಅವರ ಗ್ಯಾಂಗ್, ರೇಣುಕಾ ಸ್ವಾಮಿ ಮೇಲೆ ನಡೆಸಿದ ಹಲ್ಲೆ, ಮಾಡಿದ ಆರ್ಭಟವನ್ನು ಇಂಚಿಂಚೂ ಎಸ್​ಪಿಪಿ ಪ್ರಸನ್ನ ಕುಮಾರ್ ನ್ಯಾಯಾಲಯದ ಮುಂದೆ ಬಿಚ್ಚಿಟ್ಟಿದ್ದಾರೆ. ಇದು ದರ್ಶನ್ ರಕ್ತಚರಿತ್ರೆ ಎಂದು ಅವರು ಟೀಕೆ ಮಾಡಿದ್ದಾರೆ.

ನ್ಯಾಯಾಲಯದಲ್ಲಿ ದರ್ಶನ್ ರಕ್ತ ಚರಿತ್ರೆ ಬಿಚ್ಚಿಟ್ಟ ಎಸ್​ಪಿಪಿ ಪ್ರಸನ್ನ ಕುಮಾರ್
Follow us
Ramesha M
| Updated By: ಮಂಜುನಾಥ ಸಿ.

Updated on: Oct 08, 2024 | 6:30 PM

ರೇಣುಕಾ ಸ್ವಾಮಿ ಕೊಲೆ ಪ್ರಕರಣ ಆರೋಪಿ ನಟ ದರ್ಶನ್, ಪವಿತ್ರಾ ಗೌಡ ಹಾಗೂ ಇತರೆ ಕೆಲ ಆರೋಪಿಗಳ ಜಾಮೀನು ಅರ್ಜಿ ವಿಚಾರಣೆ 57ನೇ ಸಿಸಿಹೆಚ್ ನ್ಯಾಯಾಲಯದಲ್ಲಿ ಇಂದು ನಡೆಯಿತು. ಕಳೆದ ವಾರ ವಾದ ಮಂಡಿಸಿದ್ದ ದರ್ಶನ್ ಪರ ವಕೀಲ ಸಿವಿ ನಾಗೇಶ್, ಪೊಲೀಸರ ತನಿಖೆಯ ಬಗ್ಗೆ ಹಲವು ಅನುಮಾನಗಳನ್ನು ಎತ್ತಿದ್ದರು. ಪೊಲೀಸರ ಆರೋಪ ಪಟ್ಟಿಯನ್ನು ‘ಅರೇಬಿಯನ್ ನೈಟ್ಸ್’ ಕತೆಗೆ ಹೋಲಿಸಿ, ಪೊಲೀಸರೇ ಸಾಕ್ಷ್ಯಗಳನ್ನು ಸೃಷ್ಟಿ ಮಾಡಿದ್ದಾರೆ ಎಂದು ಆರೋಪಿಸಿದ್ದರು. ಮಂಗಳವಾರ ವಾದ ಮಂಡಿಸಿದ ಎಸ್​ಪಿಪಿ ಪ್ರಸನ್ನ ಕುಮಾರ್, ಸಿವಿ ನಾಗೇಶ್ ಎತ್ತಿದ್ದ ಅನುಮಾನಗಳಿಗೆ ಸ್ಪಷ್ಟೀಕರಣ ನೀಡುವ ಜೊತೆಗೆ ಆರೋಪಿಗಳು ಮೆರೆದಿದ್ದ ಕ್ರೂರತೆಯನ್ನು ಸಹ ನ್ಯಾಯಾಲಯದ ಮುಂದೆ ಬಿಚ್ಚಿಟ್ಟರು.

ಈ ಪ್ರಕರಣ ಪೂರ್ವ ಯೋಜಿತ ಅಲ್ಲ ಎಂದು ನಿರೂಪಿಸಲು, ‘ರೇಣುಕಾ ಸ್ವಾಮಿ ಎಂಬಾತ ಒಬ್ಬ ಇದ್ದಾನೆ ಎಂಬುದೇ ಆರೋಪಿಗಳಿಗೆ ಗೊತ್ತಿರಲಿಲ್ಲ’ ಎಂದು ಸಿವಿ ನಾಗೇಶ್ ಹೇಳಿದ್ದರು. ಅದಕ್ಕೆ ಪ್ರತ್ಯುತ್ತರ ನೀಡಿದ ಎಸ್​ಪಿಪಿ, ‘ರೇಣುಕಾ ಸ್ವಾಮಿ ಮುಂಚೆಯೇ ಪವಿತ್ರಾಗೆ ಇನ್​ಸ್ಟಾಗ್ರಾಂನಲ್ಲಿ ಸಂದೇಶ ಕಳಿಸಿದ್ದ. ತನ್ನ ಮರ್ಮಾಂಗದ ಚಿತ್ರ ಕಳಿಸಿ ‘ಹೇಗಿದೆ’ ಎಂದು ಕೇಳಿದ್ದಾಗ, ಪವಿತ್ರಾ ‘ಸೂಪರ್’ ಎಂದು ಮೆಸೇಜ್ ಮಾಡಿದ್ದರು. ಅದಾದ ಬಳಿಕ ಡ್ರಾಪ್ ಯುವರ್ ನಂಬರ್ ಎಂದು ಕಳಿಸಿದ್ದರು’ ಎಂದು ಎಸ್​ಪಿಪಿ ನ್ಯಾಯಾಲಯಕ್ಕೆ ತಿಳಿಸಿದರು.

ಆ ನಂಬರ್ ತೆಗೆದುಕೊಂಡು ಮೂರನೇ ಆರೋಪಿ ಪವನ್, ರೇಣುಕಾ ಸ್ವಾಮಿಗೆ ಪವಿತ್ರಾ ರೀತಿ ಮೆಸೇಜ್ ಮಾಡಿ, ಆತನ ವಿಳಾಸ, ಕೆಲಸ ಮಾಡುವ ಸ್ಥಳ ಎಲ್ಲದರ ಮಾಹಿತಿ ಸಂಗ್ರಹಿಸಿದ್ದಾನೆ. ಆ ಮಾಹಿತಿಯನ್ನು ಚಿತ್ರದುರ್ಗದ ದರ್ಶನ್ ಸೇನೆಯ ಸದಸ್ಯರಿಗೆ ರವಾನಿಸಿ ಮಾಹಿತಿಗಳೆಲ್ಲವೂ ನಿಜವೇ ಎಂದು ಖಾತ್ರಿ ಪಡಿಸಿಕೊಂಡಿದ್ದಾರೆ. ಕೆಲ ಆರೋಪಿಗಳು ಆಟೋನಲ್ಲಿ ರೇಣುಕಾ ಸ್ವಾಮಿಯನ್ನು ಹಿಂಬಾಲಿಸಿದ್ದಾರೆ. ಇಷ್ಟೆಲ್ಲ ಆದ ಬಳಿಕ ಜೂನ್ 8 ರಂದು ರೇಣುಕಾ ಸ್ವಾಮಿಯನ್ನು ಅಪಹರಣ ಮಾಡಲಾಗಿದೆ. ಇದಕ್ಕೆ ಮುಂಚೆ ಹಲವು ಆರೋಪಿಗಳಿಗೆ ರೇಣುಕಾ ಸ್ವಾಮಿಯನ್ನು ಕರೆದುಕೊಂಡು ಬರುತ್ತಿರುವ ಬಗ್ಗೆ ಮಾಹಿತಿ ಇತ್ತು’ ಎಂದಿದ್ದಾರೆ ಎಸ್​ಪಿಪಿ.

ಇದನ್ನೂ ಓದಿ:ಬಿಗ್ ಬಾಸ್​ನಲ್ಲಿ ದರ್ಶನ್ ವಿಚಾರ ಏಕೆ ಬರಲಿಲ್ಲ? ಸಿಕ್ಕಿತು ಉತ್ತರ

ರೇಣುಕಾ ಸ್ವಾಮಿಗೆ ಹೆಚ್ಚು ಗಾಯವಾಗಿಲ್ಲ, ನಾಯಿ ಕಚ್ಚಿದ ಗಾಯಗಳನ್ನು ಮಾಧ್ಯಮಗಳು ತೋರಿಸಿವೆ ಎಂದು ಸಿವಿ ನಾಗೇಶ್ ವಾದಿಸಿದ್ದು, ಅದಕ್ಕೆ ಉತ್ತರಿಸಿದ ಎಸ್​ಪಿಪಿ, ಮರಣೋತ್ತರ ಪರೀಕ್ಷೆಯ ವರದಿಯ ಪ್ರಕಾರ, 13 ಗಾಯಗಳಿಂದ ರೇಣುಕಾ ಸ್ವಾಮಿಗೆ ರಕ್ತಸ್ರಾವ ಆಗಿದೆ. ರೇಣುಕಾ ಸ್ವಾಮಿಯ ಮರ್ಮಾಂಗದಲ್ಲೂ ಗಾಯವಾಗಿದೆ. ರೇಣುಕಾ ಸ್ವಾಮಿಯ ಎದೆಯ ಮೂಳೆ ಮುರಿದಿವೆ. ಎದೆ ಭಾಗದಲ್ಲಿ 17 ಒಳಗಾಯಗಳಾಗಿವೆ ಎಂದು ಮರಣೋತ್ತರ ಪರೀಕ್ಷೆಯಲ್ಲಿ ಉಲ್ಲೇಖವಿದೆ ಎಂದರು.

ಬಳಿಕ, ರೇಣುಕಾ ಸ್ವಾಮಿ ಮೇಲೆ ದರ್ಶನ್ ಮತ್ತು ಗ್ಯಾಂಗ್​ನ ಆರ್ಭಟ ಹೇಗಿತ್ತು ಎಂದು ವಿವರಿಸಿದ ಪ್ರಸನ್ನ ಕುಮಾರ್, ಧನರಾಜ್, ಪವನ್ ಮತ್ತು ನಂದೀಶ್ ಕಟ್ಟಿಗೆಯಲ್ಲಿ ರೇಣುಕಾ ಸ್ವಾಮಿಗೆ ಹೊಡೆದಿದ್ದಾರೆ. ಅದಾದ ಬಳಿಕ ಧನರಾಜ್, ರೇಣುಕಾ ಸ್ವಾಮಿಗೆ ಶಾಕ್ ಕೊಟ್ಟಿದ್ದಾನೆ. ಆಗ ರೇಣುಕಾ ಸ್ವಾಮಿ ಕೈ ಮುಗಿಯುತ್ತಿರುವ ಫೋಟೊ ಕಳಿಸಲಾಗಿದೆ. ಅದಾದ ಬಳಿಕ ರೇಣುಕಾ ಸ್ವಾಮಿ ಸುಸ್ತಾಗಿ ಮಲಗಿದ್ದಾನೆ. ಆ ಫೋಟೊವನ್ನು ವಿನಯ್​ಗೆ ಫೋಟೊ ಕಳಿಸಿದ್ದಾರೆ. ಬಳಿಕ ದರ್ಶನ್ ಬಂದಿದ್ದಾರೆ. ಆಗ ರೇಣುಕಾ ಸ್ವಾಮಿಯನ್ನು ಎದ್ದು ನಿಲ್ಲಿಸಿ ದರ್ಶನ್ ಎದೆಗೆ ಒದ್ದಿದ್ದಾರೆ, ರೇಣುಕಾ ಸ್ವಾಮಿ ಪ್ಯಾಂಟ್ ಬಿಚ್ಚಿಸಿ ಮರ್ಮಾಂಗಕ್ಕೆ ಒದ್ದಿದ್ದಾರೆ. ಆ ಬಳಿಕ ಮೆಸೇಜ್​ಗಳ ಓದುವಂತೆ ಹೇಳಿ, ಪವನ್ ಮೆಸೇಜ್ ಓದುತ್ತಿದ್ದಂತೆ ರೇಣುಕಾ ಸ್ವಾಮಿಯನ್ನು ಹೊಡೆಯುವುದು, ಒದೆಯುವುದು ಮಾಡಿದ್ದಾರೆ ದರ್ಶನ್. ಅದೇ ಸಮಯದಲ್ಲಿ ಮರ್ಮಾಂಗಕ್ಕೂ ಒದ್ದಿದ್ದಾರೆ. ಮಾತ್ರವಲ್ಲದೆ ರೇಣುಕಾ ಸ್ವಾಮಿ ಕೆಳಗೆ ಬಿದ್ದಾಗ ಆತನ ಎದೆಯ ಮೇಲೆ ಹತ್ತಿ ನಿಂತಿದ್ದಾರೆ. ಆಗ ಬಹುಷಃ ರೇಣುಕಾ ಸ್ವಾಮಿ ಎದೆ ಮೂಳೆ ಮುರಿದಿದೆ ಎಂದು ಪ್ರಸನ್ನ ಕುಮಾರ್ ನ್ಯಾಯಾಲಯದ ಮುಂದೆ ಹೇಳಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ