ದರ್ಶನ್ ಹುಟ್ಟುಹಬ್ಬ, ಕಾಮನ್ ಡಿಪಿ ಬಿಡುಗಡೆ ಮಾಡಿದ ಪತ್ನಿ ವಿಜಯಲಕ್ಷ್ಮಿ

Darshan Thoogudeepa: ನಟ ದರ್ಶನ್ ತೂಗುದೀಪ ಹುಟ್ಟುಹಬ್ಬ ನಾಳೆ (ಫೆಬ್ರವರಿ 16) ಈ ಬಾರಿಯ ಹುಟ್ಟುಹಬ್ಬ, ದರ್ಶನ್ ಮತ್ತು ಅವರ ಕುಟುಂಬದವರಿಗೆ ಮಹತ್ವವಾದುದು. ಕೊಲೆ ಪ್ರಕರಣದಲ್ಲಿ ಆರೋಪಿಯಾಗಿ ಜೈಲಿಗೆ ಹೋಗಿ ಬಂದ ಬಳಿಕ ಇದು ಅವರ ಮೊದಲ ಹುಟ್ಟುಹಬ್ಬ. ದರ್ಶನ್ ಹುಟ್ಟುಹಬ್ಬದ ಪ್ರಯುಕ್ತ ಅವರ ಪತ್ನಿ ವಿಜಯಲಕ್ಷ್ಮಿ ದರ್ಶನ್, ಕಾಮನ್ ಡಿಪಿ ಬಿಡುಗಡೆ ಮಾಡಿದ್ದಾರೆ.

ದರ್ಶನ್ ಹುಟ್ಟುಹಬ್ಬ, ಕಾಮನ್ ಡಿಪಿ ಬಿಡುಗಡೆ ಮಾಡಿದ ಪತ್ನಿ ವಿಜಯಲಕ್ಷ್ಮಿ
Darshan Thoogudeepa

Updated on: Feb 15, 2025 | 9:11 PM

ನಟ ದರ್ಶನ್ ಹುಟ್ಟುಹಬ್ಬ ನಾಳೆ (ಫೆಬ್ರವರಿ 16) ಇದೆ. ಈ ಬಾರಿಯ ಹುಟ್ಟುಹಬ್ಬವನ್ನು ಬಲು ಸರಳವಾಗಿ ಆಚರಿಸಿಕೊಳ್ಳುತ್ತಿದ್ದಾರೆ ನಟ ದರ್ಶನ್. ಈ ವರ್ಷದ ಹುಟ್ಟುಹಬ್ಬ ದರ್ಶನ್ ಪಾಲಿಗೆ ಅತ್ಯಂತ ಮಹತ್ವದ್ದಾಗಿದೆ. ಕಳೆದ ಏಳೆಂಟು ತಿಂಗಳಲ್ಲಿ ದರ್ಶನ್ ಜೀವನ ಸಾಕಷ್ಟು ಏರಿಳಿತಗಳನ್ನು ಕಂಡಿದೆ. ರೇಣುಕಾ ಸ್ವಾಮಿ ಕೊಲೆ ಪ್ರಕರಣದಲ್ಲಿ ಜೈಲಿಗೆ ಹೋಗಿ ಬಂದಾಗಿದೆ. ಜೈಲಿನಿಂದ ಹೊರಬಂದ ಬಳಿಕ ಎದುರು ಬಂದಿರುವ ಮೊದಲ ಹುಟ್ಟುಹಬ್ಬ ಇದಾಗಿದೆ. ಹಾಗಾಗಿ ಈ ಹುಟ್ಟುಹಬ್ಬ ದರ್ಶನ್ ಪಾಲಿಗೆ ಅವರ ಕುಟುಂಬದವರ ಪಾಲಿಗೆ ಅತ್ಯಂತ ಪ್ರಮುಖವಾದುದ್ದಾಗಿದೆ.

ದರ್ಶನ್ ಅವರ ಹುಟ್ಟುಹಬ್ಬದ ಕಾಮನ್ ಡಿಪಿಯನ್ನು ಅವರ ಪತ್ನಿ ವಿಜಯಲಕ್ಷ್ಮಿ ಬಿಡುಗಡೆ ಮಾಡಿದ್ದಾರೆ. ಬಹುಷಃ ಇದು ಮೊದಲನೇ ಬಾರಿಗೆ ವಿಜಯಲಕ್ಷ್ಮಿ ಅವರು ದರ್ಶನ್ ಹುಟ್ಟುಹಬ್ಬದ ಕಾಮನ್ ಡಿಪಿ ಬಿಡುಗಡೆ ಮಾಡುತ್ತಿದ್ದಾರೆ. ಈಗ ಬಿಡುಗಡೆ ಮಾಡಲಾಗಿರುವ ಡಿಪಿಯಲ್ಲಿ, ದರ್ಶನ್​ರ ದೊಡ್ಡ ಕಟೌಟ್​ನ ಚಿತ್ರವಿದ್ದು, ಚಿತ್ರದಲ್ಲಿ ಅಭಿಮಾನಿಗಳೆಡೆಗೆ ದರ್ಶನ್ ಕೈಬೀಸುತ್ತಿದ್ದಾರೆ. ಹಿನ್ನೆಲೆಯಲ್ಲಿ ಹಲವು ಅಂಗಡಿಗಳಿವೆ. ಎಲ್ಲ ಅಂಗಡಿಗಳಿಗೂ ದರ್ಶನ್ ಅವರ ಹೆಸರೇ ಇದೆ. ಅಭಿಮಾನಿಗಳು ದರ್ಶನ್ ಕಟೌಟ್​ ಕಡೆಗೆ ಕೈ ಬೀಸುತ್ತಿರುವ ಚಿತ್ರಣವೂ ಡಿಪಿಯಲ್ಲಿದೆ.

ವಿಜಯಲಕ್ಷ್ಮಿ ಬಿಡುಗಡೆ ಮಾಡಿರುವ ಕಾಮನ್ ಡಿಪಿಗೆ ಕಟ್ಟು ಹಾಕಿಸಿ ಅದರೊಟ್ಟಿಗೆ ಧನ್ವೀರ್ ಗೌಡ ಚಿತ್ರ ತೆಗೆಸಿಕೊಂಡಿದ್ದಾರೆ. ವಿಜಯಲಕ್ಷ್ಮಿ ಹಂಚಿಕೊಂಡಿರುವ ಡಿಪಿಯನ್ನು ದರ್ಶನ್​ರ ಅಭಿಮಾನಿಗಳು ತಮ್ಮ ಪ್ರೊಫೈಲ್​ಗಳಲ್ಲಿ ಹಂಚಿಕೊಳ್ಳುತ್ತಿದ್ದಾರೆ. ಈ ಹುಟ್ಟುಹಬ್ಬದಿಂದ ದರ್ಶನ್​ರ ಜೀವನದಲ್ಲಿ ಹೊಸ ಅಧ್ಯಾಯ ಶುರುವಾಗಲಿದೆ ಎಂದು ಹಲವು ಅಭಿಮಾನಿಗಳು ಕಮೆಂಟ್ ಮಾಡಿದ್ದಾರೆ. ದರ್ಶನ್ ಮತ್ತೆ ಹಳೆಯ ಫಾರ್ಮ್​ನೊಂದಿಗೆ ಪ್ರೇಕ್ಷಕರ ಎದುರು ಬರಲಿದ್ದಾರೆ ಎಂಬ ವಿಶ್ವಾಸವನ್ನು ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ:ದರ್ಶನ್ ತಾಯಿ ಪಟ್ಟ ಕಷ್ಟಗಳು ಒಂದೆರಡಲ್ಲ, ಆಗ ಸಹಾಯ ಮಾಡಿದ್ದು ಯಾರು?

ಫೆಬ್ರವರಿ 16 ದರ್ಶನ್ ಹುಟ್ಟುಹಬ್ಬ ಇದ್ದು, ನಾಳೆ ದರ್ಶನ್ ನಟಿಸುತ್ತಿರುವ ‘ಡೆವಿಲ್’ ಸಿನಿಮಾದ ಟೀಸರ್ ಸಹ ಬಿಡುಗಡೆ ಆಗಲಿದೆ. ‘ಡೆವಿಲ್’ ಸಿನಿಮಾದ ಚಿತ್ರೀಕರಣದ ಸಂದರ್ಭದಲ್ಲಿಯೇ ನಟ ದರ್ಶನ್ ಜೈಲು ಸೇರಿದ್ದರು. ರೇಣುಕಾ ಸ್ವಾಮಿ ಕೊಲೆ ಪ್ರಕರಣದಲ್ಲಿ ಸುಮಾರು ಆರು ತಿಂಗಳು ಜೈಲು ವಾಸ ಅನುಭವಿಸಿ ಬೆನ್ನು ನೋವಿನ ಚಿಕಿತ್ಸೆಗೆಂದು ಮಧ್ಯಂತರ ಜಾಮೀನು ಪಡೆದು ಹೊರಬಂದಿದ್ದರು. ಅದಾದ ಬಳಿಕ ರಾಜ್ಯ ಹೈಕೋರ್ಟ್​ನಲ್ಲಿ ದರ್ಶನ್, ಪವಿತ್ರಾ ಗೌಡ ಸೇರಿದಂತೆ ಕೊಲೆ ಪ್ರಕರಣದ ಎಲ್ಲ ಆರೋಪಿಗಳಿಗೂ ನಿಯಮಿತ ಜಾಮೀನು ದೊರಕಿತು.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ