ರೇಣುಕಾ ಸ್ವಾಮಿ ಕೊಲೆ ನಡೆದ ಸ್ಥಳ ಹಾಗೂ ಶವ ಸಾಗಿಸಿದ ವಾಹನ ಇನ್ನಿತರೆ ಕಡೆಗಳಿಂದ ಸಂಗ್ರಹಿಸಲಾಗಿದ್ದ ಬೆರಳಚ್ಚುಗಳಲ್ಲಿ ಈಗ ಬಂಧಿತವಾಗಿರುವ ಆರೋಪಿಗಳ ಪೈಕಿ ಹತ್ತಕ್ಕೂ ಹೆಚ್ಚು ಆರೋಪಿಗಳ ಬೆರಳಚ್ಚುಗಳು ಹೊಂದಾಣಿಕೆ ಆಗಿರುವ ವರದಿ ಬಂದಿದೆ. ಫಿಂಗರ್ ಪ್ರಿಂಟ್ ಮ್ಯಾಚ್ ಆಗಿರುವ ಆರೋಪಿಗಳ ಪಟ್ಟಿಯಲ್ಲಿ ದರ್ಶನ್ ಹಾಗೂ ಪವಿತ್ರಾ ಗೌಡ ಅವರ ಫಿಂಗರ್ ಪ್ರಿಂಟ್ಗಳು ಸಹ ಇವೆ. ಕೊಲೆ ನಡೆದ ಸ್ಥಳದಲ್ಲಿ ಸಂಗ್ರಹಿಸಲಾಗಿದ್ದ ಬೆರಳಚ್ಚು ಮಾದರಿಗಳಿಗೆ ಇವರ ಫಿಂಗರ್ ಪ್ರಿಂಟ್ಗಳು ಮ್ಯಾಚ್ ಆಗಿವೆ.
ಹಲ್ಲೆ ಮಾಡಿದ ಜಾಗಗಳು, ಕೊಲೆ ನಡೆದ ಸ್ಥಳ, ಶವ ಸಾಗಿಸಿದ್ದ ವಾಹನ, ಶವ ಬಿಸಾಡಿದ್ದ ಜಾಗ, ಶವ ಸಾಗಾಟ ಮಾಡಿದ ವಾಹನ, ಶವ ಇಟ್ಟಿದ್ದ ಸೆಕ್ಯೂರಿಟಿ ಗಾರ್ಡ್ ಕೊಠಡಿ, ಮೃತನ ಬಟ್ಟೆಗಳು, ಹಲ್ಲೆ ಮಾಡಲು ಬಳಸಿದ ವಸ್ತುಗಳು, ಸಾಗಾಟ ಮಾಡಿದ ಕಾರ್, ಆರೋಪಿಗಳ ಬಟ್ಟೆಗಳ ಮೇಲಿನ ಫಿಂಗರ್ ಪ್ರಿಂಟ್ ಸಂಗ್ರಹ ಮಾಡಲಾಗಿತ್ತು. ರೇಣುಕಾ ಸ್ವಾಮಿಯನ್ನು ಚಿತ್ರದುರ್ಗದಿಂದ ಕರೆತರಲಾಗಿದ್ದ ವಾಹನ, ಆರೋಪಿಗಳ ಮನೆಗಳು ಇನ್ನಿತರೆ ಕಡೆಗಳಲ್ಲಿನ ಬೆರಳಚ್ಚುಗಳನ್ನು ತಜ್ಙರ ತಂಡ ಸಂಗ್ರಹಿಸಿತ್ತು. ಆ ಮಾದರಿಗಳನ್ನು ಆರೋಪಿಗಳ ಬೆರಳಚ್ಚು ಮಾದರಿಗಳೊಟ್ಟಿಗೆ ಸೇರಿಸಿ ಬೆಂಗಳೂರು ಮತ್ತು ಹೈದರಾಬಾದ್ ಎಫ್ಎಸ್ಎಲ್ ಕೇಂದ್ರಗಳಿಗೆ ಕಳಿಸಲಾಗಿತ್ತು. ಎರಡೂ ಕೇಂದ್ರದಿಂದ ವರದಿ ಬಂದಿದ್ದು, ಎರಡೂ ವರದಿಗಳು ಬಹುತೇಕ ಒಂದೇ ರೀತಿಯಲ್ಲಿದ್ದು, ಹತ್ತಕ್ಕೂ ಹೆಚ್ಚು ಆರೋಪಿಗಳ ಬೆರಳಚ್ಚುಗಳು, ಅಪರಾಧ ನಡೆದ ಸ್ಥಳದಲ್ಲಿ ಸಂಗ್ರಹಿಸಿದ ಬೆರಳಚ್ಚು ಮಾದರಿಗೆ ಮ್ಯಾಚ್ ಆಗಿವೆ ಎನ್ನಲಾಗುತ್ತಿದೆ.
ಇದನ್ನೂ ಓದಿ:ದರ್ಶನ್ ಪ್ರಕರಣ: ಸಾಕ್ಷ್ಯ ನಾಶಕ್ಕೆ ಕರೆಸಿದರೆ ಈಗ ಪ್ರಮುಖ ಸಾಕ್ಷಿ
ಕೊಲೆ ನಡೆದ ಸ್ಥಳ ಹಾಗೂ ಶವ ಸಾಗಿಸಿದ ಜಾಗಗಳಿಂದ ಜೈವಿಕ ಸಾಕ್ಷಿಗಳಾದ ರಕ್ತದ ಕಲೆ, ಹೇರ್ ಸ್ಯಾಂಪಲ್ ಡಿಎನ್ಎ ಮಾದರಿಗಳನ್ನು ಸಹ ಸಂಗ್ರಹಿಸಲಾಗಿದೆ. ಆರೋಪಿಗಳ ಕೂದಲು ಇನ್ನಿತರೆ ಮಾದರಿಗಳನ್ನು ಸಹ ಸಂಗ್ರಹಿಸಿ ತಪಾಸಣೆಗೆ ಕಳಿಸಲಾಗಿದೆ. ಪ್ರಕರಣಕ್ಕೆ ಸಂಬಂಧಿಸದಂತೆ ಹಲವು ಜೈವಿಕ ಹಾಗೂ ಭೌತಿಕ ಸಾಕ್ಷ್ಯ ಹಾಗೂ ಮಾದರಿಗಳನ್ನು ಪೊಲೀಸರು ಸಂಗ್ರಹಿಸಿ ಅವುಗಳ ಎಫ್ಎಸ್ಎಲ್ ವರದಿಗೆ ರವಾನಿಸಿದ್ದಾರೆ. ಕೆಲವು ವರದಿಗಳು ಈಗಾಗಲೇ ಬಂದಿದ್ದರೆ ಕೆಲವು ವರದಿಗಳು ಇನ್ನಷ್ಟೆ ಬರಬೇಕಿದೆ.
ಡಿಜಿಟಲ್ ಸಾಕ್ಷ್ಯ ಪತ್ತೆ ಮಾಡಲು ಸಹ ಪೊಲೀಸರು ಹಲವು ಪ್ರಯತ್ನ ಮಾಡುತ್ತಿದ್ದು ಆರೋಪಿಗಳ ಮೊಬೈಲ್, ಲ್ಯಾಪ್ಟಾಪ್ ಹಾಗೂ ಸಿಸಿಟಿವಿ ಡಿವಿಆರ್ಗಳನ್ನು ಹೈದರಾಬಾದ್ ಎಫ್ಎಸ್ಎಲ್ಗೆ ರವಾನಿಸಿದ್ದಾರೆ. ಆರೋಪಿಗಳು, ಕೊಲೆ ಪ್ರಕರಣದ ಬಳಿಕ ಮೊಬೈಲ್ ನಲ್ಲಿನ ಎಲ್ಲ ಡಾಟಾ ವನ್ನು ಎಲ್ಲ ಮಾಹಿತಿಯನ್ನು ಅಳಿಸಿ ಹಾಕಿದ್ದರು. ಹಾಗಾಗಿ ಅತ್ಯಾಧುನಿಕ ತಂತ್ರಜ್ಞಾನವನ್ನು ಬಳಸಿ ಮೊಬೈಲ್ ಡಾಟಾ ರಿಟ್ರೀವ್ ಮಾಡಲಾಗುತ್ತಿದೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ