ದರ್ಶನ್ ಪ್ರಕರಣ: ಸಾಕ್ಷ್ಯ ನಾಶ ಮಾಡಲು ಬಂದವರೇ ಈಗ ಪ್ರಮುಖ ಸಾಕ್ಷಿ
ರೇಣುಕಾ ಸ್ವಾಮಿ ಕೊಲೆ ಪ್ರಕರಣದಲ್ಲಿ ಮೊದಲ ಬಂಧಿತವಾದ ಆರೋಪಿಗಳೇ ಈಗ ಸಾಕ್ಷಿಗಳಾಗಿ ಪರಿವರ್ತನೆಗೊಂಡಿದ್ದಾರೆ. ಸಾಕ್ಷಿಗಳು ಈಗಾಗಲೇ ನ್ಯಾಯಾಧೀಶರ ಮುಂದೆ ಪ್ರತ್ಯೇಕವಾಗಿ ಹೇಳಿಕೆ ದಾಖಲಿಸಿದ್ದು, ಪ್ರಕರಣದ ಪ್ರಮುಖ ಆರೋಪಿಗಳಾದ ದರ್ಶನ್, ಪವಿತ್ರಾ ಗೌಡ ಮತ್ತು ಇತರರಿಗೆ ಇದು ಮುಳುವಾಗಿ ಪರಿಣಮಿಸಲಿದೆ.
ರೇಣುಕಾ ಸ್ವಾಮಿ ಕೊಲೆ ಪ್ರಕರಣದಲ್ಲಿ 17 ಮಂದಿ ಆರೋಪಿಗಳಿದ್ದಾರೆ. ಪೊಲೀಸರು ಹೇಳಿರುವಂತೆ ಒಬ್ಬೊಬ್ಬರು ಒಂದೊಂದು ರೀತಿ ಕೊಲೆ ಹಾಗೂ ಅಪಹರಣದಲ್ಲಿ ಭಾಗೀದಾರರಾಗಿದ್ದಾರೆ. ಆದರೆ ಈ ಪ್ರಕರಣದಲ್ಲಿ ಮೊದಲು ಬಂಧಿತರಾದ ಆರೋಪಿಗಳೇ ಈಗ ಸಾಕ್ಷಿಗಳಾಗಿದ್ದು, ಪ್ರಕರಣಕ್ಕೆ ಮಹತ್ವದ ತಿರುವು ನೀಡಿದ್ದಾರೆ. ದರ್ಶನ್ ಮತ್ತು ಗ್ಯಾಂಗ್ ಯಾರನ್ನು ಸಾಕ್ಷ್ಯ ನಾಶ ಮಾಡಲೆಂದು ಕರೆಸಿದ್ದರೋ ಅವರೇ ಈಗ ಸಾಕ್ಷಿಗಳಾಗಿದ್ದಾರೆ. ರೇಣುಕಾ ಸ್ವಾಮಿ ಶವಕ್ಕೆ ಮುಕ್ತಿ ನೀಡಲು ಮುಂದಾಗಿದ್ದವರೇ ಈಗ ಪ್ರಕರಣಕ್ಕೆ ಮುಕ್ತಿ ನೀಡುವ ಪ್ರಮುಖ ಸಾಕ್ಷಿಗಳಾಗಿ ಬದಲಾಗಿದ್ದಾರೆ.
ಪಟ್ಟಣಗೆರೆ ಶೆಡ್ನಲ್ಲಿ ರೇಣುಕಾ ಸ್ವಾಮಿಯ ಕೊಲೆಯಾದ ಬಳಿಕ ಶವವನ್ನು ಎಸೆಯಲು ಮೂವರನ್ನು ನಿಗದಿಪಡಿಸಲಾಯ್ತು. ತಲಾ ಐದು ಲಕ್ಷ ರೂಪಾಯಿ ಹಣ ಅವರಿಗೆ ನೀಡಿ ಶವವನ್ನು ಸಾಗಿಸಿ ದೂರ ಎಸೆಯುವುದು ಮಾತ್ರವೇ ಅಲ್ಲದೆ ಒಂದೊಮ್ಮೆ ಪೊಲೀಸರಿಗೆ ಶವ ದೊರೆತರೆ ತಾವೇ ಹೋಗಿ ಕೊಲೆ ಮಾಡಿರುವುದಾಗಿ ಒಪ್ಪಿಕೊಳ್ಳಬೇಕು ಎಂದು ನಿಗದಿಯಾಗಿತ್ತು. ಅದರಂತೆ ತಲಾ ಐದು ಲಕ್ಷ ರೂಪಾಯಿ ಹಣ ಪಡೆದು ವಿ ಪ್ರಕಾಶ್, ನಿಖಿಲ್ ನಾಯಕ್, ಕಾರ್ತಿಕ್ ಅಲಿಯಾಸ್ ಕಪ್ಪೆ ಅವರುಗಳು ರೇಣುಕಾ ಸ್ವಾಮಿ ಶವವನ್ನು ಸಾಗಿಸಿ, ಕಾಲುವೆಗೆ ಎಸೆದಿದ್ದರು. ಶವ ಪೊಲೀಸರಿಗೆ ದೊರೆತ ಬಳಿಕ ಪೊಲೀಸರ ಎದುರು ತಾವೇ ಕೊಲೆ ಮಾಡಿರುವುದಾಗಿ ಒಪ್ಪಿಕೊಂಡಿದ್ದರು.
ಇದನ್ನೂ ಓದಿ:ಸುದೀಪ್ರ ‘ಹುಚ್ಚ’ ಸಿನಿಮಾದಲ್ಲಿ ಗೆಳೆಯನ ಪಾತ್ರ ಕೇಳಿದ್ದರು ದರ್ಶನ್
ಈಗ ಈ ಮೂವರು ಆರೋಪಿಗಳೇ ಸಾಕ್ಷ್ಯಗಳಾಗಿದ್ದಾರೆ. ಈ ಮೂವರ ಸಿಆರ್ಪಿಸಿ 164 ಅಡಿಯಲ್ಲಿ ಸಾಕ್ಷ್ಯಗಳ ಹೇಳಿಕೆಯನ್ನು ಪೊಲೀಸರು ದಾಖಲಿಸಿಕೊಂಡಿದ್ದಾರೆ. ಅಲ್ಲದೆ ನ್ಯಾಯಾಧೀಶರ ಮುಂದೆ ಸಹ ಹೇಳಿಕೆಯನ್ನು ದಾಖಲು ಮಾಡಿದ್ದಾರೆ. ಮಾತ್ರವಲ್ಲದೆ ಈ ಮೂವರಿಗೆ ಸಂಬಂಧಿಸಿದಂತೆ ಇತರೆ ಕೆಲವು ಸಾಕ್ಷ್ಯಗಳನ್ನು ಸಹ ಪೊಲೀಸರು ಕಲೆ ಹಾಕಿದ್ದಾರೆ.
ಶವ ಎಸೆಯಲು ತೆರಳಿದ ವಾಹನ, ಅದರ ಸಿಸಿಟಿವಿ ದೃಶ್ಯಾವಳಿಗಳು, ಶವ ಎಸೆದ ಬಳಿಕ ಆಟೋದಲ್ಲಿ ಪ್ರಯಾಣ ಮಾಡಿದ್ದು, ಆ ಆಟೋ ಚಾಲಕನನ್ನು ಪತ್ತೆ ಮಾಡಲಾಗಿದ್ದು, ಆತನ ವಿಚಾರಣೆಯನ್ನೂ ಮಾಡಲಾಗಿದೆ. ಹಾಗೂ ಆತನಿಂದ ಆರೋಪಿಗಳ ಗುರುತು ಪತ್ತೆ ಪೆರೆಡ್ ಸಹ ಮಾಡಿಸಲಾಗಿದೆ. ಬಳಿಕ ಆರೋಪಿಗಳು ದರ್ಶನ್ ಮತ್ತು ಗ್ಯಾಂಗ್ನಿಂದ ಪಡೆದಿದ್ದಾರೆ ಎನ್ನಲಾಗುತ್ತಿರುವ ಹಣವನ್ನು ಸಹ ವಶಕ್ಕೆ ಪಡೆಯಲಾಗಿದೆ. ಶವ ಎಸೆದ ಬಳಿಕ ಕಾರ್ತಿಕ್ @ ಕಪ್ಪೆ ಹಾಗೂ ನಿಖಿಲ್ ನಾಯಕ್ ಆಟೋ ಹತ್ತಿದ್ದರು.. ನಾಯಂಡಹಳ್ಳಿವರೆಗೂ ಆಟೋದಲ್ಲಿ ಹೋಗಿದ್ದರು ಅದೆಲ್ಲದರ ಮಾಹಿತಿಯನ್ನು ಪೊಲೀಸರು ಸಂಗ್ರಹಿಸಿದ್ದಾರೆ.
ಇದೀಗ ಪ್ರಕರಣದ 14 ಆರೋಪಿಗಳನ್ನು ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿನಲ್ಲಿ ಇರಿಸಲಾಗಿದೆ. ಆದರೆ ಪ್ರಕರಣದಲ್ಲಿ ಸಾಕ್ಷಿಗಳಾಗಿರುವ ನಿಖಿಲ್ ನಾಯಕ್, ಕಾರ್ತಿಕ್ ಮತ್ತು ಪ್ರಕಾಶ್ ಅವರುಗಳನ್ನು ಮಾತ್ರ ತುಮಕೂರು ಜೈಲಿನಲ್ಲಿ ಇರಿಸಲಾಗಿದೆ. ಇತರೆ ಆರೋಪಿಗಳು ಇವರ ಮೇಲೆ ಪ್ರಭಾವ ಬೀರಬಹುದು ಎಂಬ ಕಾರಣಕ್ಕೆ ಈ ನಿರ್ಣಯ ತೆಗೆದುಕೊಳ್ಳಲಾಗಿದೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 7:26 am, Sun, 7 July 24