ನಟ ದರ್ಶನ್ (Darshan) ಚಿತ್ರರಂಗಕ್ಕೆ ಕಾಲಿಟ್ಟು 25 ವರ್ಷಗಳಾಗಿವೆ. ಲೈಟ್ ಬಾಯ್ ಆಗಿ ಚಿತ್ರರಂಗಕ್ಕೆ ಕಾಲಿಟ್ಟ ದರ್ಶನ್ ಈಗ ಕನ್ನಡ ಚಿತ್ರರಂಗದ ಸೂಪರ್ ಸ್ಟಾರ್. ಅವರ ಈ 25 ವರ್ಷಗಳ ಸಿನಿಮಾ ಪಯಣ ಸುಲಭದ್ದಾಗಿರಲಿಲ್ಲ. ಆರಂಭದಲ್ಲಿ ನಾನಾ ಕಷ್ಟಗಳನ್ನು ಎದುರಿಸಿ ನಟರಾದವರು, ನಟನಾದ ಮೇಲೆಯೂ ಸಾಕಷ್ಟು ಸವಾಲುಗಳನ್ನು ಎದುರಿಸಿ ಸತತ ಪರಿಶ್ರಮ ಪಟ್ಟು ಈಗಿರುವ ಸ್ಥಾನಕ್ಕೆ ಏರಿದ್ದಾರೆ ನಟ ದರ್ಶನ್. ತೂಗುದೀಪ ದರ್ಶನ್ರ 25 ವರ್ಷಗಳ ಪಯಣವನ್ನು ಹತ್ತಿರದಿಂದ ನೋಡಿದ ಗೆಳೆಯರು ಕೆಲವರಷ್ಟೆ. ಅವರಲ್ಲಿ ಒಬ್ಬರು ನಿರ್ಮಾಪಕ ಶಿವಕುಮಾರ್. ತಮ್ಮ ಆಪ್ತ ಗೆಳೆಯ ಆರಂಭದಲ್ಲಿ ಎದುರಿಸಿದ ಕಷ್ಟಗಳು, ಬೆಳೆದ ರೀತಿ ಬಗ್ಗೆ ಅಪರೂಪದ ಸಂಗತಿಗಳನ್ನು ಶಿವಕುಮಾರ್ ಹಂಚಿಕೊಂಡಿದ್ದಾರೆ.
‘ಮೈಸೂರಿನಲ್ಲಿ ಒಂದು ಕೇಬಲ್ ಆಫೀಸ್ ಇತ್ತು ಅದು ನಮ್ಮ ಅಡ್ಡ. ಎಷ್ಟೋ ವರ್ಷಗಳ ಕಾಲ ದರ್ಶನ್ ಆ ಕೇಬಲ್ ಆಫೀಸ್ನಲ್ಲೇ ಮಲಗಿದ್ದಾರೆ. ಈಗ ಮೈಸೂರಿನ ಗ್ಯಾಂಗ್ ಏನಿದೆಯೋ ಎಲ್ಲರಿಗೂ ಅದೇ ಅಡ್ಡ. ಆ ಗ್ಯಾಂಗ್ ಅನ್ನು ಕಟ್ಟಿದ್ದು ಸಹ ದರ್ಶನ್. ಆಗಿನಿಂದಲೂ ದರ್ಶನ್ ಶ್ರಮ ಜೀವಿ. ಹಸು ಸಾಕುತ್ತಿದ್ದರು, ಹಾಲು ಹಾಕುತ್ತಿದ್ದರು. ಹೊಲಕ್ಕೆ ಹೋಗಿ ಹಸುಗಳಿಗೆ ಮೇವು ಕೊಯ್ದು ತರುತ್ತಿದ್ದರು. ಹಸುಗಳ ಶೆಡ್ಡು ಕ್ಲೀನ್ ಮಾಡುತ್ತಿದ್ದರು’ ಎಂದು ಹಳೆಯ ದರ್ಶನ್ ಅನ್ನು ಶಿವಕುಮಾರ್ ನೆನಪು ಮಾಡಿಕೊಂಡರು.
ಇದನ್ನೂ ಓದಿ:21 ವರ್ಷದ ಬಳಿಕ ಒಂದಾದ ದರ್ಶನ್-ಪ್ರೇಮ್, ಈ ಬಾರಿ ರೌಡಿಸಂ ಕಥೆಯಲ್ಲ?
‘ಆಗಿನಿಂದಲೂ ದರ್ಶನ್ಗೆ ನಟನಾಗಬೇಕು ಎಂಬ ಆಸೆ ಇತ್ತು. ಒಮ್ಮೆ ಮೈಸೂರಿನ ಪ್ರಭಾತ್ ಚಿತ್ರಮಂದಿರದ ಮುಂದೆ ಹೋಗುವಾಗ ‘ಆಕಸ್ಮಿಕ’ ಸಿನಿಮಾದ ಕಟೌಟ್ ನೋಡಿ ನಾನೂ ಸಿನಿಮಾ ಹೀರೋ ಆಗ್ತೀನಾ, ನನ್ನ ಕಟೌಟ್ ಹೀಗೆ ಬೀಳುತ್ತಾ ಎಂದು ಕೇಳುತ್ತಿದ್ದ. ಅದರಂತೆ ಕಷ್ಟಪಟ್ಟ ನೀನಾಸಂಗೆ ಹೋದ ನಟನೆ ಕಲಿತರು, ಅಲ್ಲಿಂದ ಬಂದು ಲೈಟ್ ಬಾಯ್ ಆಗಿ ಕೆಲಸ ಮಾಡಿದರು. ಗೌರಿಶಂಕರ್ ಅವರಿಗೆ ಸಹಾಯಕರಾಗಿ ಕೆಲಸ ಮಾಡಿದರು. ಧಾರಾವಾಹಿಗಳಲ್ಲಿ ಕೆಲಸ ಮಾಡಿದರು. ಬಹಳ ಕಷ್ಟಪಟ್ಟರು, ಎಲ್ಲಿಯೂ ತಮ್ಮ ಹಿನ್ನೆಲೆ ಹೇಳಿಕೊಳ್ಳಲಿಲ್ಲ, ಕೊನೆಗೆ ನಾಯಕನಾದರು’ ಎಂದು ಗೆಳೆಯನನ್ನು ಶಿವಕುಮಾರ್ ಕೊಂಡಾಡಿದರು.
ಸ್ಟಾರ್ ನಟನಾದರೂ ಗೆಳೆಯರ ಬಳಿಕ ಗೆಳೆಯನಂತೆ ಇರುತ್ತಾರೆ. ಎಷ್ಟೋ ಜನ ಗೆಳೆಯರಿಗೆ ಹಲವಾರು ವಿಷಯಗಳಲ್ಲಿ ಸಹಾಯ ಮಾಡಿದ್ದಾರೆ. ನಮ್ಮನ್ನೆಲ್ಲ ಮೊದಲು ಫ್ಲೈಟ್ ಹತ್ತಿಸಿದ್ದು ದರ್ಶನ್. ಶೂಟಿಂಗ್ಗೆ ನಮ್ಮನ್ನು ಕರೆದುಕೊಂಡು ಹೋದರೆ ನಮ್ಮ ಜೊತೆಗೆ ಸಾಮಾನ್ಯ ರೂಂನಲ್ಲಿ ಉಳಿಯುತ್ತಿದ್ದ. ನಾನು ನಿರ್ಮಾಪಕ ಆದಮೇಲೆ, ನನಗೆ ಸಹ ಮೂರು ಬಾರಿ ಕಾಲ್ಶೀಟ್ ಕೊಟ್ಟಿದ್ದ ಆದರೆ ಮೂರೂ ಬಾರಿಯೂ ಸಿನಿಮಾ ಮಾಡಲು ಆಗಲಿಲ್ಲ. ಆದರೂ ನನ್ನ ಸಿನಿಮಾಗಳಿಗೆ ಬೆಂಬಲ ನೀಡುತ್ತಾನೆ’ ಎಂದರು ಶಿವಕುಮಾರ್.
ಇದನ್ನೂ ಓದಿ:ದರ್ಶನ್ ಹುಟ್ಟುಹಬ್ಬದಂದು ಅವರಿಗೆ ದೃಷ್ಟಿ ತೆಗೆದ ಮಹಿಳೆಯರ ಮಾತು
‘ದರ್ಶನ್ ಇನ್ನೂ ಏಳೆಂಟು ವರ್ಷಗಳ ಕಾಲ ಬ್ಯುಸಿಯಾಗಿದ್ದಾರೆ. ಅವರು ಈಗ ಒಪ್ಪಿಕೊಂಡಿರುವ ಸಿನಿಮಾಗಳನ್ನು ಮುಗಿಸಲು ಅವರಿಗೆ ಏಳರಿಂದ ಎಂಟು ವರ್ಷ ಸಮಯ ಬೇಕು. ಅವರು ಚಿತ್ರರಂಗದ ಬಗ್ಗೆ ಸಾಕಷ್ಟು ಯೋಜನೆಗಳನ್ನು ಹಾಕಿಕೊಂಡಿದ್ದಾರೆ. ವರ್ಷಕ್ಕೆ ಎರಡು ಸಿನಿಮಾ ಮಾಡುವ ಕಮಿಟ್ಮೆಂಟ್ ಇಟ್ಟುಕೊಂಡು ಕೆಲಸ ಮಾಡುತ್ತಿದ್ದಾರೆ. ‘ಕಾಟೇರ’ ಸಿನಿಮಾ ಬರದೇ ಇದ್ದಿದ್ದರೆ ಚಿತ್ರರಂಗಕ್ಕೆ ಕಷ್ಟವಾಗಿರುತ್ತಿತ್ತು. ಚಿತ್ರರಂಗ ಇಂದು ಉಸಿರಾಡುತ್ತಿದೆ ಎಂದರೆ ಅದಕ್ಕೆ ದರ್ಶನ್ ಕಾರಣ’ ಎಂದರು ಶಿವಕುಮಾರ್.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ