ರೇಸಿನ ಕುದುರೆ ನಾನು, ವಿವಾದಗಳಿಗೆಲ್ಲ ಡೋಂಟ್ ಕೇರ್: ದರ್ಶನ್
Darshan: ಚಿತ್ರರಂಗದಲ್ಲಿ ಪೂರೈಸಿದ್ದಕ್ಕೆ ಶ್ರೀರಂಗಪಟ್ಟಣದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ ನಟ ದರ್ಶನ್, ತಮ್ಮನ್ನು ರೇಸಿನ ಕುದುರೆಗೆ ಹೋಲಿಸಿಕೊಂಡರು. ಜೊತೆಗೆ ವಿವಾದಗಳಿಗೆ ಡೋಂಟ್ ಕೇರ್ ಎಂದರು.

ನಟ ದರ್ಶನ್ (Darshan), ಚಿತ್ರರಂಗಕ್ಕೆ ಕಾಲಿಟ್ಟು 25 ವರ್ಷ ಪೂರೈಸಿದ ಸಂಭ್ರಮಕ್ಕೆ ಅಭಿಮಾನಿಗಳು ‘ಬೆಳ್ಳಿ ಪರ್ವ ಡಿ-25’ ಕಾರ್ಯಕ್ರಮವನ್ನು ಅದ್ಧೂರಿಯಾಗಿ ಶ್ರೀರಂಗಪಟ್ಟಣದಲ್ಲಿ ಆಯೋಜನೆ ಮಾಡಿದ್ದರು. ಮಠಾಧೀಶರು, ಧಾರ್ಮಿಕ ಮುಖಂಡರು, ರಾಜಕೀಯ ನಾಯಕರು, ಚಿತ್ರರಂಗದ ಅನೇಕ ಗಣ್ಯರು ಈ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು. ತಡರಾತ್ರಿ ವರೆಗೂ ನಡೆದ ಕಾರ್ಯಕ್ರಮದಲ್ಲಿ ಕೊನೆಯಲ್ಲಿ ಮಾತನಾಡಿದ ನಟ ದರ್ಶನ್, ‘ರೇಸ್ಗೆ ಬಿಟ್ಟಿರುವ ಕುದುರೆ ನಾನು, ಜಾಕಿ (ನಿರ್ದೇಶಕ) ಓಡಿಸಿದಂತೆ ಓಡುವೆ, ದಣಿಯುವ ವರೆಗೂ ಓಡುತ್ತಲೇ ಇರುವೆ’ ಎಂದರು. ತಮ್ಮನ್ನು ಪದೇ-ಪದೇ ಸುತ್ತಿಕೊಳ್ಳುವ ವಿವಾದಗಳ ಬಗ್ಗೆಯೂ ದರ್ಶನ್ ಮಾತನಾಡಿದರು.
‘ನಾನು ಟಾಂಗಾ ಕುದುರೆ ಆಗಿದ್ದೆ. ಅಲ್ಲಿ-ಇಲ್ಲಿ ಓಡಾಡುತ್ತಿದ್ದೆ. ನನ್ನನ್ನು ನೋಡಿದ ಕೆಲವರು ಈ ಕುದುರೆ ಎತ್ತರ ಇದೆ, ಕಟ್ಟುಮಸ್ತಾಗಿದೆ ಎಂದು ರೇಸ್ ಕೋರ್ಸ್ ಗಂಧ-ಗಾಳಿ ಗೊತ್ತಿರದಿದ್ದರೂ ರೇಸ್ ಕೋರ್ಸ್ ಅಲ್ಲಿ ನಿಲ್ಲಿಸಿದರು. ಆ ರೇಸ್ನಲ್ಲಿ ದೊಡ್ಡ-ದೊಡ್ಡ ಕುದುರೆಗಳು ಇದ್ದವು. ಆ ಕುದುರೆಯ ಮಾಲೀಕರು ‘ಮೆಜೆಸ್ಟಿಕ್’ ಸಿನಿಮಾ ನಿರ್ಮಾಪಕ ರಾಮಮೂರ್ತಿ. ನನ್ನನ್ನು ಬೈಯ್ಯುವ, ನಿನ್ನನ್ನು ಚಿತ್ರರಂಗಕ್ಕೆ ಕರೆತಂದಿದ್ದು ನಾನು ಎಂದು ಹೇಳುವ ಅರ್ಹತೆ-ಯೋಗ್ಯತೆ ಇರುವುದು ರಾಮಮೂರ್ತಿ ಅವರಿಗೆ ಮಾತ್ರ. ಹೀಗೆ ಕರೆತಂದು ರೇಸ್ಗೆ ಬಿಟ್ಟ ಕುದುರೆಯ ಮೇಲೆ ಜಾಕಿಯಾಗಿ ಪಿಎನ್ ಸತ್ಯ ಅವರನ್ನು ಕೂಡಿಸಿದರು. ಅಂದಿನಿಂದ ಇಂದಿನ ವರೆಗೆ ಓಡುತ್ತಲೇ ಇದ್ದೀನಿ. ತರುಣ್, ಮಿಲನಾ ಪ್ರಕಾಶ್ ಹೀಗೆ ಜಾಕಿಗಳು ಬದಲಾಗುತ್ತಲೇ ಇದ್ದಾರೆ. ಕುದುರೆಗೆ ಓಡುವುದು ಮಾತ್ರವೇ ಗೊತ್ತು, ಅದನ್ನು ಓಡಿಸುತ್ತಿರುವವರು ಜಾಕಿಗಳು. ಸಿನಿಮಾ ನನ್ನದಲ್ಲ, ಎಲ್ಲ ನಿರ್ದೇಶಕರದ್ದು’ ಎಂದಿದ್ದಾರೆ ದರ್ಶನ್.
ಇದನ್ನೂ ಓದಿ:ದರ್ಶನ್ ಮೊದಲ ಸಿನಿಮಾ ‘ಮೆಜೆಸ್ಟಿಕ್’ನ ನಿರ್ಮಾಪಕರು ಹೇಳಿದ್ದು ಒಂದೇ ಮಾತು
‘ಚಿತ್ರರಂಗ, ರಾಜಕೀಯ, ಬ್ಯುಸಿನೆಸ್ ಯಾವುದೇ ಆಗಿರಲಿ ಶ್ರಮ ಇರಲೇ ಬೇಕು. ಶ್ರದ್ಧೆ ಬೇಕೇಬೇಕು. ಆರಂಭದಲ್ಲಿ ಅವಮಾನಗಳನ್ನು ಎದುರಿಸಲೇ ಬೇಕು. ಅವಮಾನಗಳು ಆದರೇನೆ ಸನ್ಮಾನ. ಚಪ್ಪಲಿಯಲ್ಲಿ ಹೊಡೆದರೆ ಹೊಡೀರಿ, ಹಾರ ಹಾಕಿಸಿಕೊಳ್ಳುವುದಕ್ಕೆ ಮಾತ್ರ ರೆಡಿ ಇದ್ದರೆ ಸಾಲದು, ಚಪ್ಪಲಿ ಬಿದ್ದಾಗ ಅದನ್ನೂ ಸ್ವೀಕರಿಸಬೇಕು. ನನ್ನಷ್ಟು ವಿವಾದ ಯಾರಿಗೂ ಸುತ್ತಿಕೊಳ್ಳಲ್ಲ. ಹೌದು ನಾನು ಬ್ಯಾಡ್ ಬಾಯ್. ಕಷ್ಟಪಟ್ಟಾಗ ಮಾತುಗಳು ಕಹಿಯಾಗಿರುತ್ತೆ. ಅದು ಕೆಲವರಿಗೆ ಹಿಡಿಸಲ್ಲ. ಫ್ಯಾಮಿಲಿ ಸಮಸ್ಯೆಗಳು, ಎಲ್ಲ ಸಮಸ್ಯೆಗಳನ್ನು ಬದಿಗಿಡುತ್ತೀನಿ. ನನ್ನ ಸೆಲೆಬ್ರಿಟಿಗಳು, ನನ್ನ ಕೆಲಸ ಮುಖ್ಯ, ಬೇರೆಯದಕ್ಕೆ ತಲೆಕೆಡಿಸಿಕೊಳ್ಳಲ್ಲ. ಇವತ್ತು ಇವಳಿರ್ಥಾಳೆ, ನಾಳೆ ಅವಳಿರ್ತಾಳೆ ನಾನ್ಯಾಕೆ ಇವರ ಬಗ್ಗೆ ತಲೆ ಕೆಡಿಸಿಕೊಳ್ಳಲಿ. ನನಗೆ ನನ್ನ ಕೆಲಸ ಅಷ್ಟೆ ಮುಖ್ಯ’ ಎಂದರು ದರ್ಶನ್.
ತಿರುಪತಿಗೆ ಬಸ್ಸಿನಲ್ಲೆ ಹೋಗಿದ್ದೆ, ಕಾರಿನಲ್ಲಿ ಹೋಗಿದ್ದೆ. ದೇವರ ಬಳಿ ಕ್ಷಮೆ ಕೇಳುವುದಿಲ್ಲ, ತಲೆ ಇಡಬೇಡಿ, ತಲೆ ಹೊಡಿಬೇಡಿ, ಗುರಿ ಇಟ್ಟುಕೊಳ್ಳಿ, ಇನ್ನೂ ಸೊನ್ನೆಯಲ್ಲೇ ಇದ್ದೇನೆ. ಅತಿಯಾಸೆ ಕೆಲಸದ ಮೇಲೆ, ಏನೇ ಮಾಡಿ, ಒಂದಲ್ಲ ಒಂದಿನ ಜಯ ಸಿಗುತ್ತದೆ ಎಂದ ದರ್ಶನ್, ಸುಮಲತಾ ಅವರ ಬಗ್ಗೆ ಮಾತನಾಡಿ, ‘ಸುಮ ಅವರು ನನಗೆ ಬುದ್ಧಿ ಕಲಿಸಿದ್ದಾರೆ. ಅಂಬರೀಶ್ ಮನೆಯಲ್ಲಿ ಏಟು ತಿಂದಿದ್ದೀನಿ. ನಾನು ತಪ್ಪು ಮಾಡಿದಾಗ ಬೈದು ತಿದ್ದಿದ್ದಾರೆ. ನನಗೆ ಬುದ್ಧಿ ಕಲಿಸಿದ ತಾಯಿ ಸುಮಾ ಅವರು. ಅಭಿಷೇಕ್ ನಿಗಿಂತಲೂ ಹೆಚ್ಚಿನ ಪ್ರೀತಿಯನ್ನು ನನಗೆ ತೋರಿಸಿದ್ದಾರೆ’ ಎಂದರು ದರ್ಶನ್.
ಇದನ್ನೂ ಓದಿ:ದರ್ಶನ್ ಹಾಗೂ ಯಶ್ ಮಾಡಿದ ಸಹಾಯ ನೆನಪು ಮಾಡಿಕೊಂಡ ಸುಮಲತಾ
‘ಚಿತ್ರರಂಗದ ಹಿರಿಯರು ಆಶೀರ್ವಾದ ಮಾಡಿದ್ದಾರೆ. 57-58 ಸಿನಿಮಾಗಳಲ್ಲಿ ನಟಿಸಿದ್ದೀನಿ, ಆ ಸಿನಿಮಾಗಳಲ್ಲಿ ನನ್ನೊಟ್ಟಿಗೆ ಕೆಲಸ ಮಾಡಿದ ತಂತ್ರಜ್ಞಾನರು, ನಟಿಯರು ಆಗಿರಬಹುದು, ಗೊತ್ತೊ-ಗೊತ್ತಿಲ್ಲದೆ ನೋವು ಮಾಡಿದ್ದರೆ ಕ್ಷಮೆ ಕೇಳುತ್ತೇನೆ’ ಎಂದ ದರ್ಶನ್, ಕಾರ್ಯಕ್ರಮ ಆಯೋಜನೆಗೆ ಸಹಕರಿಸಿದ ಎಲ್ಲರಿಗೂ ಧನ್ಯವಾದ ಹೇಳಿದರು. ಆಗಮಿಸಿದ ಎಲ್ಲರಿಗೂ ಧನ್ಯವಾದ ಹೇಳಿ, ತಡವಾಗಿದ್ದಕ್ಕೆ ಕ್ಷಮೆ ಕೇಳಿ ಕಾರ್ಯಕ್ರಮ ಮುಗಿಸಿದರು.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ