ಪರಪ್ಪನ ಅಗ್ರಹಾರ ಜೈಲು ಅಧಿಕಾರಿಗಳಿಗೆ ದರ್ಶನ್ ಆರೋಗ್ಯದ ಚಿಂತೆ

|

Updated on: Jul 07, 2024 | 10:56 AM

ರೇಣುಕಾ ಸ್ವಾಮಿ ಕೊಲೆ ಪ್ರಕರಣದಲ್ಲಿ ಸುಮಾರು ಒಂದು ತಿಂಗಳಿನಿಂದಲೂ ಜೈಲಿನಲ್ಲಿರುವ ದರ್ಶನ್​ರ ಆರೋಗ್ಯದಲ್ಲಿ ಇಳಿಮುಖವಾಗಿದ್ದು ಇದು ಜೈಲು ಅಧಿಕಾರಿಗಳ ಚಿಂತೆಗೆ ಕಾರಣವಾಗಿದೆ. ಕೆಲವೇ ದಿನಗಳಲ್ಲಿ ದರ್ಶನ್ ಹತ್ತು ಕೆಜಿ ತೂಕ ಕಳೆದುಕೊಂಡಿದ್ದಾರಂತೆ.

ಪರಪ್ಪನ ಅಗ್ರಹಾರ ಜೈಲು ಅಧಿಕಾರಿಗಳಿಗೆ ದರ್ಶನ್ ಆರೋಗ್ಯದ ಚಿಂತೆ
ದರ್ಶನ್ ತೂಗುದೀಪ
Follow us on

ರೇಣುಕಾ ಸ್ವಾಮಿ ಕೊಲೆ ಪ್ರಕರಣದಲ್ಲಿ ದರ್ಶನ್ ತೂಗುದೀಪ ಬಂಧನವಾಗಿ ಒಂದು ತಿಂಗಳಾಗುತ್ತಾ ಬಂದಿದೆ. ಹೊರಗೆ ಐಶಾರಾಮಿ ಜೀವನ ನಡೆಸಿಕೊಂಡಿದ್ದ ದರ್ಶನ್ ಜೈಲಿನಲ್ಲಿ ಬಂಧಿಯಾಗಿ ಇಕ್ಕಟ್ಟಿನಲ್ಲಿ ಸಮಯ ಕಳೆಯುತ್ತಿದ್ದಾರೆ. ಹೊರಗೆ ಪ್ರತಿದಿನ ಪಾರ್ಟಿ, ಗೆಳೆಯರೊಟ್ಟಿಗೆ ಸುತ್ತಾಟ, ಭರ್ಜರಿ ನಾನ್ ವೆಜ್ ಊಟ, ಸತತ ಸಿಗರೇಟು, ಬೇಕೆಂದಾಗ ಮದ್ಯ ಇವುಗಳಲ್ಲೇ ತುಂಬಿ ಹೋಗಿದ್ದ ನಟ ದರ್ಶನ್ ಜೈಲಿನಲ್ಲಿ ನಾಲ್ಕು ಗೋಡೆಗಳ ನಡುವೆ ಬಂಧಿಯಾಗಿದ್ದಾರೆ. ಇದರಿಂದ ಅವರು ಮಾನಸಿಕ ಜರ್ಜರಿತವಾಗಿದ್ದು ಅವರ ಆರೋಗ್ಯದ ಮೇಲೆಯೂ ಇದು ಪರಿಣಾಮ ಬೀರುತ್ತಿದೆ ಎನ್ನಲಾಗುತ್ತಿದೆ. ಇದು ಪರಪ್ಪನ ಅಗ್ರಹಾರ ಜೈಲಿನ ಅಧಿಕಾರಿಗಳ ಚಿಂತೆಗೂ ಕಾರಣವಾಗಿದೆ.

ರೇಣುಕಾ ಸ್ವಾಮಿ ಕೊಲೆಯ ನಂತರ ಜೂನ್ 11 ರಂದು ದರ್ಶನ್ ಬಂಧನವಾಗಿತ್ತು. ಅಂದಿನಿಂದ ಈವರೆಗೂ ದರ್ಶನ್ ಜೈಲಿನಲ್ಲಿದ್ದಾರೆ. ಪ್ರಕರಣದಿಂದಾಗಿ ಮಾನಸಿಕವಾಗಿ ಜರ್ಜರಿತವಾಗಿರುವ ದರ್ಶನ್ ಅದರ ಜೊತೆಗೆ ಜೈಲಿನಲ್ಲಿ ತಮ್ಮ ದೇಹಕ್ಕೆ ಹೊಂದುವ ಸೂಕ್ತ ಆಹಾರ ಸಹ ಸಿಗದ ಕಾರಣ ಕೃಷವಾಗುತ್ತಾ ಸಾಗಿದ್ದಾರಂತೆ. ಕೇವಲ ಕಳೆದ ಹದಿನಾರು ದಿನದಲ್ಲಿ 10 ಕೆಜಿ ತೂಕವನ್ನು ದರ್ಶನ್ ಕಳೆದುಕೊಳ್ಳಲಿದ್ದಾರೆ ಎನ್ನಲಾಗುತ್ತಿದೆ. ಪರಪ್ಪನ ಅಗ್ರಹಾರ ಜೈಲಿನ ಅಧಿಕಾರಿಗಳಿಗೆ ದರ್ಶನ್ ಆರೋಗ್ಯದ ಬಗ್ಗೆ ತೀವ್ರ ಚಿಂತೆಯಾಗಿದೆ. ಸತತವಾಗಿ ತೂಕ ಕಳೆದುಕೊಳ್ಳುತ್ತಿರುವ ದರ್ಶನ್ ಅನಾರೋಗ್ಯಕ್ಕೆ ಈಡಾಗುವ ಸಾಧ್ಯತೆ ಇರುವ ಕಾರಣ ಅವರ ಆರೋಗ್ಯದ ಮೇಲೆ ಅಧಿಕಾರಿಗಳು ಹೆಚ್ಚಿನ ನಿಗಾ ವಹಿಸಿದ್ದಾರೆ ಎನ್ನಲಾಗುತ್ತಿದೆ.

ಪರಪ್ಪನ ಅಗ್ರಹಾರ ಜೈಲಿಗೆ ಬಂದಾಗಿನ ದರ್ಶನ್​ರ ದಿನಚರಿಗೂ ಈಗಿನ ದಿನಚರಿಗೂ ಸಾಕಷ್ಟು ವ್ಯತ್ಯಾಸವಿದೆ ಎನ್ನಲಾಗುತ್ತಿದೆ. ಅಲ್ಲದೆ ದರ್ಶನ್ ಜೈಲಿನಲ್ಲಿ ಯಾರಿಗೂ ಹೆಚ್ಚು ಬೆರೆಯದೇ ಏಕಾಂಗಿಯಾಗಿರಲು ಇಷ್ಟಪಡುತ್ತಿದ್ದಾರೆ ಎನ್ನಲಾಗುತ್ತಿದೆ. ಇದೆಲ್ಲವೂ ಅವರ ಆರೋಗ್ಯದ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇರುವ ಕಾರಣ ದರ್ಶನ್​ರ ಆರೋಗ್ಯದ ಮೇಲೆ ಜೈಲಧಿಕಾರಿಗಳು ತೀವ್ರ ನಿಗಾ ಇರಿಸಿದ್ದಾರೆ. ದರ್ಶನ್​ರ ಆರೋಗ್ಯವನ್ನು ನಿಯಮಿತವಾಗಿ ತಪಾಸಣೆ ಮಾಡುತ್ತಲೇ ಇದ್ದಾರೆ.

ಇದನ್ನೂ ಓದಿ:ದರ್ಶನ್ ಪ್ರಕರಣ: ಸಾಕ್ಷ್ಯ ನಾಶ ಮಾಡಲು ಬಂದವರೇ ಈಗ ಪ್ರಮುಖ ಸಾಕ್ಷಿ

ಈ ಹಿಂದೆ ದರ್ಶನ್, ಪವಿತ್ರಾ ಗೌಡ ಅವರೆಲ್ಲ ಪೊಲೀಸ್ ಕಸ್ಟಡಿಯಲ್ಲಿದ್ದಾಗ ಪವಿತ್ರಾ ಗೌಡ ಅವರಿಗೆ ಎರಡು ಬಾರಿ ಅನಾರೋಗ್ಯ ಉಂಟಾಗಿತ್ತು. ಅವರ ಬಿಪಿಯಲ್ಲಿ ಏರುಪೇರಾಗಿತ್ತು. ಹಾಗಾಗಿ ಅವರನ್ನು ಆಸ್ಪತ್ರೆಗೆ ಸೇರಿಸಿ ಚಿಕಿತ್ಸೆ ಕೊಡಿಸಲಾಗಿತ್ತು. ಆದರೆ ದರ್ಶನ್​ಗೆ ಯಾವುದೇ ಆರೋಗ್ಯ ಸಮಸ್ಯೆ ಎದುರಾಗಿರಲಿಲ್ಲ. ಆದರೆ ಪರಪ್ಪನ ಅಗ್ರಹಾರ ಜೈಲು ಸೇರಿದ ಬಳಿಕ ಅವರಿಗೆ ಸಮಸ್ಯೆ ಆದಂತಿದೆ. ಅವರ ದೇಹದ ತೂಕ ಇಳಿಕೆ ಆಗುತ್ತಿದೆ.

ಜುಲೈ 4 ರಂದು ದರ್ಶನ್ ಹಾಗೂ ಇತರೆ ಆರೋಪಿಗಳ ನ್ಯಾಯಾಂಗ ಬಂಧನ ಅವಧಿ ಮುಕ್ತಾಯವಾಗಿತ್ತು. ಆದರೆ ನ್ಯಾಯಾಧೀಶರು ಆರೋಪಿಗಳ ನ್ಯಾಯಾಂಗ ಬಂಧನವನ್ನು ಜುಲೈ 18ರ ವರೆಗೆ ವಿಸ್ತರಣೆ ಮಾಡಿದ್ದಾರೆ. ಜುಲೈ 18ಕ್ಕೂ ಸಹ ದರ್ಶನ್​ಗೆ ಜಾಮೀನು ಸಿಗುವುದು ಅನುಮಾನ ಎನ್ನಲಾಗುತ್ತಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ