ದಕ್ಷಿಣ ಭಾರತದಲ್ಲಿ ಫೇಮಸ್ ಆದ ಬಳಿಕ ಬಾಲಿವುಡ್ನಿಂದ ಆಫರ್ ಬರೋದು ಸಾಮಾನ್ಯ. ಕನ್ನಡ, ತೆಲುಗು, ತಮಿಳು ಸಿನಿಮಾಗಳು ಹಿಟ್ ಆದ ಬಳಿಕ ಆ ಚಿತ್ರದಲ್ಲಿ ನಟಿಸಿದ ಕಲಾವಿದರಿಗೆ ಹಿಂದಿಯಿಂದ ಭರ್ಜರಿ ಆಫರ್ ಸಿಗುತ್ತದೆ. ವಿಜಯ್ ದೇವರಕೊಂಡ, ರಶ್ಮಿಕಾ ಮಂದಣ್ಣ (Rashmika Mandanna), ಪ್ರಭಾಸ್ ಸೇರಿದಂತೆ ಅನೇಕರು ಬಾಲಿವುಡ್ಗೆ ಕಾಲಿಟ್ಟಿದ್ದಾರೆ. ಕೆಲವರು ಯಶಸ್ಸು ಕಂಡರೆ, ಇನ್ನೂ ಕೆಲವರು ಸೋಲು ಅನುಭವಿಸಿದ್ದಾರೆ. ಆದರೆ, ಕೆಲ ಕಲಾವಿದರು ಬಾಲಿವುಡ್ಗೆ ಕಾಲಿಡೋಕೆ ನಿರಾಕರಿಸಿದ್ದಾರೆ. ಇನ್ನೂ ಕೆಲವರು ಮೊದಲು ನಿರಾಕರಿಸಿ ನಂತರ ಒಳ್ಳೆಯ ಆಫರ್ ಸಿಕ್ಕಾಗ ಒಪ್ಪಿದ್ದಾರೆ. ಇದಕ್ಕೆ ಕೆಲವರು ಕಾರಣ ಕೂಡ ನೀಡಿದ್ದಾರೆ. ಆ ಬಗ್ಗೆ ಇಲ್ಲಿದೆ ಮಾಹಿತಿ.
ಪುನೀತ್ ರಾಜ್ಕುಮಾರ್ ಅವರು ಸ್ಟಾರ್ ಹೀರೋಗಳಲ್ಲಿ ಒಬ್ಬರಾಗಿದ್ದರು. ಅವರು ಕನ್ನಡದ ಸಿನಿಮಾಗಳಲ್ಲಿ ನಟಿಸಿದ್ದಾರೆ. ಅವರಿಗೆ ಇರೋ ಕನ್ನಡ ಪ್ರೇಮ ಅತೀವವಾದದ್ದು. ಅವರು ಹಿಂದಿ ಸಿನಿಮಾ ಆಫರ್ ರಿಜೆಕ್ಟ್ ಮಾಡಿದ್ದರಂತೆ! ಹೌದು, ಸಲ್ಮಾನ್ ಖಾನ್ ನಟನೆಯ ‘ಬಜರಂಗಿ ಭಾಯಿಜಾನ್’ ಸಿನಿಮಾದಲ್ಲಿ ನಟಿಸೋಕೆ ಪುನೀತ್ಗೆ ಮೊದಲು ಆಫರ್ ನೀಡಲಾಗಿತ್ತು. ಆದರೆ, ಇದನ್ನು ಅವರು ನಿರಕಾರಿಸಿದ್ದರು. ರಾಕ್ಲೈನ್ ವೆಂಕಟೇಶ್, ಸಲ್ಮಾನ್ ಖಾನ್ ಒಟ್ಟಾಗಿ ಸಿನಿಮಾ ನಿರ್ಮಾಣ ಮಾಡಿದ್ದರು.
‘ಕೆಜಿಎಫ್ 2’ ಚಿತ್ರದ ಮೂಲಕ ಯಶ್ ಅವರು ದೊಡ್ಡ ಮಟ್ಟದ ಜನಪ್ರಿಯತೆ ಪಡೆದರು. ಈ ಚಿತ್ರ ಪ್ಯಾನ್ ಇಂಡಿಯಾ ಮಟ್ಟದಲ್ಲಿ ರಿಲೀಸ್ ಆಗಿ ಸಾವಿರಾರು ಕೋಟಿ ರೂಪಾಯಿ ಬಾಚಿಕೊಂಡಿತು. ಇದರಿಂದ ಸಹಜವಾಗಿಯೇ ಯಶ್ ಖ್ಯಾತಿ ಹೆಚ್ಚಿತು. ಅವರಿಗೆ ಬೇರೆ ಬೇರೆ ಭಾಷೆಗಳಿಂದ ಆಫರ್ ಬರೋಕೆ ಆರಂಭವಾದವು. ಬಾಲಿವುಡ್ನಲ್ಲಿ ಸಿದ್ಧವಾಗುತ್ತಿರುವ ‘ರಾಮಾಯಣ’ ಚಿತ್ರದಲ್ಲಿ ಯಶ್ಗೆ ರಾವಣನ ಪಾತ್ರದಲ್ಲಿ ನಟಿಸೋಕೆ ಆಫರ್ ನೀಡಲಾಗಿತ್ತು ಎನ್ನಲಾಗಿತ್ತು. ಆದರೆ, ಇದನ್ನು ಅವರು ರಿಜೆಕ್ಟ್ ಮಾಡಿದ್ದರು.
ನಟಿ ಅನುಷ್ಕಾ ಶೆಟ್ಟಿ ಅವರಿಗೆ ದಕ್ಷಿಣ ಭಾರತದಲ್ಲಿ ಸಖತ್ ಬೇಡಿಕೆ ಇದೆ. ‘ಬಾಹುಬಲಿ’, ‘ಭಾಗಮತಿ’ ಅಂಥ ಹಿಟ್ ಚಿತ್ರಗಳನ್ನು ನೀಡಿದ ಖ್ಯಾತಿ ಅವರಿಗೆ ಇದೆ. ಅವರು ಈವರೆಗೆ ಬಾಲಿವುಡ್ ಸಿನಿಮಾ ಮಾಡಿಲ್ಲ. 2011ರಲ್ಲಿ ರಿಲೀಸ್ ಆದ ಹಿಂದಿಯ ‘ಸಿಂಗಂ’ ಚಿತ್ರದಲ್ಲಿ ನಟಿಸೋಕೆ ಅವಕಾಶ ನೀಡಲಾಗಿತ್ತು. ಆದರೆ, ಅವರು ಆಫರ್ ರಿಜೆಕ್ಟ್ ಮಾಡಿದರು. ಅಜಯ್ ದೇವಗನ್ ಈ ಚಿತ್ರದ ಹೀರೋ.
ಮಹೇಶ್ ಬಾಬು ಅವರ ಸಿನಿಮಾಗಳು ಈವರೆಗೆ ಪ್ಯಾನ್ ಇಂಡಿಯಾ ಮಟ್ಟದಲ್ಲಿ ರಿಲೀಸ್ ಆಗಿಲ್ಲ. ಆದಾಗ್ಯೂ ಅವರ ಜನಪ್ರಿಯತೆ ವಿಶ್ವಾದ್ಯಂತ ಹಬ್ಬಿದೆ. ಅವರು ಬಾಲಿವುಡ್ ಸಿನಿಮಾದಲ್ಲಿ ನಟಿಸೋಕೆ ನೋ ಎಂದಿದ್ದಾರೆ. ‘ನನಗೆ ಇಲ್ಲಿ ಕಂಫರ್ಟೆಬಲ್ ಅನಿಸುತ್ತದೆ’ ಎಂದು ಅವರು ಹೇಳಿದ್ದರು. ಅವರ ಹೇಳಿಕೆ ಚರ್ಚೆ ಹುಟ್ಟುಹಾಕಿತ್ತು.
‘ಪುಷ್ಪ 2’ ಕೆಲಸಗಳಲ್ಲಿ ಬ್ಯುಸಿ ಇರುವ ಅಲ್ಲು ಅರ್ಜುನ್ ಅವರು ಈ ಮೊದಲು ಬಾಲಿವುಡ್ ಆಫರ್ ರಿಜೆಕ್ಟ್ ಮಾಡಿದ್ದರು. ಕಬೀರ್ ಖಾನ್ ನಿರ್ದೇಶನದ ‘ಬಜರಂಗಿ ಭಾಯಿಜಾನ್’ ಚಿತ್ರದಲ್ಲಿ ನಟಿಸೋಕೆ ಅವರಿಗೆ ಆಫರ್ ನೀಡಲಾಗಿತ್ತು. ಆದರೆ, ಅದನ್ನು ನಿರಾಕರಿಸಿದ್ದರು.
ಮಲಯಾಳಂನ ಟ್ಯಾಲೆಂಟೆಡ್ ಹೀರೋಗಳಲ್ಲಿ ನಿವೀನ್ ಪೌಳಿ ಕೂಡ ಒಬ್ಬರು. ಅವರು ‘ಪ್ರೇಮಂ’ ‘ಬೆಂಗಳೂರು ಡೇಸ್’ ಮೊದಲಾದ ಚಿತ್ರಗಳ ಮೂಲಕ ಫೇಮಸ್ ಆಗಿದ್ದಾರೆ. ಸುಶಾಂತ್ ಸಿಂಗ್ ರಜಪೂತ್ ನಟಿಸಿದ್ದ ‘ಚಿಚೋರೆ’ ಸಿನಿಮಾನ ಮೊದಲು ನಿವೀನ್ ಪೌಳಿಗೆ ಆಫರ್ ಮಾಡಲಾಗಿತ್ತು. ಆದರೆ, ಇದನ್ನು ಅವರು ರಿಜೆಕ್ಟ್ ಮಾಡಿದ್ದರು. ಆ ಬಳಿಕ ಸುಶಾಂತ್ ಸಿಂಗ್ ರಜಪೂತ್ ನಟಿಸಿದರು.
ರಶ್ಮಿಕಾ ಮಂದಣ್ಣ ಅವರು ‘ಗುಡ್ಬೈ’ ಚಿತ್ರದ ಮೂಲಕ ಹಿಂದಿ ಚಿತ್ರರಂಗಕ್ಕೆ ಕಾಲಿಟ್ಟರು. ಅದಕ್ಕೂ ಮೊದಲೇ ಅವರಿಗೆ ಹಿಂದಿಯಲ್ಲಿ ನಟಿಸೋಕೆ ಆಫರ್ ನೀಡಲಾಗಿತ್ತು. ಹೌದು, ಹಿಂದಿಯ ‘ಜೆರ್ಸಿ’ ಸಿನಿಮಾದಲ್ಲಿ ನಟಿಸೋಕೆ ರಶ್ಮಿಕಾಗೆ ಅವಕಾಶ ನೀಡಲಾಗಿತ್ತು. ಆದರೆ, ಅವರು ಇದನ್ನು ರಿಜೆಕ್ಟ್ ಮಾಡಿದ್ದರು. ಬಾಲಿವುಡ್ನಲ್ಲಿ ಈ ಸಿನಿಮಾ ಸೋತಿತ್ತು. ಶಾಹಿದ್ ಕಪೂರ್ ಈ ಚಿತ್ರದ ಹೀರೋ ಆಗಿದ್ದರು. ಇದು ತೆಲುಗು ‘ಜೆರ್ಸಿ’ ಸಿನಿಮಾದ ರಿಮೇಕ್.
ಇದನ್ನೂ ಓದಿ: ‘ದರ್ಶನ್ ಮೇಲೆ ಕೋಪ ಇಲ್ಲ, ನಾವು ಕಿತ್ತಾಡಿಕೊಂಡಿಲ್ಲ’; ಬರ್ತ್ಡೇ ದಿನ ಖುಷಿ ಖುಷಿಯಿಂದ ಮಾತನಾಡಿದ ಸುದೀಪ್
‘ದಬಂಗ್ 3’ ಸಿನಿಮಾದಲ್ಲಿ ವಿಲನ್ ಪಾತ್ರ ಮಾಡೋಕೆ ದರ್ಶನ್ಗೆ ಈ ಮೊದಲು ಆಫರ್ ನೀಡಲಾಗಿತ್ತು ಎನ್ನಲಾಗಿದೆ. ಆದರೆ, ಅವರು ಅವಕಾಶವನ್ನು ನಿರಾಕರಿಸಿದ್ದರು. ದರ್ಶನ್ ಅವರು ಕನ್ನಡ ಚಿತ್ರಗಳಲ್ಲಿ ಮಾತ್ರ ನಟಿಸಿದ್ದಾರೆ. ಅವರಿಗೆ ಬಾಲಿವುಡ್ ಸಿನಿಮಾಗಳ ಮೇಲೆ ಯಾವುದೇ ಒಲವು ಇಲ್ಲ.
‘ಲಾಲ್ ಸಿಂಗ್ ಚಡ್ಡಾ’ ಸಿನಿಮಾದಲ್ಲಿ ಅತಿಥಿ ಪಾತ್ರ ಮಾಡೋಕೆ ವಿಜಯ್ ಸೇತುಪತಿಗೆ ಆಫರ್ ನೀಡಲಾಗಿತ್ತು. ಆದರೆ, ಇದನ್ನು ಅವರು ತಿರಸ್ಕರಿಸಿದ್ದರು. ಆ ಬಳಿಕ ಅವರು ‘ಜವಾನ್’, ‘ಮೇರಿ ಕ್ರಿಸ್ಮಸ್’ ಸಿನಿಮಾಗಳನ್ನು ಒಪ್ಪಿಕೊಂಡರು. ಸದ್ಯ ಹಲವು ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ‘ಜವಾನ್’ ಚಿತ್ರ ಸೆಪ್ಟೆಂಬರ್ 7ರಂದು ರಿಲೀಸ್ ಆಗುತ್ತಿದೆ.
ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ