‘ಲೂಸಿಯಾ’ ಚಿತ್ರಕ್ಕೆ ದಶಕದ ಸಂಭ್ರಮ: ಮರು ಬಿಡುಗಡೆ ಹೊಸ್ತಿಲಲ್ಲಿ ಇಂಟರೆಸ್ಟಿಂಗ್ ಮಾಹಿತಿ ಹಂಚಿಕೊಂಡ ಪವನ್ ಕುಮಾರ್
ಭಾರಿ ಜನಮನ್ನಣೆ ಗಳಿಸಿದ್ದ ‘ಲೂಸಿಯಾ’ ಸಿನಿಮಾ ಬಿಡುಗಡೆಯಾಗಿ 10 ವರ್ಷಗಳು ಕಳೆದಿವೆ. ಆ ಪ್ರಯುಕ್ತ ಥಿಯೇಟರ್ನಲ್ಲಿ ಮತ್ತೊಮ್ಮೆ ಬಿಡುಗಡೆ ಆಗುತ್ತಿದೆ ಎಂಬುದು ವಿಶೇಷ. ಈ ಕುರಿತು ನಿರ್ದೇಶಕ ಪವನ್ ಕುಮಾರ್ ‘ಟಿವಿ9 ಕನ್ನಡ ಡಿಜಿಟಲ್’ ಜೊತೆ ಮಾತನಾಡಿದ್ದಾರೆ. ಈ ಹತ್ತು ವರ್ಷಗಳ ಜರ್ನಿಯನ್ನು ಅವರು ಮೆಲುಕು ಹಾಕಿದ್ದಾರೆ.
‘ಲೂಸಿಯಾ’ ಸಿನಿಮಾ (Lucia Movie) 2013ರ ಸೆಪ್ಟೆಂಬರ್ 6ರಂದು ಬಿಡುಗಡೆಯಾಗಿ ಗಮನ ಸೆಳೆದಿತ್ತು. ಅತ್ಯಂತ ಕಡಿಮೆ ಬಜೆಟ್ನಲ್ಲಿ ಮೂಡಿಬಂದ ಸಿನಿಮಾ ಆಗಿದ್ದರೂ ಕೂಡ ತುಂಬ ಹೊತನದಿಂದ ಕೂಡಿತ್ತು. ಕನ್ನಡದ ಮೊದಲ ಕ್ರೌಡ್ ಫಂಡಿಂಗ್ ಸಿನಿಮಾ, ವಿನೂತನ ಪ್ರಯೋಗದಿಂದ ಪ್ರೇಕ್ಷಕರ ಮೆಚ್ಚುಗೆ ಗಳಿಸಿತ್ತು. ವಾಸ್ತವ ಹಾಗೂ ಕನಸಿನ ನಡುವಿನ ಕಥೆಯನ್ನು ಕಪ್ಪು-ಬಿಳುಪು ಹಾಗೂ ಕಲರ್ ದೃಶ್ಯಗಳ ಮೂಲಕ ‘ಲೂಸಿಯಾ’ ಸಿನಿಮಾವನ್ನು ಕಟ್ಟಿಕೊಡಲಾಗಿತ್ತು. ಮ್ಯೂಸಿಕಲ್ ಹಿಟ್ ಆದ ಈ ‘ಲೂಸಿಯಾ’ ಸಿನಿಮಾಕ್ಕೆ ಬುಧವಾರ (ಸೆ.6) ದಶಕದ (10 Years of Lucia Movie) ಸಂಭ್ರಮ. ಹತ್ತು ವರ್ಷದ ಸುದೀರ್ಘ ಸಮಯದ ನಂತರ ಸಿನಿಮಾ ಮತ್ತೊಮ್ಮೆ ತೆರೆಮೇಲೆ ಬರುತ್ತಿದೆ. ಈ ಸಂಭ್ರಮದಲ್ಲಿ ನಿರ್ದೇಶಕ ಪವನ್ ಕುಮಾರ್ (Pawan Kumar) ಅವರು ‘ಟಿವಿ9 ಕನ್ನಡ ಡಿಜಿಟಲ್’ ಜೊತೆ ಮಾತನಾಡಿದ್ದಾರೆ.
ಹತ್ತು ವರ್ಷ ಕಳೆದ ನಂತರವೂ ‘ಲೂಸಿಯಾ’ ಸಿನಿಮಾದ ಬಗ್ಗೆ ಜನ ಖುಷಿಯಿಂದ ಮಾತಾಡ್ತಾರೆ. ಜನರ ಪ್ರತಿಕ್ರಿಯೆ ನೋಡಿ ಹೇಗೆ ಅನಿಸುತ್ತದೆ?
ತುಂಬಾ ಖುಷಿ ಆಗತ್ತೆ. ಒಂಥರಾ ಜನರೇ ಮಾಡಿರೋ ಸಿನಿಮಾ. ಹತ್ತು ವರ್ಷ ಆದ ಮೇಲೂ ಇದಕ್ಕೆ ಇಷ್ಟೊಂದು ಬೆಲೆ ಇದೆ ಅಂದ್ರೆ ಇದು ನಮಗೆಲ್ಲ ಹೆಮ್ಮೆ ವಿಷಯ. ಇದು ಕೇವಲ ನಂಗೆ ಮಾತ್ರ ಹೆಮ್ಮೆ ಅಲ್ಲ. ನಮ್ಮ ಇಡೀ ತಂಡಕ್ಕೆ ಹಾಗೂ ಯಾರೆಲ್ಲ ಇದರಲ್ಲಿ ಭಾಗಿಯಾಗಿದ್ದರೋ ಎಲ್ಲರಿಗೂ ಈ ಸಿನಿಮಾ ಒಂಥರಾ ಹೆಮ್ಮೆ.
ಎಷ್ಟು ಕಡೆ ‘ಲೂಸಿಯಾ’ ಸಿನಿಮಾವನ್ನು ಮರು ಬಿಡುಗಡೆ ಮಾಡ್ಬೇಕು ಅಂತ ಇದೀರಾ?
10ರಿಂದ 15 ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗುತ್ತೆ. ಈ ವಾರ ತುಂಬಾ ಬಿಗ್ ಬಜೆಟ್ ಸಿನಿಮಾಗಳು ಬಿಡುಗಡೆ ಆಗುವುದರಿಂದ ತುಂಬಾ ಚಿತ್ರಮಂದಿರಗಳಲ್ಲೇನೂ ನಮ್ಮ ಸಿನಿಮಾವನ್ನು ರಿಲೀಸ್ ಮಾಡಲ್ಲ. ಒಳ್ಳೆಯ ರೆಸ್ಪಾನ್ಸ್ ಸಿಕ್ಕಿದರೆ ಚಿತ್ರಮಂದಿರದ ಸಂಖ್ಯೆಯನ್ನು ಹೆಚ್ಚು ಮಾಡಬಹುದು.
‘ಲೂಸಿಯಾ’ ಮರು ಬಿಡುಗಡೆಗೆ ಜನ ಮನವಿ ಮಾಡಿದ್ರಾ ಅಥವಾ 10 ವರ್ಷಗಳು ತುಂಬಿದ ಕಾರಣಕ್ಕೆ ರೀ-ರಿಲೀಸ್ ಮಾಡುತ್ತಿದ್ದೀರಾ?
ಚಿತ್ರಕ್ಕೆ 10 ವರ್ಷ ತುಂಬಿರೋ ಖುಷಿಗೆ ಬಿಡುಗಡೆ ಮಾಡಬೇಕು ಅಂತ ಪ್ಲಾನ್ ಇತ್ತು. ಹತ್ತು ವರ್ಷ ಆದ್ಮೇಲೆ ಜನರು ಈ ಸಿನಿಮಾವನ್ನು ಹೇಗೆ ನೋಡಬಹುದು ಅಂತ ಕುತೂಹಲ ಇದೆ. ಆ ಖುಷಿಗಾಗಿ ಸಿನಿಮಾ ಬಿಡುಗಡೆ ಮಾಡುತ್ತಿದ್ದೇವೆ.
ಇದನ್ನೂ ಓದಿ: ‘ಲೂಸಿಯಾ’ ಸಿನಿಮಾಗೆ 10 ವರ್ಷ; ಸೆ.6ಕ್ಕೆ ಚಿತ್ರಮಂದಿರದಲ್ಲಿ ಮರು ಬಿಡುಗಡೆ
ಈ ಹತ್ತು ವರ್ಷಗಳಲ್ಲಿ ಟೆಕ್ನಾಲಜಿಯಲ್ಲಿ ತುಂಬಾ ಬದಲಾವಣೆಗಳು ಆಗಿದೆ. ಆದ್ದರಿಂದ ಬಿಡುಗಡೆ ಮಾಡುವಾಗ ‘ಲೂಸಿಯಾ’ ಸಿನಿಮಾದಲ್ಲಿ ಏನಾದ್ರೂ ಬದಲಾವಣೆ ಇರತ್ತಾ?
ಇಲ್ಲಾ.. ಸಿನಿಮಾ ಮೊದಲು ಹೇಗೆ ಬಿಡುಗಡೆ ಆಗಿತ್ತೋ ಹಾಗೆಯೇ ಈ ಬಾರಿ ಕೂಡ ಬಿಡುಗಡೆ ಆಗುತ್ತಿದೆ. ಡಿಜಿಟಲ್ ಕಾಲದಲ್ಲಿ ಅಷ್ಟೊಂದು ಬದಲಾವಣೆ ಗೊತ್ತಾಗಲ್ಲ. ಅದು ಹೇಗಿದೆಯೋ ಹಾಗೆಯೇ ಜನ ಇಷ್ಟಪಡ್ತಾರೆ ಅಂತ ಅಂದುಕೊಂಡಿದ್ದೇನೆ.
‘ಲೂಸಿಯಾ’ ಸಿನಿಮಾದ ಚಿತ್ರೀಕರಣದಲ್ಲಿ ಡಿಎಸ್ಎಲ್ಆರ್ ಕ್ಯಾಮೆರಾ ಬಳಕೆ ಮಾಡ್ತಾ ಏನೇನು ಸವಾಲುಗಳನ್ನು ಎದುರಿಸಬೇಕಾಯ್ತು?
ಚಿತ್ರೀಕರಣವನ್ನು ತುಂಬಾ ಇನೋವೇಟಿವ್ ಆಗಿಯೇ ಮಾಡಬೇಕಾಯಿತು. ಪ್ರತಿಯೊಂದು ವಿಷಯವನ್ನೂ ರಿಸರ್ಚ್ ಮಾಡಿ ಶೂಟ್ ಮಾಡ್ತಾ ಇದ್ದೆವು. ಸಿನಿಮಾ ಕ್ಯಾಮೆರಾದ ಕ್ವಾಲಿಟಿಗೆ ಮ್ಯಾಚ್ ಮಾಡಬೇಕಾದರೆ ಪ್ರತಿಯೊಂದು ಸೀನ್ಗಳನ್ನು ತುಂಬಾ ಟೈಮ್ ತಗೊಂಡು ಶೂಟ್ ಮಾಡಿದ್ದೆವು. ಸಿನಿಮಾ ನೋಡುವಾಗ ಡಿಎಸ್ಎಲ್ಆರ್ ಕ್ಯಾಮೆರಾ ಅಂತೇನೂ ಗೊತ್ತಾಗಬಾರದು ಎಂಬ ಉದ್ದೇಶ ನಮ್ಮದಾಗಿತ್ತು. ತುಂಬಾ ಟೈಮ್ ತಗೊಂಡು ಮಾಡಿದಂತಹ ಜರ್ನಿ ಅದು.
ಇದನ್ನೂ ಓದಿ: ಕೆಜಿಎಫ್, ಕಾಂತಾರ, ಲೂಸಿಯಾ ಸಿನಿಮಾಗಳ ಹೊಗಳಿದ ತಮಿಳು ನಟರು
2023ರಲ್ಲಿ ‘ಲೂಸಿಯಾ’ ಸಿನಿಮಾ ಬಂದ್ರೆ ಪ್ಯಾನ್ ಇಂಡಿಯಾ ಸಿನಿಮಾ ಆಗಿರುತಿತ್ತಾ?
‘ಲೂಸಿಯಾ’ ಸಿನಿಮಾ ಆಗ್ಲೇ ಪ್ಯಾನ್ ಇಂಡಿಯಾ ಸಿನಿಮಾ ಆಗಿತ್ತು ಅಂತ ಹೇಳ್ತಾರೆ. ಸಿನಿಮಾ ಬೇರೆ ಬೇರೆ ದೇಶದಲ್ಲಿ, ರಾಜ್ಯದಲ್ಲಿ ಬಿಡುಗಡೆಯಾಗಿತ್ತು ಆದ್ದರಿಂದ ಆಗ್ಲೇ ಅದು ಪ್ಯಾನ್ ಇಂಡಿಯಾ ಸಿನಿಮಾ ಅಂತ ಕರಿಬಹುದು. ಆಗ ಪ್ಯಾನ್ ಇಂಡಿಯಾ ಎನ್ನುವ ಪದ ಬಳಕೆಯಲ್ಲಿರಲಿಲ್ಲ. ಈಗಿನ ಪ್ಯಾನ್ ಇಂಡಿಯಾ ಸಿನಿಮಾಗಳು ರಿಲೀಸ್ ಆಗುವಷ್ಟು ದೊಡ್ಡ ಮಟ್ಟದಲ್ಲಿ ‘ಲೂಸಿಯಾ’ ರಿಲೀಸ್ ಆಗಿರಲಿಲ್ಲ. ಆದರೆ ದೆಹಲಿ, ಛಂಡೀಗಡ್ ಮುಂತಾದ ಕಡೆ ಸಿನಿಮಾ ನೋಡಿ ಮೆಚ್ಚಿಕೊಂಡಿದ್ದರು.
‘ಲೂಸಿಯಾ’ ಸಿನಿಮಾದ ಚಿತ್ರೀಕರಣದಲ್ಲಿ ನಡೆದಂತಹ ಯಾವ ಘಟನೆ ತುಂಬಾ ನೆನಪಿಗೆ ಬರುತ್ತೆ?
ಮೊದಲ ದಿನ ನಾವು ಚಿತ್ರೀಕರಣ ಮಾಡಿದಾಗಲೇ ಇದನ್ನ ಮಾಡಿ ಮಗಿಸಬಹುದು ಅಂತ ಅನಿಸಿದ್ದು. ಕಡಿಮೆ ಬಜೆಟ್, ಡಿಎಸ್ಎಲ್ಆರ್ ಕ್ಯಾಮೆರಾದಲ್ಲಿ ಸಿನಿಮಾ ಶೂಟ್ ಮಾಡ್ಬೇಕು ಅಂತ ಆಗಿದ್ದರಿಂದ ಸಿನಿಮಾ ಚೆನ್ನಾಗಿ ಮೂಡಿಬರತ್ತೆ ಅನ್ನೋ ಭರವಸೆಯಿರಲಿಲ್ಲ. ಆದರೆ ಮೊದಲ ದಿನದ ಶೂಟಿಂಗ್ ಮಾಡಿದಾಗಲೇ ಶೂಟಿಂಗ್ ಮುಗಿಯತ್ತೆ ಅನ್ನೋ ಭರವಸೆ ಬಂದಿದ್ದು. ಆದ್ದರಿಂದ ಮೊದಲ ದಿನವೇ ತುಂಬಾ ಮೆಮೊರೆಬಲ್.
ಸಿನಿಮಾದ ಹಾಡುಗಳನ್ನು ಜನರು ಇಂದಿಗೂ ಗುನುಗುತ್ತಿದ್ದಾರೆ. ಮ್ಯೂಸಿಕಲ್ ಹಿಟ್ ಹಿಂದಿನ ಜರ್ನಿ ಹೇಗಿತ್ತು?
ಎಲ್ಲವನ್ನೂ ಕಾಲವೇ ನಿರ್ಧಾರ ಮಾಡಿದಂತಿತ್ತು. ಸಿನಿಮಾ ಹೀಗೆ ಮ್ಯೂಸಿಕಲ್ ಹಿಟ್ ಮಾಡ್ಬೇಕು ಅಂತ ಪ್ಲಾನ್ ಏನೂ ಇರಲಿಲ್ಲ. ಈ ಜರ್ನಿಯಲ್ಲಿ ಮೊದಲು ಪೂರ್ಣ (ಪೂರ್ಣಚಂದ್ರ ತೇಜಸ್ವಿ) ಸಿಕ್ಕಿದರು. ಅವರಿಂದ ನವೀನ್ ಸಜ್ಜು, ಅನನ್ಯಾ ಭಟ್ ಕೂಡ ಸೇರಿಕೊಂಡರು. ಇಂದು ಎಲ್ಲರ ಜನಪ್ರಿಯತೆ ನೋಡಿ ಖುಷಿಯಾಗುತ್ತೆ. ಎಲ್ಲರೊಂದಿಗೆ ಸಂಬಂಧ ಹಾಗೆಯೇ ಇದೆ. ಎಲ್ಲರಿಗೂ ಮೊದಲ ಸಿನಿಮಾ ಆಗಿದ್ದರಿಂದ ಬಹಳ ಮುತುವರ್ಜಿಯಿಂದ ಕೆಲಸ ಮಾಡಿದ್ದೆವು.
ಇದನ್ನೂ ಓದಿ: Dhoomam Review: ಸಿಗರೇಟ್ ಬಗ್ಗೆ ಸಂದೇಶ ನೀಡಲು ಎಷ್ಟೆಲ್ಲ ಸರ್ಕಸ್; ಸರಳವಾಗಿಲ್ಲ ‘ಧೂಮಂ’
‘ಲೂಸಿಯಾ’ ಸಿನಿಮಾದ ಚಿತ್ರೀಕರಣದ ಸಮಯದಲ್ಲಾದ ಯಾವ ಘಟನೆ ತುಂಬಾ ಪಾಠ ಕಲಿಸಿದೆ?
ಕೆಲವೊಂದು ಸಮಯದಲ್ಲಿ ಕಥೆ ಬರೆದುಕೊಂಡ ಹಾಗೆ ಶೂಟ್ ಮಾಡೋಕೆ ಸಾಧ್ಯವಾಗ್ತಾ ಇರಲಿಲ್ಲ. ನಮ್ಮಲ್ಲಿ ಕಡಿಮೆ ರಿಸೋರ್ಸ್ ಇದ್ದದ್ದರಿಂದ ಅದನ್ನೇ ಬಳಸಿಕೊಂಡು ಹೇಗೆ ಕ್ರಿಯೇಟಿವ್ ಆಗಿ ಹೇಳಬಹುದು ಅಂತ ಯೋಚನೆ ಮಾಡ್ತಿದ್ವಿ. ಈಗಲೂ ಸ್ಕ್ರಿಪ್ಟ್ ನೋಡಿದರೆ ಬರೆದುಕೊಂಡಿದ್ದಕ್ಕಿಂತ, ಸಿನಿಮಾದಲ್ಲಿ ತೋರಿಸಿರುವುದು ಬೇರೆ ರೀತಿಯಲ್ಲಿಯೇ ಇದೆ.
ಬಜೆಟ್ನಲ್ಲಿ ಏನಾದ್ರೂ ಬದಲಾವಣೆ ಇದ್ದಿದ್ದರೆ ‘ಲೂಸಿಯಾ’ ಸಿನಿಮಾ ಬೇರೆ ರೀತಿ ಮೂಡಿಬರುತ್ತಿತ್ತಾ?
ಅದರ ಬಗ್ಗೆ ಈಗ ಹೇಳೊಕೆ ಸಾಧ್ಯ ಇಲ್ಲ. ಪ್ರಾಯಶಃ ಕಡಿಮೆ ಬಜೆಟ್ ಇದ್ದದ್ದರಿಂದಲೇ ಸಿನಿಮಾ ಹೆಚ್ಚು ಕ್ರಿಯೇಟಿವ್ ಆಗಿ ಮೂಡಿಬಂದಿದೆ.
ಕ್ರೌಡ್ ಫಂಡೆಡ್ ಸಿನಿಮಾದ ಐಡಿಯಾ ಹೇಗೆ ಬಂತು?
ರಿಸಲ್ಟ್ ಬಗ್ಗೆ ತಲೆಕೆಡಿಸಿಕೊಳ್ಳದೇ ಮಾಡಿದ ಸಿನಿಮಾ ‘ಲೂಸಿಯಾ’. ಕ್ರೌಡ್ ಫಂಡಿಂಗ್ ಅನ್ನೋ ಪದ ಬಳಕೆ ಮಾಡ್ತಾರೆ ಅಂತನೂ ಗೊತ್ತಿರಲಿಲ್ಲ. ನಾವೆಲ್ಲಾ ಸೇರಿ ಹಣ ಹಾಕಿ ಸಿನಿಮಾ ಮಾಡೋಣ, ಎಲ್ಲರಿಗೂ ಒಂದು ಕಾಪಿ ಕೊಟ್ಟು ನೋಡಣ ಅಂತಿದ್ದೆವು. ಚಿತ್ರಮಂದಿರಗಳಲ್ಲೆಲ್ಲಾ ಬಿಡುಗಡೆ ಆಗತ್ತೆ ಅಂತ ಭಾವಿಸಿರಲಿಲ್ಲ. ಆದರೆ ಒಂದೊಂದೆ ಸೇರಿ ಸಿನಿಮಾ ಮೂಡಿಬಂತು. ಆಮೇಲೆ ಇದಕ್ಕೆ ಕ್ರೌಡ್ ಫಂಡಿಂಗ್ ಅಂತಾರೆ ಎಂದು ಗೊತ್ತಾಯ್ತು.
ಇದನ್ನೂ ಓದಿ: ಸೀರೆ ಉಟ್ಟು ಪೋಸ್ ಕೊಟ್ಟ ನಟಿ ಶ್ರುತಿ ಹರಿಹರನ್
ಇತ್ತೀಚೆಗೆ ನೀವು, ಶ್ರುತಿ ಹರಿಹರ್, ಸತೀಶ್ ನಿನಾಸಂ ಮತ್ತೆ ಮೀಟ್ ಆಗಿದ್ದಾಗಿನ ಕ್ಷಣ ಹೇಗಿತ್ತು?
ಬಹಳ ವರ್ಷಗಳ ನಂತರ ಭೇಟಿಯಾಗಿದ್ದು ಖುಷಿ ಎನಿಸಿತು. ಎಲ್ಲರ ಜೀವನ ಬದಲಾಗಿ. ಎಲ್ಲರಿಗೂ ಮಕ್ಕಳಾಗಿವೆ. ಆದ್ದರಿಂದ ಆ ವಿಷಯದ ಕುರಿತಾಗಿಯೇ ಹೆಚ್ಚು ಮಾತುಕತೆ ನಡೆಯಿತು.
10 ವರ್ಷದಲ್ಲಿ ‘ಲೂಸಿಯಾ’ ಸಿನಿಮಾಗೆ ಸಿಕ್ಕ ಬೆಸ್ಟ್ ಪ್ರತಿಕ್ರಿಯೆ ಏನು?
ಮಾಲ್ ಅಥವಾ ರೆಸ್ಟೋರೆಂಟ್ಗೆ ಹೋದಾಗ 10 ದಿನಕ್ಕೆ ಒಮ್ಮೆಯಾದರೂ ಜನ ಸಿಕ್ಕಿ ನಾನು ‘ಲೂಸಿಯಾ’ ಸಿನಿಮಾಕ್ಕೆ ಫಂಡಿಂಗ್ ಮಾಡಿದ್ದೆ ಎನ್ನುತ್ತಾರೆ. ಆದ್ರೆ ಅದಕ್ಕಿಂತ ಹೆಚ್ಚಾಗಿ ನನ್ನ ಫ್ರೆಂಡ್, ನನ್ನ ಸಂಬಂಧಿಕರು ಸಿನಿಮಾದಲ್ಲಿ ಹಣ ಹೂಡಿದ್ದರು ಅಂತಾರೆ. ಹತ್ತು ವರ್ಷದ ನಂತರವೂ ಜನ ‘ಲೂಸಿಯಾ’ ಚಿತ್ರವನ್ನು ನಮ್ಮದು ಎಂದು ಪ್ರೀತಿಸುತ್ತಾರಲ್ಲ ಅದೇ ತುಂಬಾ ಖುಷಿಯಾಗುತ್ತೆ.
ಇದನ್ನೂ ಓದಿ: ‘ಮ್ಯಾಟ್ನಿ’ ಶೂಟಿಂಗ್ ಸೆಟ್ನಲ್ಲಿ ಸತೀಶ್ ‘ನೀನಾಸಂ’, ರಚಿತಾ ರಾಮ್; ಇಲ್ಲಿವೆ ಫೋಟೋಗಳು
‘ಲೂಸಿಯಾ ಪಾರ್ಟ್ 2’ ಬಗ್ಗೆ ಏನಾದ್ರೂ ಐಡಿಯಾ ಇದೆಯಾ?
ಇಲ್ಲಿಯವರೆಗೂ ಆ ಕಥೆಯನ್ನು ಮುಂದುವರಿಸಬೇಕು ಅಂತ ಅನ್ನಿಸಲಿಲ್ಲ. ಮುಂದೆ ಹಾಗೆನಾದ್ರೂ ಅನ್ನಿಸಿದರೆ ಆಗ ನೋಡೋಣ.
ನಿಮ್ಮ ಮುಂದಿನ ಯೋಜನೆಗಳೇನು?
ಸದ್ಯಕ್ಕೆ ಯಾವುದೇ ಯೋಜನೆಗಳಿಲ್ಲ. ಸ್ವಲ್ಪ ದಿನ ಯಾವುದೇ ಹೊಸ ಪ್ರಾಜೆಕ್ಟ್ ಕೈಗೆತ್ತಿಕೊಳ್ಳುವುದಿಲ್ಲ. ಸದ್ಯಕ್ಕೆ ‘ಲೂಸಿಯಾ’ ಸಿನಿಮಾ 10 ವರ್ಷದ ನಂತರ ಮತ್ತೇ ನೋಡಿದಾಗ, ಹೇಗೆ ಅನ್ಸತ್ತೆ ಅಂತ ನೋಡೋದು ಅಷ್ಟೇ.
ಸಂದರ್ಶನ: ಸುಚೇತಾ ಹೆಗಡೆ
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 1:07 pm, Tue, 5 September 23