ದರ್ಶನ್ಗೆ ಊಟ, ಹಾಸಿಗೆ, ಅರ್ಜಿ ಹಿಂಪಡೆದ ವಕೀಲರು, ಕಾರಣ?
ರೇಣುಕಾ ಸ್ವಾಮಿ ಕೊಲೆ ಪ್ರಕರಣದಲ್ಲಿ ಜೈಲು ಸೇರಿರುವ ದರ್ಶನ್ ತೂಗುದೀಪಗೆ ಮನೆಯಿಂದ ಆಹಾರ, ಹಾಸಿಗೆ, ಪುಸ್ತಕಗಳನ್ನು ತರಿಸಿಕೊಳ್ಳಲು ಅವಕಾಶಕ್ಕಾಗಿ ಕೋರಿ ಸಲ್ಲಿಸಲಾಗಿದ್ದ ರಿಟ್ ಅರ್ಜಿಯನ್ನು ತಾಂತ್ರಿಕ ಕಾರಣಗಳಿಂದ ವಕೀಲರು ಹಿಂಪಡೆದಿದ್ದಾರೆ.
ರೇಣುಕಾ ಸ್ವಾಮಿ ಕೊಲೆ ಪ್ರಕರಣದ ಆರೋಪಿ ದರ್ಶನ್ ತೂಗುದೀಪಗೆ ಮನೆ ಊಟ ಮತ್ತು ಮಲಗಲು ಮನೆಯಿಂದ ಹಾಸಿಗೆ ತರಿಸಿಕೊಳ್ಳಲು ಅವಕಾಶ ನೀಡುವಂತೆ ಸಲ್ಲಿಸಲಾಗಿದ್ದ ಅರ್ಜಿಯನ್ನು ವಕೀಲರು ಹಿಂಪಡೆದಿದ್ದಾರೆ. ಪ್ರಕರಣವು ಮ್ಯಾಜಿಸ್ಟ್ರೇಟ್ ನ್ಯಾಯಾಲಯದಲ್ಲಿ ವಿಚಾರಣೆಯಲ್ಲಿತ್ತು, ಆದರೆ ಇಲ್ಲಿ ಅರ್ಜಿಯನ್ನು ತಾಂತ್ರಿಕ ಕಾರಣದಿಂದ ವಕೀಲರು ಹಿಂಪಡೆದಿದ್ದು, ಇನ್ನೊಂದು ಹೊಸ ಅರ್ಜಿಯನ್ನು ಸಲ್ಲಿಸಲೆಂದೇ ಈ ಅರ್ಜಿಯನ್ನು ಹಿಂಪಡೆಯಲಾಗಿದೆ ಎನ್ನಲಾಗುತ್ತಿದೆ.
ಪ್ರಕರಣದ ಕುರಿತಾಗಿ ಮ್ಯಾಜಿಸ್ಟ್ರೇಟ್ ಕೋರ್ಟ್ ನೀಡಿರುವ ಆದೇಶ ಪ್ರಶ್ನಿಸಬೇಕಿರುವ ಹಿನ್ನೆಲೆಯಲ್ಲಿ ಈ ಹಿಂದಿನ ಹಳೆಯ ಅರ್ಜಿಯನ್ನು ವಾಪಸ್ ಪಡೆದು ಹೊಸದಾಗಿ ಅರ್ಜಿ ಸಲ್ಲಿಸಬೇಕಾಗಿರುವ ಕಾರಣದಿಂದಾಗಿ ಅರ್ಜಿಗಳನ್ನು ವಾಪಸ್ ಪಡೆಯಲಾಗಿದೆ. ಮ್ಯಾಜಿಸ್ಟ್ರೇಟ್ ಅರ್ಜಿಯನ್ನು ದರ್ಶನ್ ಪರ ವಕೀಲರು ಹೈಕೋರ್ಟ್ನಲ್ಲಿ ಪ್ರಶ್ನೆ ಮಾಡುವ ಸಾಧ್ಯತೆ ಇದೆ. ಆದರೆ ಈಗಿನ ಅರ್ಜಿಯನ್ನು ಮೊದಲಿಗೆ ಹೈಕೋರ್ಟ್ನಲ್ಲಿಯೇ ಸಲ್ಲಿಸಿದ್ದರು. ಆದರೆ ಅರ್ಜಿಯನ್ನು ಹೈಕೋರ್ಟ್, ಮ್ಯಾಜಿಸ್ಟ್ರೇಟ್ ನ್ಯಾಯಾಲಯಕ್ಕೆ ಕಳಿಸಿತ್ತು, ಹಾಗಾಗಿ ಈಗ ಹೊಸ ಅರ್ಜಿ ಸಲ್ಲಿಸಿ, ಬಳಿಕ ಈಗ ಮ್ಯಾಜಿಸ್ಟ್ರೇಟರ್ ನೀಡಿರುವ ಆದೇಶವನ್ನು ಹೈಕೋರ್ಟ್ನಲ್ಲಿ ಪ್ರಶ್ನೆ ಮಾಡುವ ಸಾಧ್ಯತೆ ಇದೆ.
ಜೈಲಿನಲ್ಲಿ ಮನೆ ಊಟ, ಮಲಗಲು ಹಾಸಿಗೆ ಮತ್ತು ಕೆಲವು ಪುಸ್ತಕಗಳನ್ನು ತರಿಸಿಕೊಳ್ಳಲು ಅವಕಾಶ ಕೊಡಬೇಕೆಂದು ರಿಟ್ ಅರ್ಜಿಯನ್ನು ಹೈಕೋರ್ಟ್ನಲ್ಲಿ ಸಲ್ಲಿಸಲಾಗಿತ್ತು. ಅರ್ಜಿಯ ವಿಚಾರಣೆ ನಡೆಸಿದ ಹೈಕೋರ್ಟ್, ದರ್ಶನ್ಗೆ ಅವಕಾಶ ಕೊಟ್ಟಲ್ಲಿ ಎಲ್ಲ ಕೈದಿಗಳೂ ಅದನ್ನೇ ಕೇಳುತ್ತಾರೆ ಎಂದಿದ್ದರು. ಅಲ್ಲದೆ ಪ್ರಕರಣವನ್ನು ಮ್ಯಾಜಿಸ್ಟ್ರೇಟ್ ನ್ಯಾಯಾಲಯದಲ್ಲಿ ಇತ್ಯರ್ಥಪಡಿಸಿಕೊಳ್ಳುವಂತೆ ಸೂಚಿಸಿದ್ದರು. ಮ್ಯಾಜಿಸ್ಟ್ರೇಟ್ ನ್ಯಾಯಾಲಯದಲ್ಲಿ ವಿಚಾರಣೆ ಮುಂದುವರೆದು ದರ್ಶನ್ ಅರ್ಜಿಯನ್ನು ತಳ್ಳಿ ಹಾಕಲಾಯ್ತು. ಚಾರ್ಲ್ ಶೋಭರಾಜ್ ಸೇರಿದಂತೆ ಇನ್ನು ಕೆಲವು ಪ್ರಕರಣಗಳನ್ನು ಉಲ್ಲೇಖಿಸಿ ನ್ಯಾಯಾಧೀಶರು ಅರ್ಜಿಯನ್ನು ತಳ್ಳಿ ಹಾಕಿದ್ದರು.
ರೇಣುಕಾ ಸ್ವಾಮಿ ಕೊಲೆ ಪ್ರಕರಣದ ಆರೋಪಿ ನಟ ದರ್ಶನ್ ಹಾಗೂ 17 ಮಂದಿ ಪ್ರಸ್ತುತ ನ್ಯಾಯಾಂಗ ಬಂಧನದಲ್ಲಿದ್ದಾರೆ. ಅದರಲ್ಲಿ ಮೂರು ಮಂದಿ ತುಮಕೂರು ಜೈಲಿನಲ್ಲಿ ಇನ್ನುಳಿದವರು ಪರಪ್ಪನ ಅಗ್ರಹಾರ ಕಾರಾಗೃಹದಲ್ಲಿದ್ದಾರೆ. ದರ್ಶನ್ಗೆ ಜೈಲಿನ ಊಟ ಸರಿಹೊಂದದ ಕಾರಣ ಅನಾರೋಗ್ಯ ಉಂಟಾಗಿತ್ತು, ಹಾಸಿಗೆ ಸರಿಯಿಲ್ಲದ ಕಾರಣ ನಿದ್ರಾಹೀನತೆ ಕಾಡಿತ್ತು. ಹಾಗಾಗಿ ಮನೆಯಿಂದ ಊಟ ತರಿಸಿಕೊಳ್ಳಲು, ಹಾಸಿಗೆ ಹಾಗೂ ಕೆಲವು ಪುಸ್ತಕ ತರಿಸಿಕೊಳ್ಳಲು ಅವಕಾಶ ಕೊಡುವಂತೆ ರಿಟ್ ಅರ್ಜಿ ಸಲ್ಲಿಸಿದ್ದರು. ಇನ್ನು ನಟ ದರ್ಶನ್ ಹಾಗೂ ಇತರರಿಗೆ ಆಗಸ್ಟ್ 4 ರ ವರೆಗೆ ನ್ಯಾಯಾಂಗ ಬಂಧನ ವಿಧಿಸಲಾಗಿದೆ.