ದರ್ಶನ್​ ವರ್ಸಸ್​ ಉಮಾಪತಿ: ‘ಕಾಟೇರ’ ಶೀರ್ಷಿಕೆ ಬಗ್ಗೆ ​ಕೊನೆಗೂ ಮೌನ ಮುರಿದ ಡಿ ಬಾಸ್​

|

Updated on: Feb 20, 2024 | 2:25 PM

ನಟ ದರ್ಶನ್​ ಮತ್ತು ನಿರ್ಮಾಪಕ ಉಮಾಪತಿ ಅವರ ನಡುವಿನ ಜಟಾಪಟಿ ಮುಂದುವರಿದಿದೆ. ‘ಕಾಟೇರ ಟೈಟಲ್​ ಕೊಟ್ಟಿದ್ದು ನಾನೇ’ ಎಂದು ಉಮಾಪತಿ ಅವರು ಈ ಮೊದಲು ಹೇಳಿದ್ದರು. ಅದಕ್ಕೆ ಈಗ ದರ್ಶನ್​ ಸ್ಪಷ್ಟನೆ ನೀಡಿದ್ದಾರೆ. ಕಟುವಾದ ಮಾತುಗಳಿಂದ ಅವರು ತಿರುಗೇಟು ನೀಡಿದ್ದಾರೆ. ಟೈಟಲ್​ ಹಿಂದಿನ ಸಂಪೂರ್ಣ ವಿವರವನ್ನು ಅವರು ತೆರೆದಿಟ್ಟಿದ್ದಾರೆ.

ದರ್ಶನ್​ ವರ್ಸಸ್​ ಉಮಾಪತಿ: ‘ಕಾಟೇರ’ ಶೀರ್ಷಿಕೆ ಬಗ್ಗೆ ​ಕೊನೆಗೂ ಮೌನ ಮುರಿದ ಡಿ ಬಾಸ್​
ಉಮಾಪತಿ, ದರ್ಶನ್​
Follow us on

ನಟ ದರ್ಶನ್​ (Darshan) ಅವರು ‘ಕಾಟೇರ’ ಸಿನಿಮಾದ ಮೂಲಕ ದೊಡ್ಡ ಗೆಲುವು ಕಂಡಿದ್ದಾರೆ. ಈ ಚಿತ್ರದ 50ನೇ ದಿನದ ಸೆಲೆಬ್ರೇಷನ್​ ಅನ್ನು ಬೆಂಗಳೂರಿನ ಪ್ರಸನ್ನ ಚಿತ್ರಮಂದಿರದಲ್ಲಿ ಮಾಡಲಾಗಿದೆ. ಈ ವೇಳೆ ದರ್ಶನ್​ ಅವರು ಕೆಲವು ವಿಚಾರಗಳಿಗೆ ಸ್ಪಷ್ಟನೆ ನೀಡಿದ್ದಾರೆ. ‘ಕಾಟೇರ’ ಸಿನಿಮಾದ (Kaatera Movie) ಟೈಟಲ್​ ನೀಡಿದ್ದೇ ತಾವು ಎಂದು ಈ ಮೊದಲು ಉಮಾಪತಿ ಶ್ರೀನಿವಾಸ್​ ಗೌಡ ಅವರು ಹೇಳಿದ್ದರು. ಅದಕ್ಕೆ ಇಂದು (ಫೆಬ್ರವರಿ 20) ದರ್ಶನ್​ ತಿರುಗೇಟು ನೀಡಿದ್ದಾರೆ. ಈ ಮೊದಲು ‘ರಾಬರ್ಟ್​’ ಸಿನಿಮಾವನ್ನು ದರ್ಶನ್​ ಮತ್ತು ಉಮಾಪತಿ ಶ್ರೀನಿವಾಸ್​ ಗೌಡ (Umapathy Srinivas Gowda) ಅವರು ಜೊತೆಯಾಗಿ ಮಾಡಿದ್ದರು. ಆದರೆ ನಂತರದ ದಿನಗಳಲ್ಲಿ ಅವರಿಬ್ಬರ ನಡುವೆಯೇ ಜಟಾಪಟಿ ಏರ್ಪಟ್ಟಿತು.

‘ಇಂದು ನಾನು ಸಿನಿಮಾ ಬಗ್ಗೆ ಏನೂ ಹೇಳಲ್ಲ. ಕೆಲವು ವಿಚಾರಗಳಿಗೆ ಪ್ರತಿಕ್ರಿಯೆ ನೀಡಲು ಯಾವುದೇ ಸುದ್ದಿಗೋಷ್ಠಿಯಲ್ಲಿ ನಾವು ಸಿಗಲಿಲ್ಲ. ಹಾಗಾಗಿ ಮಾತಾಡೋಕೆ ಆಗಿರಲಿಲ್ಲ. ಕೆಲವು ಸ್ಪಷ್ಟನೆ ಈಗ ನೀಡುತ್ತೇನೆ. ಕಥೆ ನಾನು ಮಾಡಿಸಿದೆ, ಟೈಟಲ್​ ನಾನು ಕೊಟ್ಟೆ ಅಂತ ಕೆಲವರು ಹೇಳಿದ್ರು. ಅಯ್ಯೋ ತಗಡೇ.. ನಿನಗೆ ರಾಬರ್ಟ್​ ಚಿತ್ರದ ಕಥೆ ಕೊಟ್ಟಿದ್ದೇ ನಾವು. ಕೊಟ್ಟಿದ್ದನ್ನೆಲ್ಲ ಹೇಳಬಾರದು. ಯಾಕೆಂದರೆ, ಒಂದು ಕಡೆ ಇದೇ ರೀತಿ ಸಿಕ್ಕಿಹಾಕಿಕೊಂಡ ಮೇಲೂ ಬುದ್ಧಿ ಕಲಿತಿಲ್ಲ ಅಂದರೆ ಏನು ಹೇಳೋಣ? ಕಾಟೇರ ಕಥೆ ನೀನೇ ಮಾಡಿಸಿದ್ದು ಎಂಬುದಾದರೆ ಇಂಥ ಒಳ್ಳೆಯ ಕಥೆಯನ್ನು ನೀನು ಯಾಕೆ ಬಿಟ್ಟೆ? ನಿನ್ನ ಜಡ್ಜ್​ಮೆಂಟ್​ ಅಷ್ಟು ಚೆನ್ನಾಗಿದೆ. ನೀನೇ ಸಿನಿಮಾ ಮಾಡಬಹುದಿತ್ತಲ್ಲ’ ಎಂದು ದರ್ಶನ್​ ಅವರು ಉಮಾಪತಿ ಶ್ರೀನಿವಾಸ್ ಗೌಡ ಅವರಿಗೆ ತಿರುಗೇಟು ನೀಡಿದ್ದಾರೆ.

ಉಮಾಪತಿ ಶ್ರೀನಿವಾಸ್​ ಗೌಡ ಬಗ್ಗೆ ದರ್ಶನ್​ ಮಾತನಾಡಿದ ವಿಡಿಯೋ:

‘ಕಾಟೇರ ಟೈಟಲ್​ ಇಟ್ಟಿದ್ದೇ ನಾನು’ ಎಂದು ದರ್ಶನ್​ ಹೇಳಿದ್ದಾರೆ. ಅದಕ್ಕೆ ಸಾಕ್ಷಿಯಾಗಿ ‘ಮದಗಜ’ ಚಿತ್ರದ ನಿರ್ದೇಶಕ ಮಹೇಶ್​ ಹಾಗೂ ‘ಕಾಟೇರ’ ನಿರ್ದೇಶಕ ತರುಣ್​ ಸುಧೀರ್​ ಕೂಡ ವೇದಿಕೆಗೆ ಬಂದು ಮಾತನಾಡಿದ್ದಾರೆ. ‘ಟೈಟಲ್​ ಕೊಟ್ಟಿದ್ದು ನೀವೇ. ನಮ್ಮ ಬ್ಯಾನರ್​ನಲ್ಲಿ ಜಾಗ ಇರಲಿಲ್ಲ. ಹಾಗಾಗಿ ಅದು ಕೂಡ ನಮ್ಮದೇ ಬ್ಯಾನರ್​ ಇದ್ದಂಗೆ ಇದೆ. ಹಾಗಾಗಿ ಅಲ್ಲಿ ರಿಜಿಸ್ಟರ್​ ಮಾಡಿಸು ಅಂತ ಹೇಳಿದ್ರಿ’ ಎಂದು ತರುಣ್​ ಸುಧೀರ್​ ಅವರು ಹೇಳಿದ್ದಾರೆ.

ಉಮಾಪತಿ ಶ್ರೀನಿವಾಸ್​ ಗೌಡ ಅವರ ಬಗ್ಗೆ ದರ್ಶನ್​ ಖಡಕ್​ ಆಗಿ ಮಾತನಾಡಿದ್ದಾರೆ. ‘ಯಾಕಪ್ಪಾ? ಬಂದು ಬಂದು ನಮ್ಮ ಹತ್ತಿರವೇ ಯಾಕೆ ಗುಮ್ಮಿಸಿಕೊಳ್ಳುತ್ತೀಯ? ಗುಮ್ಮಿಸಿಕೊಳ್ಳಬೇಡ. ಎಲ್ಲೋ ಇದ್ದೀಯ, ಅಲ್ಲೇ ಚೆನ್ನಾಗಿ ಇದ್ದುಬಿಡು. ಇದೆಲ್ಲ ನಿಮಗೆ ಗೊತ್ತಾಗಲಿ ಅಂತ ಸ್ಪಷ್ಟನೆ ನೀಡಿದೆ. ಅದನ್ನು ಹೊರತುಪಡಿಸಿ ಬೇರೇನೂ ಇಲ್ಲ’ ಎಂದು ದರ್ಶನ್​ ಹೇಳಿದ್ದಾರೆ.

ಇದನ್ನೂ ಓದಿ: ಐತಿಹಾಸಿಕ ಚಿತ್ರಕ್ಕಾಗಿ ಕೈ ಜೋಡಿಸಿದ ದರ್ಶನ್​-ತರುಣ್; ‘ಕಾಟೇರ’ ಬಳಿಕ ಸಿಂಧೂರ ಲಕ್ಷ್ಮಣನ ಕಥೆ

‘ಕಾಟೇರ’ ಸಿನಿಮಾ ಯಶಸ್ವಿಯಾಗಿ 50 ದಿನಗಳನ್ನು ಪೂರೈಸಿದೆ. ಬಾಕ್ಸ್​ ಆಫೀಸ್​ನಲ್ಲಿ ಬಹುಕೋಟಿ ರೂಪಾಯಿ ಕಲೆಕ್ಷನ್ ಮಾಡಿದೆ. ಅದೇ ರೀತಿ, ಬೆಂಗಳೂರಿನ ‘ಪ್ರಸನ್ನ’ ಚಿತ್ರಮಂದಿರ ಆರಂಭವಾಗಿ ಐವತ್ತು ವರ್ಷಗಳು ಕಳೆದಿವೆ. ಈ ಎರಡೂ ಸಂಭ್ರಮವನ್ನು ಒಂದೇ ವೇದಿಕೆಯಲ್ಲಿ ಸೆಲೆಬ್ರೇಟ್​ ಮಾಡಲಾಗಿದೆ. ಇದರಲ್ಲಿ ‘ಕಾಟೇರ’ ಚಿತ್ರದ ಕಲಾವಿದರು ಮತ್ತು ತಂತ್ರಜ್ಞರು ಭಾಗಿ ಆಗಿದ್ದಾರೆ. ಸಿನಿಮಾದ ಶೀಲ್ಡ್​ ಪಡೆದು ದರ್ಶನ್​ ಖುಷಿಪಟ್ಟಿದ್ದಾರೆ. ಯಾವುದೇ ಪ್ರಶಸ್ತಿಗಿಂತಲೂ ಇದು ಶ್ರೇಷ್ಠ ಎಂದು ಅವರು ಹೇಳಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ