ಐತಿಹಾಸಿಕ ಚಿತ್ರಕ್ಕಾಗಿ ಕೈ ಜೋಡಿಸಿದ ದರ್ಶನ್-ತರುಣ್; ‘ಕಾಟೇರ’ ಬಳಿಕ ಸಿಂಧೂರ ಲಕ್ಷ್ಮಣನ ಕಥೆ
ದರ್ಶನ್ ಅವರು ಐತಿಹಾಸಿಕ ಸಿನಿಮಾದಲ್ಲಿ ನಟಿಸುತ್ತಾರೆ ಎಂದರೆ ಅಭಿಮಾನಿಗಳ ಪಾಲಿಗೆ ಹಬ್ಬ. ‘D59’ ಸಿನಿಮಾದಲ್ಲಿ ಸಿಂಧೂರ ಲಕ್ಷ್ಮಣನ ಕಥೆ ಇರಲಿದೆ. ಈ ಸಿನಿಮಾಗೆ ತುರುಣ್ ಸುಧೀರ್ ನಿರ್ದೇಶನ ಮಾಡಲಿದ್ದಾರೆ. ಶೈಲಜಾ ನಾಗ್ ಮತ್ತು ಬಿ. ಸುರೇಶ ಅವರು ನಿರ್ಮಾಣ ಮಾಡಲಿದ್ದಾರೆ. ವಿ. ಹರಿಕೃಷ್ಣ ಅವರ ಸಂಗೀತ ನಿರ್ದಶನ ಈ ಚಿತ್ರಕ್ಕೆ ಇರಲಿದೆ.
ನಟ ‘ಚಾಲೆಂಜಿಂಗ್ ಸ್ಟಾರ್’ ದರ್ಶನ್ ಅವರ ಹುಟ್ಟುಹಬ್ಬವನ್ನು (Darshan Birthday) ಅಭಿಮಾನಿಗಳು ಇಂದು (ಫೆಬ್ರವರಿ 16) ಅದ್ದೂರಿಯಾಗಿ ಆಚರಿಸುತ್ತಿದ್ದಾರೆ. ಅವರ ನಿವಾಸದ ಬಳಿ ಅಪಾರ ಸಂಖ್ಯೆಯ ಅಭಿಮಾನಿಗಳು ನೆರೆದಿದ್ದಾರೆ. ಅಭಿಮಾನಿಗಳು, ಸೆಲೆಬ್ರಿಟಿಗಳು ದರ್ಶನ್ಗೆ ಶುಭಾಶಯ ತಿಳಿಸುತ್ತಿದ್ದಾರೆ. ಇದೇ ಖುಷಿಯಲ್ಲಿ ಹೊಸ ಸಿನಿಮಾ ಅನೌನ್ಸ್ ಆಗಿದೆ. ಖ್ಯಾತ ನಿರ್ದೇಶಕ ತರುಣ್ ಸುಧೀರ್ (Tharun Sudhir) ಮತ್ತು ದರ್ಶನ್ ಅವರ ಕಾಂಬಿನೇಷನ್ನಲ್ಲಿ ಮತ್ತೊಂದು ಸಿನಿಮಾ ಮೂಡಿಬರಲಿದ್ದು, ಇದರಲ್ಲಿ ಐತಿಹಾಸಿಕ ಕಥಾಹಂದರ ಇರಲಿದೆ. ಈ ಸಿನಿಮಾವನ್ನು ಶೈಲಜಾ ನಾಗ್ ಮತ್ತು ಬಿ. ಸುರೇಶ ಅವರು ನಿರ್ಮಾಣ ಮಾಡಲಿದ್ದಾರೆ. ದರ್ಶನ್ (Darshan) ಹುಟ್ಟುಹಬ್ಬದ ಪ್ರಯುಕ್ತ ಈ ಸಿನಿಮಾದ ಪೋಸ್ಟರ್ ಬಿಡುಗಡೆ ಮಾಡಲಾಗಿದೆ.
ದರ್ಶನ್ ಅವರಿಗೆ ಐತಿಹಾಸಿಕ ಮತ್ತು ಪೌರಾಣಿಕ ಸಿನಿಮಾ ಎಂದರೆ ವಿಶೇಷ ಆಸಕ್ತಿ. ಹಾಗಾಗಿ ಅವರು ಅಂತಹ ಸ್ಕ್ರಿಪ್ಟ್ಗಳಿಗೆ ಮೊದಲ ಆದ್ಯತೆ ನೀಡುತ್ತಾರೆ. ಈ ಮೊದಲು ಸಂಗೊಳ್ಳಿ ರಾಯಣ್ಣನಾಗಿ ಅಬ್ಬರಿಸಿದ್ದ ದರ್ಶನ್ ಅವರು ಈಗ ಸಿಂಧೂರ ಲಕ್ಷ್ಮಣನ ಪಾತ್ರ ಮಾಡಲು ಒಪ್ಪಿಕೊಂಡಿದ್ದಾರೆ. ಹೌದು, ತರುಣ್ ಸುಧೀರ್ ಮತ್ತು ದರ್ಶನ್ ಕಾಂಬಿನೇಷನ್ನಲ್ಲಿ ಮೂಡಿಬರಲಿರುವ ಈ ಸಿನಿಮಾದಲ್ಲಿ ಸಿಂಧೂರ ಲಕ್ಷ್ಮಣನ ಕಥೆ ಇರಲಿದೆ ಎಂಬುದು ವಿಶೇಷ. ಹಾಗಾಗಿ ಅಭಿಮಾನಿಗಳ ಮನದಲ್ಲಿ ನಿರೀಕ್ಷೆ ಹೆಚ್ಚಾಗಿದೆ.
ತರುಣ್ ಸುಧೀರ್ ಎಕ್ಸ್ (ಟ್ವಿಟರ್) ಪೋಸ್ಟ್:
“ವೀರ ಸಿಂಧೂರ ಲಕ್ಷ್ಮಣನ ಸಾಹಸಗಾಥೆ”
We are beyond thrilled & excited to announce #D59 – the saga of #SindhooraLakshmana, a reunion with my beloved #ChallengingStarDarshan sir and a collaboration with #MediaHouseStudio & #VHarikrishna. Can’t wait to get started! Happy birthday #Dboss!… pic.twitter.com/MW03f6xf0J
— Tharun Sudhir (@TharunSudhir) February 16, 2024
‘ರಾಬರ್ಟ್’ ಮತ್ತು ‘ಕಾಟೇರ’ ಸಿನಿಮಾಗಳಲ್ಲಿ ತರುಣ್ ಸುಧೀರ್ ಮತ್ತು ದರ್ಶನ್ ಅವರ ಕಾಂಬಿನೇಷನ್ ಜನಮೆಚ್ಚುಗೆ ಗಳಿಸಿತು. ಈಗ ಅವರು ಮೂರನೇ ಬಾರಿಗೆ ಕೈ ಜೋಡಿಸುತ್ತಿರುವುದರಿಂದ ಹೈಪ್ ಹೆಚ್ಚಾಗಲಿದೆ. ಈಗಾಗಲೇ ತರುಣ್ ಸುಧೀರ್ ಅವರು ಈ ಸಿನಿಮಾದ ಸ್ಕ್ರಿಪ್ಟ್ ಕೆಲಸದಲ್ಲಿ ತೊಡಗಿಕೊಂಡಿದ್ದಾರೆ. ದರ್ಶನ್ ನಟನೆಯ 59ನೇ ಸಿನಿಮಾವಾಗಿ ಈ ಚಿತ್ರ ಮೂಡಿಬರಲಿದೆ. ಹೆಚ್ಚಿನ ಮಾಹಿತಿ ತಿಳಿಯಲು ಫ್ಯಾನ್ಸ್ ಕಾದಿದ್ದಾರೆ.
ಇದನ್ನೂ ಓದಿ: ದರ್ಶನ್ ಮನೆ ಎದುರು ಅಭಿಮಾನಿಗಳ ಸಂಭ್ರಮ ಹೇಗಿತ್ತು ನೋಡಿ..
‘ಸದ್ಯಕ್ಕೆ ಸ್ಕ್ರಿಪ್ಟ್ ಕೆಲಸಗಳು ನಡೆಯುತ್ತಿವೆ. ದೊಡ್ಡ ಬಜೆಟ್ನಲ್ಲಿ ಈ ಸಿನಿಮಾ ಮೂಡಿಬರಲಿದೆ’ ಎಂದು ನಿರ್ಮಾಪಕಿ ಶೈಲಜಾ ನಾಗ್ ಅವರು ಹೇಳಿದ್ದಾರೆ. ಈ ಮೊದಲು ದರ್ಶನ್ ನಟಿಸಿದ್ದ ‘ಯಜಮಾನ’ ಮತ್ತು ‘ಕ್ರಾಂತಿ’ ಸಿನಿಮಾಗಳಿಗೆ ‘ಮೀಡಿಯಾ ಹೌಸ್ ಸ್ಟುಡಿಯೋ’ ಸಂಸ್ಥೆಯ ಮೂಲಕ ಶೈಲಜಾ ನಾಗ್ ಮತ್ತು ಬಿ. ಸುರೇಶ್ ಅವರು ಬಂಡವಾಳ ಹೂಡಿದ್ದರು. ಈಗ ಮೂರನೇ ಬಾರಿಗೆ ಅವರು ದರ್ಶನ್ ಅಭಿನಯದ ಚಿತ್ರವನ್ನು ನಿರ್ಮಾಣ ಮಾಡಲು ಮುಂದಾಗಿದ್ದಾರೆ. ಈ ಸಿನಿಮಾಗೆ ವಿ. ಹರಿಕೃಷ್ಣ ಸಂಗೀತ ನೀಡಲಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ