ದೇಶದೆಲ್ಲೆಡೆ ಸಂಕ್ರಾಂತಿ ಹಬ್ಬವನ್ನು ಸಡಗರದಿಂದ ಆಚರಿಸಲಾಗಿದೆ. ನಟ ದರ್ಶನ್ ಕೂಡ ಹಬ್ಬದಲ್ಲಿ ಭಾಗಿ ಆಗಿದ್ದಾರೆ. ರೇಣುಕಾ ಸ್ವಾಮಿ ಕೊಲೆ ಪ್ರಕರಣದಲ್ಲಿ ಜಾಮೀನು ಪಡೆದು ಹೊರಗೆ ಬಂದಿರುವ ದರ್ಶನ್ ಅವರು ಫಾರ್ಮ್ ಹೌಸ್ನಲ್ಲಿ ಸಂಕ್ರಾಂತಿ ಆಚರಿಸಿದ್ದಾರೆ. ಪತ್ನಿ ಮತ್ತು ಮಗನ ಜೊತೆ ಅವರು ಕಾಲ ಕಳೆದಿದ್ದಾರೆ. ಫಾರ್ಮ್ ಹೌಸ್ನಲ್ಲಿ ಇರುವ ಪ್ರಾಣಿಗಳ ಜೊತೆಗೆ ಹಬ್ಬ ಆಚರಿಸಿದ್ದಾರೆ. ಕುದುರೆಯ ಜೊತೆಗಿರುವ ಫೋಟೋವನ್ನು ದರ್ಶನ್ ಹಂಚಿಕೊಂಡಿದ್ದು, ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ. ಯಾಕೆಂದರೆ, ದರ್ಶನ್ ಅವರು ಪೋಸ್ಟ್ ಮಾಡಿರುವುದು ಬರೋಬ್ಬರಿ 7 ತಿಂಗಳ ಬಳಿಕ!
‘ನಾಡಿನ ಸಮಸ್ತ ಜನತೆಗೆ ಮಕರ ಸಂಕ್ರಾಂತಿಯ ಹಾರ್ದಿಕ ಶುಭಾಶಯಗಳು. ನಿಮ್ಮ ಜೀವನದಲ್ಲಿ ಸಂತೋಷವೆಂಬ ಗಾಳಿಪಟಗಳು ಎತ್ತರಕ್ಕೆ ಹಾರಲಿ. ಸಮೃದ್ಧಿ ಮತ್ತು ಸಂತೋಷವನ್ನು ತರಲಿ. ಎಳ್ಳು ಬೆಲ್ಲ ಹಂಚಿ ಹೊಸ ಭರವಸೆಯೊಂದಿಗೆ ಮಕರ ಸಂಕ್ರಾಂತಿಯನ್ನು ಬರಮಾಡಿಕೊಳ್ಳೋಣ’ ಎಂದು ದರ್ಶನ್ ಅವರು ಅಭಿಮಾನಿಗಳಿಗೆ ಸಂಕ್ರಾಂತಿಯ ಶುಭಾಶಯ ತಿಳಿಸಿದ್ದಾರೆ.
ಕಳೆದ ವರ್ಷ ದರ್ಶನ್ ಅವರ ಪಾಲಿಗೆ ತುಂಬ ಕಷ್ಟಕರ ಆಗಿತ್ತು. ಚಿತ್ರದುರ್ಗದ ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ದರ್ಶನ್ ಜೈಲು ಸೇರುವಂತಾಯಿತು. ಪರಪ್ಪನ ಅಗ್ರಹಾರ ಮತ್ತು ಬಳ್ಳಾರಿ ಜೈಲಿನಲ್ಲಿ ಅವರು ದಿನ ಕಳೆದಿದ್ದರು. ಆಗಲೇ ಅವರಿಗೆ ಬೆನ್ನು ನೋವು ಕೂಡ ಹೆಚ್ಚಾಗಿತ್ತು. ನಡೆಯಲು ಕೂಡ ದರ್ಶನ್ ಕಷ್ಟಪಡುತ್ತಿದ್ದರು. ಆದ್ದರಿಂದ ಮಧ್ಯಂತರ ಜಾಮೀನು ಸಿಕ್ಕಿತ್ತು. ಆನಂತರ ರೆಗ್ಯುಲರ್ ಬೇಲ್ ಸಿಕ್ಕ ಬಳಿಕ ದರ್ಶನ್ ನಿಟ್ಟುಸಿರು ಬಿಟ್ಟರು.
ಇದನ್ನೂ ಓದಿ: ದರ್ಶನ್ಗೆ ಪೊಲೀಸರಿಂದ ಮತ್ತೊಂದು ನೋಟಿಸ್; ಈ ಬಾರಿ ದಾಸ ಮಾಡಿದ ಕಿರಿಕ್ ಏನು?
ಕಹಿ ಘಟನೆಯಿಂದಾಗಿ ದರ್ಶನ್ ಅವರ ಜೀವನದಲ್ಲಿ ಏರುಪೇರು ಉಂಟಾಯಿತು. ಕೊಲೆ ಆರೋಪ ಎದುರಾಗಿದ್ದರಿಂದ ಸಿನಿಮಾ ಕೆಲಸಗಳನ್ನು ಬಿಟ್ಟು ಪೊಲೀಸ್ ಸ್ಟೇಷನ್, ಕೋರ್ಟು, ಜೈಲು, ಆಸ್ಪತ್ರೆ ಸುತ್ತುವಂತಾಯಿತು. ಆದರೆ 2025ರ ವರ್ಷದಲ್ಲಿ ಎಲ್ಲ ವಿಘ್ನಗಳು ನಿವಾರಣೆ ಆಗಲಿ ಎಂದು ಅವರ ಅಭಿಮಾನಿಗಳು ಪ್ರಾರ್ಥಿಸಿದ್ದಾರೆ. ಅದರ ಮೊದಲ ಹಂತ ಎಂಬಂತೆ ದರ್ಶನ್ ಅವರು ಕುಟುಂಬದ ಜೊತೆ ಸೇರಿಕೊಂಡು ಸಂಕ್ರಾಂತಿ ಹಬ್ಬವನ್ನು ಸೆಲೆಬ್ರೇಟ್ ಮಾಡಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.