
ರೇಣುಕಾ ಸ್ವಾಮಿ ಕೊಲೆ ಪ್ರಕರಣದ ಆರೋಪಿ ನಟ ದರ್ಶನ್ಗೆ ಜೈಲಿನಲ್ಲಿ ಮತ್ತೆ ಬೆನ್ನು ನೋವು ಶುರುವಾಗಿದೆ. ಈ ಹಿಂದೆ 2024ರಲ್ಲಿ ಸಹ ದರ್ಶನ್ ತಮಗೆ ಜೈಲಿನಲ್ಲಿ ಬೆನ್ನು ನೋವು ಶುರುವಾಗಿದೆಯೆಂದು, ಬೆನ್ನು ನೋವಿಗೆ ಚಿಕಿತ್ಸೆ ಪಡೆಯಬೇಕೆಂಬ ಕಾರಣ ನೀಡಿ ಜಾಮೀನು ಪಡೆದುಕೊಂಡಿದ್ದರು. ಇದೀಗ ದರ್ಶನ್ ತಮಗೆ ಬೆನ್ನು ನೋವು ಶುರುವಾಗಿದ್ದು, ಚಳಿಗಾಲದ ಕಾರಣ ನೋವು ತೀವ್ರವಾಗಿದೆ ಎಂದು ಹೇಳಿದ್ದು, ಫಿಸಿಯೋಥೆರಪಿ ಮಾಡಿಸಿಕೊಳ್ಳಲು ಅನುಮತಿ ನೀಡಬೇಕು ಎಂದು ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದಾರೆ.
ಕಳೆದ ಕೆಲ ದಿನಗಳಿಂದ ಅರ್ಜಿಯ ವಿಚಾರಣೆ ನಡೆಯುತ್ತಿದೆ. ನಿನ್ನೆ (ನವೆಂಬರ್ 05) ದರ್ಶನ್ ಪರ ವಕೀಲರು ವಾದ ಮಂಡಿಸಿ, ಈ ಹಿಂದೆಯೇ ದರ್ಶನ್ ಅವರಿಗೆ ಚಿಕಿತ್ಸೆ ಅಗತ್ಯ ಇದೆ ಎಂದು ವೈದ್ಯರು ತಪಾಸಣೆ ನಡೆಸಿ ವರದಿ ಸಲ್ಲಿಸಿದ್ದರು. 15 ತಿಂಗಳುಗಳಿಂದಲೂ ಅವರು ಜೈಲಿನಲ್ಲಿ ಹಾಸಿಗೆ ಮೇಲೆ ಮಲಗುತ್ತಿದ್ದಾರೆ ಇದರಿಂದ ಅವರಿಗೆ ಬೆನ್ನು ನೋವು ಉಲ್ಬಣಿಸಿದೆ. ಅವರು ಕಳೆದ ಹಲವು ವರ್ಷಗಳಿಂದಲೂ ಬೆನ್ನು ಮೂಳೆಯ ಎಲ್4 ಮತ್ತು ಎಲ್5 ಸಮಸ್ಯೆಯಿಂದ ಬಳಲುತ್ತಿದ್ದಾರೆ. ಅವರಿಗೆ ಫಿಸಿಯೋಥೆರಪಿಗೆ ಅವಕಾಶ ಮಾಡಿಕೊಡಬೇಕು ಎಂದಿದ್ದರು.
ಇಂದು (ನವೆಂಬರ್ 6) ವಾದ ಮಂಡಿಸಿದ ಎಸ್ಪಿಪಿ ಪ್ರಸನ್ನ ಕುಮಾರ್, ‘ದರ್ಶನ್ ಅವರಿಗೆ ಬೆನ್ನುಹುರಿಯ ಎಲ್4 ಎಲ್5 ಸಮಸ್ಯೆ ಇದೆ ಎಂದು ಹೇಳಿದ್ದಾರೆ. ಸರ್ಜರಿ ಆಗಬೇಕೆಂದು ಹಿಂದೆ ವೈದ್ಯರು ವರದಿ ನೀಡಿದ್ದರು. ಸರ್ಜರಿಯಾಗದಿದ್ದರೆ ಕಾಲು ಬಲಹೀನವಾಗಲಿದೆ ಎಂದು ವರದಿಯಲ್ಲಿತ್ತು. ಆ ವರದಿ ಪರಿಗಣಿಸಿ ಹೈಕೋರ್ಟ್ ಜಾಮೀನು ನೀಡಿತ್ತು, ಆದರೆ ಜಾಮೀನು ಸಿಕ್ಕ ಬಳಿಕ ದರ್ಶನ್ ಸರ್ಜರಿ ಮಾಡಿಸಿಕೊಳ್ಳಲಿಲ್ಲ, ಬದಲಿಗೆ ದೊಡ್ಡ ದೊಡ್ಡ ಕಾರ್ಯಕ್ರಮಗಳಲ್ಲಿ ಭಾಗಿಯಾಗಿದ್ದರು, ಸಿನಿಮಾ ಚಿತ್ರೀಕರಣಗಳಲ್ಲಿ ಪಾಲ್ಗೊಂಡಿದ್ದರು’ ಎಂದರು.
ಇದನ್ನೂ ಓದಿ:ರೇಣುಕಾ ಸ್ವಾಮಿ ತಾಯಿ ಪ್ರತಿಕೂಲ ಸಾಕ್ಷಿ? ಕೋರ್ಟ್ನಲ್ಲಿ ನಡೆದಿದ್ದೇನು?
ವಾದ ಮುಂದುವರೆಸಿ, ‘ಸುಪ್ರೀಂಕೋರ್ಟ್ ಸಹ ಇವರ (ದರ್ಶನ್) ನಡವಳಿಕೆ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದೆ, ವೈದ್ಯಕೀಯ ಚಿಕಿತ್ಸೆ ಬಗ್ಗೆ ಪ್ರಾಸಿಕ್ಯೂಷನ್ ಆಕ್ಷೇಪವಿಲ್ಲ, ಆದರೆ ಅವರ ಹಿಂದಿನ ನಡವಳಿಕೆಯನ್ನು ಕೋರ್ಟ್ ಪರಿಶೀಲಿಸಬೇಕು’ ಎಂದರು.
ಪ್ರಾಸಿಕ್ಯೂಷನ್ ವಾದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ದರ್ಶನ್ ಪರ ವಕೀಲ ಹಷ್ಮತ್ ಪಾಷಾ, ‘ಸುಮ್ಮನೇ ವೈದ್ಯರ ಬಳಿ ಹೋಗಲು ಯಾರೂ ಇಚ್ಛಿಸುವುದಿಲ್ಲ, ಕೇವಲ ಫಿಸಿಯೋಥೆರಪಿ ಚಿಕಿತ್ಸೆಗೆ ಮನವಿ ಮಾಡಿದ್ದೇವೆ, ಕೋರ್ಟ್ ಕಸ್ಟಡಿಯಲ್ಲಿರುವುದರಿಂದ ಆರೋಪಿ ಆರೋಗ್ಯದ ಕಾಳಜಿ ವಹಿಸಬೇಕು’ ಎಂದರು. ಎರಡೂ ಕಡೆಯ ವಾದ ಆಲಿಸಿದ 59ನೇ ಸಿಸಿಹೆಚ್ ಕೋರ್ಟ್ ನ್ಯಾಯಾಧೀಶರು ಆದೇಶವನ್ನು ನಾಳೆಗೆ ಕಾಯ್ದಿರಿಸಿದ್ದಾರೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ