ಹಿರಿಯ ನಟರ ಹೊಸ ಸಿನಿಮಾ ‘ಕ್ಲಾಸ್ ಆಫ್ ಮೈಸೂರು’: ಏನಿದರ ಕಥೆ?

ಗೌತಮ್ ಬಸವರಾಜು ಅವರು ನಿರ್ದೇಶನ ಮಾಡುತ್ತಿರುವ ‘ಕ್ಲಾಸ್ ಆಫ್ ಮೈಸೂರು’ ಚಿತ್ರದ ಥೀಮ್ ಭಿನ್ನವಾಗಿದೆ. ತಾರಾ, ದತ್ತಣ್ಣ, ರಂಗಾಯಣ ರಘು, ಬಿರಾದರ್, ಶರತ್ ಲೋಹಿತಾಶ್ವ ಮುಂತಾದವರು ಈ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಇತ್ತೀಚೆಗೆ ನಡೆದ ಮುಹೂರ್ತ ಸಮಾರಂಭದಲ್ಲಿ ಇವರೆಲ್ಲರೂ ಭಾಗಿಯಾಗಿ ಚಿತ್ರದ ಬಗ್ಗೆ ಮಾಹಿತಿ ಹಂಚಿಕೊಂಡರು.

ಹಿರಿಯ ನಟರ ಹೊಸ ಸಿನಿಮಾ ‘ಕ್ಲಾಸ್ ಆಫ್ ಮೈಸೂರು’: ಏನಿದರ ಕಥೆ?
Class Of Mysore Team

Updated on: Dec 11, 2025 | 8:18 PM

ಇತ್ತೀಚೆಗೆ ‘ಕ್ಲಾಸ್ ಆಫ್ ಮೈಸೂರು’ (Class Of Mysore) ಸಿನಿಮಾಗೆ ಮುಹೂರ್ತ ಮಾಡಲಾಯಿತು. ಈ ಸಿನಿಮಾದ ಶೀರ್ಷಿಕೆಯೇ ಆಕರ್ಷಕವಾಗಿದೆ. ಬೆಂಗಳೂರಿನ ಬಂಡೆ ಮಹಾಕಾಳಿ ದೇವಸ್ಥಾನದಲ್ಲಿ ಈ ಸಿನಿಮಾದ ಮುಹೂರ್ತದ ಜೊತೆ ಶೀರ್ಷಿಕೆ ಬಿಡುಗಡೆ ಸಮಾರಂಭ ನಡೆಯಿತು. ಕನ್ನಡ ಚಿತ್ರರಂಗದ ಹಿರಿಯ ಕಲಾವಿದರಾದ ದತ್ತಣ್ಣ (Dattanna), ರಂಗಾಯಣ ರಘು, ಬಿರಾದರ್, ತಬಲ ನಾಣಿ, ಶರತ್ ಲೋಹಿತಾಶ್ವ, ತಾರಾ ಅನುರಾಧ ಮುಂತಾದವರು ಈ ಸಿನಿಮಾದಲ್ಲಿ ನಟಿಸುತ್ತಿರುವುದು ವಿಶೇಷ. ಎಲ್ಲಾ ಕಲಾವಿದರು ಸಾಂಪ್ರದಾಯಿಕ ಉಡುಗೆ ಧರಿಸಿ ಸುದ್ದಿಗೋಷ್ಠಿಯಲ್ಲಿ ಪಾಲ್ಗೊಂಡರು.

ಮುಹೂರ್ತದ ವೇಳೆ ಹಿರಿಯ ನಟ ದತ್ತಣ್ಣ ಅವರು ‘ಕ್ಲಾಸ್ ಆಫ್ ಮೈಸೂರು’ ಸಿನಿಮಾದ ಮೊದಲ ದೃಶ್ಯಕ್ಕೆ ಕ್ಲ್ಯಾಪ್ ಮಾಡಿದರು. ತಾರಾ ಅವರು ಟೈಟಲ್‌ ಲಾಂಚ್ ಮಾಡಿದರು. ಬಳಿಕ ಎಲ್ಲ ಕಲಾವಿದರು ತಮ್ಮ ಪಾತ್ರಗಳ ಪರಿಚಯ ಮಾಡಿಕೊಂಡರು. ನಟಿ ತಾರಾ ಅವರು ಈ ಸಿನಿಮಾದಲ್ಲಿ ಭಿನ್ನವಾದ ಪಾತ್ರವನ್ನು ಮಾಡುತ್ತಿರುವುದಾಗಿ ಹೇಳಿದ್ದಾರೆ. ಆ ಮೂಲಕ ಕುತೂಹಲ ಮೂಡಿಸಿದ್ದಾರೆ.

ಗೌತಮ್ ಬಸವರಾಜು ಅವರು ಸಿನಿಮಾಗೆ ಕಥೆ, ಚಿತ್ರಕಥೆ ಬರೆದು ನಿರ್ದೇಶನ ಮಾಡುತ್ತಿದ್ದಾರೆ. ಅಲ್ಲದೇ, ‘ಮಾಕ್ಟ್ ಎಂಟರ್‌ಟೈನ್‌ಮೆಂಟ್ಸ್’ ಬ್ಯಾನರ್ ಮೂಲಕ ಅವರೇ ಬಂಡವಾಳ ಹೂಡುತ್ತಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಕಲಾವಿದರು ರೇಷ್ಮೆ ಪಂಚೆ, ಮೈಸೂರು ಪೇಟ ಧರಿಸಿದ್ದರು. ವೇದಿಕೆ ಮೇಲೆ ಮೈಸೂರು ಅರಮನೆ, ಅಂಬಾರಿ ಸೆಟ್ ಕೂಡ ಸಿದ್ಧವಾಗಿತ್ತು. ಸಿನಿಮಾದ ಥೀಮ್​​ಗೆ ತಕ್ಕಂತೆ ಸುದ್ದಿಗೋಷ್ಠಿ ನಡೆಯಿತು.

‘ನಾವು ಏನನ್ನು ಕಳೆದುಕೊಂಡಿರುತ್ತೇವೋ ಅದನ್ನು ನಿವೃತ್ತಿ ಬದುಕಲ್ಲಿ ಅನುಭವಿಸಿದರೆ ಹೇಗಿರುತ್ತದೆ ಎಂಬುದನ್ನು ಈ ಸಿನಿಮಾದಲ್ಲಿ ತೋರಿಸುತ್ತೇವೆ. ಮೈಸೂರು ಭಾಗಕ್ಕೆ ಸೇರಿದ ಕಥೆ ಇದು. ಪ್ರತಿಯೊಂದು ಫ್ರೇಮ್‌ನಲ್ಲಿ ಈ ಎಲ್ಲ ಕಲಾವಿದರು ಕಾಣಿಸಿಕೊಳ್ಳುತ್ತಾರೆ. ಇಬ್ಬರು ನಟಿಯರ ಆಯ್ಕೆ ಆಗಬೇಕಿದೆ. ಗೋವಾ, ಮಂಗಳೂರು, ಕೊಡಗು, ಬೆಂಗಳೂರು ಸುತ್ತಮುತ್ತ 2 ಹಂತಗಳಲ್ಲಿ 40 ದಿನಗಳ ಕಾಲ ಶೂಟಿಂಗ್ ಮಾಡಲಿದ್ದೇವೆ. ಫೆಬ್ರವರಿ 2ರಿಂದ ಚಿತ್ರೀಕರಣ ನಡೆಸಲು ಯೋಜನೆ ಹಾಕಲಾಗಿದೆ. ಪೋಸ್ಟ್ ಪ್ರೊಡಕ್ಷನ್‌ಗೆ 2 ತಿಂಗಳು ಮೀಸಲು’ ಎಂದು ನಿರ್ದೇಶಕ ಗೌತಮ್ ಬಸವರಾಜು ಹೇಳಿದರು.

ಇದನ್ನೂ ಓದಿ: ‘ಶರತ್ ಮತ್ತು ಶರಧಿ’ ಕಿರುಚಿತ್ರದಲ್ಲಿ ಅಂಧ ದಂಪತಿ ನಟನೆ; ದತ್ತಣ್ಣ ಮೆಚ್ಚುಗೆ

ಮಾಂತೇಶ್, ಜಗ್ಗಪ್ಪ ಕೂಡ ಪಾತ್ರವರ್ಗದಲ್ಲಿ ಇದ್ದಾರೆ. ಈ ಸಿನಿಮಾದ ನಾಲ್ಕು ಹಾಡುಗಳಿಗೆ ನಾಗಾರ್ಜುನ ಶರ್ಮ ಸಾಹಿತ್ಯ ಬರೆಯಲಿದ್ದಾರೆ. ಜೋ ಕೋಸ್ಟ್ಟ ಸಂಗೀತ ನೀಡುತ್ತಿದ್ದಾರೆ. ಎಸ್.ಕೆ. ರಾವ್ ಅವರು ಛಾಯಾಗ್ರಹಣ ಮಾಡಲಿದ್ದಾರೆ. ಮಾಸ್ತಿ ಅವರು ಸಂಭಾಷಣೆ ಬರೆಯುತ್ತಿದ್ದಾರೆ. ‘ಈಗ ಬರುತ್ತಿರುವ ಸಿನಿಮಾಗಳನ್ನು ಹೊರತುಪಡಿಸಿ ಬೇರೆ ಆಯಾಮದ ವಿಷಯವನ್ನು ನಿರ್ದೇಶಕರು ಆಯ್ಕೆ ಮಾಡಿಕೊಂಡಿದ್ದು ಸೋಜಿಗವಾಗಿದೆ. ಇಂತಹ ಮಹಾನ್ ಕಲಾವಿದರನ್ನು ಒಟ್ಟಿಗೆ ಕೂಡಿಸಿರುವುದು ಸವಾಲಿನ ಕೆಲಸ. ಈ ಸಿನಿಮಾದಲ್ಲಿ ತೂಕದ ಪಾತ್ರ ಮಾಡುವ ಅವಕಾಶ ನನಗೆ ಸಿಕ್ಕಿದೆ’ ಎಂದು ನಟಿ ತಾರಾ ಹೇಳಿದರು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.