ನಟ, ನಿರ್ದೇಶಕನಾಗಿ ಗಮನ ಸೆಳೆದಿರುವ ದಯಾಳ್ ಪದ್ಮನಾಭ್ ನಿರ್ಮಾಪಕರಾಗಿಯೂ ಪರಿಚಿತರೇ. ‘ಸರ್ಕಸ್’, ‘ಆ ಕರಾಳ ರಾತ್ರಿ’, ‘ಹಗ್ಗದ ಕೊನೆ’ ಇನ್ನೂ ಹಲವು ಉತ್ತಮ ಸಿನಿಮಾಗಳನ್ನು ನಿರ್ದೇಶಕರಾಗಿ ದಯಾಳ್ ಪದ್ಮನಾಭ್ ಕನ್ನಡಕ್ಕೆ ನೀಡಿದ್ದಾರೆ. ಕೆಲವು ಸಿನಿಮಾಗಳ ನಿರ್ಮಾಣವನ್ನೂ ಸಹ ಮಾಡಿದ್ದಾರೆ. ಆದರೆ ಇದೇ ಮೊದಲ ಬಾರಿಗೆ ನಿರ್ದೇಶನದ ಜವಾಬ್ದಾರಿಯನ್ನು ಮತ್ತೊಬ್ಬರಿಗೆ ವಹಿಸಿ ತಾವು ಕೇವಲ ನಿರ್ಮಾಣಕ್ಕಷ್ಟೆ ಸೀಮಿತ ಮಾಡಿಕೊಂಡು ‘ಕಪಟಿ’ ಹೆಸರಿನ ಸಿನಿಮಾ ನಿರ್ಮಾಣ ಮಾಡಿದ್ದಾರೆ.
ಸಿನಿಮಾದಲ್ಲಿ ಸುಕೃತಾ ವಾಗ್ಲೆ, ಕಿರುತೆರೆ ನಟ ದೇವ್, ಕೃಷ್ಣ ಅವರುಗಳು ಪ್ರಮುಖ ಪಾತ್ರದಲ್ಲಿ ನಟಿಸಿದ್ದು, ಸಿನಿಮಾವನ್ನು ಸಾಫ್ಟ್ವೇರ್ ಎಂಜಿನಿಯರ್ಗಳಾದ ರವಿ ಮತ್ತು ಚೇತನ್ ಎಂಬುವರು ನಿರ್ದೇಶನ ಮಾಡಿದ್ದಾರೆ. ಇದು ಥ್ರಿಲ್ಲರ್ ಜಾನರ್ ಸಿನಿಮಾ ಆಗಿದ್ದು, ಕಡಿಮೆ ಪಾತ್ರಗಳನ್ನು ಇರಿಸಿಕೊಂಡು ಒಂದೇ ಲೊಕೇಶನ್ನಲ್ಲಿ ಕೆಲವೇ ದಿನಗಳಲ್ಲಿ ನಡೆಯುವ ಕತೆಯನ್ನು ಸಿನಿಮಾದಲ್ಲಿ ತೋರಿಸಲಾಗುತ್ತಿದೆ.
ಸಿನಿಮಾದ ಕುರಿತ ಸಮಾರಂಭದಲ್ಲಿ ತಮ್ಮ ಸಿನಿಮಾದ ಬಗ್ಗೆ ಮಾತನಾಡಿರುವ ದಯಾಳ್ ಪದ್ಮನಾಭ್, ‘ಒಂದು ಬಂಗಲೆಯಲ್ಲಿ ಕೆಲವೇ ದಿನಗಳಲ್ಲಿ ನಡೆಯುವ ಥ್ರಿಲ್ಲರ್ ಕತೆಯನ್ನು ಸಿನಿಮಾ ಒಳಗೊಂಡಿದೆ. ಡಾರ್ಕ್ ವೆಬ್ ಹಿನ್ನೆಲೆಯಲ್ಲಿ ಈ ಸಿನಿಮಾ ಮಾಡಿದ್ದೇವೆ. ಈವರೆಗೆ ಈ ರೀತಿಯ ಕತೆಯನ್ನು ಯಾರೂ ಟಚ್ ಮಾಡಿರಲಿಲ್ಲ. ಮಹಾ ಅದ್ಭುತ ಸಿನಿಮಾ ಎಂದೆಲ್ಲ ಇಲ್ಲದ ಜಂಭ ಕೊಚ್ಚಿಕೊಳ್ಳೂವುದಿಲ್ಲ ಆದರೆ ಜನರನ್ನು ಎಂಗೇಜ್ ಮಾಡುವ ಸಿನಿಮಾ, ಕುತೂಹಲದಿಂದ ಕಾಯುವಂತೆ ಮಾಡುವ ಸಿನಿಮಾ ನಮ್ಮದು ಎಂದಿದ್ದಾರೆ.
ಇದನ್ನೂ ಓದಿ:ಕನ್ನಡ ಸಿನಿಮಾರಂಗದ ರೂಪಾಂತರದ ಕಾಲದಲ್ಲಿ ಬರುತ್ತಿರುವ ‘ರೂಪಾಂತರ’
ಸಿನಿಮಾ ನಿರ್ಮಾಣದ ಬಗ್ಗೆ ಮಾತನಾಡುತ್ತಾ, ‘ಹಿಂದೆಲ್ಲ ಕೆಲವು ವ್ಯಕ್ತಿಗಳಿಂದ ನಷ್ಟವನ್ನು ಅನುಭವಿಸಿದ್ದೇನೆ. ಆದರೆ ಇನ್ನು ಮುಂದೆ ಹಾಗಿಲ್ಲ. ಲಾಭದ ಲೆಕ್ಕಾಚಾರ ಹಾಕಿಕೊಂಡೇ ಸಿನಿಮಾ ನಿರ್ಮಾಣಕ್ಕೆ ಇಳಿಯುತ್ತೇನೆ. ನಾನು ನನ್ನ ಸಿನಿಮಾ ಲಾಭ ಎಲ್ಲಾ ಕ್ಯಾಲಿಕುಲೇಷನ್ ಮಾಡಿಯೇ ಸಿನಿಮಾ ಮಾಡೋದು, ಯಾವುದೇ ಸಿನಿಮಾ ಮಾಡಿದ್ರು 50% ಲಾಭ ಲೆಕ್ಕಚಾರ ಹಾಕಿಕೊಳ್ತಿನಿ, ಇದನ್ನ ಪ್ರತಿ ಒಬ್ರು ಮಾಡಬೇಕು ಯಾವ ರೀತಿ ಪ್ಲ್ಯಾನ್ಡ್ ಮಾಡಿದ್ರೆ ವರ್ಕ್ ಔಟ್ ಆಗುತ್ತೆ ಅಂತ ಯೋಚನೆ ಮಾಡಿರ್ತೀನಿ, ಕಪಟತನ ಇರೋವ್ರು ತುಂಬಾ ಜನ ಬಂದು ಹೋಗಿದಾರೆ ಅವ್ರಿಂದ ಬುದ್ಧಿ ಕಲಿತಿವಿ ಎಂದಿದ್ದಾರೆ ದಯಾಳ್.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 7:53 pm, Thu, 1 August 24