
ಯಶ್ (Yash) ತಾಯಿ ಪುಷ್ಪ, ಸಿನಿಮಾ ನಿರ್ಮಾಪಕಿ ಆಗಿದ್ದಾರೆ. ಆದರೆ ಸಿನಿಮಾಕ್ಕಿಂತಲೂ ತಮ್ಮ ಹೇಳಿಕೆಗಳಿಂದಲೇ ಹೆಚ್ಚು ಸುದ್ದು ಮಾಡುತ್ತಿದ್ದಾರೆ. ಯಶ್, ಕಾಯಕದಲ್ಲಿ ನಂಬಿಕೆ ಇಟ್ಟರೆ ಯಶ್ ಅವರ ತಾಯಿ ‘ಕ್ಯಾತೆ’ಯಲ್ಲಿ ನಂಬಿಕೆ ಇಟ್ಟಂತಿದೆ. ಪುಷ್ಪ ಅವರು ನಿರ್ಮಿಸಿದ್ದ ‘ಕೊತ್ತಲವಾಡಿ’ ಸಿನಿಮಾ ಸೋತಿದೆ. ಸಿನಿಮಾ ಸೋತ ಬಳಿಕ ನೀಡಿದ ಸಂದರ್ಶನದಲ್ಲಿ ಸಿನಿಮಾ ಸೋಲಿಗೆ ಕೆಆರ್ಜಿ ಫಿಲಮ್ಸ್ನ ನಿರ್ಮಾಪಕ ಕಾರ್ತಿಕ್ ಗೌಡ ಕಾರಣ ಎಂದು ದೂರಿದರು. ಅದೇ ಸಂದರ್ಶನದಲ್ಲಿ ನಟಿ, ಸಂಬಂಧಿಯೂ ಆಗಿರುವ ದೀಪಿಕಾ ದಾಸ್ ಬಗ್ಗೆ ವಿನಾಕಾರಣ ತುಚ್ಛವಾಗಿ ಮಾತನಾಡಿದರು. ಇದೀಗ ದೀಪಿಕಾ ದಾಸ್ ಸರಿಯಾಗಿ ಪ್ರತ್ಯುತ್ತರ ನೀಡಿದ್ದಾರೆ.
ಯೂಟ್ಯೂಬ್ ಚಾನೆಲ್ ಒಂದಕ್ಕೆ ನೀಡಿರುವ ಸಂದರ್ಶನದಲ್ಲಿ ಮಾತನಾಡಿರುವ ಯಶ್ ಅವರ ತಾಯಿ ಪುಷ್ಪಲತಾಗೆ ಸಂದರ್ಶಕಿ, ‘ನಿಮ್ಮ ಮುಂದಿನ ಸಿನಿಮಾಕ್ಕೆ ದೀಪಿಕಾ ದಾಸ್ ನಾಯಕಿಯಂತೆ?’ ಎಂಬ ಪ್ರಶ್ನೆ ಕೇಳಿದ್ದಾರೆ. ಪ್ರಶ್ನೆಯಿಂದ ಸಿಟ್ಟಾದ ಪುಷ್ಪಲತಾ, ‘ದೀಪಿಕಾ ದಾಸ್‌ಗೂ ನಮಗೂ ಆಗಲ್ಲ. ಅವಳು ಯಾವ ದೊಡ್ಡ ಹೀರೊಯಿನ್ನು, ಯಾವ ಸಾಧನೆ ಮಾಡಿದ್ದಾಳೆ? ಎಂದು ಪ್ರಶ್ನೆ ಮಾಡಿದ್ದಾರೆ. ಮುಂದುವರೆದು, ‘ನಮ್ಮ ಸಂಬಂಧವೇ ಆದರೂ ಅವರನ್ನು ದೂರ ಇಟ್ಟಿದ್ದೀವಿ. ಅವರ ಬಗ್ಗೆ ಯಾಕೆ ಕೇಳ್ತೀರಾ? ನನ್ನ ಮಗ ಬೈಯಲ್ವಾ? ಇನ್ನು ಬಹಳ ಹೀರೊಯಿನ್ ಇದ್ದಾರೆ, ಅವರ ಬಗ್ಗೆ ಬೇಕಾದರೆ ಕೇಳಿ. ದೀಪಿಕಾ ದಾಸ್ ಏನು ರಮ್ಯಾನಾ? ರಕ್ಷಿತಾನಾ? ಒಂದು ವೇಳೆ ದೊಡ್ಡದಾಗಿ ಸಾಧನೆ ಮಾಡಿದ್ದರೆ ಅವರ ಬಗ್ಗೆ ಕೇಳಿ ಅದು ಬಿಟ್ಟು ದೀಪಿಕಾ ದಾಸ್ ಕಥೆ ಯಾಕೆ?’ ಎಂದಿದ್ದಾರೆ.
ಇದನ್ನೂ ಓದಿ:‘ನನ್ನ ಬಗ್ಗೆ ಹೀನಾಯವಾಗಿ ಮಾತನಾಡುವ ಯೋಗ್ಯತೆ ಯಾರಿಗೂ ಇಲ್ಲ’; ಪುಷ್ಪಾಗೆ ಎಚ್ಚರಿಸಿದ ದೀಪಿಕಾ ದಾಸ್
ನಟಿ ದೀಪಿಕಾ ದಾಸ್ಗೆ ಯಶ್ ತಾಯಿ ದೊಡ್ಡಮ್ಮನಾಗಬೇಕು. ತಮ್ಮ ದೊಡ್ಡಮ್ಮ ತಮ್ಮ ಬಗ್ಗೆ ಕ್ಷುಲ್ಲಕವಾಗಿ ಮಾತನಾಡಿದ್ದಕ್ಕೆ ಸಾಮಾಜಿಕ ಜಾಲತಾಣದಲ್ಲಿ ಪ್ರತಿಕ್ರಿಯೆ ನೀಡಿರುವ ದೀಪಿಕಾ ದಾಸ್, ‘ಹೊಸ ಕಲಾವಿದರನ್ನು ಬೆಳೆಸೋ ಜನರು ಕಲಾವಿದರಿಗೆ ಬೆಲೆ ಕೊಡೋದ್ದನ್ನು ಕಲಿತಿರಬೇಕು. ಇಲ್ಲಿವರೆಗೂ ಯಾರ ಹೆಸರನ್ನು ಹೇಳಿಕೊಂಡು ಬಂದಿಲ್ಲ ಮುಂದೇನೂ ಬರಲ್ಲ. ಕೆಲವರಿಗೆ ಬೆಲೆಕೊಟ್ಟ ಮಾತ್ರಕ್ಕೆ ಯಾರಿಗೂ ಯಾರ ಮೇಲೂ ಭಯ ಇದೆ ಅಂತ ಅಲ್ಲ. ಅದು ಅಮ್ಮ ಆದರೂ ಸರಿ, ದೊಡ್ಡಮ್ಮ ಆದರೂ ಸರಿ ಅಥವಾ ಪುಷ್ಪಮ್ಮ ಆದರೂ ಸರಿ. ವಿಥ್ ಡ್ಯೂ ರೆಸ್ಪೆಕ್ಟ್ ಸ್ಟಾರ್ ಆಫ್ ಅವರ್ ಇಂಡಸ್ಟ್ರಿ. ನಾನು ಯಾವ ದೊಡ್ಡ ನಟಿ ಅಲ್ಲದಿದ್ದರೂ, ಏನು ಸಾಧನೆ ಮಾಡದಿದ್ದರೂ ನನ್ನ ಬಗ್ಗೆ ಹೀನಾಯವಾಗಿ ಮಾತನಾಡುವ ಯೋಗ್ಯತೆ ಯಾರಿಗೂ ಇಲ್ಲ’ ಎಂದಿದ್ದರು.
ಮತ್ತೊಂದು ಪೋಸ್ಟ್ ಹಂಚಿಕೊಂಡಿರುವ ದೀಪಿಕಾ ದಾಸ್, ‘ಸತ್ಯದ ತಲೆ ಮೇಲೆ ಹೊಡೆದಂತೆ ಹೇಳುವ ಬುದ್ಧಿ. ಯಾರೂ ಎಲ್ಲೂ ಹೋಗಿಲ್ಲ. ಯಾರೂ ನಮ್ಮ ಹತ್ರ ಬರುವ ಅವಶ್ಯಕತೆಯೂ ಇಲ್ಲ. ಅನಾವಶ್ಯಕವಾಗಿ ಇಲ್ಲದ್ದನ್ನು ಮಾತನಾಡಿ ನನ್ನ ಹಾಗೂ ನನ್ನ ಕುಟುಂಬವನ್ನು ಎಳೆದು ತರಬೇಡಿ. ದೊಡ್ಡವರ ಅತಿರೇಕದ ಸಣ್ಣತನ ಇನ್ನಾದರೂ ಬೇಡ. ಇನ್ನು ಇದರ ಬಗ್ಗೆ ನನಗೆ ಇನ್ನೇನೂ ಮಾತನಾಡುವುದಿಲ್ಲ’ ಎಂದು ದೀಪಿಕಾ ದಾಸ್ ಪೋಸ್ಟ್ ಹಂಚಿಕೊಂಡಿದ್ದಾರೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ