‘ನನ್ನ ಬಗ್ಗೆ ಹೀನಾಯವಾಗಿ ಮಾತನಾಡುವ ಯೋಗ್ಯತೆ ಯಾರಿಗೂ ಇಲ್ಲ’; ಪುಷ್ಪಾಗೆ ಎಚ್ಚರಿಸಿದ ದೀಪಿಕಾ ದಾಸ್
ಪುಷ್ಪಾ ಅವರು ದೀಪಿಕಾ ದಾಸ್ ಬಗ್ಗೆ ನೀಡಿದ ವಿವಾದಾತ್ಮಕ ಹೇಳಿಕೆಗಳು ಕನ್ನಡ ಚಿತ್ರರಂಗದಲ್ಲಿ ದೊಡ್ಡ ಸುದ್ದಿಯಾಗಿದೆ. ದೀಪಿಕಾ ಅವರು ಪುಷ್ಪಾ ಅವರ ಕುಟುಂಬದವರೇ ಆದರೂ, ಪುಷ್ಪಾ ಅವರ ಟೀಕೆಗಳಿಗೆ ದೀಪಿಕಾ ತೀವ್ರವಾಗಿ ಪ್ರತಿಕ್ರಿಯಿಸಿದ್ದಾರೆ. ಪುಷ್ಪಾ ಅವರು ದೀಪಿಕಾ ಹೇಳಿಕೆಗೆ ಯಾವ ರೀತಿಯಲ್ಲಿ ಪ್ರತಿಕ್ರಿಯಿಸುತ್ತಾರೆ ಎಂಬುದನ್ನು ಕಾದು ನೋಡಬೇಕಿದೆ.

ಯಶ್ ತಾಯಿ, ನಿರ್ಮಾಪಕಿ ಪುಷ್ಪಾ ಅವರು ‘ಕೊತ್ತಲವಾಡಿ’ ಸಿನಿಮಾ ರಿಲೀಸ್ಗೂ ಮೊದಲು ಹಾಗೂ ಆ ಬಳಿಕ ನಿರಂತರವಾಗಿ ಸಂದರ್ಶನಗಳನ್ನು ನೀಡುತ್ತಲೇ ಬರುತ್ತಿದ್ದಾರೆ. ಅವರು ಈ ವೇಳೆ ಹಲವು ವಿಚಾರಗಳ ಬಗ್ಗೆ ಮಾತನಾಡಿದ್ದಾರೆ. ಅವರು ಯಶ್ ಬಗ್ಗೆಯೇ ನಾನಾ ರೀತಿಯ ಹೇಳಿಕೆ ನೀಡಿದ್ದಾರೆ. ಅದೇ ರೀತಿ ಪುಷ್ಪಾ ಅವರು ನಟಿ ದೀಪಿಕಾ ದಾಸ್ (Deepika Das) ಬಗ್ಗೆ ಟೀಕೆ ಮಾಡಿದ್ದರು. ಇದು ದೀಪಿಕಾ ಅವರನ್ನು ಕೆರಳಿಸಿದೆ. ದೀಪಿಕಾ ಈ ಬಗ್ಗೆ ಓಪನ್ ಆಗಿ ಪೋಸ್ಟ್ ಹಾಕಿದ್ದಾರೆ.
ಇಬ್ಬರ ಸಂಬಂಧ
ದೀಪಿಕಾ ದಾಸ್ಗೆ ಪುಷ್ಪಾ ಅವರು ದೊಡ್ಡಮ್ಮ ಆಗಬೇಕು. ಪುಷ್ಪಾ ಹಾಗೂ ದೀಪಿಕಾ ದಾಸ್ ತಾಯಿ ಸೋದರಿಯರು. ಹೀಗಾಗಿ, ಸಂಬಂಧದಲ್ಲಿ ಯಶ್ ಹಾಗೂ ದೀಪಿಕಾ ಅಣ್ಣ-ತಂಗಿ. ದೀಪಿಕಾ ಮಾತ್ರ ಎಲ್ಲಿಯೂ ಯಶ್ ನನ್ನ ಅಣ್ಣ ಎಂದು ಹೇಳಿಕೊಂಡು ಓಡಾಡಿಲ್ಲ.
ಪುಷ್ಪಾ ಹೇಳಿದ್ದೇನು?
ಇತ್ತೀಚೆಗೆ ಅಶ್ವವೇಗ ಯೂಟ್ಯೂಬ್ ಚಾನೆಲ್ನಲ್ಲಿ ಮಾತನಾಡುವಾಗ, ದೀಪಿಕಾಗೆ ಅವಕಾಶ ಕೊಡ್ತೀರಾ ಎಂಬ ಪ್ರಶ್ನೆಗೆ ಉತ್ತರಿಸಿದ ಪುಷ್ಪಾ, ಅವರನ್ನು ಹೀಯಾಳಿಸಿದ್ದರು. ‘ದೀಪಿಕಾ ದಾಸ್ ಹಾಗೂ ನಮಗೆ ಆಗಿ ಬರಲ್ಲ. ಅವಳು ಯಾವ ಹೀರೋಯಿನ್ ಅಂತ ಆಯ್ಕೆ ಮಾಡಿಕೊಳ್ಳಬೇಕು? ಅವಳು ಏನು ಸಾಧನೆ ಮಾಡಿದ್ದಾಳೆ? ಅವರನ್ನು ನಾವು ದೂರದಲ್ಲೇ ಇಟ್ಟಿದ್ದೇವೆ’ ಎಂದು ಪುಷ್ಪಾ ಹೇಳಿದ್ದರು. ಟಿವಿ9 ಕನ್ನಡದ ಜೊತೆ ಮಾತನಾಡುವಾಗ, ‘ದೀಪಿಕಾಗೆ ನನ್ನ ಕಂಡರೆ ಭಯ. ಅವಳು ನನ್ನ ಹತ್ತಿರ ಹೆಚ್ಚು ಮಾತನಾಡಲ್ಲ’ ಎಂದಿದ್ದರು.
ಇದನ್ನೂ ಓದಿ: ತಾವು ಕಂಡ ಕನಸುಗಳ ಜೊತೆ ಜೀವಿಸುತ್ತಿದ್ದಾರೆ ದೀಪಿಕಾ ದಾಸ್
ದೀಪಿಕಾ ದಾಸ್ ಪ್ರತಿಕ್ರಿಯೆ
ದೀಪಿಕಾ ದಾಸ್ ಅವರು ಕನ್ನಡ ಕಿರುತೆರೆ ನಟಿಯಾಗಿ ಗಮನ ಸೆಳೆದಿದ್ದಾರೆ. ಅವರು ‘ನಾಗಿಣಿ’ ಧಾರಾವಾಹಿಯಲ್ಲಿ ಕಾಣಿಸಿಕೊಂಡು ಸಾಕಷ್ಟು ಗಮನ ಸೆಳೆದರು. ಅಲ್ಲದೆ, ಬಿಗ್ ಬಾಸ್ ಶೋಗೆ ಅವರು ಎರಡು ಬಾರಿ ಆಗಮಿಸಿದ್ದರು. ಈ ಮೂಲಕ ದೊಡ್ಡ ಹೆಸರು ಮಾಡಿದ್ದಾರೆ. ಅವರು ಈಗ ವಿವಾಹ ಆಗಿ ಸಂಸಾರದ ಕಡೆ ಗಮನ ಹರಿಸಿದ್ದಾರೆ. ಹೀಗಿರುವಾಗಲೇ ದೀಪಿಕಾ ಬಗ್ಗೆ ಪುಷ್ಪಾ ಈ ರೀತಿಯ ಹೇಳಿಕೆ ನೀಡಿದ್ದರು.
View this post on Instagram
ಈ ಬಗ್ಗೆ ಪ್ರತಿಕ್ರಿಯಿಸಿರೋ ದೀಪಿಕಾ ದಾಸ್, ‘ಹೊಸ ಕಲಾವಿದರನ್ನು ಬೆಳೆಸೋ ಜನರು ಕಲಾವಿದರಿಗೆ ಬೆಲೆ ಕೊಡೋದ್ದನ್ನು ಕಲಿತಿರಬೇಕು. ಇಲ್ಲಿವರೆಗೂ ಯಾರ ಹೆಸರನ್ನು ಹೇಳಿಕೊಂಡು ಬಂದಿಲ್ಲ ಮುಂದೇನೂ ಬರಲ್ಲ. ಕೆಲವರಿಗೆ ಬೆಲೆಕೊಟ್ಟ ಮಾತ್ರಕ್ಕೆ ಯಾರಿಗೂ ಯಾರ ಮೇಲೂ ಭಯ ಇದೆ ಅಂತ ಅಲ್ಲ. ಅದು ಅಮ್ಮ ಆದರೂ ಸರಿ, ದೊಡ್ಡಮ್ಮ ಆದರೂ ಸರಿ ಅಥವಾ ಪುಷ್ಪಮ್ಮ ಆದರೂ ಸರಿ. ವಿಥ್ ಡ್ಯೂ ರೆಸ್ಪೆಕ್ಟ್ ಸ್ಟಾರ್ ಆಫ್ ಅವರ್ ಇಂಡಸ್ಟ್ರಿ. ನಾನು ಯಾವ ದೊಡ್ಡ ನಟಿ ಅಲ್ಲದಿದ್ದರೂ, ಏನು ಸಾಧನೆ ಮಾಡದಿದ್ದರೂ ನನ್ನ ಬಗ್ಗೆ ಹೀನಾಯವಾಗಿ ಮಾತನಾಡುವ ಯೋಗ್ಯತೆ ಯಾರಿಗೂ ಇಲ್ಲ’ ಎಂದು ದೀಪಿಕಾ ಎಚ್ಚರಿಸಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.








