ನಟ ಧನಂಜಯಗೆ ಕನ್ನಡದ ಬಗ್ಗೆ ಅಪಾರ ಪ್ರೀತಿ ಇದೆ. ಅವರು ಬೇರೆ ಭಾಷೆಗಳಲ್ಲಿ ನಟಿಸಿದರೂ ಕನ್ನಡದ ಬಗ್ಗೆ ಅವರಿಗೆ ಇರುವ ಗೌರವ ಕಿಂಚಿತ್ತೂ ಕಡಿಮೆ ಆಗಿಲ್ಲ. ಅದು ಈಗಾಗಲೇ ಸಾಕಷ್ಟು ಬಾರಿ ಸಾಬೀತಾಗಿದೆ. ಪರ ರಾಜ್ಯಗಳಿಗೆ ತೆರಳಿದಾಗಲೂ ಧನಂಜಯ ಕನ್ನಡ ಸಿನಿಮಾಗಳನ್ನು ಹೊಗಳಿದ್ದಾರೆ. ಈ ಮಧ್ಯೆ ಅವರ ಸಿನಿಮಾಗೆ ಇಂಗ್ಲಿಷ್ ಟೈಟಲ್ ಇಟ್ಟಿರುವ ಬಗ್ಗೆ ಅಭಿಮಾನಿಯೋರ್ವ ಕೊಂಕು ತೆಗೆದಿದ್ದ. ಇದಕ್ಕೆ ಧನಂಜಯ ಕಡೆಯಿಂದ ಶಾಂತ ರೀತಿಯಲ್ಲಿ ಖಡಕ್ ಉತ್ತರ ಸಿಕ್ಕಿದೆ.
ಭಾನುವಾರ ‘ಹಿಂದಿ ದಿವಸ’ ಎಂದು ಆಚರಣೆ ಮಾಡಲಾಗಿದೆ. ಇದಕ್ಕೆ ಸಾಕಷ್ಟು ಮಂದಿ ಕನ್ನಡಿಗರು ವಿರೋಧ ವ್ಯಕ್ತಪಡಿಸಿದ್ದಾರೆ. ಆ ಪೈಕಿ ಧನಂಜಯ ಕೂಡ ಒಬ್ಬರು. ‘ಕನ್ನಡ ಕನ್ನಡ ಕನ್ನಡವೆಂದುಲಿ, ಕನ್ನಡ ನಾಡಿನ ಓ ಕಂದ, ಕನ್ನಡ ನಾಡಿನ ಕೀರ್ತಿಯ ಹಬ್ಬಿಸು, ಕನ್ನಡ ತಾಯಿಗೆ ಆನಂದ. ಎಲ್ಲ ಭಾಷೆಯನ್ನು ಗೌರವಿಸುತ್ತೇವೆ. ಆದರೆ ಯಾವುದೇ ಹೇರಿಕೆ ಸಲ್ಲದು’ ಎಂದು ಅವರು ಬರೆದುಕೊಂಡಿದ್ದರು. ಈ ವಿಚಾರ ಇಟ್ಟುಕೊಂಡು ಅಭಿಮಾನಿಯೋರ್ವ ಟೀಕೆ ಮಾಡಿದ್ದ.
ಧನಂಜಯ ‘ಹೆಡ್ ಬುಷ್’ ಹೆಸರಿನ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಇದು ಇಂಗ್ಲಿಷ್ ಟೈಟಲ್ ಎಂದಿರುವ ವ್ಯಕ್ತಿಯೋರ್ವ, ‘ಕನ್ನಡವೇ ನಮ್ಮಮ್ಮ ಎಂದು ಹೆಡ್ ಆ್ಯಂಡ್ ಬುಷ್ ಸಿನಿಮಾ ಟೀಮ್ ಕಡೆಯಿಂದ ಹೇಳಿಕೆ ಬರಲಿಲ್ಲವಾ’ ಎಂದು ಪ್ರಶ್ನೆ ಮಾಡುವ ಮೂಲಕ ಇಂಗ್ಲಿಷ್ ಟೈಟಲ್ ಟೀಕಿಸಿದ್ದ. ಧನಂಜಯ್ ಇದಕ್ಕೆ ಉತ್ತರಿಸಿದ್ದಾರೆ. ‘ನಮ್ಮ ಗ್ರಾಮೀಣ ಭಾಗದಲ್ಲಿ ನಾವು ದುಡ್ಡಿನ ಆಟ ಆಡುವಾಗ ಉಪಯೋಗಿಸುತ್ತಿದ್ದ ಶಬ್ದ ಹೆಡ್ಡು ಬುಶ್ಯು. ಇದಕ್ಕೆ Head and tails ಅಂತ ಅರ್ಥ. ಯಾವುದೇ ಭಾಷೆ ಬಳಸೋದನ್ನು, ಕಲಿಯೋದನ್ನು ಇಲ್ಲಿ ಯಾರೂ ವಿರೋಧಿಸುತ್ತಾ ಇಲ್ಲ. ಅದು ಅವರವರ ಇಷ್ಟ, ಖುಷಿ, ಆಸಕ್ತಿ. ನನಗೂ ಮೂರ್ನಾಕು ಭಾಷೆ ಬರುತ್ತೆ. ಎಲ್ಲ ಭಾಷೆ, ಉಪಭಾಷೆ, ಎಲ್ಲ ಸಂಸ್ಕೃತಿಗಳು ಮುಖ್ಯ. ಎಲ್ಲವೂ ಬದುಕಬೇಕು. ವೈವಿಧ್ಯತೆ ಚೆಂದ. ಒಂದೇ ಭಾಷೆಯನ್ನು ಹೇರಬೇಡಿ, ಅಂತ ಅಷ್ಟೇ ಹೇಳಿರೋದು’ ಎಂದು ತಿರುಗೇಟು ನೀಡಿದ್ದಾರೆ. ಧನಂಜಯ ಪ್ರತಿಕ್ರಿಯೆಗೆ ಎಲ್ಲೆಡೆ ಮೆಚ್ಚುಗೆ ವ್ಯಕ್ತವಾಗಿದೆ.
ಸದ್ಯ, ಧನಂಜಯ ಕೈಯಲ್ಲಿ ಸಾಕಷ್ಟು ಸಿನಿಮಾಗಳಿವೆ. ಸಲಗ, ಡಾಲಿ, ಹೆಡ್ ಬುಷ್, ರತ್ನನ್ ಪ್ರಪಂಚ, ತೋತಾಪುರಿ, ಬಡವ ರಾಸ್ಕಲ್, ಮಾನ್ಸೂನ್ ರಾಗ, ಬೈರಾಗಿ, ಪುಷ್ಪ ಸಿನಿಮಾಗಳಲ್ಲಿ ಧನಂಜಯ ನಟಿಸುತ್ತಿದ್ದಾರೆ.
ಇದನ್ನೂ ಓದಿ: Dhananjay: ಇದು ಡಾಲಿ ಅಲ್ಲ ರತ್ನಾಕರ; ಹೊಸ ಪ್ರಪಂಚದ ಸ್ಯಾಂಪಲ್ ತೋರಿಸಿದ ಧನಂಜಯ್
Dhananjay: ಧನಂಜಯ್ ಬತ್ತಳಿಕೆ ಸೇರಿತು ಹೊಸ ಸಿನಿಮಾ; ಕುತೂಹಲ ಮೂಡಿಸುವ ಪೋಸ್ಟರ್ ಇಲ್ಲಿದೆ