AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ಹಯಗ್ರೀವ’ನಾಗಿ ಧನ್ವೀರ್ ಗೌಡ, ಗೌಪ್ಯವಾಗಿರಲಿದೆ ಮತ್ತೊಬ್ಬ ನಾಯಕನ ಹೆಸರು

Dhanveer Gowda: ಧನ್ವೀರ್ ಗೌಡ ನಟಿಸುತ್ತಿರುವ ‘ಹಯಗ್ರೀವ’ ಸಿನಿಮಾದ ಮುಹೂರ್ತ ಚಾಮುಂಡೇಶ್ವರಿ ಸನ್ನಿಧಿಯಲ್ಲಿ ನೆರವೇರಿದೆ. ಈ ಸಿನಿಮಾದಲ್ಲಿ ಇನ್ನೊಬ್ಬ ನಾಯಕನಿದ್ದು ಅದು ಯಾರೆಂಬುದನ್ನು ಬಹಿರಂಗಪಡಿಸುವುದಿಲ್ಲವಂತೆ ಚಿತ್ರತಂಡ.

‘ಹಯಗ್ರೀವ’ನಾಗಿ ಧನ್ವೀರ್ ಗೌಡ, ಗೌಪ್ಯವಾಗಿರಲಿದೆ ಮತ್ತೊಬ್ಬ ನಾಯಕನ ಹೆಸರು
ಧನ್ವೀರ್ ಗೌಡ
ಮಂಜುನಾಥ ಸಿ.
|

Updated on: Feb 03, 2024 | 9:16 PM

Share

ಸರಣಿ ಆಕ್ಷನ್ ಸಿನಿಮಾಗಳ ಮೂಲಕ ಗಮನ ಸೆಳೆಯುತ್ತಿರುವ ಧನ್ವೀರ್ ಗೌಡ (Dhanveer Gowda) ಅವರ ಮತ್ತೊಂದು ಆಕ್ಷನ್ ಸಿನಿಮಾದ ಮುಹೂರ್ತ ನಡೆದಿದೆ. ಸಮೃದ್ಧಿ ಮಂಜುನಾಥ್, ತಮ್ಮ ಕೆ.ವಿ.ಸಿ ಪ್ರೊಡಕ್ಷನ್ಸ್ ಲಾಂಛನದಲ್ಲಿ ನಿರ್ಮಾಣ ಮಾಡುತ್ತಿರುವ, ರಘುಕುಮಾರ್ ಓ.ಆರ್ ನಿರ್ದೇಶನದಲ್ಲಿ ಧನ್ವೀರ್ ನಾಯಕರಾಗಿ ನಟಿಸುತ್ತಿರುವ “ಹಯಗ್ರೀವ” ಚಿತ್ರದ ಮುಹೂರ್ತ ಸಮಾರಂಭ ನಾಡದೇವತೆ ಶ್ರೀಚಾಮುಂಡೇಶ್ವರಿ ಸನ್ನಿಧಿಯಲ್ಲಿ ನೆರವೇರಿದೆ. ಚಿತ್ರತಂಡದ ಸದಸ್ಯರು ಹಾಗೂ ಹಲವಾರು ಗಣ್ಯರು ಮುಹೂರ್ತ ಸಮಾರಂಭದಲ್ಲಿ ಭಾಗವಹಿಸಿದ್ದರು.

ಇದು ನನ್ನ ಐದನೇ ಚಿತ್ರ ಎಂದು ಮಾತು ಆರಂಭಿಸಿದ ನಾಯಕ ಧನ್ವೀರ್, ಒಳ್ಳೆಯ ತಂಡ ಮತ್ತು ಒಳ್ಳೆಯ ಶೀರ್ಷಿಕೆ ಸಿಕ್ಕಿದೆ. ಬಹಳ ದಿನಗಳಿಂದ ಪ್ಲಾನ್‍ ಮಾಡಿ, ಒಂದೊಳ್ಳೆಯ ಕಥೆ ಮಾಡಿ ಈ ಚಿತ್ರ ಮಾಡುತ್ತಿದ್ದೇವೆ. ಅಭಿಮಾನಿಗಳಿಗೆ ಖುಷಿಯಾಗುವಂತಹ ಕಥೆ ಇದೆ. ಈ ಚಿತ್ರದಲ್ಲಿ ನೀಗ್ರೋಗಳ ಜೊತೆಗೆ ಫೈಟ್‍ ಇದೆ. ‘ಬಜಾರ್’ ನಂತರ ಸಿಕ್ಸ್ ಪ್ಯಾಕ್ ಮಾಡಿಕೊಳ್ಳುತ್ತಿದ್ದೇನೆ. ಒಂದೇ ಹಂತದಲ್ಲಿ ಚಿತ್ರೀಕರಣ ನಡೆಯಲಿದೆ. ಕಥೆ ಮತ್ತು ಪಾತ್ರ ವಿಭಿನ್ನವಾಗಿದೆ ಎಂದರು.

‘ಹಯಗ್ರೀವ’, ನಮ್ಮ ಕೆವಿಸಿ ಪ್ರೊಡಕ್ಷನ್ಸ್‌ ಬ್ಯಾನರ್​ನಲ್ಲಿ ನಿರ್ಮಾಣವಾಗುತ್ತಿರುವ ಮೂರನೆಯ ಚಿತ್ರ ಎಂದು ಮಾತನಾಡಿದ ನಿರ್ಮಾಪಕ ಸಮೃದ್ದಿ ಮಂಜುನಾಥ್, ನಾನು ಯೂಟ್ಯೂಬ್‍ನಲ್ಲಿ ‘ದಿ ಬೆಲ್‍’ ಎಂಬ ಕಿರುಚಿತ್ರ ನೋಡಿದೆ. ಆ ಕಿರುಚಿತ್ರ ಬಹಳ ಖುಷಿ ನೀಡಿತು. ಆ ಕಿರುಚಿತ್ರದ ನಿರ್ದೇಶಕ ರಘುಕುಮಾರ್ ಅವರನ್ನು ಎಂಟು ತಿಂಗಳ ಹಿಂದೆ ಕರೆಸಿ ಮಾತನಾಡಿದೆ. ಒಂದು ಚಿತ್ರ ಮಾಡಿಕೊಡಿ ಎಂದು ಹೇಳಿದೆ. ಅವರು ತಮ್ಮ ತಂಡದೊಂದಿಗೆ ಒಂದೊಳ್ಳೆಯ ಕಥೆ ಮಾಡಿದ್ದಾರೆ. ಇದೊಂದು ಪಕ್ಕಾ ಕಮರ್ಷಿಯಲ್‍ ಸಿನಿಮಾ. ಕನ್ನಡದಲ್ಲಿ ಇಲ್ಲಿಯವರೆಗೂ ಈ ತರಹದ ಸಿನಿಮಾ ಬಂದಿಲ್ಲ ಎಂದು ಹೇಳಬಹುದು. ಧನ್ವೀರ್ ಹಾಗೂ ಸಂಜನಾ ಆನಂದ್ ನಾಯಕ-ನಾಯಕಿಯಾಗಿ ಅಭಿನಯಿಸುತ್ತಿದ್ದಾರೆ. ಈ ಚಿತ್ರದಲ್ಲಿ ಮತ್ತೊಬ್ಬ ನಾಯಕ ನಟಿಸುತ್ತಿದ್ದು, ಅವರು ಯಾರು ಎಂದು ಚಿತ್ರ ಬಿಡುಗಡೆಯವರೆಗೂ ಗೌಪ್ಯವಾಗಿಡಲಾಗುವುದು. ಒಂದೊಳ್ಳೆಯ ಕಥೆಗೆ ಪೂರಕವಾಗಿ ಶೀರ್ಷಿಕೆ ಸಿಕ್ಕಿದೆ. ಈ ಚಿತ್ರವನ್ನು ಎಲ್ಲರೂ ಒಪ್ಪುತ್ತಾರೆ ಎಂಬ ನಂಬಿಕೆ ಇದೆ ಎಂದರು.

ಇದನ್ನೂ ಓದಿ:ರಕ್ತ ನೋಡೋಕೆ ಬಂದವನಲ್ಲ ಈ ‘ವಾಮನ’; ಆ್ಯಕ್ಷನ್ ಮೂಲಕ ಗಮನ ಸೆಳೆದ ಧನ್ವೀರ್

ನಿರ್ಮಾಪಕರು ಫೋನ್‍ ಮಾಡಿ ಸಿನಿಮಾ ಮಾಡಿಕೊಡಿ ಎಂದರು. ನನ್ನ ಹತ್ತಿರ ಒಂದು ಕಥೆ ಇತ್ತು. ಅದನ್ನು ಅವರಿಗೆ ಹೇಳಿದಾಗ, ಇಷ್ಟಪಟ್ಟು ಈ ಚಿತ್ರ ನಿರ್ಮಿಸುವುದಕ್ಕೆ ಮುಂದಾಗಿದ್ದಾರೆ. ಈ ಚಿತ್ರದಲ್ಲಿ ಮುಖ್ಯವಾಗಿ ಪೌರಾಣಿಕ ಅಂಶಗಳ ಜೊತೆಗೆ ಕ್ರೈಮ್‍ ಇದೆ. ಲವ್, ಸೆಂಟಿಮೆಂಟ್, ಸಸ್ಪೆನ್ಸ್ ಸೇರಿದಂತೆ ಕಮರ್ಷಿಯಲ್ ಸಿನಿಮಾಕ್ಕೆ ಬೇಕಾದ ಎಲ್ಲಾ ಅಂಶಗಳು ‘ಹಯಗ್ರೀವ’ ಚಿತ್ರದಲ್ಲಿದೆ. ಕನ್ನಡದಲ್ಲಿ ಇದುವರೆಗೂ ಯಾರೂ ಈ ಥರಹದ ಪ್ರಯತ್ನವನ್ನು ಮಾಡಿಲ್ಲ. ಇಲ್ಲಿ ‘ಹಯಗ್ರೀವ’ ಎಂಬ ಪೌರಾಣಿಕ ಪಾತ್ರದ ಸುತ್ತ ಸಿನಿಮಾ ಸುತ್ತುತ್ತದೆ. ಬೆಂಗಳೂರಿನಲ್ಲಿ ಇಡೀ ಸಿನಿಮಾದ ಚಿತ್ರೀಕರಣ ನಡೆಯಲಿದೆ. ರಂಗಾಯಣ ರಘು, ತಾರಾ, ಸಾಧು ಕೋಕಿಲ, ರವಿಶಂಕರ್ ಮುಂತಾದವರು ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಳ‍್ಳುತ್ತಿದ್ದಾರೆ. ಸಿನಿಮಾದಲ್ಲಿ ಮೂರು ಹಾಡುಗಳಿದ್ದು, ಜೂಡಾ ಸ್ಯಾಂಡಿ ಸಂಗೀತ ಸಂಯೋಜಿಸುತ್ತಿದ್ದಾರೆ.‌ ಕಾರ್ತಿಕ್, ಛಾಯಾಗ್ರಹಣ ಹಾಗೂ ಉಮೇಶ್ ಅವರ ಸಂಕಲನವಿರುವ ಈ ಸಿನಿಮಾಕ್ಕೆ ನಾನೇ ಕಥೆ, ಚಿತ್ರಕಥೆ ಬರೆದಿದ್ದೇನೆ. ಸಂಭಾಷಣೆಯನ್ನು ಶೈಲೇಶ್ ರಾಜ್ ಹಾಗೂ ಚೇತನ್ ಸಿದ್ ಬರೆದಿದ್ದಾರೆ ಎಂದು ನಿರ್ದೇಶಕ ರಘುಕುಮಾರ್ ಓ ಆರ್ ತಿಳಿಸಿದರು.

ತಮ್ಮ ಪಾತ್ರ ಕೂಡ ಚೆನ್ನಾಗಿದೆ ಎಂದು ನಾಯಕಿ ಸಂಜನಾ ಆನಂದ್ ತಿಳಿಸಿದರು. ಛಾಯಾಗ್ರಾಹಕ ಕಾರ್ತಿಕ್, ಸಂಗೀತ ನಿರ್ದೇಶಕ ಜೂಡಾ ಸ್ಯಾಂಡಿ ಹಾಗೂ ಸಾಹಸ ನಿರ್ದೇಶಕ ಅರ್ಜುನ್ ಮಾಸ್ಟರ್ ಸೇರಿದಂತೆ ಅನೇಕ ತಂತ್ರಜ್ಞರು ಚಿತ್ರದ ಕುರಿತು ಮಾತನಾಡಿದರು. ನಿರ್ದೇಶಕ, ನಿರ್ಮಾಪಕ ಹಾಗೂ ವಿತರಕ ಗುರು ದೇಶಪಾಂಡೆ, ಯೋಗಾನಂದ್ ಮುಂತಾದವರು ಅತಿಥಿಗಳಾಗಿ ಆಗಮಿಸಿ ಚಿತ್ರತಂಡಕ್ಕೆ ಶುಭ ಕೋರಿದರು. ಚಿತ್ರದ ಫಸ್ಟ್ ಲುಕ್ ಮೋಷನ್ ಪೋಸ್ಟರ್ ಆನಂದ್ ಆಡಿಯೋ ಮೂಲಕ ಬಿಡುಗಡೆಯಾಗಿದ್ದು, ಅಪಾರ ಮೆಚ್ಚುಗೆ ವ್ಯಕ್ತವಾಗಿದೆ. ಅಧಿಕ ಸಂಖ್ಯೆಯಲ್ಲಿ ವೀಕ್ಷಣೆಯಾಗುತ್ತಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ