‘ಜಾಸ್ತಿ ಪ್ರೀತಿ’ ಸಿನಿಮಾದಲ್ಲಿ ಧರ್ಮ ಕೀರ್ತಿರಾಜ್ (Dharma Keerthiraj) ಹಾಗೂ ಬಿಗ್ ಬಾಸ್ ಖ್ಯಾತಿಯ ಕೃಷಿ ತಾಪಂಡ ಅವರು ಜೋಡಿಯಾಗಿ ನಟಿಸಿದ್ದಾರೆ. ಈ ಸಿನಿಮಾ ‘ಪೂರ್ಣಶ್ರೀ ಎಂಟರ್‌ಪ್ರೈಸಸ್’ ಮೂಲಕ ನಿರ್ಮಾಣ ಆಗಿದೆ. ಇತ್ತೀಚೆಗೆ ಈ ಸಿನಿಮಾದ ಟ್ರೇಲರ್ ಮತ್ತು ಹಾಡು ಬಿಡುಗಡೆ ಮಾಡಲಾಯಿತು. ‘ಮಿಡಿದ ಹೃದಯಗಳ ಮೌನರಾಗ’ ಎಂಬ ಟ್ಯಾಗ್ಲೈನ್ ಈ ಸಿನಿಮಾಗೆ ಇದೆ. ರಿಯಲ್ ಎಸ್ಟೇಟ್ ಉದ್ಯಮಿ ಶಿವರಾಂ ಕೊಡತಿ ಅವರು ‘ಜಾಸ್ತಿ ಪ್ರೀತಿ’ (Jasti Preethi) ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ. ಕೃಷ್ಣಪ್ಪ ಅವರು ಸಹ ನಿರ್ಮಾಪಕರಾಗಿದ್ದಾರೆ. ಅರುಣ್ ಮಾನವ್ ಅವರು ಕಥೆ, ಸಂಭಾಷಣೆ, ಚಿತ್ರಕಥೆ, ಸಾಹಿತ್ಯ ಬರೆಯುವುದರ ಜೊತೆಗೆ ನಿರ್ದೇಶನ ಕೂಡ ಮಾಡಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಚಿತ್ರತಂಡದವರು ಮಾತನಾಡಿದರು. ಜಂಕಾರ್ ಮ್ಯೂಸಿಕ್ ಮೂಲಕ ಹಾಡು ಬಿಡುಗಡೆ ಆಗಿದೆ.
‘ಈ ಸಿನಿಮಾದ ಕಥೆ ಹುಟ್ಟಲು ಒಂದು ಫೇಸ್‌ಬುಕ್ ಪೇಜ್ ಕಾರಣ’ ಎನ್ನುವ ಮೂಲಕ ನಿರ್ದೇಶಕ ಅರುಣ್ ಮಾನವ್ ಅವರು ಕೌತುಕ ಮೂಡಿಸಿದ್ದಾರೆ. ‘ಫೇಸ್‌ಬುಕ್ ನೋಡುವಾಗ ಓರ್ವ ಹುಡುಗಿಯ ಫೋಟೋ ನೋಡಿ ಅಯ್ಯೋ ಅನಿಸಿತು. ಆ ಏಳೆಯನ್ನು ಇಟ್ಟುಕೊಂಡು ಕಾಲ್ಪನಿಕವಾಗಿ ಕಥೆ ಬರೆದೆ. ಎಲ್ಲಿಯೂ ನೋಡಿರದ ಪ್ರೀತಿಯನ್ನು ಈ ಸಿನಿಮಾದಲ್ಲಿ ನೋಡಬಹುದು. ಇದು ಯಾವುದೇ ವ್ಯಕ್ತಿಗೆ ಸಂಬಂಧಪಟ್ಟಿಲ್ಲ. ಡಿಫರೆಂಟ್ ನಿರೂಪಣೆ ಈ ಸಿನಿಮಾದಲ್ಲಿದೆ. ಆದಷ್ಟು ಬೇಗ ಬಿಡುಗಡೆ ಮಾಡುತ್ತೇವೆ’ ಎಂದು ನಿರ್ದೇಶಕರು ಹೇಳಿದ್ದಾರೆ.
ಇದನ್ನೂ ಓದಿ: ‘ಅಪ್ಪಾಜಿ’ ಶೀರ್ಷಿಕೆಯಲ್ಲಿ ಹೊಸ ಸಿನಿಮಾ; ಶುಭ ಕೋರಿದ ಪ್ರಥಮ್
ಎಲ್.ಎನ್. ಮುಕುಂದರಾಜ್ ಅವರು ಈ ಕಾರ್ಯಕ್ರಮಕ್ಕೆ ಬಂದು ಚಿತ್ರತಂಡಕ್ಕೆ ಶುಭ ಕೋರಿದರು. ನಟ ಧರ್ಮ ಕೀರ್ತಿರಾಜ್ ಅವರಿಗೆ ಈ ಸಿನಿಮಾ ಮೇಲೆ ಭರವಸೆ ಇದೆ. ‘ಒಂದು ತೀವ್ರವಾದ ಪ್ರೇಮಕಥೆಯ ಏಳೆ ಈ ಸಿನಿಮಾದಲ್ಲಿ ಬಹಳ ಚೆನ್ನಾಗಿ ಮೂಡಿಬಂದಿದೆ. ಸಿನಿಮಾಗೆ ಏನೂ ಕೊರತೆ ಮಾಡಿಲ್ಲ. ಎಲ್ಲರೂ ಬಹಳ ಆಸಕ್ತಿಯಿಂದ ಕೆಲಸ ಮಾಡಿದ್ದಾರೆ. ಸದ್ಯಕ್ಕೆ ಚಿತ್ರಮಂದಿರಗಳಲ್ಲಿ ಪ್ರೇಕ್ಷಕರ ಕೊರತೆ ಕಾಣುತ್ತಿದೆ. ಯಾರೂ ಸಹ ಸಿನಿಮಾ ನೋಡಲು ಬರುತ್ತಿಲ್ಲ. ಹಾಗಿದ್ದರೂ ನಿರ್ಮಾಪಕರು ಧೈರ್ಯ ಮಾಡಿ ಈ ಕಥೆಯ ಮೇಲಿನ ನಂಬಿಕೆಯಿಂದ ಬಂಡವಾಳ ಹೂಡಿದ್ದಾರೆ. ಒಳ್ಳೆಯ ಅಂಶಗಳು ಇವೆ. ಹಾಗಾಗಿ ಈ ಸಿನಿಮಾ ನೋಡಲು ಜನರು ಬರುತ್ತಾರೆ ಎಂಬ ವಿಶ್ವಾಸವಿದೆ’ ಎಂದಿದ್ದಾರೆ ಧರ್ಮ ಕೀರ್ತಿರಾಜ್.
ಈ ಸಿನಿಮಾದಲ್ಲಿ ಕೃಷಿ ತಾಪಂಡ ಅವರು ನಾಯಕಿಯಾಗಿ ನಟಿಸಿದ್ದಾರೆ. ಮುರಳಿ ರಾಮ್, ಶೋಭರಾಣಿ, ಬ್ಯಾಂಕ್ ಜನಾರ್ಧನ್, ಸುಚೇಂದ್ರ ಪ್ರಸಾದ್, ಎಂ.ಎನ್. ಲಕ್ಷೀದೇವಿ, ಮೈಸೂರು ರಮಾನಂದ್, ಮಧು ಮಂದಗೆರೆ ಸೇರಿದಂತೆ ಹಲವು ಕಲಾವಿದರು ಈ ಸಿನಿಮಾದಲ್ಲಿ ಅಭಿನಯಿಸಿದ್ದಾರೆ. ವಿನೀತ್ ರಾಜ್ ಮೆನನ್ ಅವರು ಸಿನಿಮಾದ 6 ಹಾಡುಗಳಿಗೆ ಸಂಗೀತ ನೀಡಿದ್ದಾರೆ. ಸತೀಶ್, ಮಲ್ಲಿಕಾರ್ಜುನ್ ಅವರ ಛಾಯಾಗ್ರಹಣ, ವೆಂಕಟೇಶ್ ಯುಡಿವಿ ಅವರ ಸಂಕಲನ, ಗೋವಿಂದ್ ವಿ. ಮಾಲೂರು ಅವರ ನೃತ್ಯ ನಿರ್ದೇಶನ, ಕುಂಗ್ ಫೂ ಚಂದ್ರು ಅವರ ಸಾಹಸ ನಿರ್ದೇಶನ ಈ ಚಿತ್ರಕ್ಕಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.