‘ಅಪ್ಪಾಜಿ’ ಶೀರ್ಷಿಕೆಯಲ್ಲಿ ಹೊಸ ಸಿನಿಮಾ; ಶುಭ ಕೋರಿದ ಪ್ರಥಮ್​

ರಾಮನವಮಿಯ ದಿನ ಸಿದ್ದಗಂಗಾ ಮಠದಲ್ಲಿರುವ ಶಿವಕುಮಾರ ಸ್ವಾಮಿಗಳ ಗದ್ದಿಗೆ ಸನ್ನಿದಿಯಲ್ಲಿ ‘ಅಪ್ಪಾಜಿ’ ಸಿನಿಮಾಗೆ ಮುಹೂರ್ತ ಮಾಡಲಾಯಿತು. ಬಿಗ್ ಬಾಸ್ ರಿಯಾಲಿಟಿ ಶೋ ಮೂಲಕ ಖ್ಯಾತಿ ಗಳಿಸಿದ ನಟ ಪ್ರಥಮ್ ಅವರು ಈ ಸಿನಿಮಾದ ಮೊದಲ ದೃಶ್ಯಕ್ಕೆ ಕ್ಲಾಪ್ ಮಾಡಿದರು. ಹಿರಿಯ ನಟ ಸ್ವಸ್ತಿಕ್ ಶಂಕರ್ ಅವರು ಕ್ಯಾಮೆರಾ ಚಾಲನೆ ಮಾಡುವ ಮೂಲಕ ‘ಅಪ್ಪಾಜಿ’ ಚಿತ್ರತಂಡಕ್ಕೆ ಶುಭ ಹಾರೈಸಿದರು.

‘ಅಪ್ಪಾಜಿ’ ಶೀರ್ಷಿಕೆಯಲ್ಲಿ ಹೊಸ ಸಿನಿಮಾ; ಶುಭ ಕೋರಿದ ಪ್ರಥಮ್​
‘ಅಪ್ಪಾಜಿ’ ಸಿನಿಮಾದ ಮುಹೂರ್ತ ಸಮಾರಂಭ
Follow us
ಮದನ್​ ಕುಮಾರ್​
|

Updated on: Apr 18, 2024 | 6:53 PM

1996ರಲ್ಲಿ ‘ಅಪ್ಪಾಜಿ’ ಸಿನಿಮಾ ಬಿಡುಗಡೆಯಾಗಿ ಯಶಸ್ವಿ ಆಗಿತ್ತು. ಆ ಸಿನಿಮಾದಲ್ಲಿ ವಿಷ್ಣುವರ್ಧನ್​ (Dr Vishnuvardhan) ಪ್ರಮುಖ ಪಾತ್ರ ಮಾಡಿದ್ದರು. ಈಗ ‘ಅಪ್ಪಾಜಿ’ ಶೀರ್ಷಿಕೆಯಲ್ಲಿ ಹೊಸ ಸಿನಿಮಾ (Kannada Cinema) ಸೆಟ್ಟೇರಿದೆ. ಅಂದಹಾಗೆ, ವಿಷ್ಣುವರ್ಧನ್​ ನಟನೆಯ ಆ ಸಿನಿಮಾಗೂ ಈಗ ಸೆಟ್ಟೇರಿದ ಹೊಸ ಚಿತ್ರಕ್ಕೂ ಯಾವುದೇ ಲಿಂಕ್​ ಇಲ್ಲ. ಹೊಸ ತಂಡವೊಂದು ‘ಅಪ್ಪಾಜಿ’ (Appaji) ಟೈಟಲ್​ ಇಟ್ಟುಕೊಂಡು ಸಿನಿಮಾ ಮಾಡಲು ಮುಂದಾಗಿದೆ. ‘ಪ್ರೀತಿಗೆ ಕಡಲು, ಕೋಪಕ್ಕೆ ಸಿಡಿಲು’ ಎಂಬ ಟ್ಯಾಗ್​ಲೈನ್​ ಈ ಶೀರ್ಷಿಕೆಗೆ ಇದೆ. ಓಂ ಪ್ರತಾಪ್ ಹೆಚ್. ಶಿವಮೊಗ್ಗ ಅವರು ಈ ಸಿನಿಮಾಗೆ ಚಿತ್ರಕಥೆ, ಸಂಭಾಷಣೆ ಬರೆದು ಆ್ಯಕ್ಷನ್​-ಕಟ್​ ಹೇಳುತ್ತಿದ್ದಾರೆ.

ಶೀರ್ಷಿಕೆ ಬಗ್ಗೆ ನಿರ್ದೇಶಕರು ಮಾತನಾಡಿದ್ದಾರೆ. ‘ಈ ಮೊದಲು ನಮ್ಮ ಸಿನಿಮಾಗೆ ‘ಜನಕ’ ಎಂಬ ಟೈಟಲ್​ ಇಡಲಾಗಿತ್ತು. ಆದರೆ ಅದನ್ನು ಬೇರೆಯವರು ನೋಂದಣಿ ಮಾಡಿಸಿದ್ದರು. ಹಾಗಾಗಿ, ‘ಅಪ್ಪಾಜಿ’ ಎಂಬ ಟೈಟಲ್​ ಇಡುವುದು ಅನಿವಾರ್ಯ ಆಯಿತು. ನಾನು ಹಾಗೂ ನಿರ್ಮಾಪಕರು ‘ಸಾಹಸ ಸಿಂಹ’ ವಿಷ್ಣುವರ್ಧನ್​ ಅಭಿಮಾನಿಗಳು. ಈ ಟೈಟಲ್​ ಹಳೆಯದಾದರೂ ಕಥೆ ಹೊಸತನದಿಂದ ಕೂಡಿರಲಿದೆ’ ಎಂದು ಅವರು ಹೇಳಿದ್ದಾರೆ.

ವೃತ್ತಿಯಲ್ಲಿ ವಕೀಲರಾದ ತುಮಕೂರಿನ ಬಿ. ಚಂದಿರಧರ ಅವರು ತಂದೆಯ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಅಲ್ಲದೇ, ‘ಸುಚಂದು ನೂಶಿತ ಕ್ರಿಯೇಶನ್ಸ್’ ಬ್ಯಾನರ್​ ಮೂಲಕ ಬಂಡವಾಳ ಹೂಡುತ್ತಿದ್ದಾರೆ. ‘ತಂದೆಯು ಮಕ್ಕಳ ಮೇಲೆ ತೋರುವ ಪ್ರೀತಿ, ಆತನ ಮೇಲಿರುವ ಜವಾಬ್ದಾರಿ, ಒಂದು ಹಂತದಲ್ಲಿ ಆಗನಿಗೆ ಆಗುವ ನೋವು, ಅನ್ಯಾಯಗಳು.. ಇತ್ಯಾದಿ ಅಂಶಗಳನ್ನು ಭಾವನಾತ್ಮಕವಾಗಿ ಈ ಸಿನಿಮಾದಲ್ಲಿ ತೋರಿಸಲಾಗುತ್ತದೆ’ ಎಂದು ನಿರ್ದೇಶಕರು ಹೇಳಿದ್ದಾರೆ. ಡಾಬಸ್​ ಪೇಟೆ, ತುಮಕೂರು, ಬೆಂಗಳೂರು ಮುಂತಾದೆಡೆ ಚಿತ್ರೀಕರಣ ನಡೆಯಲಿದೆ.

‘ಅಪ್ಪಾಜಿ’ ಸಿನಿಮಾದಲ್ಲಿ ಶ್ರೀವೆಂಕಿ ನಾಯಕನಾಗಿ ಹಾಗೂ ಪೂಜಾ ರಾಮ್ ನಾಯಕಿಯಾಗಿ ನಟಿಸುತ್ತಿದ್ದಾರೆ. ತಾಯಿಯ ಪಾತ್ರದಲ್ಲಿ ಹಿರಿಯ ನಟಿ ಭವ್ಯ ಕಾಣಿಸಿಕೊಳ್ಳಲಿದ್ದಾರೆ. ನಾಗೇಂದ್ರ ಅರಸ್, ಜಗದೀಶ್‌ ಕೊಪ್ಪ, ಮಹೇಶ್‌ ಸಿದ್ದು, ಸುನಿಲ್, ಅಭಿಷೇಕ್, ಕರ್ಣ, ಪಲ್ಟಿ ಗೋವಿಂದ, ಯಶಸ್, ಸುಶೀಲಾ, ಸುರೇಶ್‌ ಸ್ವಾಮಿ, ಗೋಪಾಲ್ ಕೆ.ಆರ್, ಶಿವಮೊಗ್ಗ ರಾಮಣ್ಣ, ಬೇಬಿ ಚೈತ್ರಾ, ಕೆಂಚಪ್ಪ, ಮಾಸ್ಟರ್ ದುಶ್ಯಂತ ಚಂದ್ರ, ಲಿಖಿತಾ ಮುಂತಾದವರು ಅಭಿನಯಿಸುತ್ತಿದ್ದಾರೆ.

ಇದನ್ನೂ ಓದಿ: ಯುವಕರಿಗೆ ಹೆಣ್ಣು ಸಿಗ್ತಿಲ್ಲ; ಆದ್ರೆ ವಯಸ್ಸಾದವನಿಗೆ ವಿವಾಹ ನಿಶ್ಚಯ: ಇದು ‘ಒಂದು ಮದುವೆ ಕಥೆ’

ಚಿತ್ರದಲ್ಲಿ 6 ಹಾಡುಗಳು ಇರಲಿದ್ದು ಕುಶಾಲ್‌ ರಾಜ್ ಸಂಗೀತ ನಿರ್ದೇಶನ ಮಾಡುತ್ತಿದ್ದಾರೆ. ಜಿ.ವಿ. ರಮೇಶ್ ಹಾಗೂ ಕೇಶವ್ ಛಾಯಾಗ್ರಹಣ ಮಾಡುತ್ತಿದ್ದಾರೆ. ಕೌರವ ವೆಂಕಟೇಶ್ ಸಾಹಸ ನಿರ್ದೇಶನ ಮಾಡುತ್ತಿದ್ದಾರೆ. ತ್ರಿಲೋಕ್‌ ತ್ರಿವಿಕ್ರಮ್ ಅವರು ಸಾಹಿತ್ಯ ಬರೆಯುತ್ತಿದ್ದಾರೆ. ಕಾರ್ಯಕಾರಿ ನಿರ್ಮಾಪಕನಾಗಿ ಜಗದೀಶ್‌ ಗಂಗಪ್ಪ ಕೆಲಸ ಮಾಡುತ್ತಿದ್ದು, ಮಹೇಶ್​ ಅವರು ಸಂಕಲನದ ಜವಾಬ್ದಾರಿ ಹೊತ್ತಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.