AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಯುವಕರಿಗೆ ಹೆಣ್ಣು ಸಿಗ್ತಿಲ್ಲ; ಆದ್ರೆ ವಯಸ್ಸಾದವನಿಗೆ ವಿವಾಹ ನಿಶ್ಚಯ: ಇದು ‘ಒಂದು ಮದುವೆ ಕಥೆ’

‘ಒಂದು ಮದುವೆ ಕಥೆ’ ಸಿನಿಮಾದ ಟೈಟಲ್​ ಜೊತೆ ‘ತಪ್ದೇ ಎಲ್ಲರೂ ಬನ್ನಿ’ ಎನ್ನುವ ಅಡಿಬರಹ ಇದೆ. ಒಂದು ರಾತ್ರಿಯಿಂದ ಮರುದಿನ ಸಂಜೆವರೆಗೆ ನಡೆಯುವ ಘಟನೆಗಳೇ ಈ ಸಿನಿಮಾದ ಜೀವಾಳ. ಕನಸು ರಮೇಶ್ ಅವರ ನಿರ್ದೇಶನದಲ್ಲಿ ಈ ಸಿನಿಮಾ ಮೂಡಿಬರುತ್ತಿದೆ. ವಿಜಯೇಂದ್ರ ಗೌಡ ನಿರ್ಮಾಣ ಮಾಡುತ್ತಿದ್ದಾರೆ. ಪಾತ್ರವರ್ಗ ಮತ್ತು ಇತರ ಮಾಹಿತಿ ಇಲ್ಲಿದೆ...

ಯುವಕರಿಗೆ ಹೆಣ್ಣು ಸಿಗ್ತಿಲ್ಲ; ಆದ್ರೆ ವಯಸ್ಸಾದವನಿಗೆ ವಿವಾಹ ನಿಶ್ಚಯ: ಇದು ‘ಒಂದು ಮದುವೆ ಕಥೆ’
‘ಒಂದು ಮದುವೆ ಕಥೆ’ ಸಿನಿಮಾ ತಂಡ
Follow us
ಮದನ್​ ಕುಮಾರ್​
|

Updated on: Apr 14, 2024 | 5:00 PM

ಇತ್ತೀಚೆಗೆ ‘ಒಂದು ಮದುವೆ ಕಥೆ’ ಶೀರ್ಷಿಕೆಯ ಹೊಸ ಸಿನಿಮಾ (New Kannada Movie) ಸೆಟ್ಟೇರಿದೆ. ಹಾಸ್ಯ ಕಥಾಹಂದರ ಹೊಂದಿರುವ ಈ ಸಿನಿಮಾದ ಮುಹೂರ್ತ ಕಾರ್ಯಕ್ರಮ ಬಂಡೆ ಮಹಾಕಾಳಿ ದೇವಸ್ಥಾನದಲ್ಲಿ ನಡೆಯಿತು. ಮೊದಲ ದೃಶ್ಯಕ್ಕೆ ಉದ್ಯಮಿ ಡಾ. ಬಿ.ಎಂ. ಉಮೇಶ್ ಕುಮಾರ್ ಕ್ಲಾಪ್ ಮಾಡಿ ಶುಭ ಕೋರಿದರು. ‘ತಪ್ದೇ ಎಲ್ಲರೂ ಬನ್ನಿ’ ಎಂಬ ಟ್ಯಾಗ್​ ಲೈಗ್​ ಈ ಸಿನಿಮಾದ ಶೀರ್ಷಿಕೆಗೆ ಇದೆ. ರಿಯಲ್ ಎಸ್ಟೇಟ್ ಉದ್ಯಮಿ ವಿಜಯೇಂದ್ರ ಗೌಡ ಅವರು ಈ ಸಿನಿಮಾಗೆ ಬಂಡವಾಳ ಹೂಡುತ್ತಿದ್ದಾರೆ. ರಾಯಚೂರು ಮೂಲದ ಟಿ.ಹೆಚ್. ಡುಳ್ಳಯ್ಯ ತುರುಕನ ಡೋಣ ಹಾಗೂ ರಮೇಶ ಸಲ್ಲೇದ ಉದ್ಬಾಲ ಅವರು ಸಹ ನಿರ್ಮಾಪಕರಾಗಿದ್ದಾರೆ. ಅಂದಾಜು 250ಕ್ಕೂ ಅಧಿಕ ನಾಟಕಗಳನ್ನು ನಿರ್ದೇಶಿಸಿದ ರಂಗಕರ್ಮಿ ಕನಸು ರಮೇಶ್ ಅವರು ‘ಒಂದು ಮದುವೆ ಕಥೆ’ (Ondu Maduve Kathe) ಸಿನಿಮಾಗೆ ಕಥೆ, ಚಿತ್ರಕಥೆ ಬರೆದು ನಿರ್ದೇಶನ ಮಾಡುತ್ತಿದ್ದಾರೆ.

ಒಂದು ರಾತ್ರಿಯಿಂದ ಮರುದಿನ ಸಂಜೆ ತನಕ ನಡೆಯುವ ಸಂಗತಿಗಳೇ ಈ ಸಿನಿಮಾದ ಜೀವಾಳ. ಆ ಬಗ್ಗೆ ಚಿತ್ರತಂಡದವರು ಮಾಹಿತಿ ಹಂಚಿಕೊಂಡಿದ್ದಾರೆ. ಜೀವನದಲ್ಲಿ ಗಂಡು ಮತ್ತು ಹೆಣ್ಣಿಗೆ ಹೊಸ ಅಧ್ಯಾಯ ಶುರುವಾಗೋದು ಮದುವೆ ಆದಾಗ. ಮದುವೆಗಾಗಿ ಹಲವು ಪ್ರಯತ್ನಗಳನ್ನು ಮಾಡಲಾಗುತ್ತದೆ. ಇಂದಿನ ಪರಿಸ್ಥಿತಿಯಲ್ಲಿ ಹೆಣ್ಣು ಭ್ರೂಣಹತ್ಯೆಯ ಕಾರಣದಿಂದ ಹಳ್ಳಿಗಳಲ್ಲಿ ಯುವಕರಿಗೆ ಹುಡುಗಿ ಸಿಗುತ್ತಿಲ್ಲ. ಹೀಗಿರುವಾಗ ವಯಸ್ಸಾದವನಿಗೆ ವಿವಾಹ ನಿಶ್ಚಯವಾಗುತ್ತದೆ. ಇದರಿಂದ ಅಲ್ಲಿನ ಜನರಿಗೆ ಕುತೂಹಲ ಮೂಡುತ್ತದೆ. ಆಹ್ವಾನ ಇಲ್ಲದಿದ್ದರೂ ಕಲ್ಯಾಣ ಮಂಟಪಕ್ಕೆ ಬರುತ್ತಾರೆ. ಆ ನಂತರ ನಡೆಯುವ ಸಂಗತಿಗಳನ್ನು ನಿರ್ದೇಶಕರು ಕಾಮಿಡಿಯಾಗಿ ತೋರಿಸಲಿದ್ದಾರೆ.

ಮದುವೆ ಮನೆಯಲ್ಲಿ ದಲ್ಲಾಳಿಗಳ ಆಟಾಟೋಪ, ಸರ್ಕಾರಿ ಕೆಲವ ಇರುವವರಿಗೆ ಮಾತ್ರ ಹೆಣ್ಣು ಕೊಡುವುದು ಎಂಬ ತಂದೆ-ತಾಯಿ ಧೋರಣೆ ಮುಂತಾದ ಅಂಶಗಳು ಕಾಮಿಡಿ ರೂಪದಲ್ಲಿ ಮೂಡಿಬರಲಿವೆ. ಪ್ರತಿಯೊಂದು ದೃಶ್ಯದಲ್ಲಿ ಸಮಾಜಕ್ಕೆ ಸಂದೇಶ ನೀಡುವ ಸಿನಿಮಾ ಇದು. ಕಥೆ ಕಾಲ್ಪನಿಕವಾದರೂ ವಾಸ್ತವದ ಸಂಗತಿಗಳು ಇವೆ. ಕ್ಲೈಮಾಕ್ಸ್‌ನಲ್ಲಿ ಆತ ಮದುವೆ ಆಗ್ತಾನಾ ಅಥವಾ ಇಲ್ಲವಾ ಎಂಬ ಕೌತುಕ ಇದರಲ್ಲಿ ಇದೆ ಎಂದು ಚಿತ್ರತಂಡದವರು ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿ: ಸೆಲೆಬ್ರಿಟಿಗಳ ಲವ್​, ಮದುವೆ ಹಿಂದಿನ ಕರಾಳ ಸತ್ಯ ತೆರೆದಿಟ್ಟ ನೋರಾ ಫತೇಹಿ

ಮನು ರಾವ್ ಅವರು ಈ ಸಿನಿಮಾಗೆ ಸಂಗೀತ ನಿರ್ದೇಶನ ಮಾಡುತ್ತಿದ್ದಾರೆ. ದೀಪಕ್‌ಕುಮಾರ್ ಜೆ.ಕೆ. ಅವರ ಛಾಯಾಗ್ರಹಣ, ಜಾಬ್ಸನ್ ಅವರ ಸಂಕಲನದಲ್ಲಿ ಸಿನಿಮಾ ಮೂಡಿಬರಲಿದೆ. ದಿಲೀಪ್‌ ಸಂಜೀವ್ ಅವರು ಸಂಭಾಷಣೆ ಬರೆದಿದ್ದಾರೆ. ಮೈಸೂರು, ಮಂಡ್ಯ ಮುಂತಾದ ಕಡೆಗಳಲ್ಲಿ ಒಂದೇ ಹಂತದಲ್ಲಿ ಶೂಟಿಂಗ್​ ಮುಗಿಸಲು ‘ಒಂದು ಮದುವೆ ಕಥೆ’ ಚಿತ್ರತಂಡ ಪ್ಲ್ಯಾನ್​ ಮಾಡಿಕೊಂಡಿದೆ.

ಇದನ್ನೂ ಓದಿ: ಮದುವೆ ಆಗಿ ಮಗು ಆಗಿರೋ ವಿಚಾರವನ್ನು ಎಲ್ಲರಿಂದ ಮುಚ್ಚಿಟ್ಟ ಖ್ಯಾತ ನಟ

‘ಒಂದು ಮದುವೆ ಕಥೆ’ ಸಿನಿಮಾದಲ್ಲಿ ರವಿ ಸಿರಿ, ಗಹನಾ ಅವರಿಗೆ ಮುಖ್ಯ ಪಾತ್ರವಿದೆ. ನೂರಕ್ಕೂ ಅಧಿಕ ಸಿನಿಮಾಗಳಲ್ಲಿ ನಟಿಸಿರುವ ‘ಬೌ ಬೌ ಬಿರಿಯಾನಿ’ ಖ್ಯಾತಿಯ ಜಯರಾಮ್ ಅವರು ಇದೇ ಮೊದಲ ಬಾರಿಗೆ ಈ ಚಿತ್ರದಲ್ಲಿ ಪ್ರಮುಖ ಪಾತ್ರ ಮಾಡುತ್ತಿದ್ದಾರೆ. ಅನೇಕ ಪೋಷಕ ಕಲಾವಿದರು ನಟಿಸುತ್ತಿದ್ದಾರೆ. ಗಣೇಶ್‌ ರಾವ್‌, ಕಿಲ್ಲರ್‌ ವೆಂಕಟೇಶ್, ರಂಜನ್‌ ಸನತ್, ಮಿಮಿಕ್ರಿ ಗೋಪಿ, ‘ಗಿಚ್ಚಿ ಗಿಲಿಗಿಲಿ’ ಖ್ಯಾತಿಯ ಜಗ್ಗಪ್ಪ, ಸುಶ್ಮಿತಾ, ಸಂತ ನಟರಾಜ್, ಸಾಹಳ್ಳಿ ರಮೇಶ್, ಸಿಲ್ಲಿಲಲ್ಲಿ ಶ್ರೀನಿವಾಸ ಗೌಡ, ಅನಿಲ್‌ ಕುಮಾರ್, ಸುಜಾತಾ ಹಿರೇಮಠ್, ಪ್ರಸನ್ನ ಮುಂತಾದವರು ಈ ಸಿನಿಮಾದ ಪಾತ್ರವರ್ಗದಲ್ಲಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.