Soundarya Jagadish: ಖ್ಯಾತ ನಿರ್ಮಾಪಕ ಸೌಂದರ್ಯ ಜಗದೀಶ್ ನಿಧನ; ಆತ್ಮಹತ್ಯೆ ಶಂಕೆ
ನಿರ್ಮಾಪಕ ಸೌಂದರ್ಯ ಜಗದೀಶ್ ಅವರು ನಿಧನರಾಗಿದ್ದಾರೆ. ಆತ್ಮಹತ್ಯೆ ಮಾಡಿಕೊಂಡು ಅವರು ಕೊನೆಯುಸಿರು ಎಳೆದಿದ್ದಾರೆ ಎಂದು ಹೇಳಲಾಗಿದೆ. ‘ಅಪ್ಪು ಪಪ್ಪು’, ‘ಸ್ನೇಹಿತರು’ ಮುಂತಾದ ಸಿನಿಮಾಗಳನ್ನು ಅವರು ನಿರ್ಮಾಣ ಮಾಡಿದ್ದರು. ಬೆಂಗಳೂರಿನಲ್ಲಿ ಜೆಟ್ಲಾಗ್ ಪಬ್ ಹೊಂದಿದ್ದ ಜಗದೀಶ್ ಅವರು ಬಿಲ್ಡರ್ ಕೂಡ ಆಗಿದ್ದರು.
ಕನ್ನಡ ಚಿತ್ರರಂಗದ ಖ್ಯಾತ ನಿರ್ಮಾಪಕ ಸೌಂದರ್ಯ ಜಗದೀಶ್ (Soundarya Jagadish) ಅವರು ನಿಧನರಾಗಿದ್ದಾರೆ. ಮನೆಯಲ್ಲಿ ಆತ್ಮಹತ್ಯೆ (Soundarya Jagadish Suicide) ಮಾಡಿಕೊಂಡು ಅವರು ಕೊನೆಯುಸಿರು ಎಳೆದಿದ್ದಾರೆ ಎಂದು ಹೇಳಲಾಗಿದೆ. ಖಾಸಗಿ ಆಸ್ಪತ್ರೆಗೆ ಅವರನ್ನು ದಾಖಲಿಸಲಾಯಿತಾದರೂ ಪ್ರಯೋಜನ ಆಗಲಿಲ್ಲ. ‘ಅಪ್ಪು ಪಪ್ಪು’, ‘ಸ್ನೇಹಿತರು’ ಮುಂತಾದ ಸಿನಿಮಾಗಳನ್ನು ಅವರು ನಿರ್ಮಾಣ ಮಾಡಿದ್ದರು. ಬೆಂಗಳೂರಿನಲ್ಲಿ ಜೆಟ್ಲಾಗ್ ಪಬ್ ಹೊಂದಿದ್ದ ಜಗದೀಶ್ ಅವರು ಬಿಲ್ಡರ್ ಕೂಡ ಆಗಿದ್ದರು. ‘ಚಾಲೆಂಜಿಂಗ್ ಸ್ಟಾರ್’ ದರ್ಶನ್, ರಾಕ್ಲೈನ್ ವೆಂಕಟೇಶ್ ಮುಂತಾದ ಸೆಲೆಬ್ರಿಟಿಗಳ ಜೊತೆ ಅವರು ಆಪ್ತ ಒಡನಾಟ ಹೊಂದಿದ್ದರು.
ಅನೇಕ ವಿವಾದಗಳ ಕಾರಣದಿಂದಲೂ ಸೌಂದರ್ಯ ಜಗದೀಶ್ ಅವರು ಆಗಾಗ ಸುದ್ದಿ ಆಗಿದ್ದರು. ನೆರೆಹೊರೆಯವರ ಜೊತೆ ಅವರ ಕುಟುಂಬದವರು ಗಲಾಟೆ ಮಾಡಿಕೊಂಡಿದ್ದು ಕೂಡ ಭಾರಿ ವಿವಾದ ಸೃಷ್ಟಿಸಿತ್ತು. ಕೆಲವೇ ತಿಂಗಳ ಹಿಂದೆ ‘ಕಾಟೇರ’ ಚಿತ್ರತಂಡದವರು ‘ಜೆಟ್ಲಾಗ್’ ಪಬ್ನಲ್ಲಿ ರಾತ್ರಿ ಅವಧಿ ಮೀರಿ ಪಾರ್ಟಿ ಮಾಡಿದ ಆರೋಪ ಕೂಡ ಕೇಳಿಬಂದಿತ್ತು. ಆ ಬಳಿಕ 25 ದಿನಗಳ ಕಾಲ ರೆಸ್ಟೋ ಬಾರ್ ಲೈಸೆನ್ಸ್ ರದ್ದು ಮಾಡಲಾಗಿತ್ತು. ಮೂಲಗಳ ಪ್ರಕಾರ, ಕೆಲವೇ ದಿನಗಳ ಹಿಂದೆ ಬ್ಯಾಂಕ್ನವರು ಸೌಂದರ್ಯ ಜಗದೀಶ್ ಅವರ ಮನೆಯನ್ನು ಸೀಜ್ ಮಾಡಿದ್ದರು ಎನ್ನಲಾಗಿದೆ. ಒಟ್ಟಿನಲ್ಲಿ ಯಾವ ಕಾರಣಕ್ಕಾಗಿ ಸೌಂದರ್ಯ ಜಗದೀಶ್ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂಬುದು ಇನ್ನಷ್ಟೇ ಗೊತ್ತಾಗಬೇಕಿದೆ.
ಉದ್ಯಮಿ ಆಗಿದ್ದ ಸೌಂದರ್ಯ ಜಗದೀಶ್ ಅವರು ತಮ್ಮ ಪುತ್ರ ಸ್ನೇಹಿತ್ನನ್ನು ಚಿತ್ರರಂಗಕ್ಕೆ ಪರಿಚಯಿಸಿದ್ದರು. ಹಲವು ಸಿನಿಮಾಗಳ ವಿತರಣೆಯನ್ನೂ ಅವರು ಮಾಡಿದ್ದರು. ಚಿತ್ರರಂಗದ ಅನೇಕ ಸೆಲೆಬ್ರಿಟಿಗಳ ಜೊತೆ ಅವರು ಸ್ನೇಹ ಹೊಂದಿದ್ದರು. ಇತ್ತೀಚೆಗಷ್ಟೇ ಪ್ರಿಯಾಂಕಾ ಉಪೇಂದ್ರ ಅವರು ಆಯೋಜಿಸಿದ್ದ ಹೋಳಿ ಸಂಭ್ರಮದಲ್ಲಿ ಸೌಂದರ್ಯ ಜಗದೀಶ್ ಭಾಗಿ ಆಗಿದ್ದರು.
ಇದನ್ನೂ ಓದಿ: ಪೊಲೀಸರು ಬಂದಾಗ ಸೌಂದರ್ಯ ಜಗದೀಶ್ ಮನೆಯಲ್ಲಿ ಹೈಡ್ರಾಮಾ; ಕೆಲ ಹೊತ್ತು ಬಾಗಿಲು ತೆರೆಯದ ಕುಟುಂಬಸ್ಥರು
ಸೌಂದರ್ಯ ಜಗದೀಶ್ ಅವರ ಸಾವಿನ ಕುರಿತಂತೆ ತನಿಖೆ ನಡೆಯಲಿದೆ. ಆ ಬಳಿಕ ಅವರ ನಿಧನಕ್ಕೆ ಸ್ಪಷ್ಟ ಕಾರಣ ಏನೆಂಬುದು ಗೊತ್ತಾಗಲಿದೆ. ಅವರ ಅಗಲಿಕೆಗೆ ಅನೇಕ ಸೆಲೆಬ್ರಿಟಿಗಳು ಕಂಬನಿ ಮಿಡಿಯುತ್ತಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Published On - 12:17 pm, Sun, 14 April 24