ಶೀಘ್ರವೇ ಶುರು ‘ಬಿಗ್ ಬಾಸ್ ಒಟಿಟಿ’ ಹೊಸ ಸೀಸನ್; ಆದರೆ ವೀಕ್ಷಕರಿಗೆ ಒಂದು ಕಹಿ ಸುದ್ದಿ
ವಿವಾದಾತ್ಮಕ ವ್ಯಕ್ತಿಗಳಿಂದಲೇ ಫೇಮಸ್ ಆದ ‘ಬಿಗ್ ಬಾಸ್ ಒಟಿಟಿ’ ಶೋ ಮತ್ತೆ ಬರಲಿದೆ. ಅದಕ್ಕಾಗಿ ಸಕಲ ಸಿದ್ಧತೆ ನಡೆದಿದೆ. ಜೂನ್ ಮೊದಲ ವಾರದಲ್ಲಿ ‘ಬಿಗ್ ಬಾಸ್ ಒಟಿಟಿ 3’ ಪ್ರಸಾರ ಆರಂಭ ಆಗಲಿದೆ ಎನ್ನಲಾಗಿದೆ. ಈ ಬಾರಿ ಶೋ ನೋಡಲು ಸಬ್ಸ್ಕ್ರಿಪ್ಷನ್ ಪಡೆಯಬೇಕಾಗಬಹುದು ಎಂದು ಹೇಳಲಾಗುತ್ತಿದೆ. ಆದರೆ ಈ ಬಗ್ಗೆ ಅಧಿಕೃತ ಮಾಹಿತಿ ಹೊರಬೀಳುವುದು ಬಾಕಿ ಇದೆ.
ಕಿರುತೆರೆಯಲ್ಲಿ ಪ್ರಸಾರ ಆಗುವ ‘ಬಿಗ್ ಬಾಸ್’ (Bigg Boss) ಶೋ ಬಗ್ಗೆ ಹೊಸದಾಗಿ ಹೇಳಬೇಕಾದ್ದಿಲ್ಲ. ಅಷ್ಟರಮಟ್ಟಿಗೆ ಈ ಕಾರ್ಯಕ್ರಮ ಫೇಮಸ್. ಇತ್ತೀಚಿನ ವರ್ಷಗಳಲ್ಲಿ ಈ ಕಾರ್ಯಕ್ರಮದ ಒಟಿಟಿ ವರ್ಷನ್ ಕೂಡ ಪ್ರಸಾರ ಕಂಡಿದೆ. ಹಿಂದಿಯಲ್ಲಿ ‘ಬಿಗ್ ಬಾಸ್ ಒಟಿಟಿ’ (Bigg Boss OTT) ಕಾರ್ಯಕ್ರಮದ ಎರಡು ಸೀಸನ್ಗಳು ಯಶಸ್ವಿ ಆಗಿವೆ. ಈಗ 3ನೇ ಸೀಸನ್ ಬಗ್ಗೆ ಸುದ್ದಿ ಕೇಳಿಬಂದಿದೆ. ವರದಿಗಳ ಪ್ರಕಾರ, ಜೂನ್ ತಿಂಗಳಲ್ಲಿ ‘ಬಿಗ್ ಬಾಸ್ ಒಟಿಟಿ ಸೀಸನ್ 3’ (Bigg Boss OTT 3) ಪ್ರಸಾರ ಆರಂಭ ಆಗಲಿದೆ. ಇದರ ಜೊತೆಗೆ ಪ್ರೇಕ್ಷಕರಿಗೆ ಒಂದು ಕಹಿ ಸುದ್ದಿ ಕೂಡ ಹರಿದಾಡುತ್ತಿದೆ. ಏನದು? ಈ ಬಾರಿ ಉಚಿತವಾಗಿ ‘ಬಿಗ್ ಬಾಸ್ ಒಟಿಟಿ’ ನೋಡಲು ಸಿಗುವುದು ಅನುಮಾನ.
ಕಳೆದ 2 ಸೀಸನ್ಗಳನ್ನು ‘ಜಿಯೋ ಸಿನಿಮಾ’ ಉಚಿತವಾಗಿ ಪ್ರಸಾರ ಮಾಡಿತ್ತು. ಕೋಟ್ಯಂತರ ಪ್ರೇಕ್ಷಕರು ‘ಬಿಗ್ ಬಾಸ್ ಒಟಿಟಿ’ ಸಂಚಿಕೆಗಳನ್ನು ನೋಡಿದ್ದರು. ಅಲ್ಲದೇ, ಲೈವ್ ನೋಡಿ ಕೂಡ ಎಂಜಾಯ್ ಮಾಡಿದ್ದರು. ಸದ್ಯ ಹರಿದಾಡುತ್ತಿರುವ ಮಾಹಿತಿ ಪ್ರಕಾರ ‘ಬಿಗ್ ಬಾಸ್ ಸೀಸನ್ 3’ ಕಾರ್ಯಕ್ರಮವನ್ನು ನೋಡಲು ವೀಕ್ಷಕರು ಸಬ್ಸ್ಕ್ರಿಪ್ಷನ್ ಪಡೆಯಬೇಕು ಎನ್ನಲಾಗಿದೆ. ಒಂದು ವೇಳೆ ಈ ಸುದ್ದಿ ನಿಜವಾದರೆ ವೀಕ್ಷಕರ ಜೇಬಿಗೆ ಕತ್ತರಿ ಬೀಳಲಿದೆ.
ಇದನ್ನೂ ಓದಿ: ನಿರ್ದೇಶಕ, ಬಿಗ್ ಬಾಸ್ ಮಾಜಿ ಸ್ಪರ್ಧಿ ಸೂರ್ಯ ಕಿರಣ್ ಜಾಂಡಿಸ್ನಿಂದ ನಿಧನ
ಕೆಲವೇ ದಿನಗಳ ಹಿಂದೆ ಜಿಯೋ ಸಿನಿಮಾದ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ‘ಬಿಗ್ ಬಾಸ್ ಒಟಿಟಿ 3’ ಬಗ್ಗೆ ಪೋಸ್ಟ್ ಹಂಚಿಕೊಳ್ಳಲಾಗಿತ್ತು. ಆದರೆ ಕೆಲವು ಸಮಯದ ನಂತರ ಅದನ್ನು ಡಿಲೀಟ್ ಮಾಡಲಾಯಿತು. ಅದನ್ನು ಗಮನಿಸಿದ ಕೆಲವರು ಶೋ ರದ್ದಾಗಿದೆ ಎಂದು ಸುದ್ದಿ ಹಬ್ಬಿಸಿದ್ದಾರೆ. ಆದರೆ ಜೂನ್ ಮೊದಲ ವಾರದಲ್ಲೇ ‘ಬಿಗ್ ಬಾಸ್ ಒಟಿಟಿ 3’ ಆರಂಭ ಆಗಲಿದೆ ಎಂದು ಹೇಳಲಾಗುತ್ತಿದೆ. ಅಧಿಕೃತ ಮಾಹಿತಿ ಹೊರಬೀಳುವುದಷ್ಟೇ ಬಾಕಿ ಇದೆ.
ಸಲ್ಮಾನ್ ಖಾನ್ ಅವರು ‘ಬಿಗ್ ಬಾಸ್ ಒಟಿಟಿ ಸೀಸಸ್ 3’ ಕಾರ್ಯಕ್ರಮದ ನಿರೂಪಣೆ ಮಾಡಲಿದ್ದಾರೆ. ಈ ಬಾರಿ ಯಾವೆಲ್ಲ ವಿವಾದಾತ್ಮಕ ವ್ಯಕ್ತಿಗಳು ಬರುತ್ತಾರೆ ಎಂಬುದನ್ನು ಕಾದುನೋಡಬೇಕು. ಕೆಲವು ಹಳೇ ಸ್ಪರ್ಧಿಗಳು ಕೂಡ ದೊಡ್ಮನೆಗೆ ಎಂಟ್ರಿ ನೀಡುತ್ತಾರೆ ಎಂಬ ನಿರೀಕ್ಷೆ ಇದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.