ಪ್ರತಿಯೊಬ್ಬರೂ ಈಗ ಪ್ಯಾನ್ ಇಂಡಿಯಾ ಸಿನಿಮಾದ ಹಿಂದೆ ಬಿದ್ದಿದ್ದಾರೆ. 20-30 ಕೋಟಿ ಬಜೆಟ್ ಸಿನಿಮಾ ಮಾಡುವವರೂ ಸಹ ಪ್ಯಾನ್ ಇಂಡಿಯಾ ಪ್ರಯತ್ನಕ್ಕೆ ಮುಂದಾಗುತ್ತಿದ್ದಾರೆ. ದೊಡ್ಡ ಬಜೆಟ್ ಸಿನಿಮಾಗಳಿಗಂತೂ ಪ್ಯಾನ್ ಇಂಡಿಯಾ ಎಂಬುದು ಚಿನ್ನದ ಮೊಟ್ಟೆ ಇಡುವ ಕೋಳಿಯಂತಾಗಿದೆ. ಎಲ್ಲರೂ ಪ್ಯಾನ್ ಇಂಡಿಯಾ ಮೇಲೆ ಬಿದ್ದಿರುವ ಸಂದರ್ಭದಲ್ಲಿ ಧ್ರುವ ಸರ್ಜಾ ನಟನೆಯ ‘ಮಾರ್ಟಿನ್’ ಸಿನಿಮಾ ಮಾತ್ರ ಒಂದು ಹೆಜ್ಜೆ ಮುಂದೆ ಹೋಗಿ ಪ್ಯಾನ್ ವರ್ಲ್ಡ್ ಯೋಚನೆ ಮಾಡಿದೆ. ಕೆಲವೇ ದಿನಗಳಲ್ಲಿ ವಿದೇಶಿ ಮಾಧ್ಯಮಗಳನ್ನು ಒಟ್ಟು ಸೇರಿಸಿ ಅಂತರಾಷ್ಟ್ರೀಯ ಮಟ್ಟದ ಸುದ್ದಿಗೋಷ್ಠಿಯನ್ನು ಮಾಡಲಾಗಿದೆ. ಆದರೆ ‘ಮಾರ್ಟಿನ್’ ಅನ್ನು ವಿಶ್ವಮಟ್ಟಕ್ಕೆ ತೆಗೆದುಕೊಂಡು ಹೋಗಬೇಕು ಎಂಬ ಆಲೋಚನೆ ಹುಟ್ಟಿದ್ದು ಏಕೆ ಮತ್ತು ಅದಕ್ಕೆ ಕಾರಣ ಯಾರು?
ಟಿವಿ9ಗೆ ನೀಡಿರುವ ವಿಶೇಷ ಸಂದರ್ಶನದಲ್ಲಿ ಮಾತನಾಡಿರುವ ಧ್ರುವ ಸರ್ಜಾ, ‘ನಾವು ಟೀಸರ್ ಬಿಡುಗಡೆ ಮಾಡಿದಾಗ ಚೀನಾದ ಏಜೆನ್ಸಿಯವರೊಬ್ಬರು ನಮ್ಮನ್ನು ಸಂಪರ್ಕ ಮಾಡಿದ್ದರು. ಈ ಸಿನಿಮಾ ನಮಗೆ ಕೊಡಿ ಸಿನಿಮಾವನ್ನು ನಾವು ಚೈನೀಸ್ ಭಾಷೆಗೆ ಡಬ್ ಮಾಡಿ ಬಿಡುಗಡೆ ಮಾಡುತ್ತೇವೆ ಎಂದಿದ್ದರು. ಆಗ ನಾವು ಸರಿ ನೋಡೋಣ ಇನ್ನೂ ಸಮಯ ಇದೆ ಎಂದುಕೊಂಡಿದ್ದೆವು’ ಎಂದಿದ್ದಾರೆ ಧ್ರುವ ಸರ್ಜಾ.
ಇದನ್ನೂ ಓದಿ:ಮುಂಬೈನಲ್ಲಿ ‘ಮಾರ್ಟಿನ್’ ಟ್ರೇಲರ್ ಲಾಂಚ್; ಇದು ಸಾಮಾನ್ಯ ಕಾರ್ಯಕ್ರಮ ಅಲ್ಲ
ಆದರೆ ಮುಂದೆ ನಮ್ಮ ಟೀಂಗೆ ರವಿ ಬಸ್ರೂರು ಸೇರ್ಪಡೆ ಆದರು. ಅವರು ಸಿನಿಮಾ ನೋಡಿ, ‘ಏನ್ರಿ ಇದು ಇಂಟರ್ನ್ಯಾಷನಲ್ ಲೆವೆಲ್ ಅಲ್ಲಿದೆ ಸಿನಿಮಾ’ ಅಂದರು. ಅದು ನಮ್ಮ ಮನಸ್ಸಿನಲ್ಲಿ ಸೇರಿಕೊಂಡಿತು. ಹಾಗೆಯೇ ಮುಂದೆ ಹೋದಂತೆ ಸಿನಿಮಾದ ಡಬ್ಬಿಂಗ್ ರೈಟ್ಸ್ಗೆ ಬೇಡಿಕೆ ಹೆಚ್ಚಾಗುತ್ತಾ ಆಗುತ್ತಾ ನಾವೇ ಏಕೆ ಇದನ್ನು ಪ್ಯಾನ್ ವರ್ಲ್ಡ್ ಲೆವೆಲ್ನಲ್ಲಿ ಬಿಡುಗಡೆ ಮಾಡಬಾರದು ಎಂಬ ಆಲೋಚನೆ ಮೂಡಿತು, ನಮ್ಮ ನಿರ್ಮಾಪಕರು ಡಬ್ಬಿಂಗ್ಗೆ ವ್ಯವಸ್ಥೆ ಮಾಡಿಸಿದರು. ಆ ಕೆಲಸ ಬಹಳ ಬೇಗ ಮುಗಿದುಬಿಟ್ಟಿತು’ ಎಂದಿದ್ದಾರೆ ಧ್ರುವ.
ನಮ್ಮ ಸಿನಿಮಾ ಕನ್ನಡ, ತೆಲುಗು, ತಮಿಳು, ಮಲಯಾಳಂ, ಹಿಂದಿ ಜೊತೆಗೆ ಬೆಂಗಾಲಿಯಲ್ಲಿಯೂ ಬಿಡುಗಡೆ ಆಗಲಿದೆ. ಇದರ ಜೊತೆಗೆ ಚೀನಾ, ರಷಿಯನ್, ಇಂಗ್ಲೀಷ್, ಕೊರಿಯನ್ ಭಾಷೆಗಳಿಗೂ ಡಬ್ ಮಾಡಿ ಬಿಡುಗಡೆ ಮಾಡಲಿದ್ದೇವೆ. ಆಗಸ್ಟ್ 5 ರಂದು ನಡೆಯಲಿರುವ ಸುದ್ದಿಗೋಷ್ಠಿಯಲ್ಲಿ ಬಿಬಿಸಿ ಪತ್ರಕರ್ತರು, ಕೊರಿಯನ್ನರು, ಚೈನೀಸ್, ಇನ್ನೂ ಒಟ್ಟು 25 ಅಂತರಾಷ್ಟ್ರೀಯ ಮಾಧ್ಯಮದ ಪತ್ರಕರ್ತರು ಭಾಗವಹಿಸಲಿದ್ದಾರೆ. ಅದೇ ದಿನ ಸಿನಿಮಾದ ಟ್ರೈಲರ್ ಸಹ ಬಿಡುಗಡೆ ಆಗಲಿದೆ. ಇನ್ನು ಮಾರ್ಟಿನ್ ಸಿನಿಮಾ ಅಕ್ಟೋಬರ್ 11 ರಂದು ಬಿಡುಗಡೆ ಆಗಲಿದೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ