ಚಂದನ್ ಶೆಟ್ಟಿ, ವಿಚ್ಛೇದಿತ ಪತ್ನಿ ನಿವೇದಿತಾಗೆ ಜೀವನಾಂಶ ನೀಡಿದರಾ?

ಚಂದನ್ ಶೆಟ್ಟಿ ಮತ್ತು ನಿವೇದಿತಾ ಗೌಡ ಅವರು ಪರಸ್ಪರ ಒಪ್ಪಿಗೆ ಮೇರೆಗೆ ವಿಚ್ಚೇದನ ಪಡೆದಿದ್ದಾರೆ. ಇದೀಗ ಚಂದನ್ ಶೆಟ್ಟಿ, ನಿವೇದಿತಾಗೆ ಜೀವನಾಂಶ ಕೊಟ್ಟಿದ್ದಾರಾ? ನಿವೇದಿತಾ ಜೀವನಾಂಶಕ್ಕೆ ಬೇಡಿಕೆ ಇಟ್ಟಿದ್ದಾರಾ ಎಂಬ ಚರ್ಚೆ ಶುರುವಾಗಿದ್ದು, ವಕೀಲರು ಉತ್ತರ ನೀಡಿದ್ದಾರೆ.

ಚಂದನ್ ಶೆಟ್ಟಿ, ವಿಚ್ಛೇದಿತ ಪತ್ನಿ ನಿವೇದಿತಾಗೆ ಜೀವನಾಂಶ ನೀಡಿದರಾ?
Follow us
ಮಂಜುನಾಥ ಸಿ.
|

Updated on: Jun 08, 2024 | 3:35 PM

ಚಂದನ್ ಶೆಟ್ಟಿ (Chandan Shetty) ಮತ್ತು ನಿವೇದಿತಾ ಗೌಡ (Niveditha Gowda) ವಿಚ್ಛೇದನ ಪಡೆದುಕೊಂಡಿದ್ದಾರೆ. ಬಿಗ್​ಬಾಸ್​ ಗೆ ಸ್ಪರ್ಧಿಗಳಾಗಿ ಹೋಗಿದ್ದ ಚಂದನ್ ಶೆಟ್ಟಿ ಮತ್ತು ನಿವೇದಿತಾ ಗೌಡ ಅಲ್ಲಿ ಪರಸ್ಪರ ಪ್ರೀತಿಯಲ್ಲಿ ಬಿದ್ದಿದ್ದರು. ಹೊರಗೆ ಬಂದ ಬಳಿಕವೂ ಕೆಲ ಕಾಲ ಪ್ರೀತಿಯಲ್ಲಿದ್ದ ಇವರು ಹಿರಿಯರ ಒಪ್ಪಿಗೆ ಪಡೆದು 2020ರಲ್ಲಿ ವಿವಾಹವಾದರು. ಆದರೆ ಇದೀಗ ನಾಲ್ಕು ವರ್ಷದ ಬಳಿಕ ತಮ್ಮ ವೈವಾಹಿಕ ಜೀವನವನ್ನು ಅಂತ್ಯಗೊಳಿಸಿರುವ ಚಂದನ್ ಹಾಗೂ ನಿವೇದಿತಾ, ಇಬ್ಬರೂ ಸಹ ಪರಸ್ಪರ ಒಪ್ಪಿಗೆ ಮೇರೆಗೆ ವಿಚ್ಛೇದನ ಪಡೆದುಕೊಂಡಿದ್ದಾರೆ.

ಶಾಂತಿನಗರದ ಕೌಟುಂಬಿಕ ನ್ಯಾಯಾಲಯದಲ್ಲಿ ಈ ಜೋಡಿ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದರು. ಪರಸ್ಪರ ಒಪ್ಪಿಗೆ ಮೇಲೆ ವಿಚ್ಛೇದನಕ್ಕೆ ಒಪ್ಪಿಗೆ ಸಲ್ಲಿಸಿದ್ದ ಕಾರಣ ಹಾಗೂ ಕಳೆದ ಆರು ತಿಂಗಳಿನಿಂದಲೂ ‘ಪತಿ-ಪತ್ನಿ ರೀತಿ’ ಸಹಬಾಳ್ವೆ ನಡೆಸದ ಕಾರಣ ನ್ಯಾಯಾಲಯವು ಇವರಿಗೆ ವಿಚ್ಛೇದನ ನೀಡಿದೆ. ಸಾಮಾನ್ಯವಾಗಿ ವಿಚ್ಛೇದನ ಎಂದೊಡನೆ ಜೀವನಾಂಶದ ವಿಷಯ ಮುನ್ನಲೆಗೆ ಬರುತ್ತದೆ.

ಹಿಂದೂ ವಿವಾಹ ಕಾಯ್ದೆಯಲ್ಲಿ ವಿಚ್ಛೇದಿತ ಪತ್ನಿಗೆ ಪತಿ ಜೀವನಾಂಶ ನೀಡಬೇಕಾಗಿರುತ್ತದೆ. ಅದು ವ್ಯಕ್ತಿಯಿಂದ ವ್ಯಕ್ತಿಗೆ ಭಿನ್ನವಾಗಿರುತ್ತದೆ. ಸೆಲೆಬ್ರಿಟಿಗಳ ವಿಷಯದಲ್ಲಿ ಜೀವನಾಂಶದ ಮೊತ್ತ ಹೆಚ್ಚಿರುತ್ತದೆ ಎನ್ನಲಾಗುತ್ತದೆ. ಕೆಲವು ಸೆಲೆಬ್ರಿಟಿಗಳು ಭಾರಿ ಮೊತ್ತದ ಜೀವನಾಂಶ ಕೊಟ್ಟಿದ್ದು ಸಹ ಇದೆ. ಇದೇ ಕಾರಣಕ್ಕೆ ಚಂದನ್ ಶೆಟ್ಟಿ ಹಾಗೂ ನಿವೇದಿತಾ ವಿಚಾರದಲ್ಲಿಯೂ ಜೀವನಾಂಶದ ಬಗ್ಗೆ ಕುತೂಹಲವಿದೆ.

ಇದನ್ನೂ ಓದಿ:ಚಂದನ್ ಶೆಟ್ಟಿ-ನಿವೇದಿತಾ ಗೌಡ ವಿಚ್ಛೇದನ ಮಂಜೂರು: 4 ವರ್ಷಗಳ ದಾಂಪತ್ಯ ಅಂತ್ಯ

ಚಂದನ್ ಶೆಟ್ಟಿ ಹಾಗೂ ನಿವೇದಿತಾ ಗೌಡ, ತಮ್ಮ ವಿಚ್ಛೇದನದ ಬಗ್ಗೆ ಬಹಿರಂಗವಾಗಿ ಮಾತನಾಡಿಲ್ಲ. ಇಬ್ಬರೂ ಸಹ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಂಚಿಕೊಂಡಿದ್ದು, ಪರಸ್ಪರರ ಖಾಸಗಿ ಜೀವನವನ್ನು ಗೌರವಿಸಿ ಎಂದಷ್ಟೆ ಮನವಿ ಮಾಡಿದ್ದಾರೆ. ಚಂದನ್-ನಿವೇದಿತಾರ ವಿಚ್ಛೇದನದ ಕುರಿತು ಟಿವಿ9 ಕನ್ನಡದ ಜೊತೆಗೆ ಮಾತನಾಡಿರುವ ವಕೀಲೆ ಅನಿತಾ, ವಿಚ್ಛೇದನದ ಕುರಿತಾಗಿ ಹಲವು ವಿಷಯಗಳನ್ನು ವಿಷಯಗಳನ್ನು ಬಿಚ್ಚಿಟ್ಟಿದ್ದಾರೆ. ಜೊತೆಗೆ ಜೀವನಾಂಶದ ಬಗ್ಗೆಯೂ ಮಾತನಾಡಿದ್ದಾರೆ.

ವಕೀಲೆ ಅನಿತಾ ಹೇಳಿರುವಂತೆ, ನಟಿ ನಿವೇದಿತಾ ಗೌಡ ಯಾವುದೇ ರೀತಿಯ ಜೀವನಾಂಶಕ್ಕೆ ಬೇಡಿಕೆಯನ್ನೇ ಇಟ್ಟಿಲ್ಲ. ಹಾಗಾಗಿ ಚಂದನ್ ಶೆಟ್ಟಿ, ನಿವೇದಿತಾಗೆ ಯಾವುದೇ ವಿಧವಾದ ಜೀವನಾಂಶವನ್ನು ನೀಡುವ ಅವಶ್ಯಕತೆ ಇಲ್ಲ. ಇಬ್ಬರದ್ದೂ ಸಹ ಪರಸ್ಪರ ಒಪ್ಪಿಗೆ ವಿಚ್ಛೇದನ ಆಗಿರುವ ಕಾರಣ, ನಿವೇದಿತಾ, ಜೀವನಾಂಶಕ್ಕೆ ಬೇಡಿಕೆ ಇಟ್ಟಿಲ್ಲ. ವಕೀಲೆ ಅನಿತಾ ಹೇಳಿರುವಂತೆ, ಇಬ್ಬರೂ ಸಹ ದುಡಿಯುತ್ತಿರುವವರು, ಹಾಗಾಗಿ ಇನ್ನೊಬ್ಬರ ಹಣದ ಅವಶ್ಯಕತೆ ಇಬ್ಬರಿಗೂ ಇಲ್ಲ’ ಎಂದಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ