ನಟ, ನಿರ್ದೇಶಕ ರಕ್ಷಿತ್ ಶೆಟ್ಟಿಗೆ (Rakshit Shetty) ಅವರದ್ದೇ ಆದ ಪ್ರತ್ಯೇಕ ಅಭಿಮಾನಿ ಬಳಗವಿದೆ. ಸಮಕಾಲೀನ ನಟರಂತೆ ಮಾಸ್ ಡೈಲಾಗ್, ಹೀರೋಯಿಸಂ, ಕಮರ್ಶಿಯಲ್ ಸಿನಿಮಾಗಳ ಹಿಂದೆ ಬೀಳದೆ ಉತ್ತಮ ಸಿನಿಮಾಗಳನ್ನಷ್ಟೆ ಮಾಡುತ್ತಾ ಸಾಗುತ್ತಿದ್ದಾರೆ. ಆ ಮೂಲಕ ಕನ್ನಡ ಚಿತ್ರರಂಗಕ್ಕೆ ಕಾಣ್ಕೆಗಳನ್ನು ನೀಡುತ್ತಾ ಸಾಗುತ್ತಿದ್ದಾರೆ. ನಟನೆ, ನಿರ್ದೇಶನದ ಜೊತೆಗೆ ನಿರ್ಮಾಪಕರೂ ಆಗಿರುವ ರಕ್ಷಿತ್, ಕೆಲವು ಒಳ್ಳೆಯ ಸಿನಿಮಾಗಳನ್ನು ತಮ್ಮ ಸಂಸ್ಥೆಯ ಮೂಲಕ ನೀಡಿದ್ದಾರೆ, ನೀಡುತ್ತಿದ್ದಾರೆ. ಈಗ ರಕ್ಷಿತ್ ಶೆಟ್ಟಿ ಡೇಟ್ಸ್ ಸಿಗುವುದೇ ಕಷ್ಟ, ಸಿನಿಮಾ ಒಂದಕ್ಕೆ ಕೋಟ್ಯಂತರ ಸಂಭಾವನೆಯನ್ನು ರಕ್ಷಿತ್ ಪಡೆಯುತ್ತಿದ್ದಾರೆ. ಆದರೆ ರಕ್ಷಿತ್ ಮೊದಲು ಪಡೆದ ಸಂಬಳ ಎಷ್ಟು ಗೊತ್ತೆ?
ರಕ್ಷಿತ್ ಶೆಟ್ಟಿ ಸಿನಿಮಾಕ್ಕೆ ಬರುವ ಮುನ್ನ ಐಟಿ ಸಂಸ್ಥೆಯೊಂದರಲ್ಲಿ ಕೆಲಸ ಮಾಡುತ್ತಿದ್ದರು. ರಕ್ಷಿತ್ ಶೆಟ್ಟಿಯ ಮೊದಲ ಐಟಿ ಜಾಬ್ಗೆ ಮೊದಲ ತಿಂಗಳು ಸಿಕ್ಕ ಸಂಬಳ 12 ಸಾವಿರವಂತೆ. ಹಾಗೆಂದು ಅದಕ್ಕೆ ಮುನ್ನ ರಕ್ಷಿತ್ ಶೆಟ್ಟಿ ದುಡಿದಿಲ್ಲ ಎಂದೇನೂ ಇಲ್ಲ. ರಕ್ಷಿತ್ ಶೆಟ್ಟಿಯವರ ತಂದೆ ಕನ್ಸ್ಟ್ರಕ್ಷನ್ ಫೀಲ್ಡ್ನಲ್ಲಿದ್ದವರು. ಬಹಳ ಕಡಿಮೆ ವಯಸ್ಸಿಗೆ ಕಾರು ಇತರೆ ಓಡಿಸುವುದು ಕಲಿತಿದ್ದ ರಕ್ಷಿತ್ ಶೆಟ್ಟಿ, ಅಪ್ಪ ಕೆಲಸ ಮಾಡಿಸುತ್ತಿದ್ದ ಜಾಗಕ್ಕೆ ಸೀಮೆಂಟ್ ಮೂಟೆಗಳನ್ನು ಕೊಂಡುಯ್ಯುವ ಕಾರ್ಯ ಮಾಡುತ್ತಿದ್ದರಂತೆ.
ಅವರೇ ಮೂಟೆಗಳನ್ನು ಹೊತ್ತು ವಾಹನಕ್ಕೆ ಹಾಕಿ, ಸೈಟ್ಗೆ ಹೋಗಿ ಇಳಿಸುತ್ತಿದ್ದರಂತೆ. ಆಗೆಲ್ಲ ರಕ್ಷಿತ್ರ ತಂದೆ ಅವರಿಗೆ ಪ್ರತಿ ಮೂಟೆ ಸಿಮೆಂಟಿಗೆ ಎರಡು ರೂಪಾಯಿ ಹಣ ಹಾಗೂ ವಾಹನ ಓಡಿಸಿಕೊಂಡು ಬಂದಿದ್ದಕ್ಕೆ 10 ಒಮ್ಮೊಮ್ಮೆ 20 ರೂಪಾಯಿ ಹಣ ನೀಡುತ್ತಿದ್ದರಂತೆ. ಅದೇ ಅವರ ಪಾಕೆಟ್ ಮನಿಯೂ ಆಗಿತ್ತಂತೆ.
ಇದನ್ನೂ ಓದಿ:ಸಪ್ತ ಸಾಗರದಾಚೆ ಎಲ್ಲೋ ಸೈಡ್ ಬಿ, ಹಿಂದಿಯಲ್ಲಿ ಬಿಡುಗಡೆ ಮಾಡಿಲ್ಲವೇಕೆ? ರಕ್ಷಿತ್ ಶೆಟ್ಟಿ ಕೊಟ್ಟರು ಕಾರಣ
ಅಂದಹಾಗೆ ರಕ್ಷಿತ್ ಶೆಟ್ಟಿ ಮೊದಲು ನಟಿಸಿದ ಸಿನಿಮಾ ‘ನಮ್ ಏರಿಯಾಲ್ ಒಂದ್ ದಿನ’ ಆ ಸಿನಿಮಾದಲ್ಲಿ ಸಣ್ಣ ಪಾತ್ರದಲ್ಲಿ ರಕ್ಷಿತ್ ಶೆಟ್ಟಿ ನಟಿಸಿದ್ದರು. ಅದಾದ ಬಳಿಕ ‘ತುಘಲಕ್’ ಸಿನಿಮಾದಲ್ಲಿ ನಾಯಕನಾಗಿ ರಕ್ಷಿತ್ ಶೆಟ್ಟಿ ನಟಿಸಿದರು. ಆ ಸಿನಿಮಾ ಫ್ಲಾಪ್ ಆಯ್ತು. ಅದಾದ ಬಳಿಕ ‘ಸಿಂಪಲ್ ಆಗ್ ಒಂದ್ ಲವ್ ಸ್ಟೋರಿ’ ಸಿನಿಮಾದಲ್ಲಿ ರಕ್ಷಿತ್ ಶೆಟ್ಟಿ ನಾಯಕನಾಗಿ ನಟಿಸಿದರು. ಆ ಸಿನಿಮಾ ಸೂಪರ್ ಹಿಟ್ ಆಯ್ತು. ಅದರ ಬಳಿಕ ರಕ್ಷಿತ್ ಶೆಟ್ಟಿ ತಿರುಗಿ ನೋಡಿದ್ದೇ ಇಲ್ಲ. ಒಂದರ ಮೇಲೊಂದು ಒಳ್ಳೆಯ ಸಿನಿಮಾಗಳನ್ನು ನೀಡುತ್ತಾ ಸಾಗುತ್ತಿದ್ದಾರೆ.
ಅವರೇ ಹೇಳಿರುವಂತೆ, ಸಿನಿಮಾ ನನಗೆ ಎಲ್ಲವೂ, ಹೇಗೆಂದರೆ ಹಾಗೆ ಸಿನಿಮಾ ಮಾಡುವುದು ನನಗೆ ಇಷ್ಟವಿಲ್ಲ, ಮುಂದೊಮ್ಮೆ ನಾನೇ ನನ್ನ ಪಯಣ ಹಿಂದಿರುಗಿ ನೋಡಿದಾಗ ಕೆಲವಾದರೂ ಒಳ್ಳೆಯ ಸಿನಿಮಾಗಳು ಕಾಣಬೇಕು ಎಂದಿದ್ದರು ರಕ್ಷಿತ್. ಸ್ವತಃ ನಿರ್ದೇಶಕರೂ ಆಗಿರುವ ರಕ್ಷಿತ್ ಶೆಟ್ಟಿ, ಇನ್ನು ಮುಂದೆ ನಟನೆಗಿಂತಲೂ ನಿರ್ದೇಶನಕ್ಕೆ ಹೆಚ್ಚಿನ ಪ್ರಾಶಸ್ತ್ಯ ನೀಡುತ್ತೇನೆ ಎಂದು ಸಹ ಹೇಳಿದ್ದಾರೆ.