
‘ಕಾಂತಾರ: ಚಾಪ್ಟರ್ 1’ ಸಿನಿಮಾ ಬಿಡುಗಡೆಗೆ ಕೆಲವೇ ದಿನಗಳು ಬಾಕಿ ಇದೆ. ಸಿನಿಮಾದ ಪ್ರಚಾರವನ್ನು ಚಿತ್ರತಂಡ ನಿಧಾನವಾಗಿ ಪ್ರಾರಂಭ ಮಾಡುತ್ತಿದೆ. ‘ಕಾಂತಾರ: ಚಾಪ್ಟರ್ 1’ ಸಿನಿಮಾಕ್ಕೆ ಸಂಬಂಧಿಸಿದಂತೆ ಯಾವುದೇ ಅಪ್ಡೇಟ್ಗಳನ್ನು ಚಿತ್ರತಂಡ ಬಿಟ್ಟುಕೊಟ್ಟಿರಲಿಲ್ಲ. ಆದರೆ ಇದೀಗ ಒಂದೊಂದಾಗಿ ಅಪ್ಡೇಟ್ಗಳು ಹೊರಗೆ ಬರುತ್ತಿವೆ. ಇತ್ತೀಚೆಗಷ್ಟೆ ಸಿನಿಮಾದ ನಾಯಕಿಯಾಗಿ ರುಕ್ಮಿಣಿ ವಸಂತ್ ನಟಿಸುತ್ತಿರುವ ವಿಷಯವನ್ನು ಚಿತ್ರತಂಡ ಹಂಚಿಕೊಂಡಿತ್ತು. ಇದೀಗ ಭಾರತದ ಖ್ಯಾತ ನಟ ಮತ್ತು ಗಾಯಕರಾಗಿರುವ ಗುರುತಿಸಿಕೊಂಡಿರುವ ಅಂತರಾಷ್ಟ್ರೀಯ ಮಟ್ಟದ ಸೆಲೆಬ್ರಿಟಿಯೊಬ್ಬರು ಸಿನಿಮಾಕ್ಕಾಗಿ ಹಾಡು ಹಾಡಿರುವ ವಿಷಯ ಹೊರ ಬಿದ್ದಿದೆ.
‘ಕಾಂತಾರ: ಚಾಪ್ಟರ್ 1’ ಸಿನಿಮಾನಲ್ಲಿ ಹಲವು ಹಾಲಿವುಡ್ ತಂತ್ರಜ್ಞರು ಕೆಲಸ ಮಾಡಿರುವುದು ಗೊತ್ತೇ ಇದೆ. ಇದೀಗ ಭಾರತದ ಖ್ಯಾತ ಕಲಾವಿದ ವಿದೇಶಗಳಲ್ಲಿಯೂ ಬಹಳ ಹೆಸರು ಮಾಡಿರುವ ದಿಲ್ಜೀತ್ ದೊಸ್ಸಾಂಜ್ ಅವರು ‘ಕಾಂತಾರ’ ಸಿನಿಮಾಕ್ಕಾಗಿ ಹಾಡು ಹಾಡಲಿದ್ದಾರೆ. ದಿಲ್ಜೀತ್ ದುಸ್ಸಾಂಜ್, ಖ್ಯಾತ ನಟರಾಗಿರುವ ಜೊತೆಗೆ ಅದ್ಭುತವಾದ ಹಾಡುಗಾರರು ಸಹ. ಅವರ ಲೈವ್ ಕಾನ್ಸರ್ಟ್ಗಳಿಗೆ ಲಕ್ಷಗಳ ಸಂಖ್ಯೆಯಲ್ಲಿ ಜನ ಬರುತ್ತಾರೆ. ಅವರ ಶೋನ ಟಿಕೆಟ್ಗಳು ಬಿಸಿ ದೋಸೆಯಂತೆ ಮಾರಾಟ ಆಗುತ್ತವೆ. ಭಾರತದ ನಂಬರ್ 1 ಲೈವ್ ಕಾನ್ಸರ್ಟ್ ಗಾಯಕ ಎನಿಸಿಕೊಂಡಿದ್ದಾರೆ ದಿಲ್ಜೀತ್ ದೊಸ್ಸಾಂಜ್.
ಇದೀಗ ಇವರು ‘ಕಾಂತಾರ: ಚಾಪ್ಟರ್ 1’ ಸಿನಿಮಾಕ್ಕಾಗಿ ವಿಶೇಷವಾದ ಹಾಡೊಂದನ್ನು ಹಾಡಲಿದ್ದಾರೆ. ದಿಲ್ಜೀತ್ ದೊಸ್ಸಾಂಜ್ ತಮ್ಮ ಹಾಡುಗಳ ಮೂಲಕ ಪಂಜಾಬಿ ಸಂಸ್ಕೃತಿಯನ್ನು ಪ್ರತಿನಿಧಿಸುವ ಕಾರ್ಯ ಮಾಡುತ್ತಾ ಬಂದಿದ್ದಾರೆ. ‘ಕಾಂತಾರ: ಚಾಪ್ಟರ್ 1’ ಸಿನಿಮಾ ಸಹ ಕರಾವಳಿ ಸಂಸ್ಕೃತಿಯನ್ನು ಎತ್ತಿ ತೋರಿಸುವ ಸಿನಿಮಾ ಆಗಿದ್ದು ಇದೇ ಕಾರಣಕ್ಕೆ ದಿಲ್ಜೀತ್ ದೊಸ್ಸಾಂಜ್, ‘ಕಾಂತಾರ 1’ಗಾಗಿ ಹಾಡು ಹಾಡುತ್ತಿರುವುದು ಬಹಳ ವಿಶೇಷ ಎನಿಸಿಕೊಳ್ಳುತ್ತಿದೆ.
ಇದನ್ನೂ ಓದಿ:ಕಾಂತಾರ ಸುಂದರಿ ರುಕ್ಮಿಣಿ ವಸಂತ್ ನಗುವಿಗೆ ಮನಸೋತ ಫ್ಯಾನ್ಸ್
ನಾಳೆ ಅಂದರೆ ಸೆಪ್ಟೆಂಬರ್ 12 ರಂದು ‘ಕಾಂತಾರ: ಚಾಪ್ಟರ್ 1’ ಸಿನಿಮಾಕ್ಕಾಗಿ ದಿಲ್ಜೀತ್ ದುಸ್ಸಾಂಜ್ ಹಾಡು ಹಾಡಲಿದ್ದು, ಹಾಡನ್ನು ಮುಂಬೈನ ವೈಆರ್ಎಫ್ ಸ್ಟುಡಿಯೋನಲ್ಲಿ ರೆಕಾರ್ಡ್ ಮಾಡಲಾಗುತ್ತಿದೆ. ಹಾಡು ರೆಕಾರ್ಡ್ ಮಾಡುವ ವೇಳೆ ಸಂಗೀತ ನಿರ್ದೇಶಕ ಅಜನೀಶ್ ಲೋಕನಾಥ್ ಜೊತೆಗೆ ನಿರ್ದೇಶಕ ರಿಷಬ್ ಶೆಟ್ಟಿ ಸಹ ಇರಲಿದ್ದಾರೆ ಎನ್ನಲಾಗುತ್ತಿದೆ.
‘ಕಾಂತಾರ: ಚಾಪ್ಟರ್ 1’ ಪ್ಯಾನ್ ಇಂಡಿಯಾ ಸಿನಿಮಾ ಆಗಿದ್ದು, ಇದೀಗ ದಿಲ್ಜೀತ್ ದೊಸ್ಸಾಂಜ್ ಹಿಂದಿ ಹಾಡು ಮಾತ್ರವೇ ಹಾಡಲಿದ್ದಾರೆಯೇ ಅಥವಾ ಕನ್ನಡ ಸೇರಿದಂತೆ ದಕ್ಷಿಣ ಭಾರತದ ಭಾಷೆಗಳಲ್ಲಿಯೂ ಹಾಡು ಹಾಡಲಿದ್ದಾರೆಯೇ ಎಂಬುದು ಕುತೂಹಲ ಮೂಡಿಸಿದೆ. ದಿಲ್ಜೀತ್ ದೊಸ್ಸಾಂಜ್ ಭಾರಿ ಜನಪ್ರಿಯ ಗಾಯಕರಾಗಿದ್ದು, ಅವರಿಂದ ಹಾಡು ಹಾಡಿಸುವುದು ಮತ್ತು ಅದರ ವಿಡಿಯೋ ಮಾಡಿ ಪ್ರಚಾರಕ್ಕೆ ಬಳಸುವ ಟ್ರೆಂಡ್ ಬಾಲಿವುಡ್ನಲ್ಲಿದೆ. ‘ಕಾಂತಾರ’ ಚಿತ್ರತಂಡವೂ ಸಹ ದಿಲ್ಜೀತ್ ಅವರ ವಿಡಿಯೋ ಮಾಡಿ ಅದನ್ನು ಬಿಡುಗಡೆ ಮಾಡುವ ಸಾಧ್ಯತೆ ಇದೆ.
‘ಕಾಂತಾರ: ಚಾಪ್ಟರ್ 1’ ಸಿನಿಮಾಕ್ಕೆ ಹೊಂಬಾಳೆ ಫಿಲಮ್ಸ್ ಬಂಡವಾಳ ಹೂಡಿದ್ದು, ಸಿನಿಮಾದ ವಿತರಣೆ ಹಕ್ಕು ಮಾರಾಟ ಚಾಲ್ತಿಯಲ್ಲಿದೆ. ಕೇರಳ ಮತ್ತು ಆಂಧ್ರ ಪ್ರದೇಶಗಳಲ್ಲಿ ಈಗಾಗಲೇ ವಿತರಕರನ್ನು ಹೊಂಬಾಳೆ ಫಿಲಮ್ಸ್ ಅಂತಿಮಗೊಳಿಸಿದೆ. ಸಿನಿಮಾ ಭಾರತದಲ್ಲಿ ಮಾತ್ರವಲ್ಲದೆ ದುಬೈ, ಅಮೆರಿಕ, ನ್ಯೂಜಿಲೆಂಡ್, ಆಸ್ಟ್ರೇಲಿಯಾ ಇನ್ನೂ ಕೆಲ ದೇಶಗಳಲ್ಲಿ ಏಕಕಾಲದಲ್ಲಿ ಬಿಡುಗಡೆ ಆಗಲಿದೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ