ಸರೋಜಾದೇವಿ-ವಿಷ್ಣುವರ್ಧನ್ಗೆ ಕರ್ನಾಟಕ ರತ್ನ: ಇಬ್ಬರು ಒಟ್ಟಿಗೆ ನಟಿಸಿದ ಸಿನಿಮಾಗಳಿವು
Vishnuvardhan-B Saroja Devi: ಕನ್ನಡದ ಮೇರು ನಟ ವಿಷ್ಣುವರ್ಧನ್ ಹಾಗೂ ಮೇರು ನಟಿ ಬಿ ಸರೋಜಾ ದೇವಿ ಅವರುಗಳಿಗೆ ಕರ್ನಾಟಕ ಸರ್ಕಾರವು ಮರಣೋತ್ತರ ಕರ್ನಾಟಕ ರತ್ನ ಪ್ರಶಸ್ತಿ ಘೋಷಣೆ ಮಾಡಿದೆ. ಬಿ ಸರೋಜಾ ದೇವಿ ಹಾಗೂ ವಿಷ್ಣುವರ್ಧನ್ ಅವರು ಒಟ್ಟಾಗಿ ಕೆಲ ಸಿನಿಮಾಗಳಲ್ಲಿ ನಟಿಸಿದ್ದು, ಅವುಗಳ ಪಟ್ಟಿ ಇಲ್ಲಿದೆ...

ವಿಷ್ಣುವರ್ಧನ್ ಅಭಿಮಾನಿಗಳ ಬಹು ವರ್ಷದ ಬೇಡಿಕೆಗೆ ಸಿದ್ದರಾಮಯ್ಯ ಸರ್ಕಾರ ಸ್ಪಂದಿಸಿದೆ. ಇತ್ತೀಚೆಗಷ್ಟೆ ವಿಷ್ಣುವರ್ಧನ್ ಅವರ ಅಭಿಮಾನ್ ಸ್ಟುಡಿಯೋ ನೆಲಸಮವಾಗಿದ್ದು ಅವರ ಅಭಿಮಾನಿಗಳಿಗೆ ತೀವ್ರ ನೋವುಂಟು ಮಾಡಿತ್ತು. ಆದರೆ ಇದೀಗ ಸಿದ್ದರಾಮಯ್ಯ ಸರ್ಕಾರ, ವಿಷ್ಣುವರ್ಧನ್ ಅವರಿಗೆ ಮರಣೋತ್ತರವಾಗಿ ಕರ್ನಾಟಕ ರತ್ನ ನೀಡಿದ್ದು, ಗಾಯಕ್ಕೆ ಮುಲಾಮು ಹಚ್ಚಿದಂತಾಗಿದೆ. ವಿಷ್ಣುವರ್ಧನ್ ಮಾತ್ರವೇ ಅಲ್ಲದೆ ಕನ್ನಡದ ಮತ್ತೊಬ್ಬ ಲಿಜೆಂಡರಿ ನಟಿ ಬಿ ಸರೋಜಾ ದೇವಿ ಅವರಿಗೂ ಸಹ ಕರ್ನಾಟಕ ರತ್ನವನ್ನು ಘೋಷಣೆ ಮಾಡಲಾಗಿದೆ. ಇಬ್ಬರು ಮೇರು ನಟರಿಗೆ ಒಂದೇ ದಿನ ಕರ್ನಾಟಕ ರತ್ನ ಘೋಷಣೆ ಆಗಿದೆ. ವಿಶೇಷವೆಂದರೆ ಈ ಇಬ್ಬರು ಒಟ್ಟಿಗೆ ಕೆಲ ಸಿನಿಮಾಗಳಲ್ಲಿ ನಟಿಸಿದ್ದರು.
ಬಿ ಸರೋಜಾ ದೇವಿ ಅವರು ವಿಷ್ಣುವರ್ಧನ್ ಅವರಿಗಿಂತಲೂ ಬಹಳ ಹಿರಿಯ ನಟಿ. 1953 ರಲ್ಲಿ ಬಿ ಸರೋಜಾ ದೇವಿ ಅವರು ಮೊದಲ ಬಾರಿ ಸಿನಿಮಾನಲ್ಲಿ ನಟಿಸಿದರು. ಆಗಿನ್ನೂ ವಿಷ್ಣುವರ್ಧನ್ ಅವರಿಗೆ ಮೂರು ವರ್ಷ ವಯಸ್ಸು. ಆದರೆ ಆ ನಂತರ ಇಬ್ಬರೂ ಸಹ ತಮ್ಮ ಪ್ರತಿಭೆ, ಶ್ರಮದಿಂದ ಚಿತ್ರರಂಗದಲ್ಲಿ ಮೇರು ನಟ ಮತ್ತು ನಟಿಯಾಗಿ ಗುರುತಿಸಿಕೊಂಡರು.
ಬಿ ಸರೋಜಾ ದೇವಿ ಅವರು ಕನ್ನಡದ ಅಪ್ರತಿಮ ನಟ ಡಾ ರಾಜ್ಕುಮಾರ್ ಅವರೊಟ್ಟಿಗೆ ಹಲವು ಸಿನಿಮಾಗಳಲ್ಲಿ ನಟಿಸಿದ್ದಾರೆ. ವಿಷ್ಣುವರ್ಧನ್ ಅವರೊಟ್ಟಿಗೂ ಸಹ ಸರೋಜಾ ದೇವಿ ಅವರು ನಟಿಸಿದ್ದಾರಾದರೂ ಸಂಖ್ಯೆ ತುಸು ಕಡಿಮೆ. ವಿಷ್ಣುವರ್ಧನ್ ಅವರ ‘ಭಾಗ್ಯ ಜೋತಿ’ ಸಿನಿಮಾನಲ್ಲಿ ಬಿ ಸರೋಜಾ ದೇವಿ ನಟಿಸಿದ್ದರು. ಆದರೆ ನಾಯಕಿ ಆಗಲ್ಲ. ಈ ಸಿನಿಮಾದ ನಾಯಕಿ ಭಾರತಿ ವಿಷ್ಣುವರ್ಧನ್, ಆದರೆ ಸರೋಜಾ ದೇವಿ ಅವರು ವಿಶೇಷ ಪಾತ್ರದಲ್ಲಿ ನಟಿಸಿದ್ದರು. ಈ ಸಿನಿಮಾ 1975 ರಲ್ಲಿ ಬಿಡುಗಡೆ ಆಗಿತ್ತು.
ಇದನ್ನೂ ಓದಿ: ವಿಷ್ಣುವರ್ಧನ್, ಬಿ. ಸರೋಜಾದೇವಿಗೆ ಮರಣೋತ್ತರ ‘ಕರ್ನಾಟಕ ರತ್ನ’ ಘೋಷಣೆ
ಬಳಿಕ 1977 ರಲ್ಲಿ ಬಿಡುಗಡೆ ಆದ ವಿಷ್ಣುವರ್ಧನ್, ಉದಯ್ ಕುಮಾರ್ ನಟನೆಯ ‘ಶನಿ ಪ್ರಭಾವ’ ಸಿನಿಮಾನಲ್ಲಿ ಸರೋಜಾ ದೇವಿ ನಟಿಸಿದರು. ಅಲ್ಲಿಯೂ ಸಹ ಸರೋಜಾ ದೇವಿ ಅವರದ್ದು ವಿಶೇಷ ಪಾತ್ರವೇ ಆಗಿತ್ತು. 1983 ರಲ್ಲಿ ಬಿಡುಗಡೆ ಆದ ‘ರುದ್ರಾಂಗ’ ಸಿನಿಮಾನಲ್ಲಿಯೂ ಬಿ ಸರೋಜಾ ದೇವಿ ಮತ್ತು ವಿಷ್ಣುವರ್ಧನ್ ಒಟ್ಟಿಗೆ ನಟಿಸಿದರು. ‘ರುದ್ರಾಂಗ’ ಸಿನಿಮಾನಲ್ಲಿ ಮಾಧವಿ ಅವರು ನಾಯಕಿಯಾಗಿ ನಟಿಸಿದ್ದರು. ಬಳಿಕ 1997 ರಲ್ಲಿ ಬಿಡುಗಡೆ ಆದ ‘ಜನನಿ ಜನ್ಮಭೂಮಿ’ ಸಿನಿಮಾನಲ್ಲಿಯೂ ಸರೋಜಾ ದೇವಿ ಮತ್ತು ವಿಷ್ಣುವರ್ಧನ್ ಒಟ್ಟಿಗೆ ನಟಿಸಿದ್ದರು. ಈ ಸಿನಿಮಾನಲ್ಲಿ ಸರೋಜಾ ದೇವಿ ಅವರು ವಿಷ್ಣುವರ್ಧನ್ ಅವರ ತಾಯಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ




