Karnataka Ratna: ವಿಷ್ಣುವರ್ಧನ್, ಬಿ. ಸರೋಜಾದೇವಿಗೆ ಮರಣೋತ್ತರ ‘ಕರ್ನಾಟಕ ರತ್ನ’ ಘೋಷಣೆ
Dr Vishnuvardhan: ‘ಸಾಹಸ ಸಿಂಹ’ ವಿಷ್ಣುವರ್ಧನ್ ಹಾಗೂ ಬಿ. ಸರೋಜಾದೇವಿ ಅವರಿಗೆ ರಾಜ್ಯ ಸರ್ಕಾರ ‘ಕರ್ನಾಟಕ ರತ್ನ’ ಪ್ರಶಸ್ತಿ ಘೋಷಿಸಿದೆ. ಇಂದು (ಸೆ.11) ಸಚಿವ ಹೆಚ್.ಕೆ. ಪಾಟೀಲ್ ಅವರು ಈ ವಿಷಯ ತಿಳಿಸಿದರು. ಈ ಸಿಹಿ ಸುದ್ದಿ ಕೇಳಿ ಅಭಿಮಾನಿಗಳಿಗೆ ಬಹಳ ಸಂತಸ ಆಗಿದೆ. ಈ ಮೊದಲು ಚಿತ್ರರಂಗದಿಂದ ಡಾ. ರಾಜ್ಕುಮಾರ್ ಮತ್ತು ಪುನೀತ್ ರಾಜ್ಕುಮಾರ್ ಅವರಿಗೆ ಈ ಪ್ರಶಸ್ತಿ ನೀಡಲಾಗಿತ್ತು.

ಕನ್ನಡ ಚಿತ್ರರಂಗದ ಲೆಜೆಂಡರಿ ಕಲಾವಿದರಾದ ಡಾ. ವಿಷ್ಣುವರ್ಧನ್ (Dr Vishnuvardhan) ಹಾಗೂ ಬಿ. ಸರೋಜಾದೇವಿ ಅವರಿಗೆ ‘ಕರ್ನಾಟಕ ರತ್ನ’ (Karnataka Ratna) ಪ್ರಶಸ್ತಿ ಘೋಷಣೆ ಮಾಡಲಾಗಿದೆ. ಇದು ಅವರ ಅಭಿಮಾನಿಗಳಿಗೆ ಅಪಾರ ಸಂತಸ ಉಂಟುಮಾಡಿದೆ. 200ಕ್ಕೂ ಅಧಿಕ ಸಿನಿಮಾಗಳಲ್ಲಿ ನಟಿಸಿ ವಿಷ್ಣುವರ್ಧನ್ ಅವರು ಅಭಿಮಾನಿಗಳನ್ನು ರಂಜಿಸಿದ್ದರು. ಕನ್ನಡ ಚಿತ್ರರಂಗಕ್ಕೆ ಅವರು ನೀಡಿದ ಕೊಡುಗೆ ಅಪಾರ. ಅದೇ ರೀತಿ ಬಿ. ಸರೋಜಾದೇವಿ (B Saroja Devi) ಕೂಡ ಚಿತ್ರರಂಗದಲ್ಲಿ ಸಾಧನೆ ಮಾಡಿದ್ದರು. ಅವರಿಗೆ ರಾಜ್ಯದ ಅತ್ಯುನ್ನತ ನಾಗರಿಕ ಪ್ರಶಸ್ತಿಯಾದ ‘ಕರ್ನಾಟಕ ರತ್ನ’ ನೀಡಬೇಕು ಎಂಬುದು ಕುಟುಂಬದವರ ಮತ್ತು ಅಭಿಮಾನಿಗಳ ಮನವಿ ಆಗಿತ್ತು. ಇಂದು (ಸೆಪ್ಟೆಂಬರ್ 11) ‘ಕರ್ನಾಟಕ ರತ್ನ’ ಪ್ರಶಸ್ತಿ ಘೋಷಿಸಲಾಗಿದೆ.
ಭಾರತಿ ವಿಷ್ಣುವರ್ಧನ್, ಅನಿರುದ್ಧ್ ಅವರು ಸಿಎಂ ಸಿದ್ದರಾಮಯ್ಯ ಅವರನ್ನು ಭೇಟಿಯಾಗಿ ಮನವಿ ಮಾಡಿದ್ದರು. ಅಲ್ಲದೇ, ಕನ್ನಡ ಚಿತ್ರರಂಗದ ಹಿರಿಯ ನಟಿಯರಾದ ಜಯಮಾಲಾ, ಶ್ರುತಿ, ಮಾಳವಿಕಾ ಅವಿನಾಶ್ ಅವರು ಕೂಡ ಸಿದ್ದರಾಮಯ್ಯ ಅವರನ್ನು ಭೇಟಿಯಾಗಿದ್ದರು. ವಿಷ್ಣುವರ್ಧನ್ ಮತ್ತು ಬಿ. ಸರೋಜಾದೇವಿ ಅವರಿಗೆ ಮರಣೋತ್ತರವಾಗಿ ‘ಕರ್ನಾಟಕ ರತ್ನ’ ಪ್ರಶಸ್ತಿ ನೀಡಬೇಕು ಎಂದು ಅವರು ಮನವಿ ಮಾಡಿಕೊಂಡಿದ್ದರು.
1972ರಲ್ಲಿ ವಿಷ್ಣುವರ್ಧನ್ ಅವರು ನಟನಾಗಿ ಚಿತ್ರರಂಗಕ್ಕೆ ಕಾಲಿಟ್ಟರು. ಆ ವರ್ಷ ಅವರು ನಟಿಸಿದ ‘ವಂಶವೃಕ್ಷ’, ‘ನಾಗರಹಾವು’ ಸಿನಿಮಾಗಳು ಬಿಡುಗಡೆ ಆದವು. ಬಳಿಕ ಕನ್ನಡ ಚಿತ್ರರಂಗದಲ್ಲಿ ಅವರು ಭರವಸೆಯ ನಟನಾಗಿ ಬೆಳೆದರು. ಹಲವು ಬಗೆಯ ಪಾತ್ರಗಳನ್ನು ಮಾಡಿ ಅವರು ಸೈ ಎನಿಸಿಕೊಂಡರು. ಅಭಿಮಾನಿಗಳ ಪಾಲಿಗೆ ‘ಸಾಹಸ ಸಿಂಹ’ ಎನಿಸಿಕೊಂಡರು. ಚಿತ್ರರಂಗದಲ್ಲಿ ಅವರು ಮಾಡಿದ ಸಾಧನೆಯನ್ನು ಗುರುತಿಸಿ ‘ಕರ್ನಾಟಕ ರತ್ನ’ ಪ್ರಶಸ್ತಿ ನೀಡಲಾಗಿದೆ.
ಕರ್ನಾಟಕ ರತ್ನ ಪ್ರಶಸ್ತಿ ನೀಡುವ ಬಗ್ಗೆ ಸಂಪುಟ ಸಭೆಯಲ್ಲಿ ನಿರ್ಧಾರ ಮಾಡಲಾಯಿತು. ಯಾವಾಗ, ಎಲ್ಲಿ ಪ್ರಶಸ್ತಿ ಪ್ರದಾನ ಮಾಡಬೇಕೆಂದು ಮುಂದೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ನಿರ್ಧರಿಸಲಿದೆ.
ಇದನ್ನೂ ಓದಿ: ‘ವಿಷ್ಣುವರ್ಧನ್ ಸ್ಮಾರಕ ನಿರ್ಮಾಣಕ್ಕೆ ಸಿಗುತ್ತಿದೆ ದೊಡ್ಡ ಅಧಿಕಾರಿಗಳ ಬೆಂಬಲ’
ವಿಷ್ಣುವರ್ಧನ್ ಅಳಿಯ ಅನಿರುದ್ಧ್ ಅವರು ಟಿವಿ9ಗೆ ಪ್ರತಿಕ್ರಿಯೆ ನೀಡಿದ್ದಾರೆ. ‘ಸರ್ಕಾರಕ್ಕೆ ನಾನು ಧನ್ಯವಾದ ಹೇಳುತ್ತೇನೆ. ಅಪ್ಪಾಜಿಗೆ ಕರ್ನಾಟಕ ರತ್ನ ಘೋಷಿಸಿದ್ದಕ್ಕೆ ಖುಷಿ ಆಯಿತು. ಅಪ್ಪಾಜಿಯವರು ಈ ಕರ್ನಾಟಕ ರತ್ನ ಪ್ರಶಸ್ತಿಗೆ ಅರ್ಹರು. ಅವರು ಯಾವಾಗಲೂ ನಮ್ಮೊಂದಿಗೆ ಇರುತ್ತಾರೆ. ಕನ್ನಡ ಚಿತ್ರರಂಗದ ಎಲ್ಲ ಕಲಾವಿದರಿಗೆ ನನ್ನ ಧನ್ಯವಾದಗಳು’ ಎಂದು ಅನಿರುದ್ಧ್ ಹೇಳಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Published On - 6:00 pm, Thu, 11 September 25








