
ಹಿರಿಯ ನಿರ್ಮಾಪಕ ಕನಕಪುರ ಶ್ರೀನಿವಾಸ್ (Kanakpura Srinivas) ಕೆಲ ದಿನಗಳ ಹಿಂದಷ್ಟೆ ಸಿನಿಮಾ ಸಂಬಂಧಿ ಕಾರ್ಯಕ್ರಮದಲ್ಲಿ ವೀರಾವೇಷದಿಂದ ಮಾತನಾಡಿದ್ದರು. ಚಿತ್ರರಂಗದಲ್ಲಿ ಇರುವವರೆಲ್ಲರೂ ತಮಗೆ ಮೋಸ ಮಾಡಿದ್ದಾರೆ, ತಮ್ಮನ್ನು ಹೊರತಾಗಿ ಚಿತ್ರರಂಗದಲ್ಲಿರುವವರೆಲ್ಲ ದುರುಳರು ಎಂಬ ರೀತಿ ಮಾತನಾಡಿದ್ದರು. ಪ್ರೇಮ್, ಅರ್ಜುನ್ ಜನ್ಯಾ ಇನ್ನೂ ಕೆಲವರ ಹೆಸರು ಹೇಳಿ ಕೆಲವು ಆರೋಪಗಳನ್ನು ನಿರ್ಮಾಪಕ ಕನಕಪುರ ಶ್ರೀನಿವಾಸ್ ಮಾಡಿದ್ದರು. ಇದೀಗ ನಿರ್ದೇಶಕ ಪ್ರೇಮ್ ಅವರು ತಮ್ಮ ವಿರುದ್ಧ ಆರೋಪ ಮಾಡಿರುವ ಕನಕಪುರ ಶ್ರೀನಿವಾಸ್ ವಿರುದ್ಧ ದೂರು ನೀಡಿದ್ದಾರೆ.
ಖುದ್ದಾಗಿ ಫಿಲಂ ಚೇಂಬರ್ಗೆ ಆಗಮಿಸಿದ ನಿರ್ದೇಶಕ ಪ್ರೇಮ್, ನೂತನ ಫಿಲಂ ಚೇಂಬರ್ ಅಧ್ಯಕ್ಷೆ ಜಯಮಾಲ ಅವರನ್ನು ಭೇಟಿ ಆಗಿ ಕನಕಪುರ ಶ್ರೀನಿವಾಸ್ ವಿರುದ್ಧ ಲಿಖಿತ ದೂರು ನೀಡಿದ್ದಾರೆ. ಪ್ರೇಮ್ ನೀಡಿರುವ ದೂರಿನ ವಿವರ ಇಲ್ಲಿದೆ; ‘ನಿರ್ದೇಶಕ, ನಟ, ನಿರ್ಮಾಪಕನಾದ ನಾನು ಪ್ರೇಮ್, ಆರ್. 25 ವರ್ಷಗಳಿಂದ ಕನ್ನಡ ಚಿತ್ರರಂಗಕ್ಕೆ ಸೇವೆ ಸಲ್ಲಿಸುತ್ತಿದ್ದು ಇಲ್ಲಿಯವರೆಗೂ ಹಲವಾರು ನಿರ್ಮಾಪಕರ ಜೊತೆ ನಿರ್ದೇಶಕನಾಗಿ ಕನ್ನಡ ಚಿತ್ರರಂಗಕ್ಕೆ ಹಲವಾರು ಸದಾಭಿರುಚಿಯ ಚಿತ್ರಗಳನ್ನು ನೀಡುತ್ತಾ ಬಂದಿದ್ದೇನೆ, ಇಲ್ಲಿಯವರೆಗೂ ನನ್ನ ವೃತ್ತಿ ಜೀವನದಲ್ಲಿ ಯಾವುದೇ ಕಪ್ಪು ಚುಕ್ಕೆ ಇಲ್ಲದಂತೆ ಕಾರ್ಯನಿರ್ವಹಿಸುತ್ತ ಬಂದಿರುತ್ತೇನೆ. ನಿರ್ಮಾಪಕ ಆರ್. ಎಸ್ ಶ್ರೀನಿವಾಸ್ ರವರು ನನ್ನ ಬಳಿ ಬಂದು ನಿರ್ದೇಶನ ಮಾಡಿ ಕೊಡಲು ಕೇಳಿಕೊಂಡು ನನ್ನ ಬಳಿ ಬಂದು 2004 ರಲ್ಲಿ ಕೆ. ಪಿ. ಶ್ರೀಕಾಂತ್ ಎನ್ನುವವರ ಮೂಲಕ ಆರ್. ಎಸ್ ಶ್ರೀನಿವಾಸ್ ರವರು ಬಂದು ಮುಂಗಡವಾಗಿ 9 ಲಕ್ಷಗಳನ್ನು ನೀಡಿದ್ದರು ಅದರಲ್ಲಿ ಚೆಕ್ ಮೂಲಕ 5 ಲಕ್ಷ ಹಾಗೂ ನಗದು ರೂಪದಲ್ಲಿ 4 ಲಕ್ಷಗಳನ್ನು ನೀಡಿದ್ದರು. ಇದಾದನಂತರ ಅವರಿಗಾಗಿ ಸಿನಿಮಾ ಮಾಡಲು ಒಂದು ಆಫೀಸ್ ಮಾಡಿ ಒಂದು ತಂಡವನ್ನು ಕಟ್ಟಿಕೊಂಡು ಚಿತ್ರಕಥೆ ಬರೆಯಲು ಪ್ರಾರಂಭಿಸಿದೆ, ಕಥೆ ಹಾಗೂ ಚಿತ್ರ ಕಥೆ ತಯಾರಾದ ನಂತರ ಹಲವು ಬಾರಿ ಸಂಪರ್ಕಿಸಿದಾಗ ಅವರಿಂದ ಯಾವುದೇ ರೀತಿಯ ಪ್ರತಿಕ್ರಿಯೆ ಸಿಗದೇ ಇದ್ದಾಗ ಒಂದು ವರ್ಷಗಳ ಕಾಲ ನನ್ನ ಹಾಗೂ ನನ್ನ ತಂಡದ ಸಮಯವನ್ನು ವ್ಯರ್ಥ ಮಾಡಿದ್ದಲ್ಲದೆ ಯಾವುದೇ ರೀತಿಯ ಹಣ ಕಾಸನ್ನು ನನ್ನ ಆಫೀಸ್ ನ ವೆಚ್ಚಕ್ಕಾಗಲಿ, ನನ್ನ ಸಹ ನಿರ್ದೇಶಕರಿಗೆ ಹಾಗೂ ತಂಡಕ್ಕಾಗಲಿ ನೀಡಲಿಲ್ಲ. ಒಂದು ವರ್ಷಗಳ ಕಾಲ ಆಫೀಸ್ ನ ಹಾಗೂ ತಂಡದ ಖರ್ಚು-ವೆಚ್ಚಗಳನ್ನು ನಾನೇ ಬರಿಸಿರುತ್ತೇನೆ, ಇದರಿಂದ ನನಗೆ ವೈಯಕ್ತಿಕವಾಗಿ 15 ರಿಂದ 20 ಲಕ್ಷ ಖರ್ಚು ಮಾಡಿದ್ದೇನೆ ಹಾಗೂ ನನಗೆ ಈ ಸಮಯದಲ್ಲಿ ಹಲವಾರು ನಿರ್ಮಾಪಕರು ನನಗೆ ನಿರ್ದೇಶಿಸಲು ಹಾಗೂ ನನಗೆ ಅವಕಾಶಗಳು ಬಂದಿದ್ದವು ನಾನು ಇವರ ಚಿತ್ರ ನಿರ್ದೇಶನ ಮಾಡಲು ಬಂದಂತಹ ಈ ಎಲ್ಲಾ ಅವಕಾಶಗಳನ್ನು ಕಳೆದುಕೊಂಡಿದ್ದಲ್ಲದೆ ಕೋಟಿಗಟ್ಟಲೆ ನಷ್ಟವನ್ನು ಅನುಭವಿಸಿದ್ದೇನೆ’ ಎಂದಿದ್ದಾರೆ.
ಇದನ್ನೂ ಓದಿ:ಕನ್ನಡ ಸ್ಟಾರ್ ನಟರ ಮೇಲೆ ಉರಿದು ಬಿದ್ದ ನಿರ್ಮಾಪಕ ಕನಕಪುರ ಶ್ರೀನಿವಾಸ್
ಸಿನಿಮಾ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ್ದ ನಿರ್ಮಾಪಕ ಶ್ರೀನಿವಾಸ್, ಪ್ರೇಮ್ ಹಣ ಪಡೆದು ಸಿನಿಮಾ ಮಾಡಿಕೊಡದೆ ವಂಚಿಸಿದ್ದಾರೆ ಎಂಬರ್ಥದ ಮಾತುಗಳನ್ನಾಡಿದ್ದರು. ಪ್ರೇಮ್ ಜೊತೆಗೆ ಸಿನಿಮಾ ಮಾಡಿದವರೆಲ್ಲ ಹಣ ಕಳೆದುಕೊಂಡಿದ್ದಾರೆ ಆದರೆ ಪ್ರೇಮ್ ಮಾತ್ರ ಚೆನ್ನಾಗಿದ್ದಾರೆ ಎಂದಿದ್ದರು. ಇದೇ ಕಾರಣಕ್ಕೆ ಇದೀಗ ಪ್ರೇಮ್ ಅವರು ಕನಕಪುರ ಶ್ರೀನಿವಾಸ್ ವಿರುದ್ಧ ದೂರು ನೀಡಿದ್ದಾರೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 4:12 pm, Sat, 7 February 26