ಡಾರ್ಲಿಂಗ್ ಕೃಷ್ಣ (Darling Krishna)-ಮಿಲನಾ ನಾಗರಾಜ್ (Milana Nagaraj)-ಬೃಂದಾ ಆಚಾರ್ಯ ಅವರುಗಳು ಒಟ್ಟಿಗೆ ನಟಿಸಿರುವ ಮಹಿಳಾಪರ ಸಂದೇಶವುಳ್ಳ ಸಿನಿಮಾ ‘ಕೌಸಲ್ಯ ಸುಪ್ರಜಾ ರಾಮ’ ಜುಲೈ 28ಕ್ಕೆ ಬಿಡುಗಡೆ ಆಗುತ್ತಿದೆ. ಸಿನಿಮಾದ ಬಗ್ಗೆ ಉತ್ತಮ ನಿರೀಕ್ಷೆಗಳಿವೆ. ‘ಮೊಗ್ಗಿನ ಮನಸ್ಸು’, ‘ಕೃಷ್ಣನ್ ಲವ್ ಸ್ಟೋರಿ’, ‘ಬಚ್ಚನ್’ ಅಂಥಹಾ ಸೂಪರ್ ಹಿಟ್ ಸಿನಿಮಾಗಳನ್ನು ಕೊಟ್ಟಿರುವ ಶಶಾಂಕ್ ಈ ಸಿನಿಮಾವನ್ನೂ ನಿರ್ದೇಶನ ಮಾಡಿದ್ದಾರೆ.
‘ಕೌಸಲ್ಯ ಸುಪ್ರಜಾ ರಾಮ’ ಸಿನಿಮಾದ ಕೆಲವು ಹಾಡುಗಳು ಈಗಾಗಲೇ ಬಿಡುಗಡೆ ಆಗಿ ಹಿಟ್ ಆಗಿದೆ. ಅದರಲ್ಲಿಯೂ ಮಿಲನಾ ನಾಗರಾಜ್ ಬಿಂದಾಸ್ ಆಗಿ ಡ್ಯಾನ್ಸ್ ಮಾಡಿರುವ ಎಣ್ಣೆ ಹಾಡು ಸಖತ್ ವೈರಲ್ ಆಗಿದೆ. ಅದರ ಬೆನ್ನಲ್ಲೆ ‘ಕೌಸಲ್ಯ ಸುಪ್ರಜಾ ರಾಮ’ ಎಂಬುವ ಧಾರ್ಮಿಕ, ಭಕ್ತಿಪೂರ್ವಕ ಹೆಸರುಳ್ಳ ಸಿನಿಮಾದಲ್ಲಿ ಇಂಥಹಾ ಎಣ್ಣೆ ಹಾಡು ಬೇಕಿತ್ತಾ ಎಂದು ಸಹ ಕೆಲವರು ಪ್ರಶ್ನೆ ಮಾಡಿದ್ದಾರೆ. ಈ ಪ್ರಶ್ನೆಗಳಿಗೆ ಸ್ವತಃ ಶಶಾಂಕ್ ಉತ್ತರ ನೀಡಿದ್ದಾರೆ.
”ನಮ್ಮ ಸಿನಿಮಾಕ್ಕೂ ರಾಮಾಯಣಕ್ಕೂ ಅಥವಾ ಶ್ರೀರಾಮನಿಗೂ ಯಾವುದೇ ಸಂಬಂಧ ಹೊಂದಿಲ್ಲ. ನಾವು ‘ಕೌಸಲ್ಯ ಸುಪ್ರಜಾ ರಾಮ’ ಎಂಬ ಹೆಸರು ಆಯ್ದುಕೊಂಡಿದ್ದು, ಅಮ್ಮ-ಮಗನ ಸಂಬಂಧದ ಕತೆಯನ್ನು ಸಿನಿಮಾ ಹೊಂದಿರುವ ಕಾರಣಕ್ಕಾಗಿ ಮಾತ್ರ. ‘ಕೌಸಲ್ಯ ಸುಪ್ರಜಾ ರಾಮ’ ಎಂದರೆ ಕೌಸಲ್ಯಯೆಯ ಒಳ್ಳೆಯ ಮಗನೇ ರಾಮ ಎಂದು ಅರ್ಥ” ಎಂದು ವಿವರಿಸಿದ್ದಾರೆ ಶಶಾಂಕ್.
ಹಾಡಿನ ಬಗ್ಗೆ ಮಾತನಾಡಿ, ಆ ಹಾಡನ್ನು ಕಮರ್ಷಿಯಲ್ ಅಂಶಗಳಿಗಾಗಿ ಅಥವಾ ಮಾರುಕಟ್ಟೆ ಅಂಶಗಳಿಗಾಗಿ ನಾವು ಇಟ್ಟಿದ್ದಲ್ಲ, ಆ ಹಾಡು ಕತೆಗೆ ಅತ್ಯಂತ ಅವಶ್ಯಕವಾಗಿದೆ ಹಾಗಾಗಿ ಆ ಹಾಡನ್ನು ಇಟ್ಟಿದ್ದೇವೆ. ಸಿನಿಮಾ ನೋಡಿದ ಎಲ್ಲರೂ ಆ ಹಾಡು ಬಹಳ ಚೆನ್ನಾಗಿ ಪ್ಲೇಸ್ ಆಗಿದೆ ಎಂದು ಮೆಚ್ಚಿಕೊಂಡಿದ್ದಾರೆ. ಸಿನಿಮಾ ನೋಡುವವರಿಗೂ ಅದು ಖಾತ್ರಿ ಆಗುತ್ತದೆ ಎಂಬ ನಂಬಿಕೆ ಇದೆ ” ಎಂದಿದ್ದಾರೆ ಶಶಾಂಕ್.
‘ಕೌಸಲ್ಯ ಸುಪ್ರಜಾ ರಾಮ’ ಸಿನಿಮಾವು ಗಂಡಸಿನ ಅಹಂ ಕುರಿತಾದ ಕತೆಯನ್ನು ಒಳಗೊಂಡಿದೆ. ಸಿನಿಮಾದಲ್ಲಿ ಡಾರ್ಲಿಂಗ್ ಕೃಷ್ಣ ಎದುರು ಬೃಂದಾ ಆಚಾರ್ಯ ಹಾಗೂ ಮಿಲನಾ ನಾಗರಾಜ್ ನಾಯಕಿಯಾಗಿದ್ದಾರೆ. ನಟ ನಾಗಭೂಷಣ್, ಸುಧಾ ಬೆಳವಾಡಿ, ರಂಗಾಯಣ ರಘು ಇನ್ನಿತರ ಕಲಾವಿದರು ನಟಿಸಿದ್ದಾರೆ. ಸಿನಿಮಾವು ಜುಲೈ 28ಕ್ಕೆ ತೆರೆಗೆ ಬರಲಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 11:56 pm, Thu, 27 July 23