AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಗೊರಗುಂಟೆಪಾಳ್ಯ ಟ್ರಾಫಿಕ್​ ಸಮಸ್ಯೆ ಬಗ್ಗೆ ಡಿ.ಕೆ. ಶಿವಕುಮಾರ್​ ಎದುರು ಪ್ರಮುಖ ಮನವಿ ಇಟ್ಟ ನಿರ್ದೇಶಕ ಶಶಾಂಕ್​

DK Shivakumar: ನಿರ್ದೇಶಕ ಶಶಾಂಕ್​ ಅವರು ಡಿ.ಕೆ. ಶಿವಕುಮಾರ್​ ಅವರಿಗೆ ಟ್ವಿಟರ್​ನಲ್ಲಿ ಬಹಿರಂಗವಾಗಿ ಪತ್ರ ಬರೆದಿದ್ದಾರೆ. ಬೆಂಗಳೂರಿನ ಸಂಚಾರ ದಟ್ಟಣೆಯ ನಿವಾರಣೆಗೆ ಸಂಬಂಧಿಸಿದಂತೆ ಅವರು ಈ ಮನವಿ ಸಲ್ಲಿಸಿದ್ದಾರೆ.

ಗೊರಗುಂಟೆಪಾಳ್ಯ ಟ್ರಾಫಿಕ್​ ಸಮಸ್ಯೆ ಬಗ್ಗೆ ಡಿ.ಕೆ. ಶಿವಕುಮಾರ್​ ಎದುರು ಪ್ರಮುಖ ಮನವಿ ಇಟ್ಟ ನಿರ್ದೇಶಕ ಶಶಾಂಕ್​
ನಿರ್ದೇಶಕ ಶಶಾಂಕ್​, ಡಿ.ಕೆ. ಶಿವಕುಮಾರ್​
ಮದನ್​ ಕುಮಾರ್​
|

Updated on: Jun 14, 2023 | 9:04 PM

Share

ಕರ್ನಾಟಕದಲ್ಲಿ ಹೊಸ ಸರ್ಕಾರ ಕಾರ್ಯಾರಂಭ ಮಾಡಿದೆ. ವಿಧಾನಸಭಾ ಚುನಾವಣೆಯಲ್ಲಿ ಸ್ಪಷ್ಟ ಬಹುಮತ ಪಡೆದ ಕಾಂಗ್ರೆಸ್​ ಪಕ್ಷವು ಅಧಿಕಾರದ ಚುಕ್ಕಾಣಿ ಹಿಡಿದಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್​ (DK Shivakumar) ಅವರ ಎದುರಿನಲ್ಲಿ ಅನೇಕರು ಹಲವು ಬೇಡಿಕೆಗಳನ್ನು ಇಡುತ್ತಿದ್ದಾರೆ. ಡಿ.ಕೆ. ಶಿವಕುಮಾರ್​ ಅವರು ಬೆಂಗಳೂರು ನಗರಾಭಿವೃದ್ಧಿ ಸಚಿವರಾಗಿಯೂ ಕೆಲಸ ಮಾಡುತ್ತಿರುವುದರಿಂದ ಬೆಂಗಳೂರಿಗರು ಒಂದಷ್ಟು ಮನವಿಗಳನ್ನು ಸಲ್ಲಿಸುತ್ತಿದ್ದಾರೆ. ಕನ್ನಡ ಚಿತ್ರರಂಗದ (Sandalwood) ಖ್ಯಾತ ನಿರ್ದೇಶಕ ಶಶಾಂಕ್​ ಕೂಡ 2 ಪ್ರಮುಖವಾದ ಮನವಿಗಳನ್ನು ಸಲ್ಲಿಸಿದ್ದಾರೆ. ಹಾಗಂತ ಇದು ಸಿನಿಮಾಗೆ ಸಂಬಂಧಿಸಿದ ಮನವಿ ಅಲ್ಲ. ಜನಪರವಾದ ವಿಚಾರವನ್ನು ಅವರು ಪ್ರಸ್ತಾಪಿಸಿದ್ದಾರೆ. ಆ ಬಗ್ಗೆ ಅವರು ಟ್ವಿಟರ್​ನಲ್ಲಿ ಬಹಿರಂಗವಾಗಿ ಪತ್ರ ಬರೆದಿದ್ದಾರೆ. ಬೆಂಗಳೂರಿನ ಸಂಚಾರ ದಟ್ಟಣೆಯ ನಿವಾರಣೆಗೆ ಸಂಬಂಧಿಸಿದಂತೆ ಶಶಾಂಕ್(Director Shashank) ಅವರು ಈ ಕೋರಿಕೆಗಳನ್ನು ಸಲ್ಲಿಸಿದ್ದಾರೆ.

ಶಶಾಂಕ್​ ಮಾಡಿದ ಟ್ವೀಟ್​ನಲ್ಲಿ ಏನಿದೆ?

‘ಮಾನ್ಯರೇ.. ನಮ್ಮೆಲ್ಲರ ಹೆಮ್ಮೆಯ ಬೆಂಗಳೂರು ನಗರವು ಹಲವಾರು ಮೂಲಭೂತ ಸೌಲಭ್ಯಗಳ ಕೊರತೆಯಿಂದ ನರಳುತ್ತಿರುವುದು ತಮಗೆ ಗೊತ್ತೇ ಇದೆ. ತಾವು ಸಚಿವರಾಗಿ ಅಧಿಕಾರ ವಹಿಸಿಕೊಂಡ ಕೂಡಲೇ ಇದರ ನಿವಾರಣೆಯ ಕುರಿತಾಗಿ ಕಾರ್ಯಪ್ರವೃತ್ತರಾಗಿರುವುದು ನಿಜಕ್ಕೂ ಶ್ಲಾಘನೀಯ. ಇದೀಗ, ಕನ್ನಡಿಗರು ಅತ್ಯಂತ ತುರ್ತಾಗಿ ಎದುರು ನೋಡುತ್ತಿರುವ ಎರಡು ಯೋಜನೆಗಳನ್ನು ನಿಮ್ಮ ಗಮನಕ್ಕೆ ತರುವುದು ನನ್ನ ಈ ಪತ್ರದ ಮೂಲ ಉದ್ದೇಶ’ ಎಂದು ನಿರ್ದೇಶಕ ಶಶಾಂಕ್​ ಅವರು ಬರಹ ಆರಂಭಿಸಿದ್ದಾರೆ.

‘ಮೊದಲನೆಯದು- ನೆಲಮಂಗಲ ರಸ್ತೆಯ ಗೊರಗುಂಟೆಪಾಳ್ಯ ಜಂಕ್ಷನ್‌! ರಾಜಧಾನಿಯಿಂದ ಮುಕ್ಕಾಲು ಭಾಗ ಕರ್ನಾಟಕಕ್ಕೆ ಹೋಗಲು, ಇದೇ ಹೆಬ್ಬಾಗಿಲು. ಹಲವಾರು ವರ್ಷಗಳಿಂದ ಇಲ್ಲಿ ಆಗುತ್ತಿರುವ ಟ್ರಾಫಿಕ್‌ ಜಾಮ್‌ ಅಸಹನೀಯವಾಗಿದೆ. ಶೀಘ್ರವೇ ಇದಕ್ಕೆ ಪರಿಹಾರ ಕಲ್ಪಿಸಿ. ಎರಡನೆಯದು- ನೆಲಮಂಗಲ ಫೈಓವರ್‌ ಮೇಲಿನ ಹೊರೆ ತಗ್ಗಿಸಲು ಅಭಿವೃದ್ಧಿಪಡಿಸಲಾಗುತ್ತಿರುವ ಮಾಗಡಿ ರಸ್ತೆ ವಿಚಾರ. ಒಮ್ಮೆ ಈಗಿನ ರಸ್ತೆ ಕಾಮಗಾರಿ ಪೂರ್ತಿಯಾಗಿ ಸಂಚಾರಕ್ಕೆ ಮುಕ್ತಗೊಂಡರೆ, ಅದೇ ರಸ್ತೆಯಲ್ಲಿರುವ ಸುಂಕದಕಟ್ಟೆಯು ಈಗಿನ ಗೊರಗುಂಟೆಪಾಳ್ಯ ಜಂಕ್ಷನ್​ ರೀತಿ ಮುಂದಿನ ದಿನಗಳಲ್ಲಿ ಟ್ರಾಫಿಕ್‌ ಜಾಮ್‌ ಸಮಸ್ಯೆಗಳನ್ನು ಸೃಷ್ಟಿಸುವುದು ಖಂಡಿತಾ. ಆದ್ದರಿಂದ ಈಗಲೇ ಅದಕ್ಕೆ ಪರಿಹಾರ ಕೊಂಡುಕೊಳ್ಳುವುದು ಸೂಕ್ತ’ ಎಂದು ಶಶಾಂಕ್​ ಅವರು ಮನವಿ ಮಾಡಿದ್ದಾರೆ.

ಇದನ್ನೂ ಓದಿ:  ಡಿಕೆ ಶಿವಕುಮಾರ್ ಭೇಟಿ ಮಾಡಿದ ಜಗ್ಗೇಶ್, ರಾಜಕೀಯ ಭೇಟಿಯಲ್ಲ ಎಂದ ನವರಸ ನಾಯಕ

‘ಈ ಎರಡೂ ಯೋಜನೆಗಳು ರಾಜಧಾನಿಯನ್ನು ಬಹುತೇಕ ಕರ್ನಾಟಕಕ್ಕೆ ಸಂಪರ್ಕಿಸುವ ಮತ್ತು ಕನ್ನಡಿಗರು ಅತಿ ಹೆಚ್ಚು ವಾಸವಿರುವ ಭಾಗಗಳು. ಇವುಗಳ ಅನುಷ್ಠಾನವು ಆ ಭಾಗದ ಕನ್ನಡಿಗರಿಗೆ ನೀವು ನೀಡುವ ಉತ್ತಮ ಕಾಣಿಕೆಯಾಗುತ್ತದೆ. ಇವು ಸಾರ್ವಜನಿಕ ಸಮಸ್ಯೆಗಳಾಗಿದ್ದರಿಂದ ಮನವಿಯನ್ನೂ ಸಹ ಸಾರ್ವಜನಿಕವಾಗಿ ಮಾಡುತ್ತಿದ್ದೇನೆ. ಇದನ್ನು ನೀವು ಪರಿಗಣಿಸುತ್ತೀರಿ ಎಂದು ಭಾವಿಸಿದ್ದೇನೆ’ ಎಂದು ನಿರ್ದೇಶಕ ಶಶಾಂಕ್​ ಅವರು ಟ್ವೀಟ್​ ಮಾಡಿದ್ದಾರೆ.

ಕನ್ನಡ ಚಿತ್ರರಂಗದಲ್ಲಿ ನಿರ್ದೇಶಕ ಶಶಾಂಕ್ ಅವರು ಹಲವು ವರ್ಷಗಳಿಂದ ಸಕ್ರಿಯರಾಗಿದ್ದಾರೆ. ಅನೇಕ ಹಿಟ್​ ಸಿನಿಮಾಗಳನ್ನು ನೀಡಿದ ಖ್ಯಾತಿ ಅವರಿಗೆ ಸಲ್ಲುತ್ತದೆ. ಹಲವು ಸ್ಟಾರ್​ ನಟರ ಜೊತೆ ಶಶಾಂಕ್​ ಕೆಲಸ ಮಾಡಿದ್ದಾರೆ. ಪ್ರಸ್ತುತ ಡಾರ್ಲಿಂಗ್​ ಕೃಷ್ಣ ಅಭಿನಯದ ‘ಕೌಸಲ್ಯ ಸುಪ್ರಜಾ ರಾಮ’ ಸಿನಿಮಾಗೆ ಶಶಾಂಕ್​ ನಿರ್ದೇಶನ ಮಾಡಿದ್ದಾರೆ. ಹಾಡುಗಳ ಮೂಲಕ ಈ ಚಿತ್ರ ಗಮನ ಸೆಳೆಯುತ್ತಿದ್ದು, ಶೀಘ್ರದಲ್ಲೇ ರಿಲೀಸ್​ ಆಗಲಿದೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.