ಯೋಗರಾಜ್ ಭಟ್ಟರ ಈ ಸಿನಿಮಾಗಳನ್ನು ಮಿಸ್ ಮಾಡಿಕೊಳ್ಳುವಂತಿಲ್ಲ

|

Updated on: Mar 27, 2025 | 1:08 PM

Yogaraj Bhatt: ಯೋಗರಾಜ್ ಭಟ್ ಕನ್ನಡ ಚಿತ್ರರಂಗದ ಪ್ರತಿಭಾವಂತ ಹಿರಿಯ ನಿರ್ದೇಶ. 25 ವರ್ಷಗಳಿಂದಲೂ ಚಿತ್ರರಂಗದಲ್ಲಿರುವ ಭಟ್ಟರು, ಹೊಸಗಾಳಿಗೆ ಕೊಚ್ಚಿಕೊಂಡು ಹೋಗದೆ ನಿಲ್ಲಲು ಅವರ ಕತೆ ಕಟ್ಟುವ, ಸಂಭಾಷಣೆ ಹೆಣೆಯುವ ಪ್ರತಿಭೆಯೇ ಕಾರಣ. ಭಟ್ಟರು ತಮ್ಮ ವೃತ್ತಿ ಬದುಕಿನಲ್ಲಿ ಹಲವು ಅದ್ಭುತ ಸಿನಿಮಾಗಳನ್ನು ನೀಡಿದ್ದಾರೆ. ತಪ್ಪದೇ ನೋಡಬೇಕಾದ ಭಟ್ಟರ ಕೆಲ ಸಿನಿಮಾಗಳ ಪಟ್ಟಿ ಇಲ್ಲಿದೆ.

ಯೋಗರಾಜ್ ಭಟ್ಟರ ಈ ಸಿನಿಮಾಗಳನ್ನು ಮಿಸ್ ಮಾಡಿಕೊಳ್ಳುವಂತಿಲ್ಲ
Yogaraj Bhatt Movies
Follow us on

ಯೋಗರಾಜ್ ಭಟ್ ಕನ್ನಡ ಚಿತ್ರರಂಗದ ಹಿರಿಯ ಮತ್ತು ಯಶಸ್ವಿ ನಿರ್ದೇಶಕ. ಹೊಸ ತಲೆಮಾರಿನ ಕೆಲವು ನಿರ್ದೇಶಕರಂತೆ ಅದ್ಧೂರಿ ಮೇಕಿಂಗ್, ಎಲಿವೇಷನ್ ಸೀನ್​​ಗಳು, ನಾಯಕನ ಅತಿಯಾದ ವೈಭವೀಕರಣ, ಅದ್ಧೂರಿ ಆಕ್ಷನ್ ಅನ್ನು ಮಾತ್ರವೆ ನಂಬಿ ಸಿನಿಮಾ ಮಾಡುವವರಲ್ಲ. ಯೋಗರಾಜ್ ಭಟ್ಟರು ಏನಿದ್ದರೂ ನಂಬುವುದು ಕತೆ, ಚಿತ್ರಕತೆ, ಸಂಭಾಷಣೆಯನ್ನು. ಯಾವುದೇ ಗಿಮಿಕ್​ಗಳಿಲ್ಲದೆ ಸ್ವಚ್ಛವಾದ ಮನರಂಜನೆ ಒದಗಿಸುತ್ತವೆ ಭಟ್ಟರ ಸಿನಿಮಾಗಳು. 25 ವರ್ಷಗಳಿಂದಲೂ ಚಿತ್ರರಂಗದಲ್ಲಿರುವ ಯೋಗರಾಜ್ ಭಟ್ಟರು ಹಲವು ಅದ್ಭುತ ಸಿನಿಮಾಗಳನ್ನು ನೀಡಿದ್ದಾರೆ. ಅವುಗಳಲ್ಲಿ ಮಿಸ್ ಮಾಡದೇ ನೋಡಬೇಕಾದ ಕೆಲವು ಸಿನಿಮಾಗಳು ಇಲ್ಲಿವೆ…

‘ಮುಂಗಾರು ಮಳೆ’

ಕನ್ನಡ ಚಿತ್ರರಂಗದ ದಿಕ್ಕು ಬದಲಾಯಿಸಿದ ಸಿನಿಮಾ ‘ಮುಂಗಾರು ಮಳೆ’. 2006 ರಲ್ಲಿ ಭಟ್ಟರು ಈ ಸಿನಿಮಾ ನಿರ್ದೇಶನ ಮಾಡಿದರು. ಗಣೇಶ್, ಪೂಜಾ ಗಾಂಧಿ ಸೇರಿದಂತೆ ಹಲವರ ಜೀವನ ಬದಲಾಯಿಸಿತು ಈ ಸಿನಿಮಾ. ಮಾತ್ರವಲ್ಲದೆ ಆಗ ನಿಂತ ನೀರಿನಂತಾಗಿದ್ದ ಕನ್ನಡ ಚಿತ್ರರಂಗಕ್ಕೆ ಹೊಸ ಜೀವಕಳೆಯನ್ನು ಈ ಸಿನಿಮಾ ತಂದುಕೊಟ್ಟಿತು.

‘ಗಾಳಿಪಟ’

ಹಲವರು ವಾದಿಸುವಂತೆ ‘ಗಾಳಿಪಟ’ ಸಿನಿಮಾ ‘ಮುಂಗಾರು ಮಳೆ’ಗಿಂತಲೂ ಉತ್ತಮವಾದ ಸಿನಿಮಾ. ಬೇಸರವಾದಾಗ ‘ಗಾಳಿಪಟ’ ಸಿನಿಮಾ ನೋಡುವ ದೊಡ್ಡ ಪ್ರೇಕ್ಷಕ ವರ್ಗ ಇಂದಿಗೂ ಇದೆ. ಹಾಸ್ಯದ ಜೊತೆಗೆ ಅದ್ಭುತ ಭಾವುಕ ಅನುಭೂತಿ ಕೊಡುವ ಸಿನಿಮಾ ಇದು. ಹಾಡುಗಳಂತೂ ಇನ್ನೂ ನೂರು ವರ್ಷ ಬಾಳಿ ಬದುಕಲಿವೆ ಬಿಡಿ.

‘ಮನಸಾರೆ’

ಹುಚ್ಚಾಸ್ಪತ್ರೆಯಲ್ಲಿ ಪ್ರೇಮಕತೆ ಕಟ್ಟುವುದು ಪ್ರತಿಭಾವಂತ ನಿರ್ದೇಶಕನಿಗಷ್ಟೆ ಸಾಧ್ಯ. ಹುಚ್ಚಾಸ್ಪತ್ರೆಯಲ್ಲಿ ಇಬ್ಬರು ‘ಹುಚ್ಚರ’ ನಡುವೆ ನಡೆವ ಸುಂದರ ಪ್ರೇಮಕತೆ ಸಿನಿಮಾ ‘ಮನಸಾರೆ’ ಎಷ್ಟು ಬಾರಿ ನೋಡಿದರೂ ಹೊಸತೆನಿಸುತ್ತದೆ ಈ ಸಿನಿಮಾ. ‘ನಮ್ಮ ಹುಚ್ಚಿಗೆ ಚಿಕಿತ್ಸೆ ಇದೆ, ಅದಕ್ಕೆ ನಾವು ಹುಚ್ಚಾಸ್ಪತ್ರೆಯಲ್ಲಿದ್ದೀವಿ, ಹೊರಗಿನವರ ಹುಚ್ಚು ವಾಸಿಯೇ ಆಗಲ್ಲ ಅದಕ್ಕೆ ಅವರು ಹೊರಗಿದ್ದಾರೆ’ ಸಂಭಾಷಣೆ ಮರೆಯಲು ಸಾಧ್ಯವೆ?

ಪಂಚತಂತ್ರ

‘ಪಂಚತಂತ್ರ’ ಭಟ್ಟರ ಬರವಣಿಗೆ ಪ್ರತಿಭೆ ಕನ್ನಡಿ ಹಿಡಿವ ಸಿನಿಮಾ. ಸರಳ ರೇಖೆಯಂಥಹಾ ಕತೆಯನ್ನು ಕೇವಲ ಸಂಭಾಷಣೆಗಳ ಮೂಲಕವೇ ಆಸಕ್ತಿಕರ ಮಾಡಿಬಿಟ್ಟಿದ್ದಾರೆ ಯೋಗರಾಜ್ ಭಟ್. ಪ್ರಪಂಚದ ಪೊಳ್ಳುತನವನ್ನು ಸಂಭಾಷಣೆಗಳ ಮೂಲಕ, ಕೆಲ ಸನ್ನಿವೇಶಗಳ ಮೂಲಕ ಭಟ್ಟರು ಬಿಚ್ಚಿಟ್ಟಿದ್ದಾರೆ.

ಇದನ್ನೂ ಓದಿ:ಪದಗಳಲ್ಲೇ ಆಟ ಆಡೋ ಕವಿ; ಯೋಗರಾಜ್ ಭಟ್ ಬರೆದ ಈ ಹಾಡುಗಳನ್ನು ಮಿಸ್ ಮಾಡದೆ ಕೇಳಿ

‘ಪರಮಾತ್ಮ’

ಕನ್ನಡದಲ್ಲಿ ಮೂಡಿಬಂದ ಅತ್ಯುತ್ತಮ ಪ್ರೇಮಕಥಾ ಸಿನಿಮಾಗಳಲ್ಲಿ ‘ಪರಮಾತ್ಮ’ ಸಹ ಒಂದು. ಇಂದಿಗೂ ಹಲವು ಜನರ ಬಹು ಮೆಚ್ಚಿನ ಸಿನಿಮಾ ‘ಪರಮಾತ್ಮ’ ಆದರೆ ಈ ಸಿನಿಮಾ ಬಿಡುಗಡೆ ಆದಾಗ ಗೆದ್ದಿರಲಿಲ್ಲ. ಪುನೀತ್ ರಾಜ್​ಕುಮಾರ್ ಅವರ ತುಂಟತನ, ಭಟ್ಟರ ಸಂಭಾಷಣಾ ಪ್ರತಿಭೆ ಬೆರೆತು ಅದ್ಭುತವಾದ ಸಿನಿಮಾ ಆಗಿ ಮೂಡಿ ಬಂದಿದೆ. ಆರಾಮ ಕುರ್ಚಿಯಲ್ಲಿ ಕೂತು ನೋಡಲು ಇದಕ್ಕಿಂತಲೂ ಒಳ್ಳೆಯ ಸಿನಿಮಾ ಇಲ್ಲ ಬಿಡಿ. ಯಾವಾಗಲೇ ಈ ಸಿನಿಮಾ ನೋಡಿದರೂ ಮುಗದ ಮೇಲೆ ಮಂದಹಾಸ ಮೂಡುತ್ತದೆ, ಕೊನೆಯಲ್ಲಿ ಹೃದಯ ಭಾರವಾಗುತ್ತದೆ.

‘ಡ್ರಾಮಾ’

‘ರಂಗ ಎಸ್​ಎಸ್​ಎಲ್​ಸಿ’ ಬಿಟ್ಟರೆ ಭಟ್ಟರ ತುಸು ಕಮರ್ಶಿಯಲ್ ಸಿನಿಮಾ ಎಂದರೆ ‘ಡ್ರಾಮಾ’ ಇರಬಹುದು. ಒಂದೊಳ್ಳೆ ಪ್ರೇಮಕತೆಯ ಜೊತೆಗೆ ಆಕ್ಷನ್ ಸಹ ಬೆರೆತ ಈ ಸಿನಿಮಾ ಪಡ್ಡೆ ಹೈಕಳಿಗೆ ಬಲು ಇಷ್ಟವಾಗಿಬಿಟ್ಟಿತ್ತು. ಸಿನಿಮಾದ ಹಾಸ್ಯ ಸನ್ನಿವೇಶಗಳು ಇಂದಿಗೂ ರೀಲ್ಸ್​ಗಳಲ್ಲಿ ಹರಿದಾಡುತ್ತಲೇ ಇರುತ್ತವೆ.

‘ಮುಗುಳು ನಗೆ’

ಭಟ್ಟರು ಮತ್ತೆ ‘ಮುಂಗಾರು ಮಳೆ’, ‘ಗಾಳಿಪಟ’ ಜೋನ್​ನಲ್ಲಿ ತೆಗೆದ ಸಿನಿಮಾ ‘ಮುಗುಳು ನಗೆ’. ಜಯಂತ್ ಕಾಯ್ಕಿಣಿ ಅವರ ಬರೆದ ಸಿನಿಮಾದ ಶೀರ್ಷಿಕೆ ಗೀತೆಯಂತೂ ಕನ್ನಡದ ಟಾಪ್ 10 ಹಾಡುಗಳಲ್ಲಿ ಒಂದು ಎನ್ನಬಹುದು. ಅಲ್ಲಲ್ಲಿ ಸಣ್ಣ-ಪುಟ್ಟ ಆಕಳಿಕೆಗಳು ಬಂದರೂ ಚಂದವಾಗಿ ನೋಡಿಸಿಕೊಂಡು ಹೋಗುವ ಸಿನಿಮಾ ಇದು.

ಮಣಿ

ಭಟ್ಟರ ಮೊದಲ ಸಿನಿಮಾ ಮಣಿ. ರಾಧಿಕಾ ಮತ್ತು ಮಯೂರ್ ಪಟೇಲ್ ನಟಿಸಿದ್ದ ಈ ಸಿನಿಮಾ ನವಿರಾದ ಪ್ರೇಮಕತೆ ಹೊಂದಿತ್ತು. ಸಿನಿಮಾದಲ್ಲಿ ಉಮಾಶ್ರೀ ನಟನೆ ಅದ್ಭುತ. ‘ಸಾವಿರ ನದಿಗಳಿಗೆಲ್ಲ’ ಹಾಡಂತೂ ಸೂಪರ್ ಹಿಟ್ ಆಗಿತ್ತು.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ