RRR ಎದುರು ಫೈಟ್​ ನೀಡಲು ಸಜ್ಜಾಗಿದ್ದ ಕನ್ನಡದ ‘ಡಿಎನ್​ಎ’ ಚಿತ್ರಕ್ಕೀಗ ನಿರಾಳ; ಇದರ ಹೈಲೈಟ್ಸ್​​ ಏನು?

| Updated By: ಮದನ್​ ಕುಮಾರ್​

Updated on: Jan 02, 2022 | 8:25 PM

‘ಡಿಎನ್​ಎ’ ಚಿತ್ರಕ್ಕೆ ಪ್ರಕಾಶ್​ ರಾಜ್​ ಮೇಹು ನಿರ್ದೇಶನ ಮಾಡಿದ್ದಾರೆ. ರೋಜರ್​ ನಾರಾಯಣ್​, ಎಸ್ತರ್​ ನರೋನಾ, ಯಮುನಾ, ಅಚ್ಯುತ್​ ಕುಮಾರ್​ ಅವರಂತಹ ಅನುಭವಿ ಕಲಾವಿದರು ಈ ಸಿನಿಮಾದಲ್ಲಿ ಬಣ್ಣ ಹಚ್ಚಿದ್ದಾರೆ.

RRR ಎದುರು ಫೈಟ್​ ನೀಡಲು ಸಜ್ಜಾಗಿದ್ದ ಕನ್ನಡದ ‘ಡಿಎನ್​ಎ’ ಚಿತ್ರಕ್ಕೀಗ ನಿರಾಳ; ಇದರ ಹೈಲೈಟ್ಸ್​​ ಏನು?
ಎಸ್ತರ್​ ನರೋನಾ, ರೋಜರ್​ ನಾರಾಯಣ್​
Follow us on

ಕರ್ನಾಟಕದಲ್ಲಿ ಪರಭಾಷೆಯ ದೊಡ್ಡ ಸಿನಿಮಾ ಬಿಡುಗಡೆ ಆಗುತ್ತದೆ ಎಂದಾಗ ಇಲ್ಲಿನ ಸ್ಟಾರ್​ ಕಲಾವಿದರ ಚಿತ್ರಗಳು ಕೂಡ ಚಿತ್ರಮಂದಿರಗಳನ್ನು ಪಡೆಯಲು ಕಷ್ಟ ಪಡಬೇಕಾದ ಪರಿಸ್ಥಿತಿ ಇದೆ. ಆ ಬಗ್ಗೆ ಈಗಾಗಲೇ ಅನೇಕ ಸೆಲೆಬ್ರಿಟಿಗಳು ಮಾತನಾಡಿದ್ದುಂಟು. ಎಲ್ಲವೂ ಅಂದುಕೊಂಡಂತೆ ಆಗಿದ್ದರೆ ಜ.7ರಂದು ‘ಆರ್​ಆರ್​ಆರ್​’ (RRR Movie) ಚಿತ್ರ ಬಿಡುಗಡೆ ಆಗಬೇಕಿತ್ತು. ಅದೇ ದಿನ ಆ ಚಿತ್ರದ ಎದುರು ಫೈಟ್​ ನೀಡಲು ಸಜ್ಜಾಗಿತ್ತು ಕನ್ನಡದ ‘ಡಿಎನ್​ಎ’ ಚಿತ್ರ! ಸದ್ಯಕ್ಕೆ ‘ಆರ್​ಆರ್​ಆರ್​’ ಬಿಡುಗಡೆ ದಿನಾಂಕ ಮುಂದಕ್ಕೆ ಹೋಗಿದೆ. ಆದ್ದರಿಂದ ‘ಡಿಎನ್​ಎ’  (DNA Kannada Movie)ಸಿನಿಮಾಗೆ ಹೆಚ್ಚು ಚಿತ್ರಮಂದಿರಗಳನ್ನು ಪಡೆಯಲು ಸಾಧ್ಯವಾಗುತ್ತಿದೆ. ಆ ವಿಚಾರಕ್ಕೆ ಚಿತ್ರತಂಡ ನಿರಾಳವಾಗಿದೆ.

ಈ ಚಿತ್ರಕ್ಕೆ ಪ್ರಕಾಶ್​ ರಾಜ್​ ಮೇಹು ಅವರು ನಿರ್ದೇಶನ ಮಾಡಿದ್ದಾರೆ. ಕಥೆ-ಚಿತ್ರಕಥೆ ಕೂಡ ಅವರದ್ದೇ. ರೋಜರ್​ ನಾರಾಯಣ್​, ಎಸ್ತರ್​ ನರೋನಾ, ಯಮುನಾ, ಅಚ್ಯುತ್​ ಕುಮಾರ್​ ಅವರಂತಹ ಅನುಭವಿ ಕಲಾವಿದರು ಈ ಸಿನಿಮಾದಲ್ಲಿ ಬಣ್ಣ ಹಚ್ಚಿದ್ದಾರೆ. ‘ಆರ್​ಆರ್​ಆರ್ ಸಿನಿಮಾದ ಎದುರು ಬರಲು ನಮಗೆ ಯಾವುದೇ ಭಯ ಇರಲಿಲ್ಲ. ಯಾಕೆಂದರೆ ನಮ್ಮ ಸಿನಿಮಾದ ಆಡಿಯನ್ಸ್​ ಬೇರೆ, ಆರ್​ಆರ್​ಆರ್​ ಚಿತ್ರದ ಆಡಿಯನ್ಸ್​ ಬೇರೆ. ಫ್ಯಾಮಿಲಿ ಪ್ರೇಕ್ಷಕರು, ಅದರಲ್ಲೂ ವಿಶೇಷವಾಗಿ ಮಹಿಳೆಯರು ನಮ್ಮ ಚಿತ್ರವನ್ನು ಖಂಡಿತಾ ಮೆಚ್ಚಿಕೊಳ್ಳುತ್ತಾರೆ’ ಎಂದಿದ್ದಾರೆ ನಿರ್ದೇಶಕ ಪ್ರಕಾಶ್​ ರಾಜ್​ ಮೇಹು. ಈ ಚಿತ್ರಕ್ಕೆ ಮೈಲಾರಿ ಎಂ. ಬಂಡವಾಳ ಹೂಡಿದ್ದಾರೆ.

‘ಜನುಮದ ಜೋಡಿ’ ಸಿನಿಮಾದ ನಿರ್ದೇಶನ ವಿಭಾಗದಲ್ಲಿ ಕೆಲಸ ಮಾಡಿದವರು ಪ್ರಕಾಶ್ ರಾಜ್​ ಮೇಹು. ಆ ಬಳಿಕ ‘ನಾಗ ಮಂಡಲ’, ‘ತಾಯಿ ಸಾಹೇಬ’, ‘ದೇವೀರಿ’, ‘ಪರಮಾತ್ಮ’ ಮುಂತಾದ ಚಿತ್ರಗಳಲ್ಲಿ ಸಹ ನಿರ್ದೇಶಕನಾಗಿ ಕೆಲಸ ಮಾಡಿದ ಅನುಭವ ಅವರಿಗೆ ಇದೆ. ಈಗ ಅವರು ‘ಡಿಎನ್​ಎ’ ಚಿತ್ರವನ್ನು ಜನರ ಮುಂದಿಡುತ್ತಿದ್ದಾರೆ. ‘ಈಗಾಗಲೇ ನಾವು ಆಯ್ದ ಕೆಲವು ಪ್ರೇಕ್ಷಕರಿಗೆ ಸಿನಿಮಾ ತೋರಿಸಿ, ಅವರಿಂದ ಪ್ರತಿಕ್ರಿಯೆ ಪಡೆದುಕೊಂಡಿದ್ದೇವೆ. ಎಲ್ಲರೂ ಮೆಚ್ಚುಗೆ ಸೂಚಿಸಿದ್ದಾರೆ. ಅದರಿಂದ ನಮ್ಮ ಆತ್ಮವಿಶ್ವಾಸ ಹೆಚ್ಚಿದೆ’ ಎಂದು ನಿರ್ದೇಶಕರು ಹೇಳಿದ್ದಾರೆ.

‘ಆರ್​ಆರ್​ಆರ್​’ ಸಿನಿಮಾದ ಬಿಡುಗಡೆ ದಿನಾಂಕ ಮುಂದಕ್ಕೆ ಹೋಗಿರುವುದರಿಂದ ಅನೇಕ ಚಿತ್ರಗಳಿಗೆ ಅನುಕೂಲ ಆಗಿದೆ. ಚಿತ್ರಮಂದಿರಗಳನ್ನು ಪಡೆಯುವಲ್ಲಿ ಹಲವು ಸಿನಿಮಾಗಳು ನಿರಾಳವಾಗಿವೆ. ‘ಡಿಎನ್​ಎ’ ಸಿನಿಮಾಗೂ ಹೆಚ್ಚು ಥಿಯೇಟರ್​ ಸಿಗುತ್ತಿದೆ. ಕರ್ನಾಟಕದಾದ್ಯಂತ ಅಂದಾಜು 80 ಚಿತ್ರಮಂದಿರಗಳಲ್ಲಿ ಈ ಸಿನಿಮಾ ಬಿಡುಗಡೆ ಆಗುತ್ತಿದೆ. ಪೋಸ್ಟರ್​ಗಳಲ್ಲಿ ‘ಇದು ಹೃದಯವಂತರಿಗೆ ಮಾತ್ರ’ ಎನ್ನುವ ಟ್ಯಾಗ್​ ಲೈನ್​ ಮೂಲಕ ಇದೊಂದು ಭಾವನಾತ್ಮಕ ಸಿನಿಮಾ ಎಂಬುದನ್ನು ನಿರ್ದೇಶಕರು ಒತ್ತಿ ಹೇಳಿದ್ದಾರೆ.

(ಡಿಎನ್​ಎ ಸಿನಿಮಾ ಟ್ರೇಲರ್​)

‘ಡಾ. ರಾಜ್​ಕುಮಾರ್​ ಅವರ ಸಿನಿಮಾಗಳಲ್ಲಿ ಇರುತ್ತಿದ್ದಂತಹ ಗಟ್ಟಿ ವಿಚಾರಗಳು ನಮ್ಮ ಸಿನಿಮಾದಲ್ಲಿ ಇವೆ. ಸ್ಟಾರ್​ ಕಲಾವಿದರನ್ನು ಇಟ್ಟುಕೊಂಡು ನಾನು ಈ ಸಿನಿಮಾ ಮಾಡಿಲ್ಲ. ನಮ್ಮ ಚಿತ್ರಕ್ಕೆ ಕಥೆಯೇ ಸ್ಟಾರ್​’ ಎನ್ನುವ ಪ್ರಕಾಶ್​ ರಾಜ್​ ಮೇಹು ಅವರು ಪ್ರೇಕ್ಷಕರ ಪ್ರತಿಕ್ರಿಯೆಗಾಗಿ ಕಾದಿದ್ದಾರೆ. ಅನಿತಾ ಭಟ್​ ಕೂಡ ಈ ಸಿನಿಮಾದಲ್ಲೊಂದು ಪಾತ್ರ ಮಾಡಿದ್ದಾರೆ.

ಇದನ್ನೂ ಓದಿ:

‘ಲವ್​ ಯೂ ರಚ್ಚು’ ವಿಮರ್ಶೆ: ಕೌತುಕದ ಕಥೆಯಲ್ಲಿ ಟ್ವಿಸ್ಟ್​ ಓಕೆ; ಪ್ರೇಕ್ಷಕರ ರಂಜನೆಗೆ ಇಷ್ಟೇ ಸಾಕೆ?

GGVV Review: ಹೀಗೂ ಇರಬಹುದಾ ಕ್ರೈಮ್​ ಲೋಕ? ಇದು ರಾಜ್​ ಬಿ. ಶೆಟ್ಟಿ ಇನ್ನೊಂದು ಮುಖ