‘ನಾಯಿ ಇದೆ ಎಚ್ಚರಿಕೆ’: ನ.28ಕ್ಕೆ ಬಿಡುಗಡೆ ಆಗಲಿದೆ ಡಾ. ಲೀಲಾ ಮೋಹನ್ ನಟನೆಯ ಸಿನಿಮಾ

ಭಿನ್ನ ಶೀರ್ಷಿಕೆಯ ‘ನಾಯಿ ಇದೆ ಎಚ್ಚರಿಕೆ’ ಸಿನಿಮಾ ಈಗಾಗಲೇ ಟ್ರೇಲರ್ ಮೂಲಕ ಗಮನ ಸೆಳೆದಿದೆ. ಈ ಚಿತ್ರ ಈಗ ಬಿಡುಗಡೆಗೆ ಸಜ್ಜಾಗಿದೆ. ನವೆಂಬರ್ 28ರಂದು ರಿಲೀಸ್ ಮಾಡಲು ತೀರ್ಮಾನಿಸಲಾಗಿದೆ. ಡಾಕ್ಟರ್ ಲೀಲಾ ಮೋಹನ್ ಪಿವಿಆರ್ ಅವರು ಈ ಸಿನಿಮಾದಲ್ಲಿ ಪ್ರಮುಖ ಪಾತ್ರ ಮಾಡಿದ್ದಾರೆ.

‘ನಾಯಿ ಇದೆ ಎಚ್ಚರಿಕೆ’: ನ.28ಕ್ಕೆ ಬಿಡುಗಡೆ ಆಗಲಿದೆ ಡಾ. ಲೀಲಾ ಮೋಹನ್ ನಟನೆಯ ಸಿನಿಮಾ
Dr Leela Mohan Pvr, Nayi Ide Echcharike Poster

Updated on: Nov 16, 2025 | 1:43 PM

ವೈದ್ಯಕೀಯ ಹಾಗೂ ಸಿನಿಮಾ ಎರಡೂ ಕ್ಷೇತ್ರದಲ್ಲಿ ಡಾ. ಲೀಲಾ ಮೋಹನ್ ಪಿ.ವಿ.ಆರ್. (Dr Leela Mohan PVR) ಅವರು ತೊಡಗಿಕೊಂಡಿದ್ದಾರೆ. ಅವರೇ ನಿರ್ಮಾಣ ಮಾಡಿ ಮುಖ್ಯ ಭೂಮಿಕೆಯಲ್ಲಿ ನಟಿಸಿರುವ ‘ನಾಯಿ ಇದೆ ಎಚ್ಚರಿಕೆ’ ಸಿನಿಮಾ ಈಗ ಬಿಡುಗಡೆಗೆ ಸಜ್ಜಾಗಿದೆ. ನವಂಬರ್ 28ರಂದು ರಾಜ್ಯದ್ಯಂತ ಅದ್ದೂರಿಯಾಗಿ ಈ ಸಿನಿಮಾ ಬಿಡುಗಡೆ ಮಾಡಲು ಸಕಲ ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿದ್ದಾರೆ. ಈ ಸಿನಿಮಾ ಮಾತ್ರವಲ್ಲದೇ ಬ್ಯಾಕ್ ಟು ಬ್ಯಾಕ್ ಸಿನಿಮಾಗಳಲ್ಲಿ ಕಾಣಿಸಿಕೊಳ್ಳಲು ಅವರು ಸಜ್ಜಾಗಿದ್ದಾರೆ. ‘ನಾಯಿ ಇದೆ ಎಚ್ಚರಿಕೆ’ (Nayi Ide Echcharike) ಸಿನಿಮಾ ತನ್ನ ಟೈಟಲ್ ಕಾರಣದಿಂದಲೇ ಕುತೂಹಲ ಮೂಡಿಸಿದೆ.

ಬಣ್ಣದ ಲೋಕಕ್ಕೆ ಲೀಲಾ ಮೋಹನ್ ಅವರು ಹೊಸಬರಲ್ಲ. ಬಾಲ್ಯದಿಂದಲೇ ಅಭಿನಯ, ಬರವಣಿಗೆ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಹೆಚ್ಚಿನ ಆಸಕ್ತಿ ಹೊಂದಿದ್ದರು. 2016ರಲ್ಲಿ ಗಿರಿರಾಜ. ಬಿ.ಎಂ., ಪರಮೇಶ್, ಕಲಾಮಧ್ಯಮ ಶಿಕ್ಷಕರಿಂದ ಅಭಿನಯ ಮತ್ತು ರಂಗಭೂಮಿ ತರಬೇತಿಯನ್ನು ಅವರು ಪಡೆದುಕೊಂಡರು. ಬಳಿಕ Don’t Be fuelish, ಆಕ್ಸಿಡೆಂಟ್, ಓಎಸ್​ಟಿ, ಹೈವೇ , ಟ್ರಕ್ ಮುಂತಾದ ಕಿರುಚಿತ್ರಗಳಲ್ಲಿ ನಟಿಸಿ ಅನುಭವ ಪಡೆದರು.

2018ರಿಂದ ಆಲ್ಬಮ್‌ ಹಾಡುಗಳಲ್ಲೂ ಲೀಲಾ ಮೋಹನ್ ಅವರು ಕಾಣಿಸಿಕೊಂಡರು. ಬಳಿಕ ಪೂರ್ಣ ಪ್ರಮಾಣದಲ್ಲಿ ‘ಕನ್ಯಾ’, ‘ಗಡಿಯಾರ’ ಸಿನಿಮಾಗಳಲ್ಲಿ ಅಭಿನಯಿಸಿದರು. ಈಗ ‘ನಾಯಿ ಇದೆ ಎಚ್ಚರಿಕೆ’ ಸಿನಿಮಾದಲ್ಲಿ ಅವರು ಮುಖ್ಯ ಭೂಮಿಕೆ ನಿಭಾಯಿಸಿದ್ದಾರೆ. ಈ ಸಿನಿಮಾವನ್ನು ಅವರು ನಿರ್ಮಿಸುವುದರ ಜೊತೆಗೆ ಹೀರೋ ಆಗಿ ಅಭಿನಯಿಸಿದ್ದಾರೆ.

‘ನಾಯಿ ಇದೆ ಎಚ್ಚರಿಕೆ’ ಸಿನಿಮಾ ಟ್ರೇಲರ್:

ಇನ್ನೂ ಹಲವು ಸಿನಿಮಾಗಳಲ್ಲಿ ಲೀಲಾ ಮೋಹನ್ ಅವರು ನಟಿಸಿದ್ದಾರೆ. ಕೌರವ ವೆಂಕಟೇಶ್ ನಿರ್ದೇಶನದ ‘PYNA’ ಸಿನಿಮಾದಲ್ಲಿ ಅವರು ಇದ್ದಾರೆ. ‘ಉಗ್ರಾವತಾರ’ ಚಿತ್ರದಲ್ಲಿ ಸೈಕೋ ಪಾತ್ರ ಮಾಡಿದ್ದಾರೆ. ‘ರೇ1’ ಚಿತ್ರದಲ್ಲಿ ಖಳನಾಯಕನಾಗಿ ಕಾಣಿಸಿಕೊಂಡಿದ್ದಾರೆ. ‘ಪುಟಾಣಿ ಪಂಟ್ರೂ’ ಮತ್ತು ತೆಲುಗುನಲ್ಲಿ ‘ಕಲ್ಯಾಣ ಮಸ್ತು’, ‘ಕಾಲಾನಿಕಿ ಭೈರವಡು’ ಮುಂತಾದ ಸಿನಿಮಾಗಳಲ್ಲಿ ನಟಿಸಿದರು. ಕನ್ನಡದ ‘ರಾಕ್ಷಸ’, ‘ಬಾರ್ಬಿ’ ಮತ್ತಿತರ ಸಿನಿಮಾಗಳಲ್ಲಿ ಅವರು ಬಣ್ಣ ಹಚ್ಚಿದ್ದಾರೆ.

ಇದನ್ನೂ ಓದಿ: ವಾರ್ತೆಗಳು ಓದುತ್ತಿರುವವರು ಶಂಕರ್‌ನಾಗ್: ನಾಗಶೇಖರ್ ಹೊಸ ಸಿನಿಮಾಗೆ ಆಕರ್ಷಕ ಟೈಟಲ್

ಡಾ. ಲೀಲಾ ಮೋಹನ್ ಅವರು ಕನ್ನಡ, ತೆಲುಗು, ತಮಿಳು, ಹಿಂದಿ, ಇಂಗ್ಲಿಷ್ ಭಾಷೆಗಳಲ್ಲಿ ಪರಿಣಿತಿ ಹೊಂದಿದ್ದಾರೆ. ಅವರು ಮೂಲತಃ ಬೆಂಗಳೂರಿನವರು. ಎಂ.ಬಿ.ಬಿ.ಎಸ್ ಮತ್ತು ಎಂ.ಡಿ. ಪದವಿಗಳನ್ನು ಪೂರ್ಣಗೊಳಿಸಿದ ನಂತರ ಬೆಂಗಳೂರಿನ ಪ್ರಮುಖ ಆಸ್ಪತ್ರೆಗಳಲ್ಲಿ ವೈದ್ಯಕೀಯ ಸೇವೆಯನ್ನು ಆರಂಭಿಸಿದರು. 18 ವರ್ಷಗಳಿಗಿಂತ ಹೆಚ್ಚು ಅನುಭವ ಹೊಂದಿದ್ದಾರೆ. ಈಗ ವೈದ್ಯಕೀಯ ಕ್ಷೇತ್ರದ ಜೊತೆಗೆ ಕನ್ನಡ ಚಿತ್ರರಂಗದಲ್ಲೂ ಗುರುತಿಸಿಕೊಳ್ಳುತ್ತಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.