ನನ್ನ ಮನೆಯಲ್ಲೇ ಇದ್ದುಕೊಂಡು ಇನ್ನೊಬ್ಬರ ಜತೆ ಸಂಸಾರ ಮಾಡಿದಳು: ನಟಿ ಮೇಲೆ ಉದ್ಯಮಿ ಆರೋಪ
ಉದ್ಯಮಿ ಅರವಿಂದ್ ವೆಂಕಟೇಶ್ ರೆಡ್ಡಿ ಅವರನ್ನು ಪೊಲೀಸರು ಬಂದಿಸಿದ್ದರು. ಬಳಿಕ ಅವರಿಗೆ ಜಾಮೀನು ಸಿಕ್ಕಿದೆ. ನಟಿಯೊಬ್ಬರಿಗೆ ಕಿರುಕುಳ ನೀಡಿದ ಆರೋಪ ಅವರ ಮೇಲಿದೆ. ಆ ಕುರಿಯ ಅವರು ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ್ದಾರೆ. ಅಲ್ಲದೇ, ತಮ್ಮ ಜೊತೆ ಇದ್ದಾಗಲೇ ಆ ನಟಿಗೆ ಬೇರೆಯವರ ಜೊತೆ ನಂಟು ಬೆಳೆಯಿತು ಎಂದು ಅವರು ಹೇಳಿದ್ದಾರೆ.

ಕನ್ನಡ ಚಿತ್ರರಂಗದ ನಟಿಯೊಬ್ಬರಿಗೆ ಕಿರುಕುಳ ನೀಡಿದ ಆರೋಪದಲ್ಲಿ ನಿರ್ಮಾಪಕ, ಉದ್ಯಮಿ ಅರವಿಂದ್ ವೆಂಕಟೇಶ್ ರೆಡ್ಡಿ (Aravind Venkatesh Reddy) ಬಂಧನ ಆಗಿತ್ತು. ನ್ಯಾಯಾಲಯದಲ್ಲಿ ಅವರಿಗೆ ಜಾಮೀನು ಸಿಕ್ಕಿದೆ. ಜಾಮೀನು (Bail) ಪಡೆದ ಬಳಿಕ ಮಾಧ್ಯಮಗಳಿಗೆ ಅವರು ಪ್ರತಿಕ್ರಿಯೆ ನೀಡಿದ್ದಾರೆ. ಪ್ರಕರಣದ ಬಗ್ಗೆ ಅವರು ಪೂರ್ತಿ ಮಾಹಿತಿ ನೀಡಿದ್ದಾರೆ. ‘ಕರೆ ಮಾಡಿ ಕಿರುಕುಳ ನೀಡಿದ್ದೇನೆ ಅಂತ ಆರೋಪಿಸಿದ್ದಾರೆ. ಅವರ ಫ್ರೆಂಡ್ ಮನೆಗೆ ಲೆಟರ್ ಮತ್ತು ಫೋಟೋಗಳನ್ನು ಕಳಿಸಿದ್ದೇನೆ ಎಂದು ಕೂಡ ಆರೋಪಿಸಿದ್ದಾರೆ. 2023ರ ಮಾರ್ಚ್ 28ಕ್ಕೆ ಇವರ ಪರಿಚಯ ಆಯಿತು. ಬಳಿಕ ನನಗೆ ಹತ್ತಿರ ಆದರು. ಬಳಿಕ ನಮ್ಮ ಲಿವ್-ಇನ್-ರಿಲೇಷನ್ಶಿಪ್ ಶುರುವಾಯಿತು’ ಎಂದು ಅರವಿಂದ್ ರೆಡ್ಡಿ ಹೇಳಿದ್ದಾರೆ.
‘2023ರ ಅಕ್ಟೋಬರ್ನಲ್ಲಿ ಅವರು ಬೇರೆ ಹುಡುಗನ ಕಡೆ ಗಮನ ಹರಿಸಿದರು. ಆತ ಮನೆಗೆ ಬಂದು ಹೋಗುತ್ತಿದ್ದಾನೆ ಎಂಬುದು ತಿಳಿಯಿತು. ಅದನ್ನು ಪ್ರಶ್ನೆ ಮಾಡಿದೆ. ತಾನು ಯಾರಿಗೂ ಉತ್ತರ ಕೊಡಬೇಕಾದ ಅಗತ್ಯ ಇಲ್ಲ ಅಂತ ಹೇಳಿದರು. ನಾವಿಬ್ಬರು ದೂರ ಆದೆವು. ಆ ಬಳಿಕ 2024ರಲ್ಲಿ ನಾನು ಅವರ ಫೋಟೋಗಳನ್ನು ತಪ್ಪಾಗಿ ಬಿಂಬಿಸುತ್ತಿದ್ದೇನೆ ಅಂತ ಆರೋಪ ಮಾಡಿದರು’ ಎಂದಿದ್ದಾರೆ ಅರವಿಂದ್ ವೆಂಕಟೇಶ್ ರೆಡ್ಡಿ.
‘ತಪ್ಪಾಗಿ ಬಿಂಬಿಸುವಂತಹ ಯಾವುದೇ ಫೋಟೋಗಳು ಇಲ್ಲ. ನಾವು ರಿಲೇಷನ್ಶಿಪ್ನಲ್ಲಿ ಇದ್ದಾಗ ತೆಗೆದುಕೊಂಡ ಫೋಟೋಗಳು ಅವು. ಅವರು ಹಾಗೂ ಅವರ ಫ್ಯಾನ್ ಕ್ಲಬ್ನವರೇ ಹಾಕಿದ್ದರು. ಇನ್ಸ್ಟಾಗ್ರಾಮ್ನಲ್ಲಿ ನಾನು ಕೂಡ ಒಂದಷ್ಟು ಫೋಟೋಗಳನ್ನು ಹಾಕಿದ್ದೆ. ಅದರಲ್ಲಿ ಅಶ್ಲೀಲ ಎಂಬಂತಹ ಫೋಟೋ ಯಾವುದೂ ಇಲ್ಲ. ಇತ್ತೀಚೆಗೆ ಅವರ ಮನೆಗೆ, ಅವರ ಫ್ರೆಂಡ್ ಹೆಂಡತಿಗೆ, ಓನರ್ಗೆ ನಾನು ಫೋಟೋ ಕಳಿಸಿರಬಹುದು ಅಂತ ಆರೋಪಿಸಿದ್ದಾರೆ. ನನಗೆ ಪೊಲೀಸರು ನೋಟಿಸ್ ನೀಡಿದಾಗ ನಾನು ಶ್ರೀಲಂಕಾದಲ್ಲಿ ಇದ್ದೆ. ವಾಪಸ್ ಬರುವಾಗ ನನ್ನನ್ನು ಪೊಲೀಸರು ವಶಕ್ಕೆ ಪಡೆದರು’ ಎಂದು ಅರವಿಂದ್ ವೆಂಕಟೇಶ್ ರೆಡ್ಡಿ ಹೇಳಿದ್ದಾರೆ.
‘ಇದೆಲ್ಲವೂ ಸ್ಟೇಷನ್ ಬೇಲೆಬಲ್ ಅಫೆನ್ಸ್ ಆದರೂ ಕೂಡ ನನ್ನನ್ನು ಕೋರ್ಟ್ಗೆ ಕರೆದುಕೊಂಡು ಹೋದರು. ಹಾಗಾಗಿ ಕೋರ್ಟ್ ಜಾಮೀನು ನೀಡಿದೆ. ಪೊಲೀಸರು ಸಹಕರಿಸಿದ್ದಾರೆ. ನನ್ನ ವಾದವನ್ನು ಕೂಡ ಕೇಳಿದ್ದಾರೆ. ತನಿಖೆ ಮಾಡಿ, ಯಾರ ಮೇಲೆ ಕ್ರಮ ತೆಗೆದುಕೊಳ್ಳಬೇಕು ಎಂಬುದನ್ನು ತೀರ್ಮಾನಿಸುವುದಾಗಿ ಹೇಳಿದ್ದಾರೆ. ನಿಜವಾಗಿ ಯಾರು ಆಕೆಗೆ ಫೋಟೋ, ಲೆಟರ್ ಕಳಿಸಿದ್ದಾರೋ ಗೊತ್ತಿಲ್ಲ’ ಎಂದಿದ್ದಾರೆ ಅರವಿಂದ್ ವೆಂಕಟೇಶ್ ರೆಡ್ಡಿ.
ಇದನ್ನೂ ಓದಿ: ಕನ್ನಡದ ನಟಿಗೆ ಲೈಂಗಿಕ ಕಿರುಕುಳ; ನಿರ್ಮಾಪಕ ಅರವಿಂದ್ ವೆಂಕಟೇಶ ರೆಡ್ಡಿ ಬಂಧನ
‘ಕಾನೂನಿಗೆ ಅದರದ್ದೇ ಆದ ಪ್ರಕ್ರಿಯೆ ಇದೆ. ನಾನು ತಪ್ಪು ಮಾಡಿದರೆ ನನಗೆ ಶಿಕ್ಷೆ ಆಗುತ್ತದೆ. ಅವಳು ತಪ್ಪು ಮಾಡಿದರೆ ಆಕೆಗೆ ಶಿಕ್ಷೆ ಆಗುತ್ತದೆ. ಆಕೆ ಈಗ ಎಲ್ಲಿ ಇದ್ದಾಳೆ? ಅವಳ ಉದ್ದೇಶ ಏನು ಎಂಬುದು ಕೂಡ ನನಗೆ ತಿಳಿದಿಲ್ಲ. ನಾನು ಮರೆತಿರುವ ಕಥೆ ಇದು. ಅದನ್ನು ಜ್ಞಾಪಿಸಿಕೊಂಡು ಜೀವನ ಮಾಡೋಕೆ ನಾನು ಇಷ್ಟಪಡಲ್ಲ. ನನ್ನ ಮನೆಯಲ್ಲೇ ಇದ್ದುಕೊಂಡು ಇನ್ನೊಬ್ಬರ ಜತೆ ಸಂಸಾರ ಮಾಡಿದಳು. ಅದು ನನ್ನ ಕಿವಿಗೆ ಬಿದ್ದಮೇಲೆ ಆ ಮನೆಗೆ ಹೋಗೋದು ಬಿಟ್ಟಿದ್ದೆ. ಆನಂತರ ನಾನು ದೂರ ಆದೆ. ಆಮೇಲೆ ಆಕೆ 2 ಸಲ ಮಾತನಾಡಲು ಪ್ರಯತ್ನಿಸಿಳು’ ಎಂದಿದ್ದಾರೆ ಅರವಿಂದ್ ರೆಡ್ಡಿ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.




