Dr. Rajkumar: ವಿಶೇಷ ಸಿಹಿ ತಿನಿಸಿಗೆ ರಾಜ್​ ಲಡ್ಡು ಎಂದು ಅಣ್ಣಾವ್ರ ಹೆಸರು ಇಟ್ಟಿದ್ದಕ್ಕೆ ಇಲ್ಲಿದೆ ಇಂಟರೆಸ್ಟಿಂಗ್​ ಕಾರಣ

|

Updated on: Apr 24, 2021 | 12:47 PM

Dr Rajkumar Birth Anniversary 2006ರ ಜೂನ್ ತಿಂಗಳಲ್ಲಿ ರಾಜ್​ಕುಮಾರ್​ ಅವರ ಹೆಸರಿನಲ್ಲಿ ಒಂದು ಸ್ವೀಟ್​ ತಯಾರಿಸಬೇಕು ಎಂಬ ಆಲೋಚನೆ ಸದಾಶಿವ ರಾವ್​ ಅವರಿಗೆ ಬಂತು. ಆಗ ತಯಾರಾಗಿದ್ದೇ ರಾಜ್​ ಲಡ್ಡು.

Dr. Rajkumar: ವಿಶೇಷ ಸಿಹಿ ತಿನಿಸಿಗೆ ರಾಜ್​ ಲಡ್ಡು ಎಂದು ಅಣ್ಣಾವ್ರ ಹೆಸರು ಇಟ್ಟಿದ್ದಕ್ಕೆ ಇಲ್ಲಿದೆ ಇಂಟರೆಸ್ಟಿಂಗ್​ ಕಾರಣ
ಡಾ. ರಾಜ್​ಕುಮಾರ್​
Follow us on

ಡಾ. ರಾಜ್​ಕುಮಾರ್​ ಅವರ 92ನೇ ಜನ್ಮದಿನದ ಪ್ರಯುಕ್ತ ಅಭಿಮಾನಿಗಳು ಅವರನ್ನು ನೆನಪು ಮಾಡಿಕೊಳ್ಳುತ್ತಿದ್ದಾರೆ. ಮೇರುನಟನ ಬಗೆಗಿನ ಹಲವು ಸಂಗತಿಗಳನ್ನು ಮೆಲುಕು ಹಾಕಲಾಗುತ್ತಿದೆ. ‘ನಟ ಸಾರ್ವಭೌಮ’ನ ಹುಟ್ಟುಹಬ್ಬಕ್ಕೆ ಸೋಶಿಯಲ್​ ಮೀಡಿಯಾ ಮೂಲಕ ಎಲ್ಲರೂ ಶುಭಕೋರುತ್ತಿದ್ದಾರೆ. ಬೆಂಗಳೂರಿನ ಚಾಮರಾಜಪೇಟೆಯಲ್ಲಿರುವ ಗಣೇಶ ಸ್ವೀಟ್ಸ್​ ಅಂಗಡಿಯ ಮಾಲೀಕ ಸದಾಶಿವ್​ ರಾವ್​ ಅವರು ಒಂದು ವಿಶೇಷ ಸಂಗತಿಯನ್ನು ಟಿವಿ9 ಜೊತೆಗೆ ಹಂಚಿಕೊಂಡಿದ್ದಾರೆ. ಇವರ ಅಂಗಡಿಯಲ್ಲಿ ಸಿಗುವ ‘ರಾಜ್​ ಲಡ್ಡು’ ತುಂಬ ಫೇಮಸ್​. ಅದಕ್ಕೆ ಆ ಹೆಸರು ಬರಲು ಕಾರಣ ಏನು ಎಂಬುದನ್ನು ಅವರು ವಿವರಿಸಿದ್ದಾರೆ.

ನಾನು ರಾಜ್​ಕುಮಾರ್​ ಅವರ ಅಪ್ಪಟ ಅಭಿಮಾನಿ. ಎಲ್ಲ ಸಿನಿಮಾವನ್ನು 5-10 ಸಲ ನೋಡಿದ್ದೇನೆ. ಶಂಕರ್​ ಗುರು ಚಿತ್ರವನ್ನು 51 ಬಾರಿ ನೋಡಿದ್ದೆ. ಆಗಿನ ಕಾಲದಲ್ಲಿ ಸಿನಿಮಾ ನೋಡಲು ಹಣ ಇಲ್ಲದವರನ್ನು ನಾನೇ ಚಿತ್ರಮಂದಿರಕ್ಕೆ ಕರೆದುಕೊಂಡು ಹೋಗಿ ಸಿನಿಮಾ ತೋರಿಸುತ್ತಿದ್ದೆ. 1951ರಲ್ಲಿ ನಮ್ಮ ತಂದೆ ಕಾಟಪ್​ಪೇಟೆ ಚರ್ಚ್​ ಬಳಿ ಅಂಗಡಿ ಮಾಡಿದ್ದರು. ಆಗಿನ ಕಾಲದಲ್ಲೇ ಸಿನಿಮಾ ಕಲಾವಿದರು ಬಂದು ನಮ್ಮ ಅಂಗಡಿಯಲ್ಲಿ ಸ್ವೀಟ್​ ತೆಗೆದುಕೊಂಡು ಹೋಗುತ್ತಿದ್ದರು.

ಎರಡು ನಕ್ಷತ್ರ ಸಿನಿಮಾ ಬಿಡುಗಡೆಯಾಗಿ 15 ದಿನ ಆದ ಬಳಿಕ ಅಣ್ಣಾವ್ರ ಮನೆಗೆ ಸ್ವೀಟ್​ ತೆಗೆದುಕೊಂಡು ಹೋದೆವು. ಮೊದಲಿಗೆ ವಾಚ್​ಮ್ಯಾನ್​ ನಮ್ಮನ್ನು ಒಳಗೆ ಬಿಡಲಿಲ್ಲ. ನಾವು ಜೋರಾಗಿ ಕನ್ನಡದಲ್ಲಿ ಮಾತನಾಡಿದ್ದನ್ನು ಕೇಳಿ ಅಣ್ಣಾವ್ರು ಒಳಗೆ ಕರೆಸಿಕೊಂಡರು. ನಮಗೆ ಉಪ್ಪಿಟ್ಟು ಕಾಪಿ ಕೊಟ್ಟು ಉಪಚರಿಸಿದರು. ಸ್ವೀಟ್​ ತಿಂದು ಖುಷಿಪಟ್ಟರು.

ಮೊದಲೆಲ್ಲ ತುಪ್ಪದಲ್ಲಿ ಮಾಡಿದ ಲಾಡನ್ನು ಅವರಿಗೆ ತಿನ್ನಿಸುತ್ತಿದ್ದೆ. ನಮ್ಮ ಅಂಗಡಿಯಲ್ಲಿ ಅವರಿಗೆ ಮೈಸೂರು ಪಾಕ್​ ತುಂಬ ಇಷ್ಟ ಆಗುತ್ತಿತ್ತು. ಅವರ ಮನೆಗೆ ಸ್ವೀಟ್​ ತಲುಪಿಸುತ್ತಿದ್ದೆವು. 2006ರ ಜೂನ್ ತಿಂಗಳಲ್ಲಿ ರಾಜ್​ಕುಮಾರ್​ ಅವರ ಹೆಸರಿನಲ್ಲಿ ಯಾಕೆ ಒಂದು ಸ್ವೀಟ್​ ಮಾಡಬಾರದು ಎಂಬ ಆಲೋಚನೆ ಬಂತು. ಇದನ್ನು ವಿಭಿನ್ನವಾಗಿ ಮಾಡಬೇಕೆಂದು ಗೋಡುಂಬಿ ಬಾದಾಮಿ, ದ್ರಾಕ್ಷಿ, ಪಿಸ್ತಾ ಹಾಕಿದೆವು. ಬೇರೆ ಯಾವುದೇ ಬಣ್ಣ ಬೇಡ ಎಂದು ಬಿಳಿ ಬಣ್ಣದಲ್ಲಿ ತಯಾರಿಸಿದೆವು. ಯಾಕೆಂದರೆ ರಾಜ್​ಕುಮಾರ್​ ಅವರ ಬಟ್ಟೆ ಬಿಳಿ. ಮನಸ್ಸು ಕೂಡ ಶುಭ್ರವಾಗಿತ್ತು. ಹಾಗಾಗಿ ಈ ಲಾಡು ಕೂಡ ಬಿಳಿ.

(ಗಣೇಶ ಸ್ವೀಟ್ಸ್ ಅಂಗಡಿಯ ಮಾಲೀಕ ಸದಾಶಿವ್ ರಾವ್)

ರಾಜ್​ ಲಾಡನ್ನು ಎಲ್ಲರಿಗೂ ಹಂಚಿದೆವು. ರುಚಿ ನೋಡಿದ ಎಲ್ಲರೂ ಚೆನ್ನಾಗಿದೆ ಎಂದು ಹೇಳಿದರು. ಬೇರೆ ರಾಜ್ಯ, ದೇಶದಿಂದಲೂ ಬಂದು ರಾಜ್​ ಲಾಡು ತೆಗೆದುಕೊಂಡು ಹೋಗುತ್ತಿದ್ದರು. ಅಣ್ಣಾವ್ರ ಹುಟ್ಟುಹಬ್ಬದ ದಿನ ಮತ್ತು ಪುಣ್ಯತಿಥಿಯ ದಿನ ಸಾವಿರಾರು ಲಾಡುಗಳನ್ನು ನಾವು ಹಂಚುತ್ತಿದ್ದೆವು.

ಇದನ್ನೂ ಓದಿ: Dr. Rajkumar Birth Anniversary: ರಾಜ್​ಕುಮಾರ್​ ಜತೆ ಫೋಟೋ ತೆಗೆಸಿಕೊಳ್ಳಲು ಲವರ್​​ ಕಾಯಿಸಿದ್ದೆ

Dr Rajkumar Birth Anniversary: ರಾಜ್​ಕುಮಾರ್ ಊಟ​ ಮಾಡಿ ಎದ್ದರೆ ಒಂದಗಳು ಕೂಡ ಬಾಳೆಯಲ್ಲಿ ಉಳಿಯುತ್ತಿರಲಿಲ್ಲ

(Dr Rajkumar 92nd Birth Anniversary: interesting facts behind Raj laddu)

Published On - 12:39 pm, Sat, 24 April 21