ಕನ್ನಡ ಸಿನಿಪ್ರಿಯರ ಮನಸ್ಸಿನಲ್ಲಿ ಶಾಶ್ವತ ಸ್ಥಾನ ಪಡೆದುಕೊಂಡಿರುವ ಡಾ. ರಾಜ್ಕುಮಾರ್ ಅವರ 92ನೇ ಜನ್ಮದಿನದ ಅಂಗವಾಗಿ ಇಂದು (ಏ.24) ಎಲ್ಲರಿಂದ ಶುಭಾಶಯಗಳು ಹರಿದುಬರುತ್ತಿವೆ. ಅಭಿಮಾನಿಗಳು ತಮ್ಮ ನೆಚ್ಚಿನ ನಟನನ್ನು ಸ್ಮರಿಸಿಕೊಳ್ಳುತ್ತಿದ್ದಾರೆ. ನಟ ಪುನೀತ್ ರಾಜ್ಕುಮಾರ್ ಅವರು ಅಪ್ಪಾಜಿಗೆ ವಿಶೇಷ ರೀತಿಯಲ್ಲಿ ಹುಟ್ಟುಹಬ್ಬದ ಶುಭಕೋರಿದ್ದಾರೆ. ಒಂದು ಹಾಡಿನ ಮೂಲಕ ಮೇರುನಟನ ಜನ್ಮದಿನದ ಸಂಭ್ರಮವನ್ನು ಅವರು ಹೆಚ್ಚಿಸಿದ್ದಾರೆ.
1976ರಲ್ಲಿ ತೆರಕಂಡ ‘ಬಡವರು ಬಂಧು’ ಸಿನಿಮಾದ ‘ನಿನ್ನ ಕಂಗಳ ಬಿಸಿಯ ಹನಿಗಳು ನೂರು ಕಥೆಯ ಹೇಳಿವೆ..’ ಹಾಡು ಇಂದಿಗೂ ಎವರ್ಗ್ರೀನ್. ಆ ಗೀತೆಯನ್ನು ಪುನೀತ್ ಮತ್ತೊಮ್ಮೆ ಹಾಡಿದ್ದಾರೆ. ‘ತಂದೆಯಾಗಿ ತಾಯಿಯಾಗಿ ಮಮತೆಯಿಂದ ಬೆಳೆಸಿದೆ. ಬಿಸಿಲು-ಮಳೆಗೆ ನರಳದಂತೆ ನಿನ್ನ ನೆರಳಲಿ ಸಲಹಿದೆ. ಆ ಪ್ರೀತಿಯ ಮನ ಮರೆಯುದೇ..’ ಎಂಬ ಸಾಲುಗಳನ್ನು ತುಂಬ ಭಾವುಕವಾಗಿ ಪುನೀತ್ ಹಾಡಿದ್ದಾರೆ. ತಂದೆಯನ್ನು ನೆನಪಿಸಿಕೊಂಡು ಅವರು ಭಾವಪರವಶರಾಗಿ ಧ್ವನಿ ನೀಡಿದ್ದಾರೆ.
ಈ ವಿಡಿಯೋವನ್ನು ಪುನೀತ್ ರಾಜ್ಕುಮಾರ್ ಅವರು ತಮ್ಮ ಸೋಶಿಯಲ್ ಮೀಡಿಯಾ ಖಾತೆಗಳಲ್ಲಿ ಹಂಚಿಕೊಂಡಿದ್ದಾರೆ. ಅದು ಎಲ್ಲರಿಗೂ ಸಖತ್ ಇಷ್ಟ ಆಗುತ್ತಿದೆ. ಅಭಿಮಾನಿಗಳ ಇದನ್ನು ಶೇರ್ ಮಾಡಿಕೊಳ್ಳುತ್ತಿದ್ದಾರೆ. ಪ್ರತಿವರ್ಷವೂ ಏ.24 ಬಂದರೆ ಅಣ್ಣಾವ್ರ ಅಭಿಮಾನಿಗಳ ಸಂಭ್ರಮ ಜೋರಾಗಿರುತ್ತಿತ್ತು. ಆದರೆ ಈ ಬಾರಿ ಲಾಕ್ಡೌನ್ ನಿಯಮಗಳ ಕಾರಣದಿಂದ ಮೇರುನಟನ ಜನ್ಮದಿನವನ್ನು ಸಿಂಪಲ್ ಆಗಿ ಆಚರಿಸಲಾಗುತ್ತಿದೆ.
ಅಪ್ಪಾಜಿ ಅವರ ೯೨ನೆ ಜನ್ಮದಿನದ ಪ್ರಯುಕ್ತ ನಮ್ಮ ಒಂದು ಪುಟ್ಟ ಕಾಣಿಕೆ. pic.twitter.com/k5KdzNBvkL
— Puneeth Rajkumar (@PuneethRajkumar) April 24, 2021
ರಾಜ್ಯದ ಮೂಲೆಮೂಲೆಗಳಿಂದ ಬರುತ್ತಿದ್ದ ಜನರು ಕಂಠೀರವ ಸ್ಟುಡಿಯೋ ಆವರಣದಲ್ಲಿ ಇರುವ ರಾಜ್ ಸಮಾಧಿ ಸ್ಥಳಕ್ಕೆ ಭೇಟಿ ನೀಡಿ ನಮನ ಸಲ್ಲಿಸುತ್ತಿದ್ದರು. ರಕ್ತದಾನ, ನೇತ್ರದಾನ ನೋಂದಣಿ, ಉಚಿತ ಆರೋಗ್ಯ ತಪಾಸಣೆ, ಅನ್ನ ಸಂತರ್ಪಣೆ ಮುಂತಾದ ಸಮಾಜಮುಖಿ ಕಾರ್ಯಗಳು ನಡೆಯುತ್ತಿದ್ದವು. ಆದರೆ ಆ ಎಲ್ಲ ಕಾರ್ಯಗಳಿಗೆ ಕೊವಿಡ್-19 ಬ್ರೇಕ್ ಹಾಕಿದೆ. ಅದರಲ್ಲೂ ಶನಿವಾರ ಮತ್ತು ಭಾನುವಾರ ಲಾಕ್ಡೌನ್ ಜಾರಿಯಲ್ಲಿ ಇರುವುದರಿಂದ ಯಾರೂ ಕೂಡ ರಾಜ್ ಸಮಾಧಿ ಸ್ಥಳಕ್ಕೆ ತೆರಳಲು ಸಾಧ್ಯವಾಗುತ್ತಿಲ್ಲ.
ಭಾರತೀಯ ಚಿತ್ರರಂಗ ಕಂಡ ಮೇರು ಕಲಾವಿದ, ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿ ಪುರಸ್ಕೃತ ವರನಟ ಡಾ.ರಾಜ್ ಕುಮಾರ್ ಜನ್ಮದಿನದಂದು ಅವರಿಗೆ ಅಭಿಮಾನ ಪೂರ್ವಕ ನಮನಗಳು. ನಾಡು ಎಂದೂ ಮರೆಯದ ಸಾಂಸ್ಕೃತಿಕ ಶಕ್ತಿಯಾಗಿ ಬೆಳೆದು, ತಮ್ಮ ಕಲಾ ಪ್ರೌಢಿಮೆಯ ಜೊತೆಗೆ ಹೃದಯವಂತಿಕೆಯಿಂದ ಜನಮನ ಗೆದ್ದ ಡಾ.ರಾಜ್ ಅವರು ನಾಡು ನುಡಿಗೆ ಸಲ್ಲಿಸಿದ ಸೇವೆ ಅವಿಸ್ಮರಣೀಯ. pic.twitter.com/lLii8FMC0R
— B.S. Yediyurappa (@BSYBJP) April 24, 2021
ಬದಲಾದ ಈ ಪರಿಸ್ಥಿತಿಯಲ್ಲಿ ಸೋಶಿಯಲ್ ಮೀಡಿಯಾ ಮೂಲಕವೇ ‘ನಟ ಸಾರ್ವಭೌಮ’ನ ಹುಟ್ಟುಹಬ್ಬದ ಸಂಭ್ರಮ ಕಳೆಕಟ್ಟಿದೆ. ಅಪಾರ ಸಂಖ್ಯೆಯ ಅಭಿಮಾನಿಗಳು ಮೇರುನಟನ ಜನ್ಮದಿನಕ್ಕೆ ಶುಭಕೋರುತ್ತಿದ್ದಾರೆ. ರಾಘವೇಂದ್ರ ರಾಜ್ಕುಮಾರ್, ಪವನ್ ಒಡಯರ್, ರಮೇಶ್ ಅರವಿಂದ್, ಸಿಂಪಲ್ ಸುನಿ, ಜಗ್ಗೇಶ್, ವಸಿಷ್ಠ ಸಿಂಹ ಸೇರಿದಂತೆ ಕನ್ನಡ ಚಿತ್ರರಂಗದ ಅನೇಕ ಸೆಲೆಬ್ರಿಟಿಗಳು ಅಣ್ಣಾವ್ರನ್ನು ಸ್ಮರಿಸಿಕೊಂಡಿದ್ದಾರೆ. ಸಿಎಂ ಬಿಎಸ್ ಯಡಿಯೂರಪ್ಪ ಕೂಡ ಟ್ವಿಟರ್ ಮೂಲಕ ಡಾ. ರಾಜ್ ಜನ್ಮದಿನಕ್ಕೆ ಶುಭಕೋರಿದ್ದಾರೆ.
ಇದನ್ನೂ ಓದಿ: Dr. Rajkumar Birth Anniversary: ರಾಜ್ಕುಮಾರ್ ಜತೆ ಫೋಟೋ ತೆಗೆಸಿಕೊಳ್ಳಲು ಲವರ್ ಕಾಯಿಸಿದ್ದೆ
(Dr Rajkumar 92nd Birth Anniversary: Puneeth Rajkumar BS Yediyurappa and others pay tribute to Legendary Kannada Superstar)