ಭಾರತೀಯ ಚಿತ್ರರಂಗದಲ್ಲಿ ಡಾ. ರಾಜ್‌ಕುಮಾರ್ (Dr Rajkumar) ಅವರಿಗೆ ಸಾಟಿ ಆಗಬಲ್ಲಂತಹ ಮತ್ತೋರ್ವ ನಟ ಇಲ್ಲ. ಅಷ್ಟರಮಟ್ಟಿಗೆ ವಿಶಿಷ್ಠವಾಗಿ ಅವರು ಗುರುತಿಸಿಕೊಂಡಿದ್ದರು. ಕನ್ನಡ ಚಿತ್ರರಂಗಕ್ಕೆ ಅವರು ನೀಡಿದ ಕೊಡುಗೆ ಅಪಾರ. ಪ್ರತಿ ಸಿನಿಮಾದಲ್ಲಿಯೂ ಸಮಾಜಕ್ಕೊಂದು ಉತ್ತಮ ಸಂದೇಶ ನೀಡುತ್ತಿದ್ದ ಅವರು ಎಲ್ಲರ ಪಾಲಿನ ಪ್ರೀತಿಯ ‘ಅಣ್ಣಾವ್ರು’ ಆಗಿದ್ದರು. ಸಿನಿಮಾದಲ್ಲಿ ಅವರ ಮಾಡುತ್ತಿದ್ದ ಪ್ರತಿ ಪಾತ್ರಗಳು ಕೂಡ ಜನರಿಗೆ ಮಾದರಿ ಆಗಿರುತ್ತಿದ್ದವು. ಆ ಕಾರಣದಿಂದಲೇ ಅವರು ಕನ್ನಡಿಗರ ಹೃದಯದಲ್ಲಿ ಶಾಶ್ವತ ಸ್ಥಾನ ಪಡೆದುಕೊಂಡರು. ಸಿನಿಮಾದಲ್ಲಿ ಮಾತ್ರವಲ್ಲದೇ ನಿಜಜೀವನದಲ್ಲೂ ಸರಳ-ಸಜ್ಜನಿಕೆಯ ಹೃದಯವಂತನಾಗಿ ಡಾ. ರಾಜ್‌ಕುಮಾರ್ ಬದುಕಿದರು. ಕಲಾ ಜಗತ್ತಿಗೆ ಅವರು ನೀಡಿದ ಕೊಡುಗೆಯನ್ನು ಪರಿಗಣಿಸಿ ಅವರಿಗೆ ಗೌರವ ಡಾಕ್ಟರೇಟ್ ನೀಡಲಾಯಿತು. ಮೈಸೂರು ವಿಶ್ವ ವಿದ್ಯಾಲಯವು (Mysore University) ಅಣ್ಣಾವ್ರಿಗೆ ಈ ಗೌರವ ನೀಡಿ ಈಗ 46 ವರ್ಷಗಳು ಕಳೆದಿವೆ. 1976ರ ಫೆ.8ರಂದು ಮೇರುನಟನಿಗೆ ಗೌರವ ಡಾಕ್ಟರೇಟ್ (Honorary Doctorate) ನೀಡಲಾಯಿತು. ಆ ಸಮಯದಲ್ಲಿ ಕ್ಲಿಕ್ಕಿಸಿದ ಅಪರೂಪದ ಫೋಟೋವನ್ನು ರಾಘವೇಂದ್ರ ರಾಜ್‌ಕುಮಾರ್ ಅವರು ಹಂಚಿಕೊಂಡಿದ್ದಾರೆ.
ಪ್ರಾಥಮಿಕ ಶಾಲೆಯ ವಿದ್ಯಾಭ್ಯಾಸವನ್ನೂ ರಾಜ್‌ಕುಮಾರ್ ಪೂರೈಸಿರಲಿಲ್ಲ. ಅಂತಹ ವ್ಯಕ್ತಿ ಸಿನಿಮಾ ಕ್ಷೇತ್ರದಲ್ಲಿ ಮಾಡಿದ ಸಾಧನೆ ಸಾಮಾನ್ಯವಾದದ್ದಲ್ಲ. ಸ್ಪಷ್ಟವಾಗಿ ಕನ್ನಡ ಮಾತನಾಡಿ ಇತರರಿಗೂ ಮಾದರಿ ಆದವರು ಅಣ್ಣಾವ್ರು. ಸಿನಿಮಾದಲ್ಲಿ ಪಟಪಟನೆ ಇಂಗ್ಲಿಷ್ ಮಾತನಾಡಿ ಎಲ್ಲರಿಗೂ ಅಚ್ಚರಿ ಮೂಡಿಸಿದರು. ಅಂಥ ಅಪ್ರತಿಮ ಕಲಾವಿದನನ್ನು ಪಡೆದ ಕನ್ನಡಿಗರೇ ಧನ್ಯ. ಡಾಕ್ಟರೇಟ್ ಗೌರವಕ್ಕೆ ಪಾತ್ರರಾಗುವ ಮೂಲಕ ಕೋಟ್ಯಂತರ ಜನರಿಗೆ ಡಾ. ರಾಜ್‌ಕುಮಾರ್ ಸ್ಫೂರ್ತಿಯಾದರು.
ರಾಜ್‌ಕುಮಾರ್ ಅವರು ಡಾಕ್ಟರೇಟ್ ಪಡೆದು ಫೆ.8ಕ್ಕೆ 46 ವರ್ಷ ಪೂರ್ಣವಾಗಿದೆ. 1976ರ ಫೆ.8ರಂದು ಮೈಸೂರು ವಿಶ್ವವಿದ್ಯಾಲಯದ ಮಾನಸ ಗಂಗೋತ್ರಿ ಬಯಲು ರಂಗಮಂದಿರದಲ್ಲಿ ಆ ಕಾರ್ಯಕ್ರಮ ನಡೆದಿತ್ತು. ಅದ್ದೂರಿಯಾಗಿ ನಡೆದ ಕಾರ್ಯಕ್ರಮದಲ್ಲಿ ಗೌರವ ಡಾಕ್ಟರೇಟ್ ಪ್ರದಾನ ಮಾಡಲಾಗಿತ್ತು. ರಾಜ್‌ಕುಮಾರ್ ಅವರ ಜೊತೆಗೆ ಇನ್ನೂ ಹಲವರಿಗೆ ಗೌರವ ಡಾಕ್ಟರೇಟ್ ನೀಡಲಾಗಿತ್ತು. ಮುಂಬೈನ ಬಾಬಾ ಅಟಾಮಿಕ್ ಎನರ್ಜಿ ಸೆಂಟರ್ ನಿರ್ದೇಶಕರಾದ ಡಾ. ಎಚ್.ಎನ್. ಸೇತ್ನಾ, ವಿ. ಸೀತಾರಾಮಯ್ಯ, ಎಂ.ಎಚ್. ಗೋಪಾಲ್ ಅವರಿಗೂ ಗೌರವ ಡಾಕ್ಟರೇಟ್ ನೀಡಲಾಗಿತ್ತು. ಆ ಮಹತ್ವದ ಕಾರ್ಯಕ್ರಮಕ್ಕೆ ಹಲವು ಗಣ್ಯರು ಸಾಕ್ಷಿ ಆಗಿದ್ದರು. ಅಂದಿನ ರಾಜ್ಯಪಾಲರಾದ ಡಾ. ಉಮಾಶಂಕರ ದೀಕ್ಷಿತ್, ಮೈಸೂರು ವಿವಿ ಕುಲಪತಿ ಡಾ. ಡಿ.ವಿ. ಅರಸು ಸೇರಿ ಹಲವರು ಭಾಗಿ ಆಗಿದ್ದರು.
ಮೇರು ನಟನ ಸಿನಿಮಾಗಳು ಎಂದರೆ ಪ್ರೇಕ್ಷಕರಿಗೆ ಇಂದಿಗೂ ಅಚ್ಚುಮೆಚ್ಚು. ಅಣ್ಣಾವ್ರ ಸಿನಿಮಾಗಳು ಈಗ ರೀ-ರಿಲೀಸ್ ಆದರೂ ಹೌಸ್ಫುಲ್ ಪ್ರದರ್ಶನ ಕಾಣುತ್ತವೆ. ಕಸ್ತೂರಿ ನಿವಾಸ, ಗಂಧದ ಗುಡಿ, ಸತ್ಯ ಹರಿಶ್ಚಂದ್ರ ಸಿನಿಮಾಗಳು ಮರುಬಿಡುಗಡೆಯಾದಾಗ ಇಂದಿನ ತಲೆಮಾರಿನ ಪ್ರೇಕ್ಷಕರು ಚಿತ್ರಮಂದಿರದಲ್ಲಿ ಮುಗಿಬಿದ್ದು ಸಿನಿಮಾ ನೋಡಿದ್ದರು.
ಇದನ್ನೂ ಓದಿ:
3ನೇ ಕ್ಲಾಸ್ ಓದಿದ ಡಾ. ರಾಜ್‌ಕುಮಾರ್ ಇಂಗ್ಲಿಷ್ ಕಲಿತಿದ್ದು ಹೇಗೆ? ಇಲ್ಲಿದೆ ಅದರ ಸೀಕ್ರೆಟ್
ಮ್ಯೂಸಿಯಂ ಆಗಲಿದೆ ಡಾ. ರಾಜ್ ಆಡಿ ಬೆಳೆದ ಮನೆ; ಪುನೀತ್ ಆಸೆ ಈಡೇರಿಸಲು ಕುಟುಂಬದ ನಿರ್ಧಾರ
Published On - 8:05 am, Wed, 9 February 22