ಮ್ಯೂಸಿಯಂ ಆಗಲಿದೆ ಡಾ. ರಾಜ್ ಆಡಿ ಬೆಳೆದ ಮನೆ; ಪುನೀತ್ ಆಸೆ ಈಡೇರಿಸಲು ಕುಟುಂಬದ ನಿರ್ಧಾರ
Dr Rajkumar Gajanur House: ಅಪ್ಪಾಜಿಯವರ ಹಳೇ ಮನೆಯನ್ನು ದುರಸ್ತಿ ಮಾಡಿಸುವುದಾಗಿ ಪುನೀತ್ ರಾಜ್ಕುಮಾರ್ ಅವರು ಹೇಳಿದ್ದರು. ಆದರೆ ಆ ಕಾರ್ಯ ನೆರವೇರುವುದಕ್ಕೂ ಮುನ್ನವೇ ಅವರು ಇಹಲೋಕ ತ್ಯಜಿಸಿದ್ದು ನೋವಿನ ಸಂಗತಿ.
ಪುನೀತ್ ರಾಜ್ಕುಮಾರ್ (Puneeth Rajkumar) ಅವರನ್ನು ಕಳೆದುಕೊಂಡಿರುವುದು ಕನ್ನಡ ಚಿತ್ರರಂಗಕ್ಕೆ ಆದ ದೊಡ್ಡ ನಷ್ಟ. ಹೃದಯಾಘಾತದಿಂದ ನಿಧನರಾಗುವುದಕ್ಕೂ ಮುನ್ನ ಪುನೀತ್ ಅವರು ಅನೇಕ ಕನಸುಗಳನ್ನು ಕಂಡಿದ್ದರು. ಆದರೆ ಅವು ನನಸಾಗುವುದಕ್ಕೂ ಮುನ್ನವೇ ಅವರು ಇಹಲೋಕ ತ್ಯಜಿಸಿದ್ದು ನೋವಿನ ಸಂಗತಿ. ಅಪ್ಪು ಕಂಡಿದ್ದ ಅನೇಕ ಕನಸುಗಳನ್ನು ಅವರ ಕುಟುಂಬದವರು ಈಗ ನನಸು ಮಾಡುತ್ತಿದ್ದಾರೆ. ಅದರ ಅಂಗವಾಗಿ ಇತ್ತೀಚೆಗೆ ‘ಗಂಧದ ಗುಡಿ’ ಸಾಕ್ಷ್ಯಚಿತ್ರದ ಟೈಟಲ್ ಟೀಸರ್ ಬಿಡುಗಡೆ ಮಾಡಲಾಗಿತ್ತು. ಅದೇ ರೀತಿ ಈಗ ಇನ್ನೊಂದು ಕನಸನ್ನು ಡಾ. ರಾಜ್ಕುಮಾರ್ (Dr Rajkumar) ಕುಟುಂಬ ಕೈಗೆತ್ತಿಕೊಳ್ಳುತ್ತಿದೆ. ಅಣ್ಣಾವ್ರು ಆಡಿ ಬೆಳೆದ ಮನೆಯನ್ನು ದುರಸ್ತಿ ಮಾಡಿಸಿ, ಅದನ್ನು ಮ್ಯೂಸಿಯಂ ಆಗಿ ಪರಿವರ್ತಿಸಲು ಕುಟುಂಬದವರು ತೀರ್ಮಾನಿಸಿದ್ದಾರೆ.
ಚಾಮರಾಜನಗರ ಗಡಿಯ ತಾಳವಾಡಿ ಸಮೀಪದ ಗಾಜನೂರಿನಲ್ಲಿ ಡಾ. ರಾಜ್ಕುಮಾರ್ ಅವರು ಆಡಿ ಬೆಳೆದ ಮನೆ ಇದೆ. ಆ ಜಾಗ ಎಂದರೆ ಪುನೀತ್ ರಾಜ್ಕುಮಾರ್ ಅವರಿಗೆ ಅಚ್ಚುಮೆಚ್ಚು ಆಗಿತ್ತು. ಅಲ್ಲಿಗೆ ಅವರು ಆಗಾಗ ಭೇಟಿ ನೀಡುತ್ತಿದ್ದರು. ಸದ್ಯ ಈ ಮನೆ ಕುಸಿಯುವ ಹಂತದಲ್ಲಿದೆ. ಕಳೆದ ಮೂರುವರೆ ತಿಂಗಳ ಹಿಂದೆ ಗಾಜನೂರಿನ ಹಳೆ ಮನೆಗೆ ಪುನೀತ್ ಭೇಟಿ ನೀಡಿದ್ದರು. ಈ ವರ್ಷ ಸುರಿದ ಭಾರಿ ಮಳೆಯಿಂದಾಗಿ ಈ ಮನೆಗೆ ಹಾನಿ ಆಗಿದೆ. ಹಾಗಾಗಿ ಅದನ್ನು ದುರಸ್ತಿ ಮಾಡಿಸಲು ಅಪ್ಪು ನಿರ್ಧರಿಸಿದ್ದರು.
ಗಾಜನೂರಿಗೆ ಮತ್ತೆ ಬಂದು ಅಪ್ಪಾಜಿಯವರ ಹಳೇ ಮನೆಯನ್ನು ದುರಸ್ತಿ ಮಾಡಿಸುವುದಾಗಿ ಪುನೀತ್ ರಾಜ್ಕುಮಾರ್ ಅವರು ಹೇಳಿದ್ದರು. ಆದರೆ ಆ ಕಾರ್ಯ ನೆರವೇರುವುದಕ್ಕೂ ಮುನ್ನವೇ ಅವರು ಇಹಲೋಕ ತ್ಯಜಿಸಿದರು. ಅಪ್ಪು ಅಂದುಕೊಂಡ ಕೆಲಸವನ್ನು ಈಗ ಅವರ ಕುಟುಂಬದವರು ಪೂರ್ಣಗೊಳಿಸಲು ತೀರ್ಮಾನಿಸಿದ್ದಾರೆ. ಪುನೀತ್ ಮತ್ತು ರಾಜ್ಕುಮಾರ್ ಅವರ ನೆನಪುಗಳನ್ನು ಆ ಮನೆಯ ಮೂಲಕ ಶಾಶ್ವತವಾಗಿಸಲು ಪ್ಲ್ಯಾನ್ ಮಾಡಲಾಗಿದೆ. ಮನೆಯನ್ನು ಮ್ಯೂಸಿಯಂ ರೀತಿ ಬದಲಾಯಿಸಿ, ಅಲ್ಲಿ ರಾಜ್ಕುಮಾರ್ ಅವರ ಫೋಟೋಗಳನ್ನು ಇರಿಸಲಾಗುವುದು. ಅಭಿಮಾನಿಗಳಿಗೆ ಮನೆ ವೀಕ್ಷಿಸಲು ಅವಕಾಶ ನೀಡಲಾಗುವುದು ಎಂದು ಡಾ. ರಾಜ್ ಸಹೋದರಿಯ ಪುತ್ರ ಗೋಪಾಲ್ ಅವರು ಹೇಳಿಕೆ ನೀಡಿದ್ದಾರೆ. ಈ ಸುದ್ದಿ ಕೇಳಿ ಅಭಿಮಾನಿಗಳಿಗೆ ಖುಷಿ ಆಗಿದೆ.
ಇದನ್ನೂ ಓದಿ:
ಪುನೀತ್ ನಿಧನದ ಬಳಿಕ ರಾಘಣ್ಣ ನಟನೆಯ ಮೊದಲ ಚಿತ್ರ ‘ರಾಜಿ’; ಮುಹೂರ್ತದ ವೇಳೆ ಭಾವುಕ ಮಾತು
‘ಪುನೀತ್ ಅಣ್ಣ ಇಲ್ಲದೇ ನಾವು ತಬ್ಬಲಿ ಆಗಿದ್ದೇವೆ’: ಅಪ್ಪು ಹೇಳಿಕೊಟ್ಟ ಪಾಠಗಳ ಬಗ್ಗೆ ನಿಖಿಲ್ ಮಾತು