AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಪುನೀತ್​ ನಿಧನದ ಬಳಿಕ ರಾಘಣ್ಣ ನಟನೆಯ ಮೊದಲ ಚಿತ್ರ ‘ರಾಜಿ’; ಮುಹೂರ್ತದ ವೇಳೆ ಭಾವುಕ ಮಾತು

Raghavendra Rajkumar: ‘ನನ್ನ ತಮ್ಮನ ನಿಧನ‌ದ ನಂತರ ನಾನು ಅಭಿನಯಿಸುತ್ತಿರುವ ಮೊದಲ ಸಿನಿಮಾ ಇದು. ಅವನು ಇದಿದ್ದರೆ, ಅವನೇ‌ ಬಂದು ಕ್ಲಾಪ್ ಮಾಡಬೇಕಿತ್ತು. ಆದರೆ ವಿಧಿಬರಹವೇ ಬೇರೆ’ ಎಂದು ರಾಘಣ್ಣ ಭಾವುಕರಾದರು.

ಪುನೀತ್​ ನಿಧನದ ಬಳಿಕ ರಾಘಣ್ಣ ನಟನೆಯ ಮೊದಲ ಚಿತ್ರ ‘ರಾಜಿ’; ಮುಹೂರ್ತದ ವೇಳೆ ಭಾವುಕ ಮಾತು
‘ರಾಜಿ’ ಮುಹೂರ್ತದ ವೇಳೆ ರಾಘಣ್ಣ ಭಾವುಕ ಮಾತು
Follow us
TV9 Web
| Updated By: ಮದನ್​ ಕುಮಾರ್​

Updated on: Dec 11, 2021 | 8:03 AM

ಪುನೀತ್​ ರಾಜ್​ಕುಮಾರ್​ (Puneeth Rajkumar) ಅವರು ಇಲ್ಲ ಎಂಬ ನೋವು ಎಂದಿಗೂ ಕಮ್ಮಿ ಆಗುವಂಥದ್ದಲ್ಲ. ಅವರ ಕುಟುಂಬದವರು ಮತ್ತು ಅಭಿಮಾನಿಗಳ ಎದೆಯಲ್ಲಿ ಆ ನೋವು ಸದಾ ಉಳಿದಿರುತ್ತದೆ. ಆದರೆ ಅದರ ನಡುವೆಯೂ ಬದುಕು ಸಾಗಬೇಕಾದ ಅನಿವಾರ್ಯತೆ ಇದೆ. ಸಹೋದರನ ಅಗಲಿಕೆಯ ನೋವಲ್ಲೇ ನಟ ರಾಘವೇಂದ್ರ ರಾಜ್​ಕುಮಾರ್ (Raghavendra Rajkumar)​ ಅವರು ಹೊಸ ಸಿನಿಮಾದ ಕೆಲಸಗಳಲ್ಲಿ ತೊಡಗಿಕೊಂಡಿದ್ದಾರೆ. ಪುನೀತ್​ ನಿಧನದ ಬಳಿಕ ರಾಘಣ್ಣ ನಟಿಸುತ್ತಿರುವ ಮೊದಲ ಸಿನಿಮಾ ‘ರಾಜಿ’ (Raji Kannada Movie). ಇತ್ತೀಚೆಗೆ ಕಂಠೀರವ ಸ್ಟುಡಿಯೋದಲ್ಲಿ ಈ ಸಿನಿಮಾದ ಮುಹೂರ್ತ ನೆರವೇರಿತು. ಈ ವೇಳೆ ರಾಘಣ್ಣ ಆಡಿದ ಮಾತುಗಳು ಭಾವುಕವಾಗಿದ್ದರು. ನಟ ಶ್ರೀಮುರಳಿ ಆರಂಭ ಫಲಕ ತೋರಿದರೆ, ನಟಿ ಹರ್ಷಿಕಾ ಪೂಣಚ್ಚ ಅವರು ಕ್ಯಾಮೆರಾ ಚಾಲನೆ ಮಾಡಿ ಚಿತ್ರತಂಡಕ್ಕೆ ಶುಭ ಕೋರಿದರು. ಕನ್ನಡ ಚಿತ್ರರಂಗದಲ್ಲಿ ಹಲವಾರು ವರ್ಷಗಳಿಂದ ಕಲಾವಿದೆಯಾಗಿ ಗುರುತಿಸಿಕೊಂಡಿರುವ ಪ್ರೀತಿ ಎಸ್. ಬಾಬು ಅವರು ಈ ಚಿತ್ರವನ್ನು ನಿರ್ದೇಶಿಸುತ್ತಿದ್ದಾರೆ.

ಈ ಸಿನಿಮಾದ ಮುಹೂರ್ತದ ವೇಳೆ ರಾಘಣ್ಣ ಭಾವುಕವಾಗಿ ಮಾತನಾಡಿದರು. ‘ನನ್ನ ತಮ್ಮನ ನಿಧನ‌ದ ನಂತರ ನಾನು ಅಭಿನಯಿಸುತ್ತಿರುವ ಮೊದಲ ಸಿನಿಮಾ ಇದು. ಅವನು ಇದಿದ್ದರೆ, ಅವನೇ‌ ಬಂದು ಕ್ಲಾಪ್ ಮಾಡಬೇಕಿತ್ತು. ಆದರೆ ವಿಧಿಬರಹವೇ ಬೇರೆ. ಈ ಸಿನಿಮಾದಿಂದ ನನಗೆ ಒಳ್ಳೆಯ ಹೆಸರು ಅಥವಾ ಪ್ರಶಸ್ತಿ ಬಂದರೆ, ನನ್ನ ಮೂರು ಹೆಣ್ಣುಮಕ್ಕಳಿಗೆ ಅರ್ಪಿಸುತ್ತೇನೆ. ಆ ಮೂವರು ಯಾರೆಂದರೆ, ನನ್ನ ತಮ್ಮನ ಹೆಂಡತಿ ಅಶ್ವಿನಿ, ಅವರ ಮಕ್ಕಳಾದ‌‌ ಧೃತಿ ಹಾಗೂ ವಂದಿತಾ. ಇನ್ನು ಮುಂದೆ ಅವರೇ ನನ್ನ ಹೆಣ್ಣುಮಕ್ಕಳು’ ಎಂದು‌ ಭಾವುಕರಾದರು ‌ರಾಘಣ್ಣ.

‘ಹೆಣ್ಣುಮಗಳೊಬ್ಬಳು ನಿರ್ದೇಶನ ಮಾಡುತ್ತಿರುವುದು ಖುಷಿಯ ವಿಚಾರ. ಗಂಡ-ಹೆಂಡತಿ ನಡುವಿನ ಸುಂದರ ಒಪ್ಪಂದವೇ ರಾಜಿ. ಇನ್ನೊಂದು ಅರ್ಥ ಕೂಡ ಇದೆ.‌ ರಾ ಅಂದರೆ ರಾಘವೇಂದ್ರ, ಜಿ ಅಂದರೆ ಜೀವಿತಾ ಎಂದು. ನನ್ನ ಪಾತ್ರ ಚೆನ್ನಾಗಿದೆ’ ಎಂದು ರಾಘಣ್ಣ ಹೇಳಿದರು.

ಚಂದನವನದಲ್ಲಿ ಇರುವ ಬೆರಳೆಣಿಕೆಯಷ್ಟು ನಿರ್ದೇಶಕಿಯರ ಸಾಲಿಗೆ ಪ್ರೀತಿ ಎಸ್. ಬಾಬು ಕೂಡ ಸೇರ್ಪಡೆಯಾಗಿದ್ದಾರೆ. ಬಸವರಾಜ್ ಎಸ್. ಮೈಸೂರು ಅವರೊಂದಿಗೆ ಸೇರಿ ನಿರ್ಮಾಣವನ್ನು ಮಾಡುತ್ತಿರುವ ಪ್ರೀತಿ ಅವರು ಈ ಸಿನಿಮಾದಲ್ಲಿ ರಾಘವೇಂದ್ರ ರಾಜಕುಮಾರ್ ಅವರ ಮಡದಿ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ‌.

‘ಸಹ ಕಲಾವಿದೆಯಾಗಿ ನನ್ನ ವೃತ್ತಿ ಜೀವನ ಆರಂಭವಾಗಿದ್ದು‌ ಕಂಠೀರವ ಸ್ಟುಡಿಯೋದಲ್ಲಿ. ಇಂದು ನಾನು ನಿರ್ದೇಶಿಸುತ್ತಿರುವ ಮೊದಲ ಚಿತ್ರದ ಮುಹೂರ್ತ ನಡೆಯುತ್ತಿರುವುದು ಇದೇ ಸ್ಟುಡಿಯೋದಲ್ಲಿ‌. ಗಂಡ-ಹೆಂಡತಿ ಸುಂದರ ಒಪ್ಪಂದದ ಈ ಕಥೆ ಬಗ್ಗೆ ರಾಘಣ್ಣನವರ ಬಳಿ ಹೇಳಿದಾಗ ಮೆಚ್ಚುಗೆ ಸೂಚಿಸಿ ನಟಿಸಲು ಒಪ್ಪಿದ್ದಾರೆ. ಈ ಚಿತ್ರ ಆರಂಭವಾಗಲು ಮುಖ್ಯ ಕಾರಣ ನಮ್ಮ ಚಿತ್ರದ ಛಾಯಾಗ್ರಹಕ ಪಿ.ವಿ.ಆರ್ ಸ್ವಾಮಿ. ಹೆಚ್ಚಿನ ಭಾಗದ ಚಿತ್ರೀಕರಣ ಬೆಂಗಳೂರಿನಲ್ಲಿ ನಡೆಯಲಿದೆ. ಯಾರೂ ನಿರೀಕ್ಷಿಸದ ಕಥೆ ನಮ್ಮ ಚಿತ್ರದಲ್ಲಿದೆ’ ಎಂದಿದ್ದಾರೆ ಪ್ರೀತಿ.

(ನಟ ಶ್ರೀಮುರಳಿ ಆರಂಭ ಫಲಕ ತೋರಿದರೆ, ನಟಿ ಹರ್ಷಿಕಾ ಪೂಣಚ್ಚ ಅವರು ಕ್ಯಾಮೆರಾ ಚಾಲನೆ ಮಾಡಿ ಚಿತ್ರತಂಡಕ್ಕೆ ಶುಭ ಕೋರಿದರು)

ಖ್ಯಾತ ಕವಿ ಹೆಚ್.ಎಸ್. ವೆಂಕಟೇಶಮೂರ್ತಿ ಅವರು ಐದು ಕವನಗಳನ್ನು ಈ ಚಿತ್ರಕ್ಕಾಗಿ ಬರೆದಿದ್ದಾರೆ. ಉಪಾಸನ ಮೋಹನ್ ಸಂಗೀತ ನಿರ್ದೇಶನ ಮಾಡಿದ್ದಾರೆ. ವಸುಮತಿ ಉಡುಪ ಅವರ ಕಥೆಯನ್ನು ಆಧರಿಸಿ ಈ ಚಿತ್ರ ನಿರ್ಮಾಣವಾಗುತ್ತಿದೆ. ಹರೀಶ್ ಚಿತ್ರಕಥೆ ಬರೆದಿದ್ದಾರೆ.

ಇದನ್ನೂ ಓದಿ:

‘ಪುನೀತ್​ ಅಣ್ಣ ಇಲ್ಲದೇ ನಾವು ತಬ್ಬಲಿ ಆಗಿದ್ದೇವೆ’: ಅಪ್ಪು ಹೇಳಿಕೊಟ್ಟ ಪಾಠಗಳ ಬಗ್ಗೆ ನಿಖಿಲ್​ ಮಾತು

ಪುನೀತ್​ ಸಮಾಧಿ ಎದುರು ‘ರೈತ’ ಕಿರುಚಿತ್ರದ ಸಾಂಗ್​ ಬಿಡುಗಡೆ; ಅಪ್ಪುಗಾಗಿ ವಿಶೇಷ ಹಾಡು