ವೀರಪ್ಪನ್ ಸಹಚರರಿಗೂ ಕನ್ನಡದಲ್ಲಿ ಬಸವಣ್ಣನ ವಚನ ಕಲಿಸಿದ್ದ ಡಾ. ರಾಜ್​ಕುಮಾರ್

|

Updated on: Aug 04, 2024 | 10:15 PM

ಕೋಟ್ಯಂತರ ಅಭಿಮಾನಿಗಳು ಆರಾಧಿಸುವ ಡಾ. ರಾಜ್​ಕುಮಾರ್​ ಅವರನ್ನು ವೀರಪ್ಪನ್​ ಅಪಹರಣ ಮಾಡಿದ ಘಟನೆ ನಡೆದು 24 ವರ್ಷಗಳು ಉರುಳಿವೆ. ಎಂಥ ಪರಿಸ್ಥಿತಿಯಲ್ಲೂ ರಾಜ್​ಕುಮಾರ್​ ಅವರು ತಮ್ಮತನವನ್ನು ಕಳೆದುಕೊಳ್ಳುವವರಲ್ಲ. ಆ ಮಾತಿಗೆ ಹಲವು ಉದಾಹರಣೆಗಳು ಇವೆ. ತಮಿಳು ಮಾತನಾಡುವ ವೀರಪ್ಪನ್​ ಸಹಚರರಿಗೆ ಅಣ್ಣಾವ್ರು ಕನ್ನಡದ ವಚನವನ್ನು ಹೇಳಿಕೊಟ್ಟಿದ್ದರು.

ವೀರಪ್ಪನ್ ಸಹಚರರಿಗೂ ಕನ್ನಡದಲ್ಲಿ ಬಸವಣ್ಣನ ವಚನ ಕಲಿಸಿದ್ದ ಡಾ. ರಾಜ್​ಕುಮಾರ್
ಬಸವಣ್ಣ, ಕಾಡಿನಲ್ಲಿ ವೀರಪ್ಪನ್​ ಹಾಗೂ ಸಹಚರರ ಜೊತೆ ರಾಜ್​ಕುಮಾರ್​
Follow us on

ಕನ್ನಡದ ಮೇರು ನಟ ಡಾ. ರಾಜ್​ಕುಮಾರ್​ ಅವರನ್ನು ಕಾಡುಗಳ್ಳ ವೀರಪ್ಪನ್ ಅಪಹರಣ ಮಾಡಿದ್ದು ಒಂದು ಕರಾಳ ಅಧ್ಯಾಯ. ಇಳಿ ವಯಸ್ಸಿನಲ್ಲಿ ರಾಜ್​ಕುಮಾರ್​ ಅವರು ಅಂಥ ದಟ್ಟ ಕಾಡಿನಲ್ಲಿ ಕಾಲ ಕಳೆಯುವಂತೆ ಆಗಿದ್ದು ವಿಪರ್ಯಾಸ. ಪಾಸಿಟಿವ್​ ಮನಸ್ಥಿತಿಗೆ ರಾ. ರಾಜ್​ಕುಮಾರ್​ ಅವರು ಹೆಸರಾಗಿದ್ದರು. ಕ್ರೂರಿಯಾಗಿದ್ದ ವೀರಪ್ಪನ್​ ಜೊತೆ 108 ದಿನಗಳನ್ನು ಕಳೆದರೂ ಕೂಡ ಅಣ್ಣಾವ್ರು ತಮ್ಮತನವನ್ನು ಬಿಟ್ಟುಕೊಡಲಿಲ್ಲ. ತಮಿಳು ಮಾತನಾಡುವ ವೀರಪ್ಪನ್ ಸಹಚರರಿಗೂ ರಾಜ್​ಕುಮಾರ್​ ಅವರು ಕನ್ನಡದ ವಚನಗಳನ್ನು ಕಲಿಸಿದ್ದರು. ಆ ವಿಡಿಯೋ ನೋಡಿದರೆ ಡಾ. ರಾಜ್​ ಬಗ್ಗೆ ಇರುವ ಗೌರವ ಮತ್ತಷ್ಟು ಹೆಚ್ಚುತ್ತದೆ.

2000ನೇ ಇಸವಿಯ ಜುಲೈ 30ರಂದು ರಾಜ್​ಕುಮಾರ್​ ಅವರನ್ನು ವೀರಪ್ಪನ್​ ಅಪಹರಣ ಮಾಡಿದ. ಆ ಘಟನೆಯಿಂದ ಕರುನಾಡಿನಲ್ಲಿ ಸಂಚಲನ ಸೃಷ್ಟಿಯಾಯಿತು. ಅಣ್ಣಾವ್ರ ಅಭಿಮಾನಿಗಳಲ್ಲಿ ಆತಂಕ ಮತ್ತು ಆಕ್ರೋಶ ಹೆಚ್ಚಾಯಿತು. ದೇಶಾದ್ಯಂತ ಸುದ್ದಿಯಾದ ಅಪಹರಣ ಕೃತ್ಯ ಅದು. ಕಡೆಗೂ ರಾಜ್​ಕುಮಾರ್​ ಅವರು ಸುರಕ್ಷಿತವಾಗಿ ಮರಳಿಬಂದ ನಂತರವೇ ಕರುನಾಡಿನ ಜನರು ನಿಟ್ಟುಸಿರು ಬಿಟ್ಟಿದ್ದು. ಕಾಡಿನಲ್ಲಿ ಇದ್ದರೂ ರಾಜ್​ಕುಮಾರ್​ ಅವರು ಕನ್ನಡದ ಜಪವನ್ನು ಬಿಟ್ಟಿರಲಿಲ್ಲ.

ವೀರಪ್ಪನ್​ ಸಹಚರರು ತಮಿಳುನಾಡಿನವರು. ಅವರಿಗೆ ಅಣ್ಣಾವ್ರು ಕನ್ನಡದ ವಚನಗಳನ್ನು ಹೇಳಿಕೊಟ್ಟಿದ್ದರು. ಶಾಲೆಗೆ ತೆರಳಿ ಹೆಚ್ಚಿನ ವ್ಯಾಸಾಂಗ ಮಾಡದಿದ್ದರೂ ಕೂಡ ಅಣ್ಣಾವ್ರಿಗೆ ಕನ್ನಡ ಸಾಹಿತ್ಯದ ಬಗ್ಗೆ ಅಪಾರ ಜ್ಞಾನ ಇತ್ತು. ಹಲವಾರು ಪುಸ್ತಕಗಳನ್ನು ಅವರು ಓದಿ ತಿಳಿದಿದ್ದರು. ಬಸವಣ್ಣನ ವಚನಗಳು ಅವರಿಗೆ ಕಂಠಪಾಠ ಆಗಿದ್ದವು. ಆ ಪೈಕಿ ಒಂದು ವಚನವನ್ನು ಅವರು ವೀರಪ್ಪನ್​ನ ಸಹಚರರಿಗೆ ಹೇಳಿಕೊಟ್ಟಿದ್ದರು.

‘ನೂರನೋದಿ ನೂರ ಕೇಳಿದರೇನು? ಆಸೆ ಹರಿಯದು, ರೋಷ ಬಿಡದು. ಮಜ್ಜನಕ್ಕೆರೆದು ಫಲವೇನು? ಮಾತಿನಂತೆ ಮನವಿಲ್ಲದ ಜಾತಿಡೊಂಬರ ನೋಡಿ ನಗುವ ನಮ್ಮ ಕೂಡಲಸಂಗಮದೇವ’ ಎಂಬ ವಚನವನ್ನು ರಾಜ್​ಕುಮಾರ್​ ಅವರು ಕಾಡುಗಳ್ಳನ ಸಹಚರರಿಗೆ ವಿವರಿಸಿ ಹೇಳಿದ್ದರು. ಅರ್ಥವಾಗಲಿ ಎಂಬ ಕಾರಣಕ್ಕೆ ಈ ಸಾಲುಗಳನ್ನು ಅವರು ತಮಿಳಿಗೂ ಭಾಷಾಂತರ ಮಾಡಿ ವಿವರಿಸಿದ್ದರು.

ಇದನ್ನೂ ಓದಿ: ಡಾ.ರಾಜ್​ಕುಮಾರ್​ ಬಿಡುಗಡೆಗೆ ಕರ್ನಾಟಕ ಸರ್ಕಾರದಿಂದ ವೀರಪ್ಪನ್​ಗೆ ಪಾವತಿಯಾಗಿತ್ತು ₹15 ಕೋಟಿ! ಪುಸ್ತಕ ಬಿಚ್ಚಿಟ್ಟ ಸತ್ಯ

ಕನ್ನಡ ಎಂದರೆ ಡಾ. ರಾಜ್​ಕುಮಾರ್​. ಅದೇ ರೀತಿ, ಡಾ. ರಾಜ್​ಕುಮಾರ್​ ಎಂದರೆ ಕನ್ನಡ ಎಂಬುದು ಅಭಿಮಾನಿಗಳ ಭಾವನೆ. ಅಷ್ಟರಮಟ್ಟಿಗೆ ಅಣ್ಣಾವ್ರು ಕನ್ನಡಕ್ಕೆ ಕೊಡುಗೆ ನೀಡಿದ್ದಾರೆ. ಸಿನಿಮಾಗಳ ಮೂಲಕ, ಹಾಡುಗಳು ಮೂಲಕ, ಭಕ್ತಿಗೀತೆಗಳ ಮೂಲಕ ಕನ್ನಡದ ಸಿರಿವಂತಿಕೆಯನ್ನು ರಾಜ್​ಕುಮಾರ್​ ಹೆಚ್ಚಿಸಿದರು. ಎಷ್ಟೋ ಸಾಹಿತ್ಯ ಕೃತಿಗಳನ್ನು ಆಧರಿಸಿ ಸಿನಿಮಾ ಮಾಡುವ ಮೂಲಕ ಆ ಕೃತಿಗಳಿಗೆ ಹೊಸ ಸ್ಪರ್ಶ ನೀಡಿದರು. ಈ ಎಲ್ಲ ಕಾರಣಗಳಿಂದಾಗಿ ಅಣ್ಣಾವ್ರನ್ನು ಕನ್ನಡಿಗರು ಕೊಂಡಾಡಲೇಬೇಕು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published On - 10:14 pm, Sun, 4 August 24