
ಹಾವು ಕಂಡರೆ ಹೊಡೆಯಲು ಮುಂದಾಗುವವರೇ ಹೆಚ್ಚು, ರಕ್ಷಿಸುವವರ ಸಂಖ್ಯೆ ತೀರ ವಿರಳ, ಅದಕ್ಕೆ ಕಾರಣ ಹಾವುಗಳ ಬಗ್ಗೆ ಇರುವ ಮಾಹಿತಿಯ ಕೊರತೆ, ತಪ್ಪು ತಿಳುವಳಿಕೆ ಮತ್ತು ಹಾವುಗಳ ಮಹತ್ವ ನಮಗೆ ತಿಳಿಯದೇ ಇರುವುದು. ನಟ ದುನಿಯಾ ವಿಜಯ್ (Duniya Vijay) ಮತ್ತು ಅವರ ಕೆಲವು ಗೆಳೆಯರು ಕೇರೆ ಹಾವೊಂದನ್ನು ರಕ್ಷಿಸಿದ್ದು, ಅದನ್ನು ಸುರಕ್ಷಿತ ಪ್ರದೇಶಕ್ಕೆ ಬಿಟ್ಟಿದ್ದಾರೆ. ಸುರಕ್ಷಿತ ಪ್ರದೇಶಕ್ಕೆ ಬಿಡುವ ಮುಂಚೆ ಹಾವು ಹಿಡಿದುಕೊಂಡು ಆ ಹಾವಿನ ಮಹತ್ವವನ್ನು ಹೇಳಿ ವಿಡಿಯೋ ಮಾಡಿರುವ ದುನಿಯಾ ವಿಜಯ್ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.
ದುನಿಯಾ ವಿಜಯ್ ಹಾಗೂ ಅವರ ಕೆಲವು ಗೆಳೆಯರು ಕೇರೆ ಹಾವಿನ ರಕ್ಷಣೆ ಮಾಡಿದ್ದಾರೆ. ದುನಿಯಾ ವಿಜಯ್ ಹೇಳಿರುವಂತೆ ಕೇರೆ ಹಾವು ಬಹುತೇಕ ನಿರುಪದ್ರವಿ ಹಾವು. ಅದು ಮಾತ್ರವೇ ಅಲ್ಲದೆ ಪರಿಸರ ಸಮತೋಲದಲ್ಲಿ ಅತ್ಯಂತ ಮಹತ್ವದ ಪಾತ್ರ ನಿರ್ವಹಿಸುತ್ತಿರುವ ಹಾವು ಈ ಕೇರೆ ಹಾವು. ವಿಶೇಷವಾಗಿ ಈ ಹಾವು ರೈತ ಸ್ನೇಹಿಯಾಗಿದ್ದು ಇಲಿ, ಹೆಗ್ಗಣಗಳನ್ನು ತಿನ್ನುತ್ತವೆ. ಕೇರೆ ಹಾವನ್ನು ಇಂಗ್ಲೀಷ್ನಲ್ಲಿ ರ್ಯಾಟ್ ಸ್ನೇಕ್ ಎಂದೇ ಕರೆಯುತ್ತಾರೆ. ಮನುಷ್ಯನಿಗೆ ಇದು ಹಾನಿ ಮಾಡುವುದಿಲ್ಲ. ಇದೊಂದು ವಿಷ ರಹಿತ ಹಾವಾಗಿದೆ.
ಇದನ್ನೂ ಓದಿ:ದುನಿಯಾ ವಿಜಯ್ ಮೊದಲ ತಮಿಳು ಸಿನಿಮಾ ಸೆಟ್ನಲ್ಲಿ ನಟಿಯ ಕಿರಿಕ್?
ಕೇರೆ ಹಾವು ನೋಡಲು ತುಸು ನಾಗರಹಾವಿನ ಬಣ್ಣದಲ್ಲಿಯೇ ಇರುತ್ತದೆ. ಗಾತ್ರ, ಆಕಾರವೂ ನಾಗರ ಹಾವನ್ನು ಹೋಲುತ್ತದೆ ಹಾಗಾಗಿ ಬಹಳ ಜನ ತಪ್ಪು ತಿಳಿದುಕೊಂಡು ಕೊಲ್ಲುವ ಸಾಧ್ಯತೆ ಹೆಚ್ಚಾಗಿರುತ್ತದೆ. ಕೇರೆ ಹಾವು ಅಸಲಿಗೆ ನಿರುಪದ್ರವಿ ಹಾವಾಗಿದ್ದು ರೈತ ಸ್ನೇಹಿಯಾಗಿದೆ. ಕೇರೆ ಹಾವು ತ್ಯಾಜ್ಯಗಳನ್ನು ತಿನ್ನುತ್ತದೆ ಎಂಬ ಪ್ರತೀತಿಯೂ ಇದೆ. ಇದೀಗ ಕೇರೆ ಹಾವನ್ನು ರಕ್ಷಿಸಿರುವ ದುನಿಯಾ ವಿಜಯ್, ‘ಯಾರೂ ಸಹ ಹಾವುಗಳನ್ನು ಕೊಲ್ಲಬೇಡಿ, ಯಾವುದೇ ಹಾವಾಗಲಿ ಅದನ್ನು ಕೊಲ್ಲುವುದು ಸೂಕ್ತವಲ್ಲ. ಹಾವು ಕಂಡರೆ ಕೂಡಲೇ ಹಾವು ಸಂರಕ್ಷಿಸುವವರನ್ನು ಕರೆದು ಅವರಿಂದ ಹಿಡಿಸಿ ಅದನ್ನು ಸುರಕ್ಷಿತ ಜಾಗಕ್ಕೆ ಬಿಡಿ’ ಎಂದು ಮನವಿ ಮಾಡಿದ್ದಾರೆ.
ಕೇರೆ ಹಾವುಗಳು ಸಾಮಾನ್ಯವಾಗಿ ಕುರುಚಲು ಇರುವ ಕಡೆ, ಭತ್ತದ ಗದ್ದೆಗಳು, ಕೆರೆಗಳ ಬಳಿ ಹೆಚ್ಚಾಗಿ ಕಾಣಿಸಿಕೊಳ್ಳುತ್ತವೆ. ಬಹಳ ವೇಗವಾಗಿ ಚಲಿಸುವ ಈ ಹಾವುಗಳು, ಇಲಿಗಳು, ಗುಬ್ಬಿಗಳನ್ನು ತಿನ್ನುವ ಸಲುವಾಗಿ ಕೆಲವೊಮ್ಮೆ ಮನೆಯ ಒಳಕ್ಕೂ ಬಂದು ಬಿಡುವುದು ಉಂಟು. ಈ ಕೇರೆ ಹಾವುಗಳ ಬಾಲದಲ್ಲಿ ವಿಷ ಇರುತ್ತದೆ ಎಂಬ ನಂಬಿಕೆ ಇದೆ ಆದರೆ ಅದು ಸುಳ್ಳು. ಕೇರೆ ಹಾವಿಗೆ ವಿಶೇಷವಾಗಿ ಭಾರತದಲ್ಲಿ ಕಂಡು ಬರುವ ಕೇರೆ ಹಾವಿಗೆ ವಿಷ ಇರುವುದಿಲ್ಲ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 5:41 pm, Tue, 8 April 25