ದುನಿಯಾ ವಿಜಯ್ ಮೊದಲ ತಮಿಳು ಸಿನಿಮಾ ಸೆಟ್ನಲ್ಲಿ ನಟಿಯ ಕಿರಿಕ್?
Nayantara: ದುನಿಯಾ ವಿಜಯ್ ಇದೇ ಮೊದಲ ಬಾರಿಗೆ ತಮಿಳಿನ ‘ಮೂಕುತ್ತಿ ಅಮ್ಮನ್ 2’ ಸಿನಿಮಾನಲ್ಲಿ ನಟಿಸುತ್ತಿದ್ದಾರೆ. ಸಿನಿಮಾದಲ್ಲಿ ನಯನತಾರಾ, ಖುಷ್ಬು, ಮೀನಾ ಸೇರಿ ಹಲವು ಅನುಭವಿ ನಟಿಯರಿದ್ದಾರೆ. ಆದರೆ ಸಿನಿಮಾ ಸೆಟ್ನಲ್ಲಿ ಖ್ಯಾತ ನಟಿಯೊಬ್ಬರು ಕಿರಿಕ್ ತೆಗೆದಿದ್ದಾರೆ ಎನ್ನಲಾಗುತ್ತಿದೆ. ಈ ಬಗ್ಗೆ ಹಿರಿಯ ನಟಿ ಖುಷ್ಬು ಸುಂದರ್ ಪ್ರತಿಕ್ರಿಯೆಯನ್ನು ಸಹ ನೀಡಿದ್ದಾರೆ.

ದುನಿಯಾ ವಿಜಯ್ (Duniya Vijay) ಇದೇ ಮೊದಲ ಬಾರಿಗೆ ತಮಿಳು ಸಿನಿಮಾ ಒಂದರಲ್ಲಿ ನಟಿಸುತ್ತಿದ್ದಾರೆ. ಆ ತಮಿಳು ಸಿನಿಮಾನಲ್ಲಿ ಹಲವಾರು ಸ್ಟಾರ್ ನಟಿಯರು ಸಹ ಇದ್ದಾರೆ. ನಯನತಾರಾ, ಖುಷ್ಬು ಸುಂದರ್, ಮೀನಾ ಇನ್ನೂ ಕೆಲವು ಸ್ಟಾರ್ ನಟಿಯರು, ಹಿರಿಯ ನಟಿಯರು ನಟಿಸುತ್ತಿದ್ದಾರೆ. ಸಿನಿಮಾದ ಚಿತ್ರೀಕರಣ ಪ್ರಾರಂಭವಾಗಿ ಕೆಲವೇ ದಿನಗಳಾಗಿವೆ. ಆದರೆ ಇದೀಗ ಸಿನಿಮಾ ಸೆಟ್ನಲ್ಲಿ ಕಿರಿಕ್ ಆಗಿದೆ ಎಂಬ ಸುದ್ದಿ ಹರಿದಾಡುತ್ತಿದೆ. ಸಿನಿಮಾದ ಪ್ರಧಾನ ಪಾತ್ರದಲ್ಲಿ ನಟಿಸುತ್ತಿರುವ ನಯನತಾರಾ, ಸೆಟ್ನಲ್ಲಿ ಕಿರಿಕ್ ಮಾಡಿದ್ದಾರೆ ಎನ್ನಲಾಗುತ್ತಿದೆ.
‘ಮೂಗುತ್ತಿ ಅಮ್ಮನ್ 2’ ತಮಿಳು ಸಿನಿಮಾನಲ್ಲಿ ದುನಿಯಾ ವಿಜಯ್ ನಟಿಸುತ್ತಿದ್ದಾರೆ. ಈ ಸಿನಿಮಾದ ದೇವಿ ಪಾತ್ರದಲ್ಲಿ ನಯನತಾರಾ ನಟಿಸುತ್ತಿದ್ದಾರೆ. ಸಿನಿಮಾ ನಿರ್ದೇಶನ ಮಾಡುತ್ತಿರುವುದು ತಮಿಳು ಚಿತ್ರರಂಗದ ಹಿರಿಯ ನಿರ್ದೇಶಕ ಸುಂದರ್ ಸಿ, ಇವರು ನಟಿ ಖುಷ್ಬು ಸುಂದರ್ ಅವರ ಪತಿಯೂ ಹೌದು. ಆದರೆ ಇತ್ತೀಚೆಗೆ ಸಿನಿಮಾ ಸೆಟ್ನಲ್ಲಿ ನಯನತಾರಾ ಹಾಗೂ ನಿರ್ದೇಶಕ ಸುಂದರ್ ನಡುವೆ ದೊಡ್ಡ ಜಗಳವಾಗಿದೆ ಎನ್ನಲಾಗುತ್ತಿದೆ.
ಸೆಟ್ನಲ್ಲಿ ತಮಗೆ ಸರಿಯಾಗಿ ಸೌಕರ್ಯಗಳನ್ನು ಒದಗಿಸಿಲ್ಲ ಎಂದು ನಟಿ ನಯನತಾರಾ ದೊಡ್ಡದಾಗಿಯೇ ಜಗಳ ಮಾಡಿದರು ಎಂಬ ಸುದ್ದಿಗಳು ಇತ್ತೀಚೆಗೆ ಹರಿದಾಡಿತ್ತು. ಸುಂದರ್ ಹಾಗೂ ನಯನತಾರಾ ನಡುವೆ ದೊಡ್ಡದಾಗಿ ಜಗಳ ನಡೆದಿದ್ದು, ನಯನತಾರಾ ಅವರನ್ನು ಸುಂದರ್ ಸಿನಿಮಾದಿಂದ ಹೊರಗಿಡುವ ನಿರ್ಧಾರ ಮಾಡಿದ್ದಾರೆ. ನಯನತಾರಾ ಮಾಡಬೇಕಾದ ದೇವಿಯ ಪಾತ್ರವನ್ನು ನಟಿ ತಮನ್ನಾ ಭಾಟಿಯಾಗೆ ನೀಡಲಾಗಿದೆ ಎಂಬ ಮಾತುಗಳು ಕೇಳಿ ಬಂದಿದ್ದವು.
ಇದೀಗ ನಟಿ ಖುಷ್ಬು ಸುಂದರ್ ಸಾಮಾಜಿಕ ಜಾಲತಾಣದ ಮೂಲಕ ಈ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ. ‘ಮೂಕುತ್ತಿ ಅಮ್ಮನ್ 2’ ಸಿನಿಮಾ ಸೆಟ್ನಲ್ಲಿ ನಡೆದಿದೆ ಎಂಬ ಜಗಳದ ಸುದ್ದಿ ಸಂಪೂರ್ಣವಾಗಿ ಸುಳ್ಳು ಎಂದಿದ್ದಾರೆ. ಮುಂದುವರೆದು, ‘ನಯನತಾರಾ ಒಬ್ಬ ವೃತ್ತಿಪರ ನಟಿ, ತಮ್ಮ ಪ್ರತಿಭೆ, ವೃತ್ತಿಪರತೆಯಿಂದ ಅವರು ಈ ಎತ್ತರಕ್ಕೆ ಬೆಳೆದಿದ್ದಾರೆ. ಸಿನಿಮಾದ ಚಿತ್ರೀಕರಣ ನಿಂತಿದೆ ಎಂಬ ಸುದ್ದಿಯೂ ಸುಳ್ಳು’ ಎಂದಿದ್ದಾರೆ ಖುಷ್ಬು.
ಇದನ್ನೂ ಓದಿ:ತಮಿಳು ಸಿನಿಮಾದಲ್ಲಿ ದುನಿಯಾ ವಿಜಯ್, ಮುಹೂರ್ತದ ವಿಡಿಯೋ ಇಲ್ಲಿದೆ
ನಯನತಾರಾ, ಸಿನಿಮಾ ಸೆಟ್ಗಳಲ್ಲಿ ಜಗಳ ಮಾಡಿದ, ವಿಶೇಷ ಸೌಲಭ್ಯಗಳನ್ನು ಕೇಳಿದ, ನಿರ್ದೇಶಕ, ನಿರ್ಮಾಪಕರ ಮೇಲೆ ಕೂಗಾಡಿದ ಸಾಕಷ್ಟು ಉದಾಹರಣೆಗಳು ಇವೆ. ಹಾಗಾಗಿ ಖುಷ್ಬು ಸುಂದರ್, ಸ್ಪಷ್ಟನೆಯ ಹೊರತಾಗಿಯೂ ಸೆಟ್ನಲ್ಲಿ ನಯನತಾರಾ ಜಗಳ ಮಾಡಿರುವ ಸುದ್ದಿ ಸುಳ್ಳೆಂದು ನಂಬಲು ನೆಟ್ಟಿಗರು ತಯಾರಿಲ್ಲ.
2020 ರಲ್ಲಿ ‘ಮೂಕುತ್ತಿ ಅಮ್ಮನ್’ ಸಿನಿಮಾ ಬಿಡುಗಡೆ ಆಗಿತ್ತು. ಆ ಸಿನಿಮಾವನ್ನು ಆರ್ಜೆ ಬಾಲಾಜಿ ನಿರ್ದೇಶನ ಮಾಡಿ, ಅವರೇ ನಟಿಸಿದ್ದರು. ಭಕ್ತ ಮತ್ತು ದೇವಿಯ ನಡುವೆ ನಡೆವ ಕತೆಯದು. ದೇವರ ಹೆಸರಲ್ಲಿ ನಡೆಯುವ ಅನಾಚಾರವನ್ನು ಬಯಲಿಗೆಳೆಯುವ ಕತೆ ಅದರಲ್ಲಿತ್ತು. ಇದೀಗ ‘ಮೂಕುತ್ತಿ ಅಮ್ಮನ್ 2’ ಸಿನಿಮಾ ಹಾರರ್ ರೀತಿಯ ಸಿನಿಮಾ ಆಗಿದೆ. ಈ ಸಿನಿಮಾದಲ್ಲಿ ದೆವ್ವ ಮತ್ತು ದೇವರ ನಡುವೆ ನಡೆಯುವ ಯುದ್ಧದ ಕತೆ ಇರಲಿದೆಯಂತೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 11:13 am, Thu, 27 March 25