
ಸ್ಯಾಂಡಲ್‌ವುಡ್‌ನ ಖ್ಯಾತ ನಟ ‘ದುನಿಯಾ’ ವಿಜಯ್ (Duniya Vijay) ಹಾಗೂ ಅವರ ಪತ್ನಿ ನಾಗರತ್ನ ಅವರ ಸುದೀರ್ಘ ದಾಂಪತ್ಯ ಜೀವನಕ್ಕೆ ಕೊನೆಗೂ ಕಾನೂನಾತ್ಮಕವಾಗಿ ತೆರೆಬಿದ್ದಿದೆ. ಹಲವು ವರ್ಷಗಳಿಂದ ಕಾನೂನು ಸಮರಕ್ಕೆ ಕಾರಣವಾಗಿದ್ದ ಈ ವೈವಾಹಿಕ ವಿವಾದಕ್ಕೆ ಸಂಬಂಧಿಸಿದಂತೆ ಕರ್ನಾಟಕ ಹೈಕೋರ್ಟ್ ವಿಭಾಗೀಯ ಪೀಠವು ದಂಪತಿಗೆ ವಿಚ್ಛೇದನ ಮಂಜೂರು ಮಾಡಿ ಮಹತ್ವದ ಆದೇಶ ಹೊರಡಿಸಿದೆ.
ನ್ಯಾಯಮೂರ್ತಿ ಡಿ.ಕೆ. ಸಿಂಗ್ ಹಾಗೂ ನ್ಯಾಯಮೂರ್ತಿ ಹೆಚ್. ಶಾಂತಿಭೂಷಣ್ ಅವರನ್ನೊಳಗೊಂಡ ಉನ್ನತ ನ್ಯಾಯಪೀಠವು ಈ ಪ್ರಕರಣದ ವಿಚಾರಣೆ ನಡೆಸಿ ಅಂತಿಮ ತೀರ್ಪು ನೀಡಿದೆ. ವಿಚ್ಛೇದನ ಮಂಜೂರು ಮಾಡುವ ಜೊತೆಗೆ, ಪತ್ನಿ ನಾಗರತ್ನ ಅವರಿಗೆ 2 ಕೋಟಿ ರೂಪಾಯಿಗಳ ಜೀವನಾಂಶ ಪಾವತಿಸುವಂತೆ ನಟ ದುನಿಯಾ ವಿಜಯ್ ಅವರಿಗೆ ಹೈಕೋರ್ಟ್ ನಿರ್ದೇಶನ ನೀಡಿದೆ.
ವಿಚಾರಣೆ ವೇಳೆ ಪತ್ನಿ ಹಾಗೂ ಮೂವರು ಮಕ್ಕಳ ಭವಿಷ್ಯ ಮತ್ತು ಅವರ ಜೀವನ ನಿರ್ವಹಣೆಯ ಪ್ರಮುಖ ಅಂಶವನ್ನು ನ್ಯಾಯಾಲಯ ಗಂಭೀರವಾಗಿ ಪರಿಗಣಿಸಿದೆ. ಇದರೊಂದಿಗೆ ನಟ ದುನಿಯಾ ವಿಜಯ್ ಅವರ ಪ್ರಸ್ತುತ ಸಾಮಾಜಿಕ ಸ್ಥಾನಮಾನ, ವೃತ್ತಿಪರ ಗಳಿಕೆ ಹಾಗೂ ಹಣಕಾಸಿನ ಸ್ಥಿತಿಗತಿಗಳನ್ನು ಕೂಲಂಕುಷವಾಗಿ ಪರಾಮರ್ಶಿಸಿ 2 ಕೋಟಿ ಜೀವನಾಂಶದ ಮೊತ್ತವನ್ನು ನಿಗದಿಪಡಿಸಲಾಗಿದೆ ಎಂದು ಪೀಠ ತಿಳಿಸಿದೆ.
ಇದನ್ನೂ ಓದಿ: ದುನಿಯಾ ವಿಜಯ್ ಸಿನಿಮಾದಲ್ಲಿ ಖಡಕ್ ಪಾತ್ರದ ಮೂಲಕ ಎಂಟ್ರಿ ಕೊಟ್ಟ ಟಬು
ಕನ್ನಡ ಚಿತ್ರರಂಗದಲ್ಲಿ ‘ದುನಿಯಾ’ ಸಿನಿಮಾದ ಮೂಲಕ ಮನೆಮಾತಾಗಿದ್ದ ವಿಜಯ್ ಅವರ ವೈಯಕ್ತಿಕ ಜೀವನದ ಈ ವಿವಾದ ಹಲವು ವರ್ಷಗಳಿಂದ ಸುದ್ದಿಯಲ್ಲಿದ್ದರು.ಇದೀಗ ಉನ್ನತ ನ್ಯಾಯಾಲಯದ ಈ ತೀರ್ಪಿನಿಂದಾಗಿ ದಾಂಪತ್ಯ ಜೀವನಕ್ಕೆ ಅಧಿಕೃತ ಕೊನೆ ಸಿಕ್ಕಂತಾಗಿದೆ. ವಿಜಯ್ ಅವರು ಸದ್ಯ ಕೀರ್ತಿ ಎಂಬುವವರ ಜೊತೆ ವಾಸವಿದ್ದಾರೆ.
ನಾಗರತ್ನ ಜೊತೆ ದುನಿಯಾ ವಿಜಯ್ 1999ರಲ್ಲಿ ಮದುವೆ ಆಗಿದ್ದರು. ಹಲವು ವರ್ಷಗಳ ಕಾಲ ಸಂಸಾರ ನಡೆಸಿದ್ದರು. ದುನಿಯಾ ವಿಜಯ್ ಅವರು 2013ರಲ್ಲಿ ಡಿವೋರ್ಸ್ ಅರ್ಜಿ ಸಲ್ಲಿಕೆ ಮಾಡಿದ್ದರು. ಹಲವು ವರ್ಷಗಳ ಕಾನೂನು ಸಮರ ಈಗ ಕೊನೆ ಆಗಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Published On - 12:16 pm, Thu, 3 September 26