ಶಿವರಾತ್ರಿ ಹಬ್ಬದಂದು ಸಿನಿಪ್ರಿಯರಿಗೆ ಸರ್ಪ್ರೈಸ್ ಮೇಲೆ ಸರ್ಪ್ರೈಸ್ ಸಿಗುತ್ತಿದೆ. ಹಲವು ಚಿತ್ರತಂಡಗಳು ಈ ವಿಶೇಷ ದಿನದಂದು ಹೊಸಹೊಸ ಅಪ್ಡೇಟ್ ನೀಡುತ್ತಿವೆ. ಈಗ ದುನಿಯಾ ವಿಜಯ್ ಕಡೆಯಿಂದ ಅವರ ಮುಂದಿನ ಸಿನಿಮಾ ಬಗ್ಗೆ ದೊಡ್ಡ ಅಪ್ಡೇಟ್ ಸಿಕ್ಕಿದೆ. ಕಳೆದ ವರ್ಷ ತೆರೆಗೆ ಬಂದ ದುನಿಯಾ ವಿಜಯ್ (Duniya Vijay) ನಟನೆಯ ‘ಸಲಗ’ ಸಿನಿಮಾ (Salaga Movie) ಮಾಡಿದ ಹವಾ ಅಷ್ಟಿಷ್ಟಲ್ಲ. ಈ ಚಿತ್ರದಲ್ಲಿ ದುನಿಯಾ ವಿಜಯ್ ನಟಿಸೋದು ಮಾತ್ರವಲ್ಲ, ಆ್ಯಕ್ಷನ್ ಕಟ್ ಕೂಡ ಹೇಳಿದ್ದರು. ಮೊದಲ ನಿರ್ದೇಶನದಲ್ಲೇ ಅವರು ಗೆದ್ದು ಬೀಗಿದ್ದರು. ಇತ್ತೀಚೆಗೆ ಚಿತ್ರತಂಡ ಈ ಸಿನಿಮಾ ಯಶಸ್ಸನ್ನು ಸಂಭ್ರಮಿಸಿತ್ತು. ‘ಸಲಗ’ ಬಳಿಕ ಮತ್ತೆ ನಿರ್ದೇಶನಕ್ಕೆ ಇಳಿಯೋಕೆ ದುನಿಯಾ ವಿಜಯ್ ರೆಡಿ ಆಗಿದ್ದಾರೆ . ಶಿವರಾತ್ರಿ ಪ್ರಯುಕ್ತ ಸಿನಿಮಾದ ಟೈಟಲ್ ಘೋಷಣೆ ಆಗಿದ್ದು, ‘ಭೀಮ’ (Bheema Movie) ಎಂದು ಇಡಲಾಗಿದೆ.
‘ಸಲಗ’ ಸಿನಿಮಾದಲ್ಲಿ ದುನಿಯಾ ವಿಜಯ್ ಅವರು ರೌಡಿಸಂನ ಕಥೆ ಹೇಳಿದ್ದರು. ಈ ಚಿತ್ರವನ್ನು ಅದ್ಭುತವಾಗಿ ಕಟ್ಟಿಕೊಟ್ಟಿದ್ದರು. ಈ ಸಿನಿಮಾ ಬಗ್ಗೆ ಎಲ್ಲ ಕಡೆಗಳಿಂದಲೂ ಮೆಚ್ಚುಗೆ ವ್ಯಕ್ತವಾಗಿತ್ತು. ಅನೇಕ ಸ್ಟಾರ್ ನಟರು ಈ ಚಿತ್ರವನ್ನು ಹೊಗಳಿದ್ದರು. ಈ ಯಶಸ್ಸಿನಿಂದ ವಿಜಯ್ ಅವರ ಕಾನ್ಫಿಡೆನ್ಸ್ ಹೆಚ್ಚಿದೆ. ಹೀಗಾಗಿ, ಹೊಸ ಸಿನಿಮಾ ನಿರ್ದೇಶನಕ್ಕೆ ಇಳಿದಿದ್ದಾರೆ.
ವಿಜಯ್ ಅವರು ಸೋಶಿಯಲ್ ಮೀಡಿಯಾದಲ್ಲಿ ಟೈಟಲ್ ಅನೌನ್ಸ್ ಮಾಡುವುದರ ಜತೆಗೆ ಮೋಷನ್ ವಿಡಿಯೋ ಹಂಚಿಕೊಂಡಿದ್ದಾರೆ. ವಿಜಯ್ ಅವರ ಮುಖ ರಕ್ತಸಿಕ್ತವಾಗಿದೆ. ಸಿನಿಮಾ ಟೈಟಲ್ ಅಡಿಗೆ ‘ಕೆಣಕದಿದ್ರೆ ಕ್ಷೇಮ’ ಎನ್ನುವ ಟ್ಯಾಗ್ಲೈನ್ ನೀಡಲಾಗಿದೆ. ವಿಜಯ್ ನಟನೆಯ 28ನೇ ಸಿನಿಮಾ ಇದಾಗಿದ್ದು, ಕೃಷ್ಣ ಸಾರ್ಥಕ್ ಹಾಗೂ ಜಗದೀಶ್ ಗೌಡ ಈ ಚಿತ್ರವನ್ನು ನಿರ್ಮಿಸುತ್ತಿದ್ದಾರೆ. ಈ ಮೊದಲು ಹಂಚಿಕೊಂಡಿದ್ದ ಪೋಸ್ಟರ್ನಲ್ಲಿ ಕೈ ಹಾಗೂ ಯಮಹಾ ಆರ್ಎಕ್ಸ್ 100 ಬೈಕ್ ತೋರಿಸಲಾಗಿತ್ತು.
ತೆಲುಗಿನ ಖ್ಯಾತ ನಟ ನಂದಮೂರಿ ಬಾಲಕೃಷ್ಣ ಅವರು ಅಭಿನಯಿಸಲಿರುವ ಹೊಸ ಸಿನಿಮಾದಲ್ಲಿ ದುನಿಯಾ ವಿಜಯ್ ನಟಿಸಲಿದ್ದಾರೆ. ಈ ಚಿತ್ರಕ್ಕೆ ಖ್ಯಾತ ನಿರ್ದೇಶಕ ಗೋಪಿಚಂದ್ ಮಲಿನೇನಿ ಆ್ಯಕ್ಷನ್-ಕಟ್ ಹೇಳಲಿದ್ದಾರೆ. ಇದು ನಂದಮೂರಿ ಬಾಲಕೃಷ್ಣ ನಟಿಸಲಿರುವ 107ನೇ ಸಿನಿಮಾವಾಗಿದ್ದು, ಅವರಿಗೆ ನಾಯಕಿಯಾಗಿ ಶ್ರುತಿ ಹಾಸನ್ ಕಾಣಿಸಿಕೊಳ್ಳಲಿದ್ದಾರೆ. ಈ ಚಿತ್ರಕ್ಕಿನ್ನೂ ಶೀರ್ಷಿಕೆ ಅಂತಿಮವಾಗಿಲ್ಲ. ರಾಯಲಸೀಮಾ ಹಿನ್ನೆಲೆಯಲ್ಲಿ ಸಿನಿಮಾ ಮೂಡಿಬರಲಿದೆ. ನೈಜ ಘಟನೆಗಳನ್ನು ಆಧರಿಸಿ ನಿರ್ದೇಶಕರು ಈ ಚಿತ್ರ ಮಾಡುತ್ತಿದ್ದಾರೆ. ಸದ್ಯ ಪಾತ್ರವರ್ಗದ ಆಯ್ಕೆ ನಡೆಯುತ್ತಿದೆ. ಖ್ಯಾತ ನಿರ್ಮಾಣ ಸಂಸ್ಥೆ ‘ಮೈತ್ರಿ ಮೂವೀ ಮೇಕರ್ಸ್’ ಈ ಚಿತ್ರವನ್ನು ನಿರ್ಮಿಸುತ್ತಿದೆ.
ಇದನ್ನೂ ಓದಿ: Duniya Vijay: ಕೊರೊನಾದಿಂದ ಗುಣಮುಖರಾಗಿದ್ದ ದುನಿಯಾ ವಿಜಯ್ ತಾಯಿ ಆರೋಗ್ಯದಲ್ಲಿ ಏರುಪೇರು..
NBK107: ದುನಿಯಾ ವಿಜಯ್ ಆಯ್ತು, ಇದೀಗ ‘ಮಾಣಿಕ್ಯ’ದ ಬೆಡಗಿಯ ಸರದಿ; ಹಿರಿದಾಗುತ್ತಿದೆ ‘ಎನ್ಬಿಕೆ107’ ತಾರಾಗಣ
Published On - 5:48 pm, Tue, 1 March 22