ದ್ವಾರಕೀಶ್ (Dwarakish) ಅವರು ನಟನಾಗಿ, ನಿರ್ದೇಶಕನಾಗಿ, ನಿರ್ಮಾಪಕನಾಗಿ ಚಿತ್ರರಂಗದಲ್ಲಿ ಹೆಸರು ಮಾಡಿದವರು. ಇತ್ತೀಚೆಗೆ ಅವರು ಸಿನಿಮಾ ನಿರ್ಮಾಣದಿಂದ ದೂರವೇ ಇದ್ದರು. ನಟನೆಯಲ್ಲೂ ಅವರಿಗೆ ಆಸಕ್ತಿ ಉಳಿದಿರಲಿಲ್ಲ. ಈ ಬಗ್ಗೆ ಕೇಳಿದರೆ ‘ನನಗೆ ಸಾಕಾಗಿದೆ’ ಎಂದು ಅವರು ಹೇಳುತ್ತಿದ್ದರು. ದ್ವಾರಕೀಶ್ ಅವರು ಸಾವನ್ನು ನಿರೀಕ್ಷಿಸುತ್ತಿದ್ದರು. ಆದಷ್ಟು ಬೇಗ ಶಾಂತ ಸಾವು ಬರಲಿ ಎಂದು ಅವರು ಬಿ ಗಣಪತಿ ಅವರ ಯೂಟ್ಯೂಬ್ ಚಾನೆಲ್ಗೆ ನೀಡಿದ ಸಂದರ್ಶನದಲ್ಲಿ ಕೇಳಿಕೊಂಡಿದ್ದರು. ಅವರು ಕೇಳಿಕೊಂಡಂತೆ ನಡೆದಿದೆ.
ದ್ವಾರಕೀಶ್ ಅವರು ಇತ್ತೀಚೆಗೆ ಸಿನಿಮಾ ನಿರ್ಮಾಣ ಮಾಡಿಲ್ಲ. ಅವರು ಮನೆಯಲ್ಲೇ ಸಮಯ ಕಳೆಯುತ್ತಿದ್ದರು. ಮುಂಜಾನೆ ಏಳುತ್ತಿದ್ದರು, ಸ್ನಾನ ಮಾಡಿ ದೇವರಿಗೆ ನಮಿಸುತ್ತಿದ್ದರು. ಸಂಜೆ ವಾಕಿಂಗ್ ಮಾಡುತ್ತಿದ್ದರು. ಆ ಬಳಿಕ ಟಿವಿ ನೋಡಿ ಟೈಮ್ ಪಾಸ್ ಮಾಡುತ್ತಿದ್ದರು. ಈ ದಿನಚರಿ ಅವರಿಗೆ ಬೇಸರ ತರಿಸಿತ್ತು. ‘ಮಕ್ಕಳು, ಸೊಸೆ, ಮೊಮ್ಮಕಳು ಯಾರೇ ಇದ್ದರೂ ನನ್ನ ವಸ್ತು ನನ್ನ ಬಳಿ ಇಲ್ಲ. ಅದು ಮನಸ್ಸಿಗೆ ನೋವು ತಂದಿದೆ. ಏಕಾಂಗಿತನ ಸಾಕಷ್ಟು ಕಾಡುತ್ತಿದೆ’ ಎಂದಿದ್ದರು ದ್ವಾರಕೀಶ್. ಕೆಲ ವರ್ಷಗಳ ಹಿಂದೆ ಅವರ ಮೊದಲ ಪತ್ನಿ ಅಂಬುಜಾ ನಿಧನ ಹೊಂದಿದ್ದರು. 62 ವರ್ಷಗಳ ಕಾಲ ಇವರು ಸಂಸಾರ ನಡೆಸಿದ್ದರು. ಅವರಿಲ್ಲ ಎನ್ನುವ ನೋವು ದ್ವಾರಕೀಶ್ ಅವರನ್ನು ಬಹುವಾಗಿ ಕಾಡಿತ್ತು.
ಶಾಂತ ಸಾವು ಬೇಕು ಎಂದು ಅವರು ಕೇಳಿಕೊಂಡಿದ್ದರು. ‘ನನಗೆ ನೂರು ವರ್ಷ ಬದುಕ ಬೇಕು ಎಂಬುದಿಲ್ಲ. ಆದಷ್ಟು ಬೇಗ ಪರಮಾತ್ಮನ ಸೇರೋಕೆ ಇಷ್ಟಪಡ್ತೀನಿ. ಇಲ್ಲಿ ಇದ್ದು ಏನು ಮಾಡೋದು ಇದೆ? ಬೆಳಿಗ್ಗೆ ಏಳಬೇಕು, ದೇವರಿಗೆ ಒಂದು ಗಂಟೆ ಟೈಮ್ ಕೊಡಬೇಕು, ಊಟ ಮಾಡಬೇಕು, ಮಲಗಬೇಕು, ವಾಕ್ ಮಾಡಬೇಕು, ಟಿವಿ ನೋಡಬೇಕು. ಇದು ದಿನಚರಿ ಆಗಿದೆ. ಹೋಗೋಣ, ಮರುಜನ್ಮ ಇದ್ರೆ ನೋಡೋಣ. ನನಗೆ ಶಾಂತ ಸಾವು ಬೇಕು’ ಎಂದು ಅವರು ಕೇಳಿಕೊಂಡಿದ್ದರು.
ದ್ವಾರಕೀಶ್ ಬಯಸಿದಂತೆ ನಡೆದಿದೆ. ಏಪ್ರಿಲ್ 15ರ ರಾತ್ರಿ ಅವರಿಗೆ ಅನಾರೋಗ್ಯ ಕೆಟ್ಟಿತ್ತು. ಹೀಗಾಗಿ ಅವರಿಗೆ ನಿದ್ರಿಸಲು ಸಾಧ್ಯವಾಗಿಲ್ಲ. ಏಪ್ರಿಲ್ 16ರ ಬೆಳಿಗ್ಗೆ ಕಾಫಿ ಕುಡಿದು ಅವರು ಮಲಗಿದ್ದರು. ಮಲಗಿದವರು ಮತ್ತೆ ಏಳಲೇ ಇಲ್ಲ. ಅವರಿಗೆ ಹೃದಯಾಘಾತ ಆಗಿದೆ ಎಂದು ಕುಟುಂಬದವರು ಹೇಳಿಕೊಂಡಿದ್ದರು. ಅವರು ಬಯಸಿದಂತೆ ಶಾಂತ ಸಾವು ಸಿಕ್ಕಿದೆ. ಅವರ ಸಾವು ಕನ್ನಡ ಚಿತ್ರರಂಗದವರಿಗೆ ಹಾಗೂ ಅಭಿಮಾನಿಗಳಿಗೆ ಬೇಸರ ತರಿಸಿದೆ.
ಇದನ್ನೂ ಓದಿ: ದ್ವಾರಕೀಶ್ ಕೊನೆಯ ಆಸೆ ಏನಾಗಿತ್ತು? ಅದನ್ನು ಈಡೇರಿಸಿದ ನಟಿ ಶ್ರುತಿ
ಏಪ್ರಿಲ್ 17ರಂದು ದ್ವಾರಕೀಶ್ ಅವರ ಅಂತಿಮ ಸಂಸ್ಕಾರ ನಡೆದಿದೆ. ಇಂದು (ಏಪ್ರಿಲ್ 18) ಅವರ ಅಸ್ತಿಯನ್ನು ಶ್ರೀರಂಗ ಪಟ್ಟಣದಲ್ಲಿ ಹಾದು ಹೋದ ಕಾವೇರಿ ನದಿಗೆ ಬಿಡಲಾಗಿದೆ. ಕನ್ನಡ ಚಿತ್ರರಂಗದಲ್ಲಿ ಕುಳ್ಳ ಎಂದೇ ಅವರು ಫೇಮಸ್ ಆಗಿದ್ದರು.
ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ